ಸಾಮಾಗ್ರಿಗಳು

ದಪ್ಪ ಅವಲಕ್ಕಿ – 2 ಕಪ್, ಆಲೂ ಗಡ್ಡೆ – ಒಂದು, ನೀರುಳ್ಳಿ – ಎರಡು, ಹಸಿ ಮೆಣಸು – ಎರಡು, ಟೊಮ್ಯಾಟೊ – ಒಂದು, ಕೊತ್ತಂಬರಿ ಸೊಪ್ಪು- ಸ್ವಲ್ಪ, ನಿಂಬೆ ಹುಳಿ – ಒಂದು, ಜೀರಿಗೆ – ಎರಡು ಚಮಚ, ಎಣ್ಣೆ – ಮೂರು ಚಮಚ, ರುಚಿಗೆ ತಕ್ಕಷ್ಟು ಉಪ್ಪು

ಮಾಡುವ ಕ್ರಮ

ದಪ್ಪ ಅವಲಕ್ಕಿಯನ್ನು ತೊಳೆದು ಸ್ವಲ್ಪ ನೀರು ಚಿಮುಕಿಸಿ ನೆನೆಸಿಡಬೇಕು. ನೀರನ್ನೆಲ್ಲ ಅವಲಕ್ಕಿ ಹೀರುವ ತನಕ ಅದನ್ನು ಮುಚ್ಚಿಡಬೇಕು. (ಹದಿನೈದರಿಂದ ಇಪ್ಪತ್ತು ನಿಮಿಷ) ಟೊಮ್ಯಾಟೋ, ನೀರುಳ್ಳಿ, ಹಸಿ ಮೆಣಸು, ಕೊತ್ತಂಬರಿ ಸೊಪ್ಪುಗಳನ್ನು ಸಣ್ಣದಾಗಿ ಹೆಚ್ಚಿಟ್ಟುಕೊಳ್ಳಬೇಕು. ಕೊನೆಗೆ ಆಲೂಗಡ್ಡೆಯ ಸಿಪ್ಪೆ ತೆಗೆದು ಅದನ್ನೂ ಸಣ್ಣ ಹೋಳುಗಳನ್ನಾಗಿ ಮಾಡಿಕೊಳ್ಳಬೇಕು. ಇದಾದ ಮೇಲೆ, ಒಂದು ಬಾಣಲೆಯಲ್ಲಿ ಮೂರು ಚಮಚ ಎಣ್ಣೆ ಬಿಸಿ ಮಾಡಿ, ಆಲೂಗಡ್ಡೆ ಹೋಳುಗಳು ಮತ್ತು ಜೀರಿಗೆಯನ್ನು ಹಾಕಬೇಕು. ಆಮೇಲೆ ನೀರುಳ್ಳಿ, ಹಸಿ ಮೆಣಸು ಹಾಕಿ ಒಮ್ಮೆ ಕಲಸಿ ಅರಶಿನ ಹಾಕಿ ಕಲಸಿ ಟೊಮ್ಯಾಟೋವನ್ನೂ ಹಾಕಬೇಕು. ಒಂದೆರಡು ನಿಮಿಷ ಸೌಟಿನಲ್ಲಿ ತಿರುಗಿಸಿದ ಮೇಲೆ ಉಪ್ಪು ಹಾಕಿ ಮತ್ತೊಮ್ಮೆ ಕಲಸಿ ಮುಚ್ಚಿಡಬೇಕು. (ಬೇಯುವಾಗ ಆಲೂಗಡ್ಡೆ ಸುಡಬಹುದು. ಅದಕ್ಕೆ ಒಂದೆರಡು ಸಲ ಮುಚ್ಚಲ ತೆಗೆದು ಸೌಟು ಹಾಕಿ ಕಲಸಿದರೆ ಒಳ್ಳೆಯದು) ಐದರಿಂದ ಹತ್ತು ನಿಮಿಷ ಬೆಂದ ಮೇಲೆ ಉದುರು ಉದುರಾಗಿರುವ ಅವಲಕ್ಕಿಯನ್ನು ಬಾಣಲೆಗೆ ಹಾಕಿ ಚೆನ್ನಾಗಿ ಮಿಶ್ರ ಮಾಡಿ ಒಲೆ ಆರಿಸಬೇಕು. ಆಮೇಲೆ ನಿಂಬೆ ಹಣ್ನನ್ನು ಹಿಂಡಿ, ಕಲಸಿ ಕೊನೆಯದಾಗಿ ಕೊತ್ತಂಬರಿ ಸೊಪ್ಪಿನ ಅಲಂಕಾರ ಮಾಡಬೇಕು.