ಡಾ. ಎಂ. ಪ್ರಭಾಕರ ಜೋಷಿ

1964ರ ಸುಮಾರಿಗೆ ಕಾರ್ಕಳದಲ್ಲಿ ಇರಾ ಸೋಮನಾಥೇಶ್ವರ (ಕುಂದಾಪುರ ಮೇಳ)ದ ಆಟ, ಶಕುಂತಳಾ ಪರಿಣಯ, ನಮ್ಮ ಕಾಲೇಜು ದಿನಗಳವು. ಬಂಧು ಸಹಪಾಠಿ ಶ್ರೀಕರ ಭಟ್ (ಪತ್ರಕರ್ತ, ಅರ್ಥಧಾರಿ) ಜತೆಗಿದ್ದರು. ದುಷ್ಯಂತನ ಪಾತ್ರದ ವೇಷ, ಅಭಿನಯ, ಭಾಷೆ, ನಿರ್ವಹಣಾ ಕ್ರಮವನ್ನು ಕಂಡು ನಾವು ನಿಬ್ಬೆರಗಾದೆವು. ನಟನೆಯು ಒಂದು ಲೋಕವನ್ನು ಕಂಡ ಅನುಭವ. ಪಾತ್ರಧಾರಿ ಅಳಿಕೆ ರಾಮಯ್ಯ ರೈಗಳೆಂದು ನಮಗೆ ತಿಳಿದದ್ದು ಬಹಳ ಹೊತ್ತಿನ ಬಳಿಕ. ಕಾರಣ ಅವರು ಆ ಮೇಳದ ಕಲಾವಿದರಲ್ಲ. ಅವರು ಕರ್ನಾಟಕ ಮೇಳದಲ್ಲಿದ್ದರು. ಈ ಪ್ರಸಂಗಕ್ಕಾಗಿ ಬಂದಿದ್ದರು. ಆಗ ದಿ. ಮರವಂತೆ ನರಸಿಂಹದಾಸರು ಭಾಗವತರಾಗಿದ್ದರು.

ದುಷ್ಯಂತ ಸಾಮಾನ್ಯ ಯಕ್ಷಗಾನ ಪಾತ್ರಗಳಂತಲ್ಲ. ಯಕ್ಷಗಾನ ಮಾಧ್ಯಮದಲ್ಲಿ ಮೆರೆಸಲು ವಿಶೇಷ ಪರಿಣತಿ, ಕಾವ್ಯಾಭ್ಯಾಸದ ಹಿನ್ನೆಲೆ ಅಗತ್ಯ. ಅಂದು ರೈಗಳು ದುಷ್ಯಂತನಾಗಿ ಒತ್ತಿದ ಮುದ್ರೆ ಅಸಾಧಾರಣ. ಆ ಬಳಿಕ ಪ್ರೇಕ್ಷಕನಾಗಿ, ಒಡನಾಡಿಯಾಗಿ, ಸಹ ಕಲಾವಿದನಾಗಿ, ಅವರ ಸಹವರ್ತಿತ್ವದ ಸಂದರ್ಭಗಳು ಹಲವು ಒದಗಿ ಬಂದವು. ನಾನು ಯಾವುದೇ ಮಾಧ್ಯಮದಲ್ಲಿ ಕಂಡ ಶ್ರೇಷ್ಠ ಕಲಾಕಾರರ ಪಂಕ್ತಿಯಲ್ಲಿ ಅಳಿಕೆಯವರಿಗೊಂದು ಸ್ಥಾನವಿದೆ. ಯಕ್ಷಗಾನದ ಓರ್ವ ಅಸಾಮಾನ್ಯ ಯೋಗ್ಯತೆಯ ಕಲಾವಿದರವರು.

