ಪ್ರತಿಕ್ರಿಯೆ

ಅನೌಪಚಾರಿಕ, ಮುಕ್ತ, ಅಕಡಮಿಕ್ಸ್ ಆಧುನಿಕ ವ್ಯವಸ್ಥೆ ಅತ್ಯಗತ್ಯ

ತುಳುವ ಸಂಚಿಕೆ 7 ಮಾರ್ಚ್ 2017ರಲ್ಲಿ ದಾಖಲೀಕರಣ ಕಮ್ಮಟ ಕುರಿತಾದ ಲೇಖನದಲ್ಲಿ ವಿಮರ್ಶಕ ಶ್ರೀ ಪೃಥ್ವಿರಾಜ್ ಕವತ್ತಾರು ಅವರು ಬರೆದಿರುವ ಲೇಖನದಲ್ಲಿ ಬಂದಿರುವ ಒಂದೆರಡು ವಿಚಾರಗಳ ಕುರಿತು, ಅಭಿಮತ.

ಕಲೆಗಳು ಅನೌಪಚಾರಿಕವಾಗಿರುತ್ತವೆ. ಕಲಿಕೆಯೂ ರಂಗದಲ್ಲೆ ನಡೆಯುತ್ತದೆ… ವೇಷವಿಲ್ಲದೆ ಅಭಿನಯ ಕಲಾವಿದನಿಗೆ ಸಾಧ್ಯವಾಗದು… ಕಲೆಯ ಅಂಗೋಪಾಂಗಗಳಾದ ರಾಗ, ಛಂದಸ್ಸು, ತಾಳ, ಕುಣಿತಗಳಲ್ಲಿ ಒಟ್ಟಾಗಿ ಗ್ರಹಿಸುವ, ‘ಹೋಲಿಸ್ಟಿಕ್’ (?) ಕಲಿಯುವ, ಕಾಣಿಸುವಂತಹದ್ದು.” (ಹಾಗಾಗಿ ಔಪಚಾರಿಕ ವಿಶ್ಲೇಷಣೆ, ಅಂಗಾಂಗಪೂರ್ವಕ ಶಿಕ್ಷಣ… ಇತ್ಯಾದಿ ಬೇಡ?) – ಎಂಬ ರೀತಿಯ ಅಭಿಪ್ರಾಯ ನೀಡಿರುತ್ತಾರೆ.

“ನಾಟ್ಯದಿಂದ ನಾಟ್ಯಶಾಸ್ತ್ರ, ಭಾಷೆ ಮೊದಲು ವ್ಯಾಕರಣ ಮತ್ತೆ. ಮೊದಲು ಅಭಿವ್ಯಕ್ತಿ, ಆ ಬಳಿಕ ಸ್ವರೂಪ ವಿಶ್ಲೇಷಣೆ ” ಎಂಬ ವಾದ ಇದೆ, ನಿಜ. ಪೂರ್ತಿಯಾಗಿ ಇದು ನಿಜವಲ್ಲ. ನಾಟ್ಯಶಾಸ್ತ್ರ ಹುಟ್ಟುವ ಮೊದಲು ವ್ಯವಸ್ಥಿತ ಶಿಕ್ಷಣ ಶಾಸ್ತ್ರ ಪರಂಪರೆ ಇದ್ದೇ ಇದ್ದುವು. “ಭಾಷೆಯೊಂದಿಗೇ ವ್ಯಾಕರಣ, ವ್ಯಾಕರಣ ಪರಿಕಲ್ಪನೆ ಮೊದಲು, ಭಾಷಾಭಿವ್ಯಕ್ತಿ ಆಮೇಲೆ ಎಂದೂ ಹೇಳಬಹುದು.” (ವೇ. ಪಾದೆಕಲ್ಲು ನರಸಿಂಹ ಭಟ್ಟರ ವಾದ)

