ಯಕ್ಷಗಾನದ ಇತಿಹಾಸದಲ್ಲೇ ಅಮೆರಿಕಾದಲ್ಲಿ ಒಂದು ಹೊಸ ಸಾಧ್ಯತೆಯ ಬಗ್ಗೆ ಚಿಂತನೆ ಮಾಡಿದ ಪಣಂಬೂರು ವಾಸು ಐತಾಳ ಮತ್ತು ಬಳಗದವರಿಂದ, ಟೆಕ್ಸಾಸ್ ನ ಹ್ಯೂಸ್ಟನ್ನಲ್ಲಿ ದಿನಾಂಕ ಜುಲೈ 28 ರ ಶನಿವಾರ ರಾತ್ರಿ ಘಂಟೆ 8:00 ರಿಂದ 10:30 ರವರೆಗೆ ಕನ್ನಡವೃಂದ ಮತ್ತು ಶ್ರೀಪುತ್ತಿಗೆ ಮಠ ಶ್ರೀ ಕೃಷ್ಣ ವೃಂದಾವನದ ಸಾಂಗತ್ಯ ಹೊಂದಿ ಬಯಲು ರಂಗಸ್ಥಳದಲ್ಲಿ ನಮ್ಮೂರ ಬಯಲಾಟವನ್ನು ನೆನಪಿಸುವ ವಿಶೇಷ ಯಕ್ಷಗಾನ “ಮಹಿಷಾ ಮರ್ಧಿನಿ” ಯಶಸ್ವಿಯಾಗಿ ಜರಗಿತು. ತುಂಬಿದ ಪ್ರೇಕ್ಷಕಗಣ ಬಹಳಷ್ಟು ಖುಷಿ ಪಟ್ಟ ಕಾರ್ಯಕ್ರಮವಾಗಿ ಮೂಡಿ ಬಂತು. ಈ ಕಾರ್ಯಕ್ರಮವನ್ನು ನಡೆಸಿಕೊಟ್ಟ ತಂಡ ಕರ್ನಾಟಕದ, ದಕ್ಷಿಣ ಕನ್ನಡದ, ಬೆಳುವಾಯಿಯ “ಶ್ರೀಯಕ್ಷದೇವ” ಮಿತ್ರ ಕಲಾಮಂಡಳಿ(ರಿ). ಈ ತಂಡದಲ್ಲಿ ಭಾಗವತರಾಗಿ ಕಲಾವಲಯದಲ್ಲಿ ಬಹು ಬೇಡಿಕೆ ಉಳ್ಳ ಪಟ್ಲ ಸತೀಶ್ ಶೆಟ್ಟಿ ಮದ್ದಳೆ- ಯಕ್ಷಗಾನ ಹಿಮ್ಮೇಳ ಗುರುಗಳಾದ ಪದ್ಮನಾಭ ಉಪಾಧ್ಯ, ಚೆಂಡೆ- ಈ ತಂಡದ ಮುಖಂಡರಾದ ಹಿಮ್ಮೇಳ – ಮುಮ್ಮೇಳ ಕಲಾವಿದ ಎಮ್.ದೇವಾನಂದ್ ಭಟ್, ವೇಷಧಾರಿಗಳಾಗಿ ಪ್ರಸಿದ್ಧ ಎಮ್. ಎಲ್. ಸಾಮಗ (ವಿಷ್ಣು), ಚಂದ್ರಶೇಖರ ಧರ್ಮಸ್ಥಳ (ಸುಪಾರ್ಶ್ವಕ, ದೇವೇಂದ್ರ) , ಮಹೇಶ್ ಮಣಿಯಾಣಿ (ಮಾಲಿನಿದೂತ, ದೇವಚಾರಕ, ಸಿಂಹ), ಮೋಹನ್ ಬೆಳ್ಳಿಪ್ಪಾಡಿ (ಮಹಿಷಾಸುರ), ಪ್ರಶಾಂತ ಶೆಟ್ಟಿ ನೆಲ್ಯಾಡಿ (ಮಾಲಿನಿ, ಶ್ರೀ ದೇವಿ) ಹೀಗೆ ಒಂದು ಒಳ್ಳೆಯ ಹೊಂದಾಣಿಕೆಯಿಂದ ಕೂಡಿದ ತಂಡವಾದ್ದರಿಂದ ಯಶಸ್ವಿ ಪ್ರದರ್ಶನವಾಗಿ ಮೂಡಿ ಇಲ್ಲಿಯ ಜನಮಾನಸದಲ್ಲಿ ಬಹುಕಾಲ ಉಳಿಯುವಂತೆ ಮಾಡಿದೆ. ಸ್ಥಳೀಯ ಕಲಾವಿದರಾದ ಮೀನಾಕ್ಷಿ ಐತಾಳ ಅವರು ಆದಿಮಾಯೆ, ಶರತ್ ಆಕಿರೆಕಾಡ್ ಅವರು ಬ್ರಹ್ಮ ಹಾಗೂ ಸುಹಾಸ್ ಐತಾಳ್ ಅವರು ಈಶ್ವರನ ಪಾತ್ರ ನಿರ್ವಹಿಸಿದರು.