2

ಸುದೀರ್ಘವಾದ ಕಲಾಜೀವನ ಅಳಿಕೆಯವರದು. 1927ರಿಂದ 1985ರವರೆಗೆ ಎಡೆಬಿಡದೆ ಐವತ್ತೆಂಟು ತಿರುಗಾಟಗಳು. ಆಗ ಅದೊಂದು ದಾಖಲೆ. ಯಕ್ಷಗಾನ ರಂಗದ ಬಲು ದೊಡ್ಡ ಕಲಾವಿದರ ಒಡನಾಟದಲ್ಲಿ ಸಂಪ್ರದಾಯ ಪದ್ಧತಿಗಳನ್ನು ಅರಗಿಸಿಕೊಂಡು ಬೆಳೆದು, ಯಕ್ಷಗಾನದ ತೀರ ಬದಲಾವಣೆಯ ಯುಗದಲ್ಲೂ ಇದ್ದು ಮೆರೆದು, ಮರಳಿ ಸಾಂಪ್ರದಾಯಿಕ ಬಯಲಾಟಕ್ಕೆ ಹೋಗಿ ಸಾರ್ಥಕ ಜೀವನ ಕಂಡವರು ರಾಮಯ್ಯ ರೈಗಳು. ಹಲವು ದೃಷ್ಟಿಗಳಿಂದ ಅಧ್ಯಯನ ಯೋಗ್ಯವಾದ ಬದುಕು ಅವರದು.

3

ತನ್ನ ಬಾಲ್ಯ, ತನ್ನ ಹಿರಿಯ ಕಲಾವಿದರು, ತಾನು ಇಚ್ಲಂಪಾಡಿ ಮೇಳವನ್ನು ಸೇರಿದ ದಿನಗಳು-ಬಲಿಪ ಭಾಗವತರು, ತಂದೆ ಮೋನಪ್ಪ ಶೆಟ್ಟರು, ಕಾವು ಕನ್ನನವರು, ಹೀಗೆ ಅನೇಕಾನೇಕ ವಿಚಾರ, ವ್ಯಕ್ತಿ ಸಂಬಂಧಿತವಾಗಿ ಮಾತನಾಡುವಾಗ ಗೌರವದಿಂದ ಉಲ್ಲಾಸ ರೋಮಾಂಚನಗಳಿಂದ ಮಾತನಾಡುತ್ತಿದ್ದ ರೈಗಳು ಸತತ ಅಧ್ಯಯನ ಶೀಲರು. ಒಂದು ಕಾಲದಲ್ಲಿ ಕೈಗೆ ಸಿಕ್ಕಿದುದನ್ನೆಲ್ಲಾ ಓದುತ್ತಾ, ಅದರಿಂದ ಆರಿಸಿ ತನ್ನ ಅರ್ಥಗಾರಿಕೆಗೆ ಬಳಸಿಕೊಳ್ಳುತ್ತಾ ಸಾಗಿದ ರೈಗಳು ಸಿದ್ಧಿಸಿಕೊಂಡ ಭಾಷೆ ಭಾವಗಳ ಆ ಹಿಡಿತ ಅನನ್ಯವಾದುದು. 1950ರ ಬಳಿಕ ಬಯಲಾಟಗಳ ಅರ್ಥಗಾರಿಕೆಯ ಭಾಷೆಗೆ ಒಂದು ಹೊಸ ಆಯಾಮ ಬಂತು. ಆ ಯುಗದಲ್ಲಿ ರೈಗಳದು ಗಮನಾರ್ಹವಾದ ಸಾಧನೆ. ಹಳಗನ್ನಡ ಕಾವ್ಯಗಳನ್ನು, ಆಧುನಿಕ ಗದ್ಯವನ್ನು ಓದಿ ಅರಗಿಸಿಕೊಂಡು ಯಾರಂತೆಯೂ ಆಗದೆ ಸಣ್ಣದೊಂದು ಅಭಿವ್ಯಕ್ತಿತ್ವವನ್ನು ಅವರು ರೂಪಿಸಿದ್ದರು. ಕಾವ್ಯ, ಶ್ಲೋಕಗಳ ತಾತ್ಪರ್ಯವನ್ನು ನಾಣ್ಣುಡಿ ಮೊದಲಾದವುಗಳನ್ನು ಅತಿ ಅನಿಸದಂತೆ ಕೃತಕವಾಗದೆ ಬಳಸುತ್ತಿದ್ದರು. ಚೊಕ್ಕ ಮತ್ತು ಪರಿಣಾಮಕಾರಿ ಮಾತುಗಾರಿಕೆ ಅವರದ್ದು.

