– ಪ್ರೊ. ಉದ್ಯಾವರ ಮಾಧವ ಆಚಾರ್ಯ

ಹಲವು ನೋಟಗನ್ನೊಳಗೊಂಡ ಈ ವಿಶಿಷ್ಟ ಪ್ರಬಂಧ ಸಮುಚ್ಛಯದೆಡೆಗೆ ‘ನಿಮ್ಮದೊಂದು ಮೊದಲ ನೋಟಬೇಕೆಂದು’ ಸನ್ಮಿತ್ರ ಡಾ| ಎಂ ಪ್ರಭಾಕರ ಜೋಶಿ ಅವರು ಬಯಸಿದ್ದು ನನ್ನ ಭಾಗ್ಯ. ಇದರ ಹಿಂದೆ ಶುದ್ಧ ವಿಶ್ವಾಸವಿದೆ. ಪ್ರೀತಿಯಿದೆ. ಸ್ನೇಹಕ್ಕಿಂತ ಮಿಗಿಲಾಗಿ ಗುರುತಿಸುವಿಕೆಯ ಆತ್ಮೀಯ ಗೌರವವಿದೆ. ತಮ್ಮ ಚಿಂತನೆಗಳ ಓಟಕ್ಕೆ ಮಿತ್ರನೊಬ್ಬನ ಹಸಿರು ತಡೆ ಇದಾಗಲಿ ಎಂಬ ಆಶಯವೂ ಇದೆ. ಈ ಎಲ್ಲಕ್ಕೂ ತಲೆಬಾಗಿ ನನ್ನ ಮಿತಿಯೊಳಗೆ ನಾಲ್ಕು ನುಡಿ ನೋಟಗಳನ್ನು ಮುನ್ನುಡಿಯ ಬರಹವಾಗಿಸಲೇ…?

ಈ ಗುರುತರ ಹೊಣೆಗಾರಿಕೆಯನ್ನು ಸುಲಭಗೊಳಿಸಲು ಡಾ| ಜೋಶಿ ಅವರೇ ಈ ಸಂಕಲನದಲ್ಲಿ ಒಂದಾಗಿಸಿದ – ಡಾ| ಪಾದೇಕಲ್ಲು ವಿಷ್ಣು ಭಟ್ಟರ `ಯಕ್ಷಗಾನಾಧ್ಯಯನ’ ಗ್ರಂಥಕ್ಕೆ – ಬರೆದ ಮುನ್ನುಡಿಯ ಮೊದಲ ಸಾಲುಗಳನ್ನೇ (ಪು 12) ಪುನರುಚ್ಚರಿಸಿದರೆ ಖಂಡಿತ ಸಾಕು ಎಂದೇ ನನ್ನೆಣಿಕೆ. ಆದರೆ ಒಂದು ವ್ಯತ್ಯಾಸವಿದೆ. ಡಾ|ಪಾದೇಕಲ್ಲು ಅವರ ಆಳವಾದ ಸಂಶೋಧನೆಯ ಗ್ರಂಥಕ್ಕೆ ಅಷ್ಟೇ ಗಡುಸಾದ ಮತ್ತು ಹರಿತದ ಶಿಲ್ಪಘಾತವನ್ನು ನೀಡುವಂತೆ ಆ ಪುಸ್ತಕಕ್ಕೆ ಮುನ್ನುಡಿ ಬರೆದಿದ್ದಾರೆ ಡಾ| ಜೋಶಿ. ನನ್ನಿಂದ ಅಂಥ ವಿಮರ್ಶಾತ್ಮಕ ಸೂಕ್ಷ್ಮ ಕೆತ್ತನೆ ಸಾಧ್ಯವೇ ಈ ವಿಶಿಷ್ಟ ಪುಸ್ತಕಕ್ಕೆ? ಸಾಧ್ಯವಾಗದು. ಕಾರಣ, ಈ ಹೊಸ ಬಗೆಯ ಸಂಕಲನದ ವ್ಯಾಪ್ತಿ ನನ್ನ ಅಧ್ಯಯನಾಸಕ್ತಿಯಿಂದ ತುಂಬ ಭಿನ್ನವಾದುದು. ಆಳವಾದದ್ದು. ವಿವೇಚನೆಯ ಸಾಧ್ಯತೆಗಳನ್ನು ಡಾ| ಜೋಶಿ ಅವರು ಈ ಪುಸ್ತಕದಲ್ಲಿ ತುಸು ವಿಸ್ತಾರವಾಗಿ ಸ್ಪರ್ಶಿಸಿದ್ದಾರೆ. ಅವನ್ನೆಲ್ಲ ಒಂದು ‘ಗುಬ್ಬಚ್ಚಿ ಪಕ್ಷಿ ನೋಟಕ್ಕೂ’ ಒಳಪಡಿಸಲಾಗದ ಚಿಂದಿ ಚಿಂತನೆಗಳ ಸರದಾರ ನಾನು. ಆದರೂ ಬರೆಯಲೊಪ್ಪಿದ್ದೇನೆ. ಕಾರಣ, ಪುಟ 12 ರಲ್ಲಿ ಡಾ| ಜೋಶಿ ಹೇಳಿಕೊಂಡಂತೆ ‘… ಅವರು (ಡಾ|ಪಾದೇಕಲ್ಲು) ನನ್ನ ಬಗೆಗಿರಿಸಿದ ಪ್ರೀತಿ ವಿಶ್ವಾಸಗಳಿಂದ ಈ ಬರೆಹ ಅಷ್ಟೆ…’ ಜೋಶಿ ಅವರ ಈ ಮಾತೇ ನನಗೂ ಶ್ರೀ ರಕ್ಷೆ.

