ಡಾ. ಕೆ. ಎಂ. ರಾಘವ ನಂಬಿಯಾರ್

ಡಾ. ಎಂ. ಪ್ರಭಾಕರ ಜೋಶಿ ಅವರ ‘ತತ್ತ್ವಮನನ’ ಬಿಡಿಸಿ ನೋಡಿದಾಗ ಕಂಡದ್ದು ಹೀಗೆ.

ಲೋಕವಿಡೀ ಅರಿವಿನ ದಾಹದಲ್ಲಿದೆ. ಆ ದಾಹದ ಭರದಲ್ಲಿ ಎಲ್ಲಿ ಏನು ದೊರೆತರೂ ಕುಡಿದು ಬಿಡುವ ಅನಿಸುತ್ತದೆ. ಎಲ್ಲವೂ ಅವರವರ ನಿಟ್ಟಿನಿಂದ ಸುಸಂಬದ್ಧ. ಆದರೆ ಬಿಸಿಲಿನ ಒಳಗೆ ಅವಿತಿರುವ ಬಣ್ಣಗಳಲ್ಲಿ ಒಂದರಿಂದ ಒಂದು ಅಷ್ಟಷ್ಟು ಭಿನ್ನ. ಭಾರತೀಯ ತತ್ತ್ವಜ್ಞಾನವೂ ಸೂರ್ಯನ ಬೆಳಕಿನಂತೆ. ಬೇರೆ ಬೇರೆಯೂ ಹೌದು. ಬೆರೆತಿರುವ ಒಂದು ಪ್ರಖರತೆಯೂ ಹೌದು. ಈ ಅರಿವಿಲ್ಲದೆ ಇತರ ಜ್ಞಾನಶಾಖೆಯ ಅರಿವೆಷ್ಟಿದ್ದರೂ ಪಡೆದ ವಿದ್ಯೆ ಎಷ್ಟು ‘ಅರ್ಥಕರೀ’ ಆಗಿರುವುದಾದರೂ, ಯಾವುದೊ ಜೇಡರ ಬಲೆಗೆ ಸಿಲುಕುವುದು ಖಚಿತ. ಆದ್ದರಿಂದಲೆ ಓದಬಲ್ಲವರು ಒಂದಿಷ್ಟಾದರೂ ತತ್ತ್ವ ಜ್ಞಾನದ ಬರಹಗಳನ್ನೋದಲೇಬೇಕು.

ಭಾರತೀಯ ದರ್ಶನಗಳಲ್ಲಿ ಒಂದಲ್ಲ ಒಂದರ ಬಗೆಗೆ ವಿಶೇಷ ಮಮಕಾರ ಬೆಳೆಸಿಕೊಳ್ಳದವರಿಲ್ಲ. ಅನೇಕ ವೇಳೆ ಅನಾವಶ್ಯಕವಾದ ವೈಮನಸ್ಯಕ್ಕೂ ಆ ಮಮಕಾರ ಪ್ರೇರಕವಾಗುವುದುಂಟು. ಆದರೆ ತತ್ತ್ವದ ಎಲ್ಲ ದಾರಿಗಳ ಸಾಮಾನ್ಯ ಪರಿಚಯವು ಜನರ ನಡುವಣ ತಿಳಿವಳಿಕೆಯನ್ನು ಹೆಚ್ಚಿಸಬಲ್ಲುದು. ಈ ನಿಟ್ಟಿನಲ್ಲಿ ಡಾ. ಜೋಶಿ ಅವರ ‘ತತ್ತ್ವಮನನ’ದ ಓದು ಬಲುಮುಖ್ಯ.

