ಬೆಳುವಾಯಿ ಶ್ರೀಯಕ್ಷದೇವ ಮಿತ್ರಕಲಾ ಮಂಡಳಿ ಆಯೋಜಿತ ಯಕ್ಷಗಾನ ನಾಟ್ಯ, ಚೆಂಡೆ ಮದ್ದಳೆ ತರಬೇತಿಯ ಉದ್ಘಾಟನೆಯನ್ನು ಹಿರಿಯ ವಿದ್ವಾಂಸರು, ವಿಮರ್ಶಕರು,ಅರ್ಥದಾರಿಗಳಾದ ಡಾ.ಜೋಶಿ ನೆರವೇರಿಸಿದರು. ಎಳೆಯ ವಯಸ್ಸಿನಲ್ಲೇ ಯಕ್ಷಗಾನ ಕಲೆಯ ಆಸಕ್ತಿ ಯನ್ನು ಮಕ್ಕಳು ಬೆಳೆಸಿಕೊಳ್ಳುವುದು ಉತ್ತಮ. ಇದರಿಂದ ಮುಂದೆ ಕಲಾವಿದನಾಗದಿದ್ದರು ಉತ್ತಮ ಪ್ರೇಕ್ಷಕನೊ ಕಲಾಪೋಷಕನೋ ಆಗಬಹುದು.ಮತ್ತು ಸಂಸ್ಕಾರವಂತ ಸಹೃದಯಿಯಾಗಿ ಸಮಾಜದಲ್ಲಿ ರೂಪುಗೊಳ್ಳಬಹುದಾದ ವ್ಯಕ್ತಿ ಯಾಗುವುದಕ್ಕೆ ಸಂಶಯವಿಲ್ಲ ಎಂದು ನುಡಿದರು. ಒಬ್ಬ ಕಲಾವಿದನಾಗುವುದಕ್ಕೆ ಉತ್ತಮ ಪಠ್ಯ, ಪೂರ್ಣ ಪ್ರಮಾಣದ ಅಭ್ಯಾಸ, ಹೆಜ್ಜೆಗಾರಿಕೆ, ಬಣ್ಣಗಾರಿಕೆ, ಕಂಠಪಾಠವನ್ನು ಹೊರತುಪಡಿಸಿ ಸ್ವಂತಿಕೆಯಿಂದ ಹಿತಮಿತವಾಗಿ ಪದ್ಯಗಳಿಗೆ ಅರ್ಥಮಾತಾಡುವ ಕೌಶಲ್ಯ ಹೊಂದಬೇಕು. ಸಮೃಧ್ದ ಕಲೆ ಯಕ್ಷಗಾನವನ್ನು ಒಂದಷ್ಟು ಕಲಿತು ತಕ್ಷಣ ಪ್ರಸಿದ್ದಿಪಡುವ ಹಂಬಲವನ್ನು ಬೆಳೆಸಿಕೊಳ್ಳುವುದು ಸಲ್ಲದು.ಒಬ್ಬ ಪೂರ್ಣ ಪ್ರಮಾಣದ ಕಲಾವಿದನಾಗಿ ರೂಪುಗೊಳ್ಳುವುದು ಬಹು ಮುಖ್ಯ ಇದಕ್ಕೆ ಸತತವಾದ ಪರಿಶ್ರಮದ ಅಗತ್ಯವಿದೆ ಎಂಬ ಸಂದೇಶ ನೀಡಿದರು.

ವೇದಿಕೆಯಲ್ಲಿ ಬಿಲ್ಲವ ಸಂಘದ ಅಧ್ಯಕ್ಷ ರಾಜೇಶ ಸುವರ್ಣ, ಗ್ರಾಮಪಂಚಾಯತಿ ಅಧ್ಯಕ್ಷ ಭಾಸ್ಕರ ಆಚಾರ್ಯ ಸಮಯೋಚಿತವಾಗಿ ಹಿತನುಡಿದರು. ಅಧ್ಯಕ್ಷಸ್ಥಾನದಿಂದ ಉದ್ಯಮಿ ಕಲಾಪೋಷಕರಾದ ಭಾಸ್ಕರ ಎಸ್ ಕೊಟ್ಯಾನ್ ಮಾತನಾಡಿ ಬೆಳುವಾಯಿಯ ಪುಟ್ಟ ಹಳ್ಳಿಯಲ್ಲಿ ಯಕ್ಷಗಾನದಂತಹ ಕಲೆಯ ಕಂಪನ್ನು ಶೃತಪಡಿಸುವ ಈ ಕಾರ್ಯ ಉತ್ತಮವಾದದ್ದು.ಮತ್ತು ಈ ಕಲೆಯ ಬಗ್ಗೆ ಬೆಳುವಾಯಿಯ ಹೆಸರು ಬೆಳಗುವುದಕ್ಕೆ ಕಾರಣರಾದ ದೇವಾನಂದ್ ಭಟ್ ಅವರನ್ನು ಅಭಿನಂದಿಸುತ್ತೇನೆ ಎಂದರು. ಕಲಾವಿದ ಮಹಾವೀರ ಪಾಂಡಿ ಕಾಂತವರ, ಕಾರ್ಯದರ್ಶಿ ರವಿಪ್ರಸಾದ್ ಕೆ ಶೆಟ್ಟಿ, ಉಪಸ್ಥಿತರಿದ್ದು ಸಂಸ್ಥೆಯ ಸ್ಥಾಪಕಾಧ್ಯಕ್ಷ ಎಮ್. ದೇವಾನಂದ ಭಟ್ ವಿಧ್ಯಾರ್ಥಿಗಳಿಗೆ ತರಬೇತು ನೀಡಿದರು. ಮುಂದೆ ಪ್ರತೀ ಶನಿವಾರ ಸಂಜೆ ತರಬೇತಿ ನಿಗದಿಪಡಿಸಲಾಗಿದೆ. ಆಸಕ್ತರು ಸೇರಬಹುದು ಎಂಬುದಾಗಿ ಆಯೋಜಕರಾದ ರಂಜಿತ್ ಆಚಾರ್ಯ ತಿಳಿಯಪಡಿಸಿದರು.

error: Content is protected !!
Share This