ಇರಲಿ. ಈ ಪ್ರೀತಿ ವಿಶ್ವಾಸದ ನೋಟಗಳ ಪರಸ್ಪರ ವಿನಿಮಯ ಕೇವಲ ಹೊಗಳಿಕೆಯ ಗಾಳಿಬೀಸು ಆಗಬಾರದಲ್ಲ. ಸಂಕಲನದ ವಿವಿಧ ಪ್ರಬಂಧಗಳು ಒಳಗೊಂಡ ಹಲವಾರು ಹಿರಿಮೆಗಳ ಪರಿಮಳವನ್ನು ತುಸು ಸ್ಪಂದನಾತ್ಮಕವಾಗಿ ಹೊತ್ತು ಸಾಗಲಿ ಎಂದೇ ನನ್ನಾಸೆ.

ಪ್ರಾರಂಭದಲ್ಲಿಯೇ ಹಲವು ನೋಟಗಳನ್ನೊಳಗೊಂಡ ಹೊತ್ತಗೆ ಎಂದೆ. ಒಂದೆ ಮಾತಿನಲ್ಲಿ ಹೇಳುವುದಾದರೆ ಈ ಹಲವು ನೋಟಗಳೇ ಈ ಪುಸ್ತಕದ ಹಿರಿಮೆ. ಹಲವು ಎಂದರೆ ಒಂದೆರಡಲ್ಲ. ಒಂದು ಪ್ರದೇಶದ ಸುತ್ತಮುತ್ತ ಯಕ್ಷಗಾನದ ಜಗತ್ತು ಹೇಗೆ ಸೃಷ್ಟಿಯಾಗಿದೆ, ಕ್ರಿಯಾಶೀಲವಾಗಿದೆ, ಎಂಥ ಸಮಸ್ಯೆಗಳನ್ನು ಎದುರಿಸುತ್ತಿದೆ ಎಂಬುದನ್ನೆಲ್ಲ ವಿವೇಚಿಸುವ – ‘ಮಂಗಳೂರಿನಲ್ಲಿ ಯಕ್ಷಗಾನ’ (ಪು 22ರಿಂದ) ಎಂಬ ನನಗೆ ತುಂಬ ಆಪ್ತವಾದ ಸಂಶೋಧನೆಯ ನೆರಳನ್ನು ಹಾಯಿಸುವ ಲೇಖನದಿಂದ ಹಿಡಿದು ‘ಸಂಪಾಜೆ ಮಹಾ ವಿದ್ಯಮಾನ’ (ಪು 53ರಿಂದ) ಎಂಬ ಆತ್ಮೀಯ ದಾಖಲೆಯ ಲೇಖನದ ತನಕ ಡಾ| ಜೋಶಿ ಅವರ ಚಿಂತನೆಗಳ ಜುಗಲ್ಬಂದಿ (ಅವರೇ ನನ್ನ ಕೇಳಿಕೆಗೆ ಸ್ಪಂದಿಸಿ ಮಾಡಿದ ಏಕವ್ಯಕ್ತಿ ತಾಳಮದ್ದಲೆ ಪ್ರಯೋಗದಂತೆ) ಸಾಗಿದೆ ಈ ಗ್ರಂಥದಲ್ಲಿ.