ಹಿಂದೆ ರಂಗದಲ್ಲೇ ಶಿಕ್ಷಣ, ಅನುಕರಣ ಅನುಸರಣ ಶಿಕ್ಷಣ, ಇದ್ದದ್ದು ನಿಜ. ಛಂದಸ್ಸು-ರಾಗ-ತಾಳ ಬೇರೆ ಬೇರೆ ಆಗಿರದೆ, ಒಟ್ಟಾಗಿ ಬರುವುದೂ ನಿಜ.
ಗುರು ಶಿಷ್ಯ ಪರಂಪರೆ ಗಟ್ಟಿಯಾಗಿದ್ದ ಕಾಲ ಅದು. (ಗುರು ಶಿಷ್ಯ ಪರಂಪರಾಗತ ವಿಧಾನವೂ ವಿಮರ್ಶಾರ್ಹ, ಪರಿಷ್ಕಾರಾರ್ಹ- ಅದು ಬೇರೆ). ಈಗ ಹಾಗುಂಟೆ? ವ್ಯವಸ್ಥಿತ ಅಂಗೋಪಾಂಗ ವಿಭಾಗ ವಿಜ್ಞಾನ, ಅವುಗಳ ಶಿಕ್ಷಣ, ರಾಗಾಭ್ಯಾಸ, ಸ್ವರಾಭ್ಯಾಸ ಸಹಿತ ಸಂಗೀತ ಶಿಕ್ಷಣ ನಡೆದು ಬಂದಿರುವ ಹಿಂದುಸ್ತಾನಿ, ಕರ್ನಾಟಕಿ (ದಕ್ಷಿಣಾದಿ) ಭರತ ನೃತ್ಯ (ನಾಟ್ಯಂ), ಕಥಕ್ ಇತ್ಯಾದಿಗಳಂತೆ ಯಕ್ಷಗಾನಕ್ಕೂ ಇದ್ದಿದ್ದರೆ, ಹೆಚ್ಚು ವ್ಯವಸ್ಥಿತವಾಗಿ, ಆ ಕಲೆಗಳಂತೆ, ಬೆಳೆದು ಬರುತ್ತಿರಲಿಲ್ಲವೇ? ಇದು ವಿಚಾರ.
ಅಕಡಮಿಕ್ಸ್ – ಬೇಡ ಅನ್ನುವುದು ಸೂಕ್ತವೇ ? ಯಕ್ಷಗಾನದ ಶಾಸ್ತ್ರ ಅದರೊಳಗೇ ಇದೆ. ಅದನ್ನು ಪರಿಶೀಲಿಸಿ, ವ್ಯವಸ್ಥೆಗೊಳಿಸುವ, ಸೂತ್ರೀಕರಣ ಕಾರ್ಯ – ಈ ಕಾಲದಲ್ಲಿ ಅತ್ಯಂತ ಅಗತ್ಯದ್ದಾಗಿದೆ. ಪಾರಂಪರಿಕ ಸಂಪತ್ತಿನ ವ್ಯವಸ್ಥಿತವಾದ ವಿವರಣಪೂರ್ವಕವಾದ ಕಲಿಕೆ, ತಾತ್ತ್ವಿಕ (ಥಿಯೋರಿಟಿಕಲ್) ಭೂಮಿಕೆ ಇಲ್ಲದುದರಿಂದಲೆ, ಕಲಾವಿದರಿಗೆ ಗೊಂದಲ ಆಗುತ್ತ ಬಂದದ್ದು. ಕೆಲವು ಕಲಾವಿದರು – ‘ಪರಂಪರೆ’ಯನ್ನು ಲೇವಡಿ ಮಾಡುವುದೂ ಅದರಿಂದಲೇ.