ಇಲ್ಲಿರುವುದು ಯಾವುದೆ ದರ್ಶನ ಪಂಥದ ಪ್ರತಿಪಾದನೆಗಿರುವ ಮಹಾವಾದ ಅಲ್ಲ. ಭಾರತದ ಪ್ರಸಿದ್ಧ ದರ್ಶನಗಳ ಸರಳ ಪರಿಚಯ ನೀಡುವ ಪ್ರಯತ್ನ. ಆ ಮೂಲಕ ಯಾವುದೇ ದರ್ಶನಶಾಸ್ತ್ರದ ಒಳಹೊಗಲು ಒಂದು ಆರಂಭಿಕ ಗೈಡ್ ಅನ್ನಬಹುದಾದ ಹೊತ್ತಗೆ ಇದು. ಜತೆಗೆ ಪುರಾಣಗಳು ಪ್ರತಿಪಾದಿಸುವ ತತ್ತ್ವಗಳ ಪರಿಚಯವೂ ಇಲ್ಲಿದೆ. ಪುರಾಣವನ್ನು ತುಳುನಾಡಿನ ಸಿರಿಯವರೆಗೂ ವಿಸ್ತರಿಸಲಾಗಿದೆ. ಹೀಗೆ ಪ್ರತಿಪಾದ್ಯದ ಹರಹು ವಿಶಾಲ.

ಭಾರತೀಯ ತತ್ತ್ವಶಾಸ್ತ್ರ ಸಂಕ್ಷೇಪ, ಬೋಧಿ: ಮರ, ನೆರಳು, ಆಕಾಶ, ಶೈವ ದರ್ಶನಗಳು – ಸ್ಥೂಲ ಅವಲೋಕನ. ನಾಸ್ತಿಕದರ್ಶನಗಳು, ಆಚಾರ್ಯ ಶಂಕರರರು ಮತ್ತು ಅದ್ವೈತ, ಪರಶುರಾಮ: ಚಲನಶೀಲ ವರ್ಣಕ್ರಾಂತಿ, ನಮ: ಸೋಮಾರ್ಧಧಾರಿಣೇ; ಬುದ್ಧ – ಶಂಕರ – ರಾಮಾನುಜ, ಅದ್ವೈತ ವೇದಾಂತ ಮೂರು ಹಂತಗಳು. ಭಾರತೀಯ ಸ್ಪಂದನ ಕ್ರಮ, ಪುರಾಣ ಅಧ್ಯಯನವೆ ಮೊದಲಾದ ಹದಿನೇಳು ಲೇಖನಗಳು ಡೆಮಿ ಅಷ್ಟಾಕೃತಿಯ ೧೯೨ ಪುಟಗಳಲ್ಲಿ ಹರವಿಕೊಂಡಿದ್ದು, ವಿಷಯಗಳನ್ನು ಜನಸಾಮಾನ್ಯರು ತಿಳಿಯಬೇಕೆಂಬ ಕಳಕಳಿ ಬರಹದ ಹಿಂದೆ ನಿಚ್ಚಳವಿದೆ. ಆಕೃತಿ ಆಶಯ ಪಬ್ಲಿಕೇಷನ್ಸ್ ಪ್ರಕಟಿಸಿರುವ ಹೊತ್ತಗೆ ಅಚ್ಚುಕಟ್ಟಾಗಿ ಆಕರ್ಷಕ ಮುಖಪುಟ, ಪುಟ ವಿನ್ಯಾಸಗಳೊಂದಿಗೆ ಬೆಳಕು ಕಂಡಿದೆ.

ಕನ್ನಡ ಭಾಷೆಯೇ ತತ್ತ್ವಶಾಸ್ತ್ರದ ಕಣಜವಲ್ಲವೆ? ಕರ್ನಾಟಕ ಭಾರತದ ಪ್ರಮುಖ ತತ್ತ್ವವೇತ್ತರ ತೊಟ್ಟಿಲು ಕೂಡ. ಜೈನ, ಬೌದ್ಧ, ಶೈವ, ಶಾಕ್ತ, ವೈಷ್ಣವ, ದ್ವೈತ, ವಿಶಿಷ್ಟಾದ್ವೈತ, ಅದ್ವೈತ, ವೀರಶೈವ ಚಾರ್ವಾಕ ಹೀಗೆ ಎಷ್ಟೆಷ್ಟೋ ವಿಚಾರಧಾರೆಗಳು ನೆಲೆಕಂಡಿರುವ ಭಾರತದ ಮುಖ್ಯ ತಾತ್ತ್ವಿಕ ಅಖಾಡಾ ಆಗಿರುವ ರಾಜ್ಯವಿದು. ಇಲ್ಲೇ ತತ್ತ್ವದ ಸಾಕಲ್ಯ ದರ್ಶನವಾಗಬೇಕಾದುದು. ಭೌತವಿಜ್ಞಾನದ ಬೆಳಕಿನಲ್ಲಿ ಭಾರತದ ಪ್ರಾಚೀನ ತತ್ತ್ವದರ್ಶನಗಳ ವಿಮರ್ಶೆ ಆಗಬೇಕಾದುದು ಈ ಕಾಲದ ಜರೂರಿ.