ಹೌದಲ್ಲ. ನನ್ನ ಅನೇಕ ಪ್ರಯೋಗಗಳಿಗೆ ಜೋಶಿ ಅವರದು ಏಕವ್ಯಕ್ತಿ ಸ್ಪಂದನವೆ. ಸಂದರ್ಭ ಬಂದಾಗಲೆಲ್ಲ ನನ್ನ ಹುಚ್ಚಾಟಗಳನ್ನು ಮೆಚ್ಚಿ ಸ್ಮರಿಸಿದ್ದಾರೆ. ‘ಏಕವ್ಯಕ್ತಿ ತಾಳಮದ್ದಲೆ ಮಾಡುವ’ ಎಂದೆ. ಬಹು ಎತ್ತರವಾಗಿ ಬೆಳೆದ ತಾಳಮದ್ದಲೆಯ ಮೂಲಸ್ವರೂಪಕ್ಕೇ ಪೆಟ್ಟು ಕೊಡುವಂಥ ಈ ಕಲ್ಪನೆಗೆ ಪರಂಪರೆಯ ಪ್ರೀತಿಗರು ಒಪ್ಪದಿದ್ದರೂ ಡಾ. ಜೋಶಿ ಅವರು ಬಂದು ಭಾಗವಹಿಸಿದ್ದರು (25-03-2002). ಅದೇ ರೀತಿ ಕಡೆಂಗೋಡ್ಲು ಕೃತಿ ‘ಸೀತಾಪಹಾರ’ವನ್ನು ಆಧರಿಸಿ ಪ್ರಯತ್ನಿಸಿದ ‘ಕಾವ್ಯ ತಾಳಮದ್ದಲೆ’ (25-10-1998) ಎಂಬ ಹೊಸ ಸಾಧ್ಯತೆಗೆ ಸಹಕಾರ ಸಾಧ್ಯವೇ ಎಂದು ಕೇಳಿದ್ದೆ. ಹಿಂದೆ ಮುಂದೆ ನೋಡದೆ ಒಪ್ಪಿ ಬಂದಿದ್ದರು. ಆ ಕಾವ್ಯವನ್ನು ಆಳವಾಗಿ ಅಧ್ಯಯನ ಮಾಡಿ ತನ್ನ ಅಪಾರ ತಾಳಮದ್ದಲೆ ವಾಗ್ಮಿತೆಯನ್ನು ಆ ಕಲ್ಪನೆಗೆ ಇಂಬು ಕೊಡುವಂತೆ ಗಂಗಾಪ್ರವಾಹವಾಗಿಸಿದ್ದರು. ಇನ್ನೂ ಒಂದು ಹೆಜ್ಜೆ ಮುಂದೆ – ಹಿಮ್ಮೇಳವೇ ಇಲ್ಲದೆ ಆಶು ‘ತರ್ಕ ಮದ್ದಳೆ’ಯ ಪ್ರಯತ್ನದ ಬಗ್ಗೆ ಪ್ರಸ್ತಾಪಿಸಿದಾಗ ಆತ್ಮೀಯರಾದ ಶ್ರೀ ವಾಸುದೇವ ರಂಗಾಭಟ್ಟರನ್ನು ಕೂಡಿಕೊಂಡು ನಮ್ಮ ‘ಊರ್ವಶೀ ವಿಲಾಸ ವಿಲಾಪ’ ಕ್ಕೆ ಒಂದು ಎತ್ತರವನ್ನು ಸಾಧ್ಯಗೊಳಿಸಿದ್ದರು. (11-01-2015)

ಹೀಗೇ ಸಂದರ್ಭವೊದಗಿದಾಗಲೆಲ್ಲ ತಮ್ಮ ಸಮಕಾಲೀನರ ಸಾಧನೆಗಳ ಶೋಧನೆಗಳ ಕಾಣ್ಕೆಗಳ ಅಭಿಪ್ರಾಯಗಳ ದಾಖಲೆಯನ್ನು ತನ್ನ ಲೇಖನಗಳಲ್ಲೋ ಉಪನ್ಯಾಸಗಳಲ್ಲೋ ನೆನಪಿಸಿಕೊಂಡು ಹೇಳುವ ಪರಿಪಾಠವನ್ನು ಡಾ|ಜೋಶಿ ಅವರು ನಿಡುಗಾಲದಿಂದ ಮಾಡುತ್ತಾ ಬಂದಿದ್ದಾರೆ. ಈ ಗ್ರಂಥದ ಹಲವು ಲೇಖನಗಳಲ್ಲಿ ಅದಕ್ಕೆ ಆಧಾರ ದೊರಕುತ್ತದೆ. ಇದು ಇಂಥವರು ಹೇಳಿದ್ದು, ಇದು ಇಂಥವರ ಮಾತು, ಕೊಡುಗೆ ಎಂಬಿತ್ಯಾದಿಗಳನ್ನೆಲ್ಲ ಪ್ರಸ್ತಾಪಿಸಲು ಮರೆಯದಿರುವ ‘ಸಾಕ್ಷಿ ಪ್ರಜ್ಞೆಯ ಬೌದ್ಧಿಕ ವ್ಯಕ್ತಿತ್ವ’ ಡಾ| ಜೋಶಿ ಅವರದ್ದಾದದ್ದರಿಂದಲೇ ಈ ಗ್ರಂಥದ ವಿವಿಧ ನೆಲೆಗಳಲ್ಲಿ ವಿವೇಚನೆಗಳು ಸಾಧ್ಯವಾಗಿದೆ. ಏನು ಋಣವೋ? ನನಗಂತು ಒಂದೆರಡು ಮುನ್ನುಡಿ ಎಂಬ ಶಿಷ್ಟಾಚಾರವನ್ನೂ ಮೀರಿ ಪ್ರಸ್ತಾಪಿಸಲೇ ಉದಾಹರಣೆಗೆ ‘ಮಂಗಳೂರಿನಲ್ಲಿ ಯಕ್ಷಗಾನ’ ಎಂಬ ಅವರ ವಿಶಿಷ್ಟ ಬಗೆಯ ಅಧ್ಯಯನ ನೋಟದಲ್ಲಿ ಸೇರಿಕೊಳ್ಳಬಹುದಾದ ಒಂದು ಸಂಗತಿ – ಮುಳಿಯ ಶತಮಾನೋತ್ಸವ ಸಂದರ್ಭ ಸಂತ ಎಲೋಶಿಯಸ್ ಸಭಾಭವನದಲ್ಲಿ ನಡೆದ ತೆಂಕುತಿಟ್ಟಿನಲ್ಲಿ ಪ್ರಥಮ ಎನ್ನಬಹುದಾದ ಬ್ಯಾಲೆ ಪ್ರಯೋಗವಾದ `ನವನೀತ ರಾಮಾಯಣ’ ಆಧಾರಿತ ರಂಗಪ್ರಯತ್ನದ(18-03-1989) ಕುರಿತಾಗಿ ಡಾ| ಜೋಶಿ ಅವರು ಹಲವು ವೇದಿಕೆಗಳಲ್ಲಿ ಮೆಚ್ಚಿ ಆಡಿದ್ದನ್ನಾಗಲೀ (ಲೇಖನದಲ್ಲಿ ಆ ಮರೆವೆ ದೋಷವಾಗಿಲ್ಲ) ಡಾ| ಕಾರಂತರು ಸ್ತ್ರೀ ವೇಷಕ್ಕಾಗಿ ರೂಪಿಸಿದ ಶಿರೋಭೂಷಣ (ಸ್ತ್ರೀ ಕೇದಗೆ ಕಿರೀಟ)ದ ಒಟ್ಟಂದದ ಕೊಡುಗೆಯನ್ನು ಸೂಕ್ಷ್ಮವಾಗಿ ವಿಶ್ಲೇಷಿಸಿ (ಪು 73) ಪರ್ಯಾಯವಾಗಿ ಶ್ರೀ ಕೊಳ್ಯೂರು ಶ್ರೀ ಪಾತಾಳ ಅವರು ವಿನ್ಯಾಸಗೊಳಿಸಿ ಪ್ರಯತ್ನಿಸಿದ (ನನ್ನ ಪಾಂಚಾಲಿಯಲ್ಲಿ ‘ಕಮಲಮುಂದಲೆ’ ಎಂಬ ಪರಿಕಲ್ಪನೆಯಲ್ಲಿ ರೂಪಿಸಿದ) ಆಹಾರ್ಯಗಳ ಕೊಡುಗೆಗಳನ್ನು ನೆನಪಿಸಿಕೊಳ್ಳುವಂತೆ ವಿವೇಚಿಸಿದ ಡಾ| ಜೋಶಿ ಅವರ ದಾಖಲೀಕರಣ ಪ್ರಯತ್ನ ವಿಶಿಷ್ಟ ಬಗೆಯದು. ‘ಅವರು(ಕಾರಂತರು) ಸ್ತ್ರೀ ವೇಷಕ್ಕೆ ತಯಾರಿಸಿದ ‘ಕಿರಣ’ದ ಮುಡಿ ಸ್ತ್ರೀ-ಪುರುಷ ವೇಷಗಳ ನಡುವಿನ ವಿಸಂವಾದವನ್ನು ನಿವಾರಿಸಿ ಆನುರೂಪ್ಯ (Harmony) ಸಾಧಿಸಿತು. ಅದೊಂದು ಅಸಾಮಾನ್ಯ ಸೃಜನ’ ಎಂಬ ಡಾ| ಜೋಶಿ ಅವರ ಮಾತು ಕೇವಲ ಒಂದು ವಾಕ್ಯವಲ್ಲ ಒಂದಷ್ಟು ಚಿಂತನೆಗಳಿಗೆ ಬುನಾದಿಯಾಗುವಂತಿದೆ ಎಂದೇ ನನ್ನೆಣಿಕೆ.

ಕಾರಂತರ ಮೂಲ ಚಿಂತನೆಯ ಕೊಡುಗೆಗಳ ಸುತ್ತಮುತ್ತ ಇಂದೀಗ ನಡೆಯುತ್ತಿರುವ ವಿಧ ವಿಧದ ಪ್ರಯೋಗವಿಸ್ತಾರಗಳೆಡೆಗೆ ಗಮನ ಹರಿಸಬೇಕೆಂದು ಸೂಚಿಸುವಂತಿದೆ ಇಂತಹ ಅನೇಕ ಪರಿಶೀಲನೆಗಳು. ಅದೇ ರೀತಿ ಪುಟ 30ರಲ್ಲಿ ದಾಖಲಿಸಿದ ಮಂಗಳೂರು ವಿಶ್ವವಿದ್ಯಾನಿಲಯದ ಡಾ. ಪಿ. ದಯಾನಂದ ಪೈ, ಶ್ರೀ ಪಿ. ಸತೀಶ್ ಪೈ ಯಕ್ಷಗಾನ ಅಧ್ಯಯನ ಕೇಂದ್ರವನ್ನು ಮುಖ್ಯ ವಿದ್ಯಮಾನವೆಂದು ಗುರುತಿಸಿ ಪ್ರೊ. ಬಿ.ಎ. ವಿವೇಕ ರೈ ಅವರು ಈ ಬಗ್ಗೆ ಬಹಳ ಹಿಂದೆ ಚಿಂತಿಸಿ ಯೋಜನೆ ಹಾಕಿದಾಗ ಆ ಕುರಿತ ಸ್ಥೂಲ ನಕ್ಷೆ ತಯಾರು ಮಾಡುವಾಗ ಸಹಕರಿಸುವ ಅವಕಾಶ ದೊರಕಿದ ಮಧುರ ಸ್ಮೃತಿಯನ್ನು ಉಜ್ಜಿÃವನಗೊಳಿಸಿದ್ದಾರೆ.