ಒಂದು ಕಾಲದ ಸಾಮಾಜಿಕ ಸ್ಥಿತಿ, ತುಂಬ ನಿಧಾನವಾಗಿದ್ದ ಸಾಂಸ್ಕೃತಿಕ ಚಲನೆ, ‘ಕಲಸು ಕಲೆ, ಕಲಸು ಕಲಿಕೆ, ಮಿಶ್ರಣ’ ಗಳಿಗೆ ಅವಕಾಶ ಕಡಿಮೆ ಇದ್ದುದು. ಕಲೆತು ಕಲಿಯುವ ಕಲಿಯುತ್ತ ಪ್ರದರ್ಶಿಸುವ ರೀತಿಗಳಿಂದ ಕಲೆ ಹೇಗೋ ಉಳಿದಿದೆ. ಹಾಗೇ ಅದು ಮುಂದುವರಿಯಲಿ ಎಂಬ ‘ಅನೌಪಚಾರಿಕತಾವಾದ’ವು, ನಮ್ಮನ್ನು ಇತರ ಕಲೆಗಳ ಮಧ್ಯೆ ಹಿಂದುಳಿಸುತ್ತದೆ. ಈಗ ಸೌಲಭ್ಯ ಇದೆ, ಜ್ಞಾನ ಶಾಖೆಗಳಿವೆ. ಬೆಳಸಿ, ಬೆಳೆಯೋಣ.

ಹೌದು. ಛಂದಸ್ಸು, ರಾಗಶುದ್ಧಿ(?) ಹೆಸರಿನ ಹೇರಿಕೆಗಳ ಅತಿಕರಣ ಸಲ್ಲದು ನಿಜ. ಅದು ಕಲಿಕೆಯ ಹದ, ಕಲಿಸುವವನ ಹೊಣೆ. ಆದರೆ ಅಕಡಮಿಕ್ಸ್ ಇಲ್ಲದೆ, ನಮ್ಮ ಶ್ರೇಷ್ಠ ಕಲೆಗಳು ಉಳಿಯಲಾರವು. “ಉಳಿದದ್ದು ಉಳಿಯಲಿ” ಅನ್ನುವುದಾದರೆ, ಅದು ಬೇರೆ ವಿಚಾರ. ವೇಷವಿಲ್ಲದೆ ಅಭಿನಯಿಸಲು ವೇಷಧಾರಿಗೆ ಕಷ್ಟವಾಗುತ್ತದೆ ಎಂಬುದೂ ನಿಜವಲ್ಲ. ನಾನು ಕಂಡಂತೆ, ನಾನು ಸಂಘಟಿಸಿದ ಮತ್ತು ನೋಡಿದ ಪ್ರಾತ್ಯಕ್ಷಿಕೆ , ಕಮ್ಮಟಗಳಲ್ಲಿ ಹೆಚ್ಚಿನ ಎಲ್ಲ ಕಲಾವಿದರೂ, ಕೂಡಲೇ ಸ್ಪಂದಿಸಿ, ಸಹಜವಾಗಿ, ನಿಜ ರಂಗಸ್ಥಳದಂತೆ ಆಡಿ ಮಾಡಿ ತೋರಿಸಿದ್ದಾರೆ. (ವೇಷವಿಲ್ಲದೆ – ಪರಿಣಾಮ ಕಡಿಮೆ ಆಗಿರಬಹುದು, ಸಹಜ), ವೃತ್ತಿ ಕಲಾವಿದರು – ಪ್ರಾತ್ಯಕ್ಷಿಕೆಗಳಲ್ಲಿ ‘ರೆಡಿ’ ಇರುತ್ತಾರೆ. ಸ್ವಿಚ್ಚು ಒತ್ತಿದಂತೆ ಸಿದ್ಧರಿರುತ್ತಾರೆ.

ಹಾಗೆ ನೋಡಿದರೆ – ದಾಖಲೀಕರಣ ಯಾಕೆ, ಕಮ್ಮಟ ಯಾಕೆ ಎಂದೂ ವಾದಿಸಬಹುದಲ್ಲವೆ? ಯಾಕೆ ಹೇಳಬಾರದು? ಎಂದರೆ, ಹಾಗಲ್ಲ – ಇನ್ನಷ್ಟು ಬಗೆಯ ದಾಖಲೀಕರಣ, ಶಿಕ್ಷಣದ ಇನ್ನಷ್ಟು ‘Further Academisation’ – ತಾತ್ತ್ವಿಕ ವ್ಯವಸ್ಥಿಕರಣ- ಬೇಕಾದುದು.

