ಭಾಗವತ ಹಂಸ

ಭಾಗವತ ಶ್ರೀ ಪುತ್ತಿಗೆ ರಘುರಾಮ ಹೊಳ್ಳ ಅಭಿನಂದನ ಗ್ರಂಥ

ಗೌರವ ಸಂಪಾದಕರು: ಎ. ಈಶ್ವರಯ್ಯ

ಪ್ರಕಾಶಕರು: ರಘುರಾಮಾಭಿನಂದನಮ್ ಸಂಮಾನ ಸಮಿತಿ – ಮಂಗಳೂರು

ಮುದ್ರಣ: 2014

ಬೆಲೆ: ರೂ. 250/-


ಭಾಗವತ ಹೊಳ್ಳರು ಹಲವು ವರ್ಷಗಳ ಆತ್ಮೀಯ ಒಡನಾಡಿ ಕಲಾವಿದ. ರಂಗದೊಳಗೆ, ಹೊರಗೆ ಸ್ಪಂದನಶೀಲ ಮಿತ್ರರು. ತಂದೆ ಪುತ್ತಿಗೆ ಹೊಳ್ಳರ ಹಿನ್ನೆಲೆ, ಗುರು ಮವ್ವಾರು ಕಿಟ್ಟಣ್ಣ ಭಾಗವತರ ಪಾಠ ಮತ್ತು ಹಿರಿಯ ಭಾಗವತ ಕಡತೋಕರ ಪ್ರಭಾವ ಈ ಮೂರನ್ನು ಪಡೆದ ಅದೃಷ್ಟಶಾಲಿ. ಮೂರನ್ನೂ ಒಂದು ಪಾಕವಾಗಿಸಿದ ಸಮರ್ಥ. ಕಸರಿಲ್ಲದ ಸಶಕ್ತವಾದ ತುಂಬು ಕಂಠ, ಚೊಕ್ಕಶೈಲಿ, ಒಳ್ಳೆಯ ಕಾಂತಿಯುಕ್ತ ಉಚ್ಚಾರಗಳಿಂದ ಉತ್ತಮ ಮಟ್ಟದ ಭಾಗವತಿಕೆ ಮಾಡುತ್ತ ಬಂದ ಪರಿಣಾಮಕಾರಿ ಸಮರ್ಥ ಭಾಗವತ. ರಂಗದಲ್ಲಿ ಹಿಮ್ಮೇಳ ಮತ್ತು ಸಹ ಕಲಾವಿದರೊಂದಿಗೆ ಸರಸವಾಗಿ ಸ್ಪಂದಿಸುತ್ತಾ, ಪ್ರದರ್ಶನವನ್ನು ಜೀವಂತಗೊಳಿಸುವ ರಸಿಕ ಭಾಗವತ.

ಶ್ರೀ ಧರ್ಮಸ್ಥಳ ಮೇಳದ ಕಲಾವಿದರ ಒಂದು ದೊಡ್ಡ ತಂಡವೇ ನಿರ್ಗಮಿಸಿದ ಕಾಲದಲ್ಲಿ ಮುಖ್ಯ ಭಾಗವತರಾಗಿ ಮೇಳವನ್ನು ಆಧರಿಸಿ ಕಳೆಗಟ್ಟಿಸಿದ್ದು ಹೊಳ್ಳರ ಸಾಧನೆ. ಅವರ ರಂಗ ನಿರ್ದೇಶನ ಸಾಮಥ್ರ್ಯದ ಮುಖ ನನಗೆ ಪರಿಚಿತವಾದುದು ಮೈಸೂರಿನ ಶ್ರೀ ಶಿವರಾತ್ರೀಶ್ವರ ಜೆ. ಎಸ್.ಎಸ್. ಸ್ವಾಮೀಜಿ ಅವರ ಬಯಕೆಯಂತೆ ಭಾಗವತ ನಂಜುಂಡ ಕವಿ ರಚಿತ “ವೃಷಭೇಂದ್ರ ವಿಳಾಸ” (ಬಸವೇಶ್ವರ ಚರಿತ್ರೆ) ವನ್ನು ರಂಗಕ್ಕೆ ಅಳವಡಿಸುವ ಹೊಣೆ ಹೊತ್ತಾಗ. ನನಗೆ ಸಂಪೂರ್ಣ ಸಹಕಾರ ನೀಡಿ ಆ ಪ್ರಸಂಗದ ಪದ್ಯಗಳ ರಂಗಪ್ರತಿಗೆ (ಅದರಲ್ಲಿ 2000 ಪದ್ಯಗಳಿವೆ. ನಮಗೆ ಅಗತ್ಯವಿದ್ದುದು ಸುಮಾರು 60 ಪದ್ಯ) ಸಹಕರಿಸಿ, ಕೆಲವು ವಚನಗಳನ್ನು ರಂಗಕ್ಕೆ ಅಳವಡಿಸಿ ಆಟವನ್ನು ಮೆರೆಸಿದ್ದಾರೆ. ಆ ಪ್ರಯೋಗದ ಯಶಸ್ಸಿನ ದೊಡ್ಡ ಪಾಲು ಅವರದೇ.

ಸದಾ ವಿನೋದಶಾಲಿಯಾಗಿ, ಜೀವಂತಿಕೆಯಿಂದಿದ್ದು ತನ್ನ ಸುತ್ತ ಉಲ್ಲಾಸದ ವಾತಾವರಣ ನಿರ್ಮಿಸುವ ಹೊಳ್ಳ ಭಾಗವತರು ಶತಾಯುವಾಗಲಿ.

– ಡಾ. ಎಂ. ಪ್ರಭಾಕರ ಜೋಶಿ

error: Content is protected !!
Share This