ಹಗುರ ನುಡಿನೋಟಗಳನ್ನು ಲೆಕ್ಕಿಸದೆ ನನ್ನ ಅನೇಕ ಪ್ರಯೋಗಗಳಿಗೆ ಸ್ಪಂದಿಸಿದವರು ಡಾ| ಜೋಶಿ. ಆ ಪ್ರಯೋಗಗಳ ಹೊಸ ನೋಟ, ಸಹ ಸ್ಪಂದನ ಹೇಗಿರಬೇಕು ಎಂಬುದನ್ನು ಒಂದು ಸಿದ್ಧಾಂತದಂತೆ ಬೆಲೆಕಟ್ಟುವುದರಲ್ಲಿ ಡಾ| ಜೋಶಿ ಅವರ ಹಾದಿ ನೇರ, ಸರಳ ಮತ್ತು ಸರಸ ಸಂಭಾಷಣೆಯ ರೂಪದ್ದು ಎಂಬುದಕ್ಕೆ ಈ ಗ್ರಂಥದ ಹೆಚ್ಚಿನ ಲೇಖನಗಳಲ್ಲಿ ನಮಗೆ ಉದಾಹರಣೆಗಳು ದೊರಕುತ್ತವೆ. ‘ಭಾರತೀಯ ಕಲೆಗಳ ಅಂತಾರಾಷ್ಟ್ರೀಯ ಅರ್ಥೈಸುವಿಕೆ’ (ಪು 77ರಿಂದ) ಲೇಖನವನ್ನೇ ಗಮನಿಸಿ. ಆ ಲೇಖನದಲ್ಲಿ ಬರುವ – ಒಂದು ಜಾನಪದ ಕುತೂಹಲದ ಜನಾಂಗೀಯ ನೋಟಕ್ಕಿಂತ ಭಿನ್ನವಾಗಿ ನಮ್ಮ ಯಕ್ಷಗಾನ ಪ್ರದರ್ಶನವನ್ನು ‘ಒಂದು ರಂಗಕಲೆಯಾಗಿ ವಿಶಿಷ್ಟ ಕಾಲದ (period) ಮಾಧ್ಯಮವಾಗಿ ಪುರಾಣ ವಸ್ತುವಿನ ಅರ್ಥೈಸುವಿಕೆ ಮತ್ತು ಪ್ರಸ್ತುತಿಯಾಗಿ… ಕಾಣಬೇಕಾಗಿದೆ; ನಾವು ಕಾಣಿಸಬೇಕಾಗಿದೆ…’ ಎಂಬ ಡಾ| ಜೋಶಿ ಅವರ ಗಂಭೀರ ಆಗ್ರಹ ನಿಜಕ್ಕೂ ಒಂದು ಹೊಸ ಬಗೆಯ ಅರ್ಥಪೂರ್ಣ ಚಿಂತನೆ. ಆ ನಿಟ್ಟಿನ ಪ್ರಯತ್ನ ಇದು ತನಕ ಸಾಗಿಲ್ಲ ಎಂಬುದನ್ನು ಎಚ್ಚರಿಸುವಂತೆ ಸೂಚಿಸುವ ಮಾತುಗಳು ಇವು. ಇಂಥ ಪರಿಶೀಲನೆಯ ಮೂಲಕ ಡಾ| ಕಾರಂತರ ಪ್ರಯತ್ನದಿಂದ ಹಿಡಿದು ಇಂದೀಗ ನಾಡಿನ ಒಳಗೆ ಮತ್ತು ಹೊರರಾಷ್ಟ್ರಗಳಲ್ಲಿ ನಡೆಯುತ್ತಿರುವ ಯಕ್ಷಗಾನ ಪ್ರಯೋಗ ಪ್ರದರ್ಶನಗಳ ಇತಿಮಿತಿಗಳೆಡೆಗೆ ನಮ್ಮ ಗಮನ ಹರಿಯುವಂತೆ ಮಾಡಿದ್ದಾರೆ ಡಾ| ಜೋಶಿ.