– ಡಾ. ಎಂ. ಪ್ರಭಾಕರ ಜೋಶಿ

 


 

ಯಕ್ಷಗಾನದ ಅನೌಪಚಾರಿಕತೆ – ಪ್ರತಿಕ್ರಿಯೆಗೆ ಪ್ರತಿಕ್ರಿಯೆ

– ಪೃಥ್ವಿರಾಜ ಕವತ್ತಾರು

ಬೆಂಗಳೂರಿನ ಯಕ್ಷಗಾನ ಬಯಲಾಟ ಅಕಾಡೆಮಿಯು ಪ್ರಾದೇಶಿಕ ರಂಗಕಲೆಗಳ ಅಧ್ಯಯನ ಕೇಂದ್ರದ ಸಹಭಾಗಿತ್ವದಲ್ಲಿ ಆಯೋಜಿಸಿದ ಯಕ್ಷಗಾನದ ದಾಖಲೀಕರಣಕ್ಕೆ ಸಂಬಂಧಿಸಿ ನಾನು ಮಾಡಿದ ಅವಲೋಕನದಲ್ಲಿ ‘ತೆಂಕುತಿಟ್ಟಿನ ಅನೌಪಚಾರಿಕತೆ’ಯ ಬಗ್ಗೆ ಪ್ರಸ್ತಾವಿಸಿದ್ದೆ. ಅದಕ್ಕೆ ಕಳೆದ ‘ತುಳುವ’ (ಎಪ್ರಿಲ್ – ಜೂನ್ 2017ಸಂಚಿಕೆ) ಯಲ್ಲಿ ಡಾ. ಎಂ. ಪ್ರಭಾಕರ ಜೋಶಿಯವರು ಪ್ರತಿಕ್ರಿಯೆ ನೀಡಿದ್ದಾರೆ. ನನ್ನ ಪ್ರತಿಪಾದನೆಯನ್ನು ಇನ್ನಷ್ಟು ಸ್ಪಷ್ಟಗೊಳಿಸಲು ಇಲ್ಲಿ ಪ್ರಯತ್ನಿಸುತ್ತೇನೆ.

ಈ ಪ್ರಾತ್ಯಕ್ಷಿಕೆಯಲ್ಲಿ ದಾಖಲಿಸಲಾದ ತೆಂಕುತಿಟ್ಟಿನ ‘ಕರ್ಣಾರ್ಜುನ ಕಾಳಗ’ದ ಭಾಗವನ್ನೇ ಎತ್ತಿಕೊಳ್ಳೋಣ.

ಈ ನೆರೆದ ಪರಿಭವವ… ಎಂಬ ಭಾಮಿನಿ ಪದ್ಯದಿಂದ ಪ್ರಸಂಗ ಆರಂಭಗೊಳ್ಳುತ್ತದೆ. ಭಾಮಿನಿಯ ಮುಕ್ತಾಯವಾದಲ್ಲಿಗೆ ರಕ್ ಡಂಗ್ಡಂಗ್… ನಡೆ ಆರಂಭವಾಗಿ ರಗ್‌ರಗ್ ರಗ್‌ರಗ್ ನಡೆ ಆರಂಭವಾಗುತ್ತದೆ. ಅದಕ್ಕೆ ಸರಿಯಾಗಿ ಕರ್ಣಾರ್ಜುನರು ರಂಗ ಪ್ರವೇಶಿಸುತ್ತಾರೆ. ಒಂದು ವೇಳೆ, ‘ಇಲ್ಲಿ ಎಷ್ಟು ತಾಳಾವರ್ತಗಳಲ್ಲಿ ರಂಗಪ್ರವೇಶಿಸಬೇಕು’ ಎಂಬ ನಿರ್ಣಯವೇನಾದರೂ ಇದೆಯೆ? ಸಾಂಪ್ರದಾಯಿಕ ರಂಗಸ್ಥಳಕ್ಕಾದರೆ ಇಷ್ಟು, ‘ಸ್ಟೇಜ್ ’ ರಂಗಸ್ಥಳಕ್ಕಾದರೆ ಇಷ್ಟು, ಶೂಟಿಂಗ್ ಸ್ಟುಡಿಯೋದ ವೇದಿಕೆಯಲ್ಲಾದರೆ ಇಷ್ಟು – ಎಂಬ ಬೇರೆ ಬೇರೆ ಲೆಕ್ಕಾಚಾರಗಳಿವೆಯೆ? ‘ಅದು ಎಷ್ಟಾದರೂ ನಡೆಯುತ್ತದೆ, ಕುಣಿದಷ್ಟು’ ಎಂದು ಭಾವಿಸುವುದೆ? ಒಂದು ಕಾಲದಲ್ಲಿ ಇದಕ್ಕೆ ಲೆಕ್ಕಾಚಾರಗಳಿದ್ದು ಈಗ ಲುಪ್ತಗೊಂಡಿದೆಯೆಂದು ಹೇಳುತ್ತ ಸಮಾಧಾನಪಟ್ಟುಕೊಳ್ಳುವುದೆ?