ಹೂಸ್ಟನ್ ಕನ್ನಡ ವೃಂದದ ಅಧ್ಯಕ್ಷೆ ಶ್ರೀಮತಿ ಮಂಗಳ ಪ್ರಸಾದ್ ಹಾಗು ಪುತ್ತಿಗೆ ಮಠದ ಬಾಲಕೃಷ್ಣ ಭಟ್ರು ಕಲಾವಿದರನ್ನು ಗೌರವಿಸಿದರು.

ಸಾಮಾನ್ಯ ಐನೂರಕ್ಕೂ ಮಿಕ್ಕಿ ಪ್ರೇಕ್ಷಕರು ನೆರೆದಿದ್ದರು. ಊರಿನ ಸುಡುಮದ್ದು, ದೊಂದಿ, ರಾಳ, ಚಾ, ಗೋಳಿಬಜೆ, ಮುಂಡಕ್ಕಿ ಚರುಮುರಿ ಮತ್ತು ನೆಲದಲ್ಲೇ ಕುಳಿತು ಯಕ್ಷಗಾನ ಸವಿ ಉಂಡ ಪ್ರೇಕ್ಷಕರ ಸಂದೋಹ ಇವೆಲ್ಲಾ ಕಲಾವಿದರಿಗೂ ಒಂದು ಅದ್ಭುತ ಅನುಭವ ನೀಡಿತು. ಹ್ಯೂಸ್ಟನ್ನಿನ ಯಕ್ಷಗಾನ ಅಭಿಮಾನಿ ಸ್ವಯಂಸೇವಕರ ಶಿಸ್ತುಬದ್ಧ ಯೋಚನೆ – ಯೋಜನೆಗಳಿಂದಾಗಿ ರಂಗಸ್ಥಳ ನಿರ್ಮಾಣ, ಕಲಾವಿದರ ಪ್ರಯಾಣ ಹಾಗು ಆತಿಥ್ಯ, ಸಭಿಕರಿಗೆ ಲಘು ಉಪಹಾರ ಹಾಗೂ ಪಾನೀಯದ ವ್ಯವಸ್ಥೆ, ವಾಹನ ನಿಯಂತ್ರಣ ಹಾಗೂ ಧನ ಸಂಗ್ರಹಣೆ ಮುಂತಾದ ಕೆಲಸಗಳು ಸುಲಲಿತವಾಗಿ ಏರ್ಪಟ್ಟವು. ಪ್ರಪಂಚಾದ್ಯಂತ ಸಾಮಾಜಿಕ ಜಾಲತಾಣಗಳಲ್ಲಿ ಈ ಪ್ರದರ್ಶನದ ವೀಡಿಯೋ ಭಾವಚಿತ್ರಗಳು ಹರಿದಾಡುತ್ತಿರುವುದು ಈ ಕಲೆ ಹಾಗೂ ಕಲಾವಿದರ ಕುರಿತಾದ ಒಂದು ದೊಡ್ಡ ಪ್ರಮಾಣಪತ್ರ. ಇದೊಂದು ನಮ್ಮ ತಂಡದ ವಿಶ್ವಮಟ್ಟದ ದಾಖಲೆ ಎಂದಿದ್ದಾರೆ ತಂಡದ ಮುಖಂಡರಾದ ಮಾನ್ಯ ದೇವಾನಂದ್. ಒಟ್ಟಂದದಲ್ಲಿ ಹೇಳುವುದಾದರೆ ಈ ಕಲೆ ವಿಶ್ವದ ಕಲೆ….ಅದ್ದರಿಂದಲೇ ” ಯಕ್ಷಗಾನಂ-ವಿಶ್ವಗಾನಂ”.

error: Content is protected !!
Share This