4

ತಾಳಮದ್ದಳೆಗಳಲ್ಲೂ ಸಮರ್ಥ ಅರ್ಥಧಾರಿಗಳವರು ಅವರ ವಾಲಿ ವಧೆಯ ರಾಮ, ಶರಸೇತು ಬಂಧನದ ಹನುಮಂತ, ಭೀಷ್ಮಾರ್ಜುನ ಮೊದಲಾದ ಕೆಲವು ಪಾತ್ರಗಳನ್ನು ಕೇಳುವ, ಜೊತೆಗೆ ಅರ್ಥ ಹೇಳುವ ಸಂದರ್ಭಗಳು ದೊರಕಿದ್ದವು. ಸಂವಾದ ಕ್ರಮ, ಭಾವ ಪ್ರಕಾಶನಗಳು ಅಚ್ಚುಕಟ್ಟು. ಸ್ತ್ರೀ ಪಾತ್ರಗಳನ್ನೂ ಅವರು ಚೆನ್ನಾಗಿ ನಿರ್ವಹಿಸುತ್ತಿದ್ದರೆಂದು ಕೇಳಿದ್ದೇವೆ. ತಾಳಮದ್ದಳೆ ವಾದ ಪ್ರಧಾನವಾಗಿ ಬೆಳೆದ ಮಟ್ಟದಲ್ಲಿ ಅವರಿಗೆ ಇದು ನನ್ನ ಕ್ಷೇತ್ರ ಅಲ್ಲ ಎಂಬ ಭಾವನೆ ಬಂದಂತೆ ಕಾಣುತ್ತದೆ.

5

ಬಾಲಗೋಪಾಲ ವೇಷದಿಂದ ತೊಡಗಿ ಕ್ರಮವಾಗಿ ಪುಂಡು ವೇಷ, ಸ್ತ್ರೀ ವೇಷ, ಪೀಠಿಕೆ ವೇಷ, ಇದಿರು ವೇಷಗಳನ್ನು ವಹಿಸುತ್ತ ಓರ್ವ ಸರ್ವಾಂಗ ಕಲಾವಿದನಾಗಿ ಬೆಳೆದವರು ರೈಗಳು, ಮಧ್ಯಮ ಗಾತ್ರದ ಸುಂದರ ದೇಹಯಷ್ಟಿ, ಭಾವಪೂರ್ಣವಾದ ದೇಹಭಾಷೆಗಳಿಂದ ಎಲ್ಲ ಬಗೆಯ ಪಾತ್ರಗಳಿಗೆ ಹೊಂದುವ ಪ್ರಾಕೃತಿಕ ಸಂಪತ್ತು ಮತ್ತು ಗಳಿಸಿದ ಸಾಮರ್ಥ್ಯ ಎರಡೂ ಅವರಲ್ಲಿದ್ದವು.