ಇಂಥ ಅನೇಕ ಸಮಸ್ಯೆಗಳು ಕಲಾವಿದರಿಗೆ ಆಗಾಗ ಉದ್ಭವಿಸುತ್ತವೆ. ಅಚ್ಚರಿಯ ಸಂಗತಿ ಎಂದರೆ, ಕಮ್ಮಟಗಳಲ್ಲಿ ಕಿರಿಯ ಕಲಾವಿದರು ಇಂಥ ಪ್ರಶ್ನೆಗಳನ್ನು ಕೇಳಿದರೆ, ಹಿರಿಯ ಕಲಾವಿದರಲ್ಲಿಯೂ ಸಂಪನ್ಮೂಲ ವ್ಯಕ್ತಿಗಳಲ್ಲಿಯೂ ಸಮರ್ಪಕವಾದ ಉತ್ತರವಿರುವುದಿಲ್ಲ. ‘ಅಷ್ಟು ಸಾಕು’ ಎಂಬಲ್ಲಿಗೇ ಸಮಾಧಾನ ಪಟ್ಟುಕೊಳ್ಳಬೇಕಾಗುತ್ತದೆ. ಹಾಗಾಗಿಯೇ ಕಲಾವಿದರಿಗೆ ಕಮ್ಮಟಗಳೆಂದರೆ ಒಂದು ರೀತಿಯ ನಿರ್ಲಕ್ಷö್ಯಭಾವನೆ ಬರುವ ಸಾಧ್ಯತೆ ಇರುತ್ತದೆ.

ಧಿತ್ತಕ್ಕೆ ಬಂದ ಕರ್ಣಾರ್ಜುನರು, ರಂಗಸ್ಥಳಕ್ಕೆ ಬಂದು, ಒಂದು ಕಟ್ ಮುಕ್ತಾಯಕ್ಕೆ ಕುಣಿಯುವ ಕ್ರಮ ಒಬ್ಬೊಬ್ಬರಲ್ಲಿ ಒಂದೊಂದು ರೀತಿ ಇರುತ್ತದೆ. ಹಾಗಿದ್ದರೆ, ‘ಆದರ್ಶ’ ಎಂಬಂಥ ಒಂದು ಕ್ರಮ ಇದ್ದಿರಬಹುದೆ? ಅದು ಕಣ್ಮರೆಯಾಯಿತು ಎಂದು ಭಾವಿಸುವುದೆ? ವೇಷಭೂಷಣಗಳ ಅಬ್ಬರದಲ್ಲಿ ನಾಟ್ಯದ ಲುಪ್ತತೆ ಕೊಂಚ ಮಟ್ಟಿಗೆ ಮುಚ್ಚಿಹೋದಂತೆ ಅನ್ನಿಸುತ್ತದೆ. ಒಂದು ವೇಷಭೂಷಣವಿಲ್ಲದೇ ಇದ್ದರೆ, ಇದು ಅಭಾಸವಾಗಿ ತೋರುವ ಸಾಧ್ಯತೆ ಇದೆಯಲ್ಲವೆ? ಹಾಗಾಗಿಯೇ ನಾನು ಈ ರಂಗಪರಂಪರೆ ‘ಅನೌಪಚಾರಿಕ’ವಾಗಿ ಸಾಗಿಬಂದಿದೆ ಎಂದು ಹೇಳಿದ್ದು ಮತ್ತು ಹಿರಿಯ ಕಲಾವಿದರು ವೇಷಭೂಷಣಗಳಿದ್ದೇ ಪ್ರಾತ್ಯಕ್ಷಿಕೆ ನೀಡುವುದು ಸೂಕ್ತ ಎಂದು ನಿರ್ಧರಿಸಿದ್ದು.
ಹಾಗೆಂದು, ತೆಂಕುತಿಟ್ಟಿನ ಹಿಮ್ಮೇಳದಲ್ಲಿ ಅನೇಕ ವಿಚಾರಗಳಿಗೆ ಖಚಿತತೆ ಇದೆ. ಇಲ್ಲದಿರುವಲ್ಲಿ ಖಚಿತಪಡಿಸಿಕೊಳ್ಳಲೂಬಹುದು. ಆದರೆ, ಹಿಮ್ಮೇಳದ ಎಲ್ಲ ನಡೆಗಳಿಗೆ ಸಮಾನಾಂತರವಾದ ನಡೆಗಳು ಮುಮ್ಮೇಳದಲ್ಲಿವೆಯೆ ಎಂಬ ಬಗ್ಗೆ ಸಂದೇಹವಿದೆ.