ಹೀಗೆ ಪ್ರತಿಯೊಂದು ಪ್ರಬಂಧದಲ್ಲಿ ಸುಮಾರು ಇನ್ನೂರು ಮುನ್ನೂರು ವರ್ಷಗಳ ಯಕ್ಷಗಾನದ ಬೆಳವಣಿಗೆಯ ವಿವಿಧ ವಿಭಾಗಗಳೆಡೆಗೆ ತನ್ನ ಚಿಂತನೆಯ ಹಾರಾಟವನ್ನು ನಡೆಸಿ ಈ ಗ್ರಂಥವನ್ನು ಸಂಗ್ರಹ ಯೋಗ್ಯವಾಗಿಸಿದ್ದಾರೆ ಲೇಖಕರು. ಒಂದನ್ನು ಪ್ರಸ್ತಾಪಿಸುವಾಗ ಇನ್ನಷ್ಟು ವಿಚಾರಗಳೆಡೆಗೆ ಅಥವಾ ತನ್ನ ಸಮಕಾಲೀನ ಶೇಷ್ಠರ ಸಾಧನೆಗಳ ಬಗೆಗೆ ಓದುಗನ ಆಸಕ್ತಿ ಕೆರಳುವಂತೆ ಮುಕ್ತ ಸಂಭಾಷಣೆಯ ಲಹರಿಯನ್ನು ನೀವೀ ಪುಸ್ತಕದಲ್ಲಿ ಕಾಣಬಹುದು. ಕಾರಂತರ ಪ್ರಸ್ತಾಪದಲ್ಲಿ ಕುಕ್ಕಿಲರ ಶ್ರೇಷ್ಠತೆಯ ವಿವೇಚನೆ ಅಧ್ಯಯನ ಯೋಗ್ಯವಾಗಿ ಬಂದಿದೆ. ಯಕ್ಷಗಾನದ ಭಾಷೆಯಲ್ಲೇ ಹೇಳುವುದಾದರೆ ಚೌಕಿಯಿಂದ ರಂಗಸ್ಥಳಕ್ಕೆ ಹೊಸ ಹೊಸ ವೇಷ ಬಂದ ಹಾಗೆ. ಯಕ್ಷಗಾನ ಕವಿ ಚರಿತ್ರೆಯ ವಿಷಯವನ್ನು ಹೇಳುವಲ್ಲಿ ಕಾರಂತರ ವಿಶೇಷ ಕೊಡುಗೆಯ ವಿವೇಚನೆ ನಡೆದಿದೆ. ಕುಕ್ಕಿಲ ಕೃಷ್ಣ ಭಟ್ಟರು, ನೀರ್ಪಾಜೆ ಭೀಮ ಭಟ್ಟರು, ದಿ| ಮಂಜೇಶ್ವರ ಗೋವಿಂದ ಪೈಗಳು ಇವರೆಲ್ಲರನ್ನು ವಾದದ ಒಂದು ಪಕ್ಷವಾಗಿಸಿ ಕಾರಂತರು ಮತ್ತು ಬೈಕಾಡಿ ವೆಂಕಟಕೃಷ್ಣರಾಯರನ್ನು ಇನ್ನೊಂದು ಪಕ್ಷದಲ್ಲಿರಿಸಿ 1950-80ರ ತನಕ ನಡೆದ ಪಾರ್ತಿಸುಬ್ಬನ ಸಮಸ್ಯೆಯ ಒಳಹೊರಗುಗಳನ್ನು ಪುಟ 87ರಿಂದ ಹಿಡಿದು ಎರಡು ಮೂರು ಪುಟಗಳಲ್ಲಿ ಓದುಗ ಗಂಭೀರವಾಗಿ ಗಮನಿಸುವಂತೆ ವಿವೇಚನೆ ನಡೆದಿದೆ.

ಅಲ್ಲಲ್ಲಿ – ಪ್ರೊ. ಅಮೃತರ ಆಳ ಚಿಂತನೆಗಳ ಪ್ರಸ್ತಾವ, ಡಾ. ರಾಘವ ನಂಬಿಯಾರ್ ನಡೆಸಿದ ದೊಂದಿ ಬೆಳಕಿನ ಪ್ರಯೋಗದ ಪ್ರಸ್ತಾಪ ಅಥವಾ ಕೆರೆಮನೆ ಕಲಾವಿದರ ಅದರಲ್ಲೂ ಮುಖ್ಯವಾಗಿ ದಿ|ಶಂಭು ಹೆಗಡೆಯವರ ಮೂಲ ಚಿಂತನೆಗಳ ವಿಶ್ಲೇಷಣೆ ಇತ್ಯಾದಿಗಳೆಲ್ಲ ಮುಂದಿನ ಪುಟಗಳಲ್ಲಿ ಓದುಗನ ಆಸಕ್ತಿಯನ್ನು ಕೆರಳಿಸುವಂತೆ ಬಂದಿದೆ. ನನ್ನ ಮಿತಿಯ ಅರಿವು ನನಗಿದೆ. ಪ್ರತಿಯೊಂದು ಲೇಖನದ ವೈಶಿಷ್ಟ್ಯಗಳನ್ನು ಹೇಳದೆ ಮಾದರಿಗಾಗಿ ಕೆಲವನ್ನು ಮಾತ್ರ ಪ್ರಸ್ತಾಪಿಸಿದ್ದೇನೆ. ಆದುದರಿಂದಲೇ ಒಂದು ನಿರೀಕ್ಷೆ, ಮುಖ್ಯವಾಗಿ ಯಕ್ಷಗಾನಕ್ಕೆ ಸಂಬಂಧಿಸಿ ಮತ್ತು ನಾಡಿನ ಕಲೆ-ದರ್ಶನಾದಿಗಳಿಗೆ ಸಂಬಂಧಿಸಿ ಸೂಕ್ಷ್ಮ ದಾಖಲೆಗಳ ಮಹಾಸಂಪುಟ ಡಾ. ಜೋಶಿ ಅವರ ಲೇಖನಿಯಿಂದ ಬರಲಿ ಎಂಬುದೇ ಈ ಮುನ್ನುಡಿಕಾರನ ಪ್ರೀತಿಯ ನಿರೀಕ್ಷೆ. ಅವರಿಂದ ಮಾತ್ರ ಸಾಧ್ಯವಾಗಬಹುದಾದ ಕ್ರೋಢೀಕರಣದ ಕಾರ್ಯ ಅದು. ತಾನು ಕೇಳಿದ್ದು ಕಂಡದ್ದು ಉಳಿದವರೆಲ್ಲ ಹೇಳಿದ್ದು ಹತ್ತು ಹಲವು ಬಗೆಗಳಲ್ಲಿ ಹೇಗೆ ಬರಬೇಕು ಎನ್ನುವುದಕ್ಕೆ ಕೆಲವು ಮಾದರಿಗಳು ಈ ಪುಸ್ತಕದಲ್ಲೇ ದೊರಕುತ್ತವೆ. ಈ ನಿಟ್ಟಿನಲ್ಲಿ ಬರಿದಾಗದ ಉಗ್ರಾಣ ಅವರದು ಎಂಬ ಸೂಚನೆಯೂ ದೊರಕುತ್ತದೆ. ‘ನಿಮ್ಮ ಸಮೂಹದ ಪ್ರಯೋಗಗಳ ಸಮಗ್ರ ಅಧ್ಯಯನ ನಡೆಯಬೇಕು ಆಚಾರ್ಯರೆ’ ಎಂದು ಎದುರಾದಾಗಲೆಲ್ಲ ಎಚ್ಚರಿಸುತ್ತಿದ್ದ ಜೋಶಿ ಅವರಿಗೆ ಅವರ ಧಾಟಿಯಲ್ಲೇ ಹೇಳುವ ‘ಅಸ್ತ್ರಕ್ಕೆ ಪ್ರತಿ ಅಸ್ತ್ರ’ ಎಂಬ ವರಸೆಯಿಂದ ನಾನು ಈ ಆಶಯವನ್ನು ವ್ಯಕ್ತಪಡಿಸುತ್ತಿಲ್ಲ. ಮುನ್ನುಡಿ ಬರೆಯ ಹೊರಟು ಒಂದು ಸ್ವಗತ ಕಥನವಾಗಿಸಿದ್ದೇನೆ ನನ್ನ ಮಿತಿಯೊಳಗೆ. ಅವರ ನಿರೀಕ್ಷೆಗೆ ಭಿನ್ನವಾಗಿ.

ಆದರೂ ಮುಗಿಸುವ ಮೊದಲು ಮತ್ತೆ ಹೇಳಬೇಕು ಹಲವು ನೋಟಗಳ ಈ ಪುಸ್ತಕ ಹಲವು ಚಿಂತನೆಗಳ ಅನುಸಂಧಾನಕ್ಕೆ ಒಂದು ಪ್ರವೇಶಿಕೆಯಂತಿದೆ. ಕುಕ್ಕಿಲ ಸಂಪಾದಿತ ‘ಪಾರ್ತಿಸುಬ್ಬನ ಯಕ್ಷಗಾನ’ ಪ್ರಕಟಣೆ ಒಂದು ಘಟನೆ ಎಂದು ಡಾ| ಜೋಶಿ ಉಲ್ಲೇಖಿಸುವಾಗ ಆ ವಿಚಾರ ಅಲ್ಲಿಗೇ ನಿಲ್ಲುವುದಿಲ್ಲ. ಹಲವು ಪದರಗಳನ್ನೊಳಗೊಂಡ ಪ್ರಸ್ತ ಭೂಮಿಯಂತೆ ಚಿಂತನೆಯ ಕೃಷಿಗೆ ತೆರೆದುಕೊಳ್ಳುವಂತಿದೆ. ಮೊದಲ ಲೇಖನವಾದ ‘ಅರ್ಥಗಾರಿಕೆ…’ಯಲ್ಲಿ (ಪು 3ರಿಂದ) ಜೋಶಿಯವರ ಮುಖ್ಯ ಮಾಧ್ಯಮವಾದ ತಾಳಮದ್ದಲೆ ಮಾತುಗಾರಿಕೆಯ ಹಲವು ಸಾಧ್ಯತೆ ಮತ್ತು ಸಮಸ್ಯೆಗಳನ್ನು ವಿಶ್ಲೇಷಿಸಿದ್ದಾಗಲಿ, ಕಲೆ ಮತ್ತು ಕಲಾವಿದರ ಹಿತರಕ್ಷಣೆಯ ವಿಷಯ ಬರುವಾಗ ಉಡುಪಿಯ ಯಕ್ಷಗಾನ ಕಲಾರಂಗದ ಪ್ರಸ್ತಾಪವಾಗಲಿ(ಪು 67), ‘ಮಂಗಳೂರಿನಲ್ಲಿ ಯಕ್ಷಗಾನ’ ಎಂಬ ಲೇಖನದಲ್ಲಿ ನಗರ ಕೇಂದ್ರಿತವಾಗಿ ಯಕ್ಷಗಾನದ ಉಳಿವು ಬೆಳವಣಿಗೆ ಯಾರಿಂದ ಹೇಗೆ ಎಷ್ಟು ಬಗೆಗಳಲ್ಲಿ ಕಷ್ಟ ನಷ್ಟಗಳ ಗಡಿಯನ್ನು ಮೀರಿ ನಡೆದಿದೆ ನಡೆಯಬೇಕು ಎಂಬುದರ ವಿಶ್ಲೇಷಣೆಯಾಗಲಿ – ಎಲ್ಲವೂ ಡಾ. ಜೋಶಿಯವರಿಂದ ಸಾಧ್ಯವಾಗಬಹುದಾದ ದಾಖಲೆಗಳ ವಿಶ್ವಕೋಶದ ಹೊಳಹುಗಳಾಗಿ ಕಾಣಿಸುತ್ತದೆ ನನಗೆ.