1955ರ ಬಳಿಕ ಹೆಚ್ಚು ಪ್ರಚಾರ ಪ್ರಸಿದ್ಧಿ ಪಡೆದ ತುಳು ಭಾಷೆಯ ಯಕ್ಷಗಾನಗಳ ಕಾಲದಲ್ಲಿ ತುಳು ಆಟಗಳಿಗೆ ಹೆಸರಾದ ಕರ್ನಾಟಕ ಮತ್ತು ಇರಾ ಮೇಳಗಳಲ್ಲಿ ಅವರು ಇದ್ದವರು. ಸಾಂಪ್ರಾದಾಯಿಕ ಆಟ, ಪೌರಾಣಿಕ ಆಟಗಳ ಜೊತೆಗೆ ತುಳು ಆಟಗಳಲ್ಲೂ ಅವರು ಸಮರ್ಥವಾಗಿ ಮೆರೆದವರೆ. ಕೋಟಿಚೆನ್ನಯ್ಯ ಪ್ರಸಂಗದ ಪೆರುಮಳ ಬಲ್ಲಾಳ, ಸಿರಿ ಪ್ರಸಂಗದ ಕಾಂತು ಪೂಂಜ, ಈ ಎರಡು ವೇಷಗಳು ಇಂದಿಗೂ ಆ ಪಾತ್ರಗಳಿಗೆ ಮೇಲ್ಪಂಕ್ತಿ. ತುಳು ಭಾಷೆ, ತುಳುತನದ ಚಿತ್ರಣಗಳಲ್ಲಿ ಅವರು ಯಶಸ್ವಿಯಾಗಿದ್ದರು. ಆದರೆ ಅವರ ವೃತ್ತಿ ಜೀವನದ ಒಂದು ಒಳ್ಳೆಯ ಘಟ್ಟದಲ್ಲಿ ಅವರು ಸಾಂಪ್ರದಾಯಿಕ ವೇಷಗಳನ್ನು ಧರಿಸುವ ಸಂದರ್ಭ ಕಡಿಮೆ ಆದುದು ಯಕ್ಷಗಾನಕ್ಕಾದ ನಷ್ಟವೇ. ತುಳು ಆಟಗಳಿಗೆ ನಾಟಕ ಪದ್ಧತಿಯ ವೇಷಗಳನ್ನು ಅಳವಡಿಸಿದುದರಿಂದ ಯಕ್ಷಗಾನ ಆಟದ ಮಾಧ್ಯಮ ಸ್ವರೂಪದಲ್ಲಿ ವಿಲಕ್ಷಣವಾದ ಬಿರುಕು ಕಾಣಿಸಿಕೊಂಡಿತು.

6

ಕರ್ಣಪರ್ವದ ಕರ್ಣ, ದಕ್ಷಾಧ್ವರದ ದಕ್ಷ, ವಿವಧ ಪ್ರಸಂಗಗಳ ಅರ್ಜುನ, ಇಂದ್ರಜಿತು ಪ್ರಸಂಗದ ಇಂದ್ರಜಿತು, ಅತಿಕಾಯ ಮೋಕ್ಷದ ಅತಿಕಾಯ, ನಳ ಚರಿತ್ರೆಯ ಋತುಪರ್ಣ, ಕುರುಕ್ಷೇತ್ರದ ಕೌರವ, ಅಶ್ವಮೇಧದ ಸುಧನ್ವ, ತಾಮ್ರಧ್ವಜ, ಹೀಗೆ ಭಿನ್ನ ಪ್ರಕೃತಿಯ ವಿಶಾಲ ಶ್ರೇಣಿಯ ಪಾತ್ರಗಳಲ್ಲಿ ಅವರು ಏಕ ಪ್ರಕಾರದ ಯಶಸ್ಸು ಸಾಧಿಸಿದ್ದರು.

ಭಾಗವತ ದಾಮೋದರ ಮಂಡೆಚ್ಚರ ಸಂಯೋಜನೆಯ ಮೋಕ್ಷ ಸಂಗ್ರಾಮದ ಕೌರವನಾಗಿ ಅವರ ಅಭಿನಯ ಒಂದು ವಿಶಿಷ್ಟ ದೃಶ್ಯ- ಮಾಯಾ ಸರೋವರದಲ್ಲಿ ಕೌರವನು ಬಿದ್ದು ಅವಮಾನಿತನಾಗುವ ದೃಶ್ಯದಲ್ಲಿ ಕೋಳ್ಯೂರು ರಾಮಚಂದ್ರರಾಯರ ದ್ರೌಪದಿ, ಅಣ್ಣಪ್ಪ ಹಾಸ್ಯಗಾರರ ದೂತ, ರೈ ಅವರ ಕೌರವ ಸೃಷ್ಟಿಸುತ್ತಿದ್ದ ಒಂದು ದೃಶ್ಯದ ಭಾವಪ್ರಪಂಚ, ಹಾಸ್ಯ ಮೂದಲಿಕೆ, ಅಸಹಾಯಕತೆ, ನಂಜು, ಲೇವಡಿಗಳ ಮಿಶ್ರಣ ಒಂದು ಉತ್ಕೃಷ್ಟ ಕಲಾನುಭವವಾಗಿತ್ತು.

7

ಯಕ್ಷಗಾನದ ಒಟ್ಟು ಕಲಾಭಾಷೆ, ರಂಗ ಭಾಷೆ ರೈಗಳಿಗೆ ಸ್ವಾಧೀನವಾಗಿತ್ತು. ಪ್ರವೇಶ, ಪದ್ಯಗಳ ಕುಣಿತ, ಮಾತು, ಚಲನೆ, ನಾಟಕೀಯತೆ ರಂಗದ ಕ್ರಮಗಳು, ಪದ್ಧತಿಗಳಿಂದ ಕೂಡಿದ ಅತ್ಯಂತ ಸುಂದರ ಪಾತ್ರವಾಗಿದ್ದ ರೈಗಳ ಒಟ್ಟು ಅಭಿವ್ಯಕ್ತಿ ಕ್ರಮ ಅಸಾಧಾರಣ, ಅನನ್ಯ, ಉತ್ಕೃಷ್ಟ ಮತ್ತು ತೇಜಸ್ವಿ, ಕುಣಿತ, ಮಾತುಗಳ ರಭಸ ಜೀವಂತಿಕೆಗಳೂ ಎಲ್ಲಬಗೆಯ ಎಲ್ಲ ಮಟ್ಟದ ಕಲಾವಿದರ ಜೊತೆ ಅವರ ಹೊಂದಾಣಿಕೆಯೂ ಅಷ್ಟು ಚಂದ.

ದ್ವೈಪಾಯನ ಸರೋವರದಲ್ಲಿ ಬೆರೆಯುವ, ಗದರುವ ಕೌರವ, ಕೃಷ್ಣಾದರ್ಶನದಿಂದ ಪುಳಕಿತನಾಗುವ ಸುಧನ್ವ, ಉರಿಚೆಂಡಿನಂತೆ ಸಾಗುವ ಇಂದ್ರಜಿತು, ಕಾಲಿಗೆ ಮುಳ್ಳು ಚುಚ್ಚಿದಾಗ ದುಃಖಿಸುವ ಬಲ್ಲಾಳ, ಯುದ್ಧಾಂತ್ಯದಲ್ಲಿ ಶೋಕಿಸುವ ಕರ್ಣ, ದಮಯಂತಿಯ ಮರು ಮದುವೆಯ ಸುದ್ದಿ ಕೇಳಿ ಕಸಿವಿಸಿಗೊಳ್ಳುವ ಋತುಪರ್ಣ – ಎಲ್ಲವೂ ಕಂಡವರ ಮನದಲ್ಲಿ ಜೀವಂತ. (ಅವರ ಮೊದಲ ಹಂತದ ಪ್ರಸಿದ್ಧಿಯ ಅಭಿಮನ್ಯು, ಪರಶುರಾಮ, ಚಂದ್ರಮತಿ, ಅಜಮುಖಿ ಇತ್ಯಾದಿ ಪಾತ್ರಗಳನ್ನು ಕಂಡವರೂ ಇದೇ ಅನುಭವ ಹೇಳುತ್ತಾರೆ.)