ಭಾರತದ ದರ್ಶನ ಶಾಸ್ತ್ರಗಳು ಪರಂಪರೆಯಾಗಿ ಪರಸ್ಪರ ಖಂಡನ ಮಂಡನ ಕ್ರಮದಲ್ಲೆ ಸಾಗಿ ಬಂದವುಗಳು. ಆದರೆ ಅವುಗಳ ನಡುವಣ ಮತಭೇದದ ವಿಷಯಗಳಾವುವು ಎಂಬುದನ್ನು ಅರಿಯಲು ಅನೇಕ ಗ್ರಂಥಗಳ ಅಧ್ಯಯನ ನಡೆಯಬೇಕು. ಅಂಥಲ್ಲಿ ಡಾ. ಜೋಶಿ ಅವರ ಲೇಖನಗಳು ಬಲು ತಿಳಿಯಾಗಿ ಸಂಕ್ಷಿಪ್ತ ರೂಪದಲ್ಲಿ ತತ್ತ್ವಶಾಸ್ತ್ರಗಳ ನಡುವಣ ಮತವೈಶಿಷ್ಟ್ಯ, ಸಾಮ್ಯ – ವೈಷಮ್ಯಗಳನ್ನು ತಿಳಿಯಪಡಿಸುತ್ತವೆ.

ಬಹುಶ: ಸಾಮ್ಯವಾದದ ಸಾಫಲ್ಯವೈಫಲ್ಯಗಳನ್ನು ವಿಶ್ಲೇಷಿಸುವ ಲೇಖನವೊಂದು ಸೇರ್ಪಡೆ ಆಗುತ್ತಿದ್ದರೆ ವಿವಿಧ ವಿಚಾರಧಾರಿಗಳ ಸಮಗ್ರತೆ ಸಿದ್ಧಿಸಬಹುದಿತ್ತು.

‘ಮಹಾತ್ಮರು ಸದಿಚ್ಛೆಯಿಂದಲೆ ತತ್ತ್ವವನ್ನು ಒಂದೊಂದು ವಿಧವಾಗಿ ಉತ್ಪ್ರೇಕ್ಷಿಸಿ ಹೇಳಿರುವರು. ಅದು ಒಂದೇ ತತ್ತ್ವ, ಬೇರೆಯಲ್ಲ, ವಿದ್ವಾಂಸರಿಗೆ ಹೆಸರಿನಲ್ಲಿ ಮಾತ್ರ ವಿವಾದ ಅಷ್ಟೆ!’ ಎಂಬ ಆಚಾರ್ಯ ಅಭಿನವಗುಪ್ತರ ಮಾತನ್ನಾಗಲಿ, ‘ಮತಕ್ಕಿಂತ ಮತಿಯು ದೊಡ್ಡದು’ ಎಂಬ ಶ್ರೀ ಮದ್ಭಾಗವತದ ಮಾತನ್ನಾಗಲಿ, ‘ಪ್ರಾಮಾಣಿಕ ಶುದ್ಧಾಂತ:ಕರಣನಾದ ನಾಸ್ತಿಕನು ಪ್ರಶಂಸಾರ್ಹನು’ ಎಂಬ ವಿಷ್ಣು ಪುರಾಣದ ಮಾತನ್ನಾಗಲಿ ಉದ್ಧರಿಸುವ ಮೂಲಕ ಡಾ. ಜೋಶಿ ಅವರು ಭಾರತೀಯ ದರ್ಶನ ಶಾಸ್ತ್ರಗಳ ಮಹಾಸಮನ್ವಯದ ಹುರಿಗಳನ್ನು ತೋರಿಸಿಕೊಟ್ಟಿದ್ದಾರೆ.

error: Content is protected !!
Share This