ಹಿಮ್ಮೇಳದ ಕೆಲವು ನಡೆಗಳಿಗೆ ಮುಮ್ಮೇಳದವರು ‘ತೇಲು’ ಹೆಜ್ಜೆಗಳನ್ನು ಬಳಸುತ್ತಾರೆ. ಆದರೆ, ಹೆಜ್ಜೆಗಾರಿಕೆ ಇಲ್ಲದೆ ಸುಮ್ಮನೆ ನಿಲ್ಲುವುದು ಕೂಡ ಇಲ್ಲಿ ಕ್ರಮವೇ. ಆಹಾರ್ಯದ ವೈಭವದಿಂದಾಗಿ ಇವು ಅನುಚಿತವಾಗಿ ತೋರದೆ, ಒಟ್ಟೂ ರಂಗಕ್ರಿಯೆಗೆ ಹೊಂದಿಕೊಳ್ಳುತ್ತ ಬಂದಿದೆ. ಒಂದು ವೇಳೆ, ರಂಗದ ಮೇಲೆ ‘ತೇಲು’ ನಡೆಗಳನ್ನು ತಪ್ಪಿಸಿ, ಸೂಕ್ಷ್ಮ ಹೆಜ್ಜೆಗಳನ್ನು ಕಾಣಿಸಬೇಕಾದರೆ ಲಯ ಅತ್ಯಂತ ನಿಧಾನದಲ್ಲಿರುವುದು ಅನಿವಾರ್ಯ. ಈಗ ಪ್ರಚಲಿತವಿರುವ ಮಧ್ಯಮಲಯದಲ್ಲಿ ಇಂಥ ನಾಟ್ಯಗಳನ್ನು ಕಾಣಿಸುವುದು ಕಷ್ಟ. ಲಯ ನಿಧಾನವಾದಾಗ ಕಲಾವಿದರು ಮತ್ತು ಪ್ರೇಕ್ಷಕರು ಇದಕ್ಕೆ ಹೊಂದಿಕೊಳ್ಳುವಲ್ಲಿ ಕಷ್ಟಪಡಬೇಕಾಗುತ್ತದೆ ಮತ್ತು ಪ್ರದರ್ಶನ ಸೋಲುತ್ತದೆ. (ಸೋಲುವ ಧೈರ್ಯವೂ ಬೇಕು. ಅದು ಬೇರೆಯೇ ವಿಚಾರ. ಅತೀ ನಿಧಾನ ಲಯವನ್ನು ನಾನು ಸಂಘಟಿಸಿದ ಪ್ರಯೋಗಗಳಲ್ಲಿ ತರಲು ಪ್ರಯತ್ನಿಸಿದ್ದೇನೆ. ಹೊಸಚಿಂತನೆ, ಹೊಸ ಪ್ರಯೋಗದ ದಾರಿಯಲ್ಲಿ ಸೋತಿದ್ದೇನೆ ಎಂದಾದಲ್ಲಿ ಈ ಸೋಲಿನ ಬಗ್ಗೆ ನನಗೆ ಬೇಸರವೇನೂ ಇಲ್ಲ).