8

ರೈ ಅವರು ಇದ್ದ ಕಾಲದ ಕರ್ನಾಟಕ ಮೇಳವೆಂಬುದು ಒಂದು ದೊಡ್ಡ ಕಲಾಶ್ರೀಮಂತವಾದ ಮೇಳ. ನಿಜಕ್ಕೂ ಗಜ ಮೇಳ. ಭಾಗವತ ಮಂಡೆಚ್ಚರು, ಅವರಿಗೊಪ್ಪುವ ಹಿಮ್ಮೇಳ, ವೇಷಧಾರಿಗಳಾಗಿ ಬೊಳಾರ ನಾರಾಯಣ ಶೆಟ್ಟಿ, ನಾರಂಪಾಡಿ ಸುಬ್ಬಯ್ಯ ಶೆಟ್ಟಿ, ಮಲ್ಪೆ ರಾಮದಾಸ ಸಾಮಗರು, ಸ್ತ್ರೀವೇಷಕ್ಕೆ ಕೋಳ್ಯೂರು ರಾಮಚಂದ್ರ ರಾವ್, ಮಂಕುಡೆ ಸಂಜೀವ ಶೆಟ್ಟಿ, ಅಣ್ಣಪ್ಪ ಹಾಸ್ಯಗಾರರು, ಪುಳೀಂಚ ರಾಮಯ್ಯ ರೈ, ಗುಂಪೆ ರಾಮಯ್ಯ, ಕಿರಿಯರಾಗಿ ಅರುವ ಕೊರಗಪ್ಪ ರೈ, ಅಳಕೆ ಲಕ್ಷ್ಮಣ ಶೆಟ್ಟಿ ಮತ್ತು ಉಪ ಪಾತ್ರಗಳಿಗೂ ಹೊಂದುವ ಕಿರಿಯರು ಹೀಗೆ ಅದೊಂದು ಅನ್ಯತ್ರ ದುರ್ಲಭ ಕೂಟ. ಬಹುಶಃ ಇನ್ನೊಮ್ಮೆ ನಾವು ಕಾಣದಿರುವ ಸಮತೋಲವಾದ ತಂಡ. ಅದರಲ್ಲಿ ತನ್ನದಾದ ಸ್ಥಾನವನ್ನಿರಿಸಿಕೊಂಡು ಮೆರೆದು, ಪ್ರದರ್ಶನಗಳನ್ನು ಮೆರೆಸಿದವರು ರಾಮಯ್ಯ ರೈಗಳು.

ಅಳಿಕೆ ರಾಮಯ್ಯ ರೈ – ಕೋಳ್ಯೂರು ರಾಮಚಂದ್ರ ರಾವ್, ಅಳಿಕೆ – ಮಿಜಾರು ಅಣ್ಣಪ್ಪ ಹಾಸ್ಯಗಾರ, ಅಳಿಕೆ – ಮಲ್ಪೆ ರಾಮದಾಸ ಸಾಮಗ ಇವರ ಜೊತೆಗಾರಿಕೆಯ ಅನೇಕಾನೇಕ ಸನ್ನಿವೇಶಗಳು ಮೇಳದ ಪ್ರದರ್ಶನಗಳ ಅತ್ಯುತ್ತಮ ಅಂಶಗಳಲ್ಲಿ ಗಣನಾರ್ಹವಾದ, ಇಂದಿಗೂ ಕಣ್ಣಿಗೆ ಕಟ್ಟುವ ಕಲಾನುಭವಗಳು.

9

1980 – ಪೊಳಲಿ ಸಂಸ್ಮರಣಾ ಗ್ರಂಥ ‘ಯಕ್ಷಗಾನ ಮಕರಂದ’ ಬಿಡುಗಡೆ ಸಂದರ್ಭಕ್ಕೆ ಒಂದು ಚಿಕ್ಕ ಪ್ರದರ್ಶನ ಯೋಜಿಸಬೇಕಿತ್ತು. ಸಂಯೋಜನೆಯ ಹೊಣೆ ದಿ. ಮುಳಿಯ ಮಹಾಬಲ ಭಟ್ಟರು ಮತ್ತು ಈ ಲೇಖಕನದು. ‘ಕಿರಾತಾರ್ಜುನ ಮಾಡೋಣ, ರೈಗಳ ಶಬರ ಮಾಡಿಸೋಣ, ಗೋವಿಂದ ಭಟ್ಟರ ಅರ್ಜುನ, ಹಿರಿಯ ಅಗರಿಯವರ ಭಾಗವತಿಕೆ’ ಎಂದು ತೀರ್ಮಾನಿಸಿದೆವು. ಅಂದಿನ ಕೆಲ ಗಣ್ಯ ರಾಜಕೀಯ ಅತಿಥಿಗಳ ಮುಂದೆ ರೈಗಳ ಪಾತ್ರವನ್ನು ಕಾಣಿಸಿ ಅವರಿಗೆ ಗೌರವಧನ, ರಾಷ್ಟ್ರ ಪ್ರಶಸ್ತಿ ಬಗೆಗೆ ಯತ್ನಿಸುವ ಉದ್ದೇಶವೂ ಇತ್ತು.