ಈ ಎಲ್ಲದರ ನಡುವೆ ಹೇಳಬಹುದು ಈ ಮಹತ್ತ ್ವದ ಪ್ರಬಂಧ ಸಂಕಲನದ ದೊಡ್ಡ ಕೊರತೆಯೇ – ಲೇಖನ ಲೇಖನಗಳ ನಡುವೆ ಒಂದು ವ್ಯವಸ್ಥಿತ ತಾತ್ವಿಕ ಕೊಂಡಿ ದೊರಕದಿರುವುದು. ವೈವಿಧ್ಯಮಯ ನೋಟಗಳ ಸಂಗ್ರಹವಿದು ಎಂದು ಒಪ್ಪಿದರೂ ಈ ಕೊರತೆಯನ್ನು ನಿರಾಕರಿಸುವಂತಿಲ್ಲ. ‘ಯಕ್ಷಗಾನ ಮಹಾಕವಿ ನೀಡಿದ ಬುನಾದಿ’ (ಪು 40 ರಿಂದ) ‘ಪ್ರದರ್ಶನ-ಮೌಲ್ಯ ಸಂವರ್ಧನ’ (ಪು 50 ರಿಂದ) ‘ಸ್ಥಿರೀಕರಣ-ಪರಿಷ್ಕರಣ-ವಿಸ್ತರಣ’ (ಪು 55 ರಿಂದ) ಇಂಥ ಲೇಖನಗಳ ಸೂತ್ರ ಸಿದ್ಧಾಂತಗಳು ‘ಕಾರಂತ ವಿಸ್ತರಣ’ (ಪು 71 ರಿಂದ) ‘ಕಲಾಪೋಷಕರ ಸುತ್ತ’ (ಪು 19 ರಿಂದ) ದಂಥ ಲೇಖನಗಳೊಂದಿಗೆ ಸೈದ್ಧಾಂತಿಕ ಸ್ಪರ್ಷಗಳನ್ನು ಹೊಂದದಿರುವ ಕೊರತೆ ಓದುಗನನ್ನು ಕಾಡದಿರದು. ಭಿನ್ನ ವಿನ್ಯಾಸದ ಏರುಪೇರಿನ ಸೌಧ ಸಮುಚ್ಛಯದಂತೆ ಈ ಸಂಕಲನ ಏಕೀಕೃತ ನೋಟದ ಅನುಭವವನ್ನು ಓದುಗನಿಗೆ ನೀಡದೆ ಹೋಗಬಹುದು. ಈ ಕೊರತೆಯನ್ನು ಮೀರಲು ಭಿನ್ನ ಸಂದರ್ಭಗಳಲ್ಲಿ ಭಿನ್ನ ಉದ್ದೇಶಗಳಿಗಾಗಿ ಬರೆದ ಪ್ರಬಂಧಗಳ ಸಂಕಲನವಿದು ಎಂದು ಅರ್ಥೈಸುವ ಸಹೃದಯತನ ನಮ್ಮದಾಗಬೇಕು. ಆಗ ಈ ಲೇಖನಗಳಲ್ಲಿ ಬರುವ ಬಗೆಬಗೆಯ ಆಳವಾದ ಪರಿಶೀಲನೆಗಳನ್ನು ಓದುಗ ತನ್ನ ಮನೋಭಿತ್ತಿಯಲ್ಲಿ ಒಂದು ದೀರ್ಘ ಚಿಂತನೆಯ ರೇಖೆಯಾಗಿ ಗುರುತಿಸುವ ದಾರಿ ದೊರಕುತ್ತದೆ. ಅಂಥ ಸಹೃದಯತನ ದೊರಕಲಿ ಎಂದು ಆಶಿಸಿ ನನ್ನೀ ಮೊದಲ ಹಸಿರು ತಡೆಯನ್ನು ತೋರಣವಾಗಿಸುತ್ತಿದ್ದೇನೆ.

‘ವ್ಯಾಸ’, ಉಡುಪಿ                                                                                                                                       ಉದ್ಯಾವರ ಮಾಧವ ಆಚಾರ್ಯ
29-09-2017

error: Content is protected !!
Share This