ಬಡಗುತಿಟ್ಟಿನ ಯಕ್ಷಗಾನ ಗುರುಗಲಾದ ಬನ್ನಂಜೆ ಸಂಜೀವ ಸುವರ್ಣರಲ್ಲಿ ಅವರ ಕ್ಷೇತ್ರಕ್ಕೆ ಸಂಬಂಧಿಸಿ ಬಹುತೇಕ ಸಮಸ್ಯೆಗಳಿಗೆ ಪರಿಹಾರಗಳಿವೆ. ಹಿಮ್ಮೇಳದ ನುಡಿತಕ್ಕೆ ಅನುಗುಣವಾದ ಮುಮ್ಮೇಳದ ಹೆಜ್ಜೆಗಾರಿಕೆ, ಮುಮ್ಮೇಳದ ಹೆಜ್ಜೆಗಾರಿಕೆಗಳಿಗೆ ಹೊಂದುವ ಹಿಮ್ಮೇಳದ ನುಡಿತಗಳು ಇವರಲ್ಲಿವೆ. ತೆಂಕುತಿಟ್ಟಿನ ಮಟ್ಟಿಗೆ ಕರ್ಗಲ್ಲು ವಿಶ್ವೇಶ್ವರ ಭಟ್ಟರಲ್ಲಿ ಹಿಮ್ಮೇಳ-ಮುಮ್ಮೇಳದ ಸಾಂಗತ್ಯದ ಕುರಿತ ಪ್ರಾಯೋಗಿಕ ನೆಲೆಯ ಚಿಂತನೆಗಳಿವೆ.