ರೈಗಳಿಗೆ ಕಿರಾತ ರೂಢಿಯ ಪಾತ್ರವ “ ಬೇಕೋ ನನ್ನ ಶಬರ, ಅದೂ ಹೊಂತಕಾರಿ ಯುವಕ ಗೋವಿಂದ ಭಟ್ಟರ ಮುಂದೆ?”

‘ಆ ಜವಣನ ಎದುರು ಪಾಡ್ದ್ ಸೋಲ್ಪಾವರ ದಾನೆ?’ ಎಂದು ಅನುಮಾನಿಸುತ್ತಲೇ ಒತ್ತಾಯಕ್ಕೆ ಒಪ್ಪಿದ್ದರು. ಅತ್ತ್ಯುತ್ತಮವಾಗಿ ಅಭಿನಯಿಸಿ ನಮ್ಮ ಅಪೇಕ್ಷೆ ಸಾರ್ಥಕಗೊಳಿಸಿದರು. ಅಂದಿನ ಕಿರಾತಾರ್ಜುನ ಅವಿಸ್ಮರಣೀಯ.

1980ರ ಮುಂದಣ ಕೆಲವು ವರ್ಷ, ರೈಗಳು ಮರಳಿ ಕಟೀಲು ಮೇಳಕ್ಕೆ ಬಂದರು. ಹಳೆ ಪ್ರಸಂಗಗಳಲ್ಲಿ ಅಭಿನಯಿಸುವ ಅವಕಾಶ ಪುನಃ ದೊರೆತುದಕ್ಕೆ ಸಂತಸಪಟ್ಟರು. ಬಲಿಪ ನಾರಾಯಣ ಭಾಗವತರ ಭಾಗವತಿಕೆಯಲ್ಲಿ ಅವರ ವೇಷಗಳು ಚೆನ್ನಾಗಿ ರಂಜಿಸಿದವು. ಭಾಗವತರಾದರೂ ರೈಗಳ ಸ್ಥಾನಕ್ಕೆ ತಕ್ಕ, ಅವಕಾಶ ಇರುವ, ಬಲುಹೊತ್ತು ಕೆಲಸ ಶ್ರಮ ಇಲ್ಲದೆ, ಆದರೆ ಹಿರಿತನದ ಅನುಭವದ ವೇಷಗಳನ್ನು ಅವರಿಗೆ ನೀಡಿ ಸಹಕರಿಸಿದರು. ಇನ್ನೂ ಒಂದೆರಡು ತಿರುಗಾಟ ಮಾಡುವ ಆರೋಗ್ಯ ಇರುತ್ತಲೇ ರೈಗಳು ನಿವೃತ್ತರಾದರು.

