ಕೃತಿ ಪರಂಪರೆಯಲ್ಲಿ ಹೊಸತನಕ್ಕೆ ನಾಂದಿಯಾದೆ : ಭಾಸ್ಕರ ರೈ ಕುಕ್ಕುವಳ್ಳಿ

“ಯಕ್ಷಗಾನ ಕ್ಷೇತ್ರದಲ್ಲಿ ಹಲವು ಕೃತಿಗಳು ಈಗಾಗಲೇ ಬಂದಿವೆ. ಕಲಾವಿದರನ್ನು ಪರಿಚಯಿಸುವ ಹೊಸ ದೃಷ್ಟಿಕೋನದ ಕೃತಿ ‘ಜೋಶಿ ಆಳ ಮನದಾಳ’. ಇದು ಒಬ್ಬ ಕಲಾವಿದನನ್ನು ಕೇವಲ ಸ್ತುತಿ ಮಾಡದೇ ಆತನೊಳಗಿನ ವಿಶೇಷತೆಯನ್ನು ವಾಸ್ತವಿಕವಾಗಿ ತೆರೆದಿಟ್ಟಿದೆ. ಜೋಶಿಯವರ ಪ್ರತಿಭೆಯ ಪ್ರವೇಶಿಕೆ ಈ ಕೃತಿಯ ಮೂಲಕ ಪಡೆಯಲು ಸಾಧ್ಯವಿದೆ.” ಎಂದು ಯಕ್ಷಗಾನ ಕಲಾವಿದ, ವಿದ್ವಾಂಸ, ಪ್ರಾ. ಭಾಸ್ಕರ ರೈ ಕುಕ್ಕುವಳ್ಳಿಯವರು ಅಭಿಪ್ರಾಯಪಟ್ಟರು.

ಅವರು ಇತ್ತೀಚೆಗೆ ಪುತ್ತೂರು ನಟರಾಜ ವೇದಿಕೆಯಲ್ಲಿ ಡಾ. ಸುಂದರ ಕೇನಾಜೆಯವರು ರಚಿಸಿದ ಡಾ. ಎಂ. ಪ್ರಭಾಕರ ಜೋಶಿಯವರ ಕುರಿತಾದ ‘ಜೋಶಿ ಆಳ ಮನದಾಳ’ ಕೃತಿ ಬಿಡುಗಡೆಗೊಳಿಸಿ ಮಾತನಾಡಿದರು. “ಕಲಾವಿದ, ವಿಮರ್ಶಕ ಎರಡೂ ಆಗಿರುವ ಜೋಶಿ ನಮ್ಮ ಮಧ್ಯೆ ಪಂಡಿತ ಪರಂಪರೆಯ ಕೊಂಡಿಯಂತಿದ್ದಾರೆ. ಅವರ ವೈಯಕ್ತಿಕ ಬದುಕು ಮತ್ತು ಕಲಾ ಚಿಂತನೆ ಎರಡೂ ಕಲೆಯ ಭವಿಷ್ಯದ ದೃಷ್ಟಿಯಿಂದ ಮಹತ್ವವಾದುದು ಎನ್ನುವುದನ್ನು ಈ ಕೃತಿಯ ಮೂಲಕ ಲೇಖಕರು ವ್ಯಕ್ತಪಡಿಸಿದ್ದಾರೆ. ಆದ್ದರಿಂದ