ಒಂದು ಉದಾಹರಣೆಯೊಂದಿಗೆ ಈ ಕಿರುಬರಹವನ್ನು ಕೊನೆಗೊಳಿಸುತ್ತೇನೆ. ‘ನೋಡಿ ನಿರ್ಮಲ ಜಲ ಸಮೀಪದಿ…’ ಎಂಬ ಪದ್ಯದ ನಾಟ್ಯಾಭಿನಯವನ್ನು ಕಲ್ಪಿಸಿಕೊಳ್ಳೋಣ. ಇಲ್ಲಿ ಬಿಡಿತಕ್ಕೆ ಎತ್ತುಗಡೆ ಮೊದಲ ಪಾದದ ಬಳಿಕ ಎಂದಿಟ್ಟುಕೊಳ್ಳೋಣ. ಎರಡನೆಯ ಪಾದದ ಬಳಿಕ ಬಿಡಿತವನ್ನು ಎತ್ತಿಕೊಳ್ಳಬೇಕು ಎಂಬ ವಾದವೂ ಇದೆ. ಸರಿ, ಬಿಡಿತಕ್ಕಿಂತ ಪೂರ್ವದಲ್ಲಿ ಎಷ್ಟು ಆವರ್ತ ಆಲಾಪನೆ ಎಳೆಯಬೇಕು ಎಂಬುದು ಮುಖ್ಯ ಪ್ರಶ್ನೆ. ಈಗಿನ ಆಲಾಪನೆ ದೀರ್ಘ ಎಂದು ಆರೋಪಿಸುವುದೇನೋ ಸರಿ, ಆದರೆ, ಇಷ್ಟಿರಬೇಕು ಎಂಬ ಲಾಕ್ಷಣಿಕ ಲೆಕ್ಕಾಚಾರವೇನಾದರೂ ಇದೆಯೆ? ಇಷ್ಟು ಆಲಾಪನೆಯ ಸಂದರ್ಭದಲ್ಲಿ ಹೆಜ್ಜೆಗಾರಿಕೆಗಳು ಹೇಗಿರಬೇಕು? ಈ ಸಂದರ್ಭದಲ್ಲಿ ಮದ್ದಲೆಯ ನುಡಿತಗಳೇನು? ಮದ್ದಲೆಯ ನುಡಿತಗಳಿಗೆ ಅನುಗುಣವಾಗಿ ಹೆಜ್ಜೆಗಳೇನಾದರೂ ಇವೆಯೆ? ಬಿಡಿತದಲ್ಲಿ ಹಿಮ್ಮೇಳ ಮತ್ತು ಮುಮ್ಮೇಳದ ಹೊಂದಾಣಿಕೆಯನ್ನು ಸಾಧಿಸುವುದು ಹೇಗೆ? ಅಂದರೆ, ಧೀತರಿಕಿಟತಕತಾಂ ಎಂದು ನುಡಿಸಿದರೆ ಅದಕ್ಕೆ ಅನುಗುಣವಾದ ಹೆಜ್ಜೆಗಾರಿಕೆ ಹೇಗಿರಬೇಕು? ಒಂದು ವೇಳೆ, ಪ್ಡಕ್‌ಧಿನ್ನದಿಂ ಎಂದು ನುಡಿಸಿದರೆ ಅದಕ್ಕೆ ಹೆಜ್ಜೆಗಾರಿಕೆ ಹೇಗಿರಬೇಕು? ಹಾಗಿದ್ದರೂ ಹೀಗಿದ್ದರೂ ಆ ನುಡಿತಕ್ಕೆ ಈ ಹೆಜ್ಜೆಯಾದರೂ ಈ ಹೆಜ್ಜೆಗೆ ಆ ನುಡಿತವಾದರೂ – ಎರಡೂ ಸರಿಯೆಂದು ತಿಳಿಯುವುದೆ? ಮುಕ್ತಾಯದ ಎತ್ತುಗಡೆ ಹೇಗೆ? ಮುಕ್ತಾಯದ ಕುಣಿತ ಹೇಗೆ? ಮುಕ್ತಾಯದ ಕುಣಿತದ ಕೊನೆಯ ಘಾತದವರೆಗೆ ಕುಣಿಯಬೇಕೆ? ಕುಣಿದರೆ, ಮಾತನ್ನು ಎಲ್ಲಿಂದ ಎತ್ತುಗಡೆ ಎಲ್ಲಿಂದ ಮಾತನಾಡುವುದು? ಎಷ್ಟು ಆವರ್ತದಷ್ಟು ಮೌನವಿರಬೇಕು… ಹೀಗೆ.

ಒಂದು ಪ್ರಾತ್ಯಕ್ಷಿಕೆಯಲ್ಲಿ ಅಥವಾ ದಾಖಲೀಕರಣದಲ್ಲಿ ಇಂಥ ವಿಚಾರಗಳನ್ನು ಗಮನಿಸಬೇಡವೆ? ಇಷ್ಟು ಸೂಕ್ಷö್ಮವಾಗಿ ಗ್ರಹಿಸಿ ಈ ಹಿಂದೆ ಎಲ್ಲಾದರೂ ಪ್ರಾತ್ಯಕ್ಷಿಕೆ-ಪ್ರದರ್ಶನಗಳನ್ನು ಯಾರಾದರೂ ನಡೆಸಿದ್ದಿದೆಯೆ? ಅದಲ್ಲದೇ ಹೋದರೆ, ಬೇರೆ ಕಲೆಗಳಲ್ಲಿಯೂ ಇಷ್ಟು ಸೂಕ್ಷ್ಮಗಳಿಲ್ಲ ಎಂದು ವಾದಿಸುತ್ತ, ಸದ್ಯದ ‘ಅನೌಪಚಾರಿಕ ಸ್ವರೂಪ’ ವನ್ನು ಸ್ಥಾಪಿಸುವ ಪ್ರತಿಪಾದನೆಗಳು ಮತ್ತು ಪ್ರಯೋಗಗಳು ಸದ್ಯದ ಸನ್ನಿವೇಶಕ್ಕೆ ಅಗತ್ಯವಾಗಿ ಬೇಕಾಗಿದೆ.

error: Content is protected !!
Share This