10

ರೈಗಳ ಬದುಕು ಮತ್ತು ಕಲಾ ಜೀವನದಲ್ಲಿ ಎದ್ದು ಕಾಣುತ್ತಿದ್ದ ಗುಣಗಳೆಂದರೆ ಅಚ್ಚುಕಟ್ಟು, ಶಿಸ್ತು, ಗೌರವ. ನಿತ್ಯವೂ ಚೊಕ್ಕ ಖಾದಿ ಉಡುಪು. ಗೌರವದ ನಡತೆ, ವಾಚಾಳಿತನವಿಲ್ಲದ ಸ್ನೇಹ. ಅವರ ಬಣ್ಣಗಾರಿಕೆ, ವೇಷ ಕಟ್ಟುವಿಕೆಗಳೂ ಅಷ್ಟು ಚೊಕ್ಕ, ಕ್ಲಪ್ತ. ರಂಗದ ವ್ಯವಹಾರವೂ, ಮಾತುಗಾರಿಕೆಯೂ ಗೌರವದ್ದು. ಪೌರಾಣಿಕ ಪಾತ್ರಗಳ ಗಾಂಭೀರ್ಯ ಕೆಡದೆ ಎಲ್ಲ ರಸಗಳನ್ನೂ ಅಭಿವ್ಯಕ್ತಿಸುವ ಅವರ ಸಾಮರ್ಥ್ಯ ಇವೆಲ್ಲವೂ ಕಲಾವಿದರಿಗೆಲ್ಲ ಆದರ್ಶ- ವಿದ್ಯಾವಂತರ, ರಸಿಕರ ಬಗೆಗೆ ತುಂಬಾ ಪ್ರೀತಿ, ಗೌರವ. ಅಭಿಪ್ರಾಯಗಳೂ ನೇರ, ನಿರ್ಧಾಕ್ಷಿಣ್ಯ ಆದರೂ ಸೌಮ್ಯ. ಕಸುಬಿನಲ್ಲಿ ಪೂರ್ತಿ ನಿಷ್ಠೆ. ಕೊನೆಯವರೆಗೂ ಉದಾಸೀನ, ಇಲ್ಲ ಹೇಗೋ ಪೂರೈಸಿದರಾಯಿತು – ಎಂಬ ಭಾವನೆ ಅವರಲ್ಲಿ ಕಾಣಿಸಲೇ ಇಲ್ಲ.

ಯಕ್ಷಗಾನ ವಲಯದ ಎಲ್ಲ ಪ್ರದೇಶಗಳಲ್ಲಿ, ಜನವರ್ಗಗಳಲ್ಲಿ ತಿಟ್ಟು ಪ್ರಭೇದಗಳನ್ನು ಮೀರಿ ರೈಗಳು ಪಡೆದಿದ್ದ ಸಾರ್ವತ್ರಿಕ ಅಂಗೀಕಾರವು ಒಂದು ವಿರಳ ಸಿದ್ಧಿ. ತೆಂಕುತಿಟ್ಟಿನ ಪ್ರಾತಿನಿಧಿಕ, ಅಗ್ರಮಾನ್ಯ ಎಂದು ಅವರ ಬಗೆಗಿದ್ದ ಪ್ರಶಂಸೆ ಅತಿಶಯೋಕ್ತಿಯಲ್ಲ. ಉನ್ನತೋನ್ನತ ಸಿದ್ಧಿಯ ಎಣೆಯಿಲ್ಲದ ವೇಷಧಾರಿ ಅಳಕೆ ರಾಮಯ್ಯ ರೈಗಳನ್ನು ರಂಗದಲ್ಲಿ ಕಂಡವರು ತಾವು ಉತ್ಕೃಷ್ಟ ಮಟ್ಟದ ಕಲಾನುಭವವನ್ನು ಪಡೆದಿದ್ದೇವೆಂದು ಹೆಮ್ಮೆ ಪಡಬಹುದಾದ ‘ಕಲಾರಯಿ’(ರಯೀ ಅಂದರೆ ಸಂಪತ್ತು, ಶಕ್ತಿ, ಸಮೃದ್ಧಿ) ರೈಗಳದ್ದು.

(ಅಳಿಕೆ – ಯಕ್ಷಗಾನ ಮೇರು ಕಲಾವಿದ ಅಳಿಕೆ ರಾಮಯ್ಯ ರೈ ಸ್ಮೃತಿ – ಕೃತಿ – 2012)

error: Content is protected !!
Share This