ಯಕ್ಷಗಾನವೆಂದರೆ ಆ ಪುಟ್ಟ ಹುಡುಗನಿಗೆ ಎಲ್ಲಿಲ್ಲದ ಪ್ರೀತಿ. ಈ ಹುಡುಗ ಯಕ್ಷಗಾನವನ್ನು ಇಷ್ಟೊಂದು ಹಚ್ಚಿಕೊಂಡಿದ್ದನ್ನು ಕಂಡು ಅಪ್ಪ-ಅಮ್ಮ ಬೈದು ಸುಮ್ಮನಿರಿಸಿದರು. ಆದರೆ ಹುಡುಗ ಎಲ್ಲರ ಕಣ್ಣು ತಪ್ಪಿಸಿ ಮನೆಯ ಹತ್ತಿರದ ಬೆಟ್ಟಕ್ಕೆ ಹೋಗಿ ಅಭ್ಯಾಸ ಮಾಡಲು ಶುರು ಮಾಡಿಕೊಂಡ. ಅಲ್ಲಿಯೇ ಯಕ್ಷಗಾನದ ಮಟ್ಟುಗಳ ಅಭ್ಯಾಸ ಮಾಡತೊಡಗಿದ. ಇನ್ನು ಈ ಹುಡುಗನ ಮೇಲೆ ನಿಯಂತ್ರಣ ಸಾಧಿಸಿ ಫಲವಿಲ್ಲ ಎಂದು ಅಪ್ಪ-ಅಮ್ಮನೂ ಸುಮ್ಮನಾದರು. ಹೀಗೆ ಹುಟ್ಟಾ ಕಲಾವಿದನಾಗಿ ಬೆಳೆದ ರಾಮಚಂದ್ರ ಮುಂದೆ ಏಳು ದಶಕಗಳ ಕಾಲ ಯಕ್ಷರಂಗವನ್ನು ಅನಭಿಷಿಕ್ತ ದೊರೆಯಂತೆ ಆಳಿದರು. ಅನುವಂಶಿಕ ಕಲಾವಿದರಲ್ಲದ ರಾಮಚಂದ್ರ ಹೆಗಡೆ ಚಿಟ್ಟಾಣಿ ಎಂಬ ಪುಟ್ಟ ಊರನ್ನು ವಿಶ್ವ ನಕಾಶೆಯಲ್ಲಿ ಗುರುತಿಸುವಂತೆ ಮಾಡಿದರು.

ಗೆಜ್ಜೆ ಕಟ್ಟಿದ ಹುಡುಗನ ಹೆಜ್ಜೆಗಳಿಗೆ ಯಕ್ಷಗಾನದ ಭಾಷ್ಯ ಬರೆದವರು ಗುರು ಬಾಳೆಗದ್ದೆ ರಾಮಕೃಷ್ಣ ಭಟ್. ಹದಿನಾಲ್ಕರ ಹೊತ್ತಿಗೇ ಹೆಜ್ಜೆಗಳ ಹದವರಿತ ರಾಮಚಂದ್ರ ಚೌಕಿಯಿಂದ ಈಚೆ ಬಂದು ಬೆರಗು ಮೂಡಿಸಲು ಶುರು ಮಾಡಿಕೊಂಡ. ಆತನ ಅಭಿನಯ ಚಾತುರ್ಯಕ್ಕೆ ದೊಡ್ಡ ದೊಡ್ಡ ಪಾತ್ರಗಳೇ ಸೆಳೆದುಕೊಂಡವು. ಕೃಷ್ಣ ಅರ್ಜುನ, ಸುಧನ್ವನಂತಹ ಪಾತ್ರಗಳು ಹುಡುಗನಿಗೆ ಪ್ರೌಢತೆ ನೀಡಿದವು. ಯಾವ ಪಾತ್ರಗಳೇ ಇರಲಿ, ಅವನ್ನು ಲೀಲಾಜಾಲವಾಗಿ ನಿರ್ವಹಿಸುವುದು ಕಷ್ಟವಾಗಲೇ ಇಲ್ಲ. ಆತನೊಳಗೆ ಆದ್ಯಂತವಾಗಿ ಆವರಿಸಿಕೊಂಡಿದ್ದ ಕಲೆಯನ್ನು ಹಿರಿಯರೇ ಅಚ್ಚರಿಯಿಂದ ನೋಡತೊಡಗಿದರು. ಮಾಗಧ, ಕಂಸ, ದುಷ್ಟಬುದ್ಧಿ, ಕೀಚಕ, ವಲಲ, ರಾವಣ, ಕೃಷ್ಣಾರ್ಜುನದ ಅರ್ಜುನ, ಬ್ರಹ್ಮ ಕಪಾಲದ ಈಶ್ವರ, ಕಾರ್ತವೀರ್ಯ ಇಂತಹ ಖಳ ಮತ್ತು ಶೃಂಗಾರ ಪಾತ್ರಗಳನ್ನು ನಿರ್ವಹಿಸುತ್ತ ತನ್ನ ಛಾಪನ್ನು ಮೂಡಿಸಿದ ಹುಡುಗನನ್ನು ಮೀರಿಸುವ ನಟ ಇಲ್ಲವಾದರು.

ದಕ್ಷಿಣೋತ್ತರ ಕನ್ನಡ, ಶಿವಮೊಗ್ಗ ಜಿಲ್ಲೆಗಳ ಮೇಳಗಳು ರಾಮಚಂದ್ರ ಹೆಗಡೆಯವರನ್ನು ತಮ್ಮ ತಿರುಗಾಟದಲ್ಲಿ ಸೇರಿಸಿಕೊಳ್ಳಲು ಪೈಪೋಟಿಗೆ ಇಳಿದು ಬಿಟ್ಟವು. ಚಿಟ್ಟಾಣಿ ಇದ್ದರೆ ಆ ತಿರುಗಾಟ ಯಶಸ್ವಿ ಎಂಬುದು ಖಚಿತವಾಗಿತ್ತು. ಮುಂದೆ ಅವರನ್ನು ಮೀರಿಸುವ ನಟರೇ ಇಲ್ಲ ಎನ್ನುವಂತೆ ಬೆಳೆದರು. ಅವರ ಕಣ್ಣೋಟ, ಯಕ್ಷಗಾನದ ಗತ್ತಿಗೆ, ಗೈರತ್ತಿಗೆ ಕುತೂಹಲದಿಂದ, ಬೆರಗಿನಿಂದ ಕಾದ ಯಕ್ಷಗಾನ ಪ್ರಿಯರ ಸಂಖ್ಯೆ ಕೆಲವೇ ಕೆಲವು ಜಿಲ್ಲೆಗಳಿಗೆ ಸೀಮಿತವಾಗಲಿಲ್ಲ ಎಂಬುದು ಅತಿಶಯವಲ್ಲ. ಕೌರವ ಪಾತ್ರದಲ್ಲಿ ಕಣ್ಣು ತುಂಬಿಕೊಳ್ಳಬೇಕು ಎಂದು ದೂರದೂರುಗಳಿಂದ ಬರುತ್ತಿದ್ದ ಕುತೂಹಲಿಗಳೇ ಇದಕ್ಕೆ ಸಾಕ್ಷಿ.

ಕಲೆಯ ಪಾವಿತ್ರ್ಯ ಕಾಪಾಡಿದರು

ಪಾತ್ರ ಯಾವುದೇ ಇರಲಿ, ಪಾವಿತ್ರ್ಯತೆಯನ್ನು ಕಾಪಾಡುತ್ತಿದ್ದುದು ಅವರ ಹಿರಿಮೆ. ಆಕಾರ ಬದ್ಧವಾದ ಕುಣಿತ, ಧ್ವನಿ ಏರಿಳಿತದಲ್ಲಿ ಅವರನ್ನು ಮೀರಿಸಿದವರಿಲ್ಲ. ಚಿಟ್ಟಾಣಿಯವರ ರಂಗಪ್ರವೇಶ ಆಗುತ್ತದೆ ಎಂದರೆ ನಿದ್ರೆ ಮಾಡುತ್ತಿದ್ದವರೂ ಎದ್ದು ಕುಳಿತುಕೊಳ್ಳುತ್ತಿದ್ದರು. ಅವರ ರಂಗ ಪ್ರವೇಶವೇ ಹಾಗಿತ್ತು.

ಯಕ್ಷಗಾನದಲ್ಲಿ ಅವರ ರೀತಿ ರಂಗ ಪ್ರವೇಶವನ್ನು ಯಾರೂ ಮಾಡಿಲ್ಲ. ಊಹೆಗೆ ನಿಲುಕದ ರಂಗ ಪ್ರವೇಶ ಪ್ರೇಕ್ಷಕರನ್ನು ನಿಬ್ಬೆರಗಾಗಿಸುತ್ತಿತ್ತು. ರಂಗ ಪ್ರವೇಶಕ್ಕೆ ಹೊಸ ಕಾಯಕಲ್ಪ ನೀಡಿದವರು. ಅವರ ಪ್ರವೇಶ ಮಾಡುವ ರೀತಿಗೆ ಜನ ಕಾಯುತ್ತಿದ್ದರು. ಚಪ್ಪಾಳೆ ಹೊಡೆಯುತ್ತಿದ್ದರು.

ಕೌರವನ ಪಾತ್ರದಲ್ಲಿ ಒಳಸರಿದ ಪದ್ಯಕ್ಕೆ ಐದೂವರೆ ಅಡಿ ಎತ್ತರದ ಚಿಟ್ಟಾಣಿ ಒಂದೂವರೆ ಅಡಿಯಷ್ಟು ಕಿರಿದಾಗಿ ಮುದುಡುವ ರೀತಿ, ಭಸ್ಮಾಸುರ ಮೋಹಿನಿಯಲ್ಲಿ ಈಶ್ವರ ಭಸ್ಮವನ್ನು ಒಗೆದಾಗ ಹುಟ್ಟುವ ಭಸ್ಮಾಸುರ, ಮೋಹಿನಿಯ ಸೌಂದರ್ಯಕ್ಕೆ ಮರುಳಾಗಿ ನಿಲ್ಲುವ ಭಸ್ಮಾಸುರ, ಆಗ ಸುಧನ್ವನು ಬೇಗದಿ ರಣಕೈ… ಪದಕ್ಕೆ ಎದ್ದು ಬರುವ ಸುಧನ್ವ, ಭೀಮ ಭೇರಿ ಒಡೆದಾಗ ಎದ್ದು ಬರುವ ಮಾಗಧ- ಅವರ ಅಭಿನಯ ಅಮೋಘ. ಅವರ ಅಭಿನಯ ಕೌಶಲ್ಯ ಚಿಟ್ಟಾಣಿ ಶೈಲಿ ಎಂದೇ ಹೆಸರಾಯಿತು.

– ವಿಜಯ ಕರ್ನಾಟಕ ಪತ್ರಿಕೆ  – ಕೃಷ್ಣಮೂರ್ತಿ ಭಟ್, ಹೊನ್ನಾವರ

error: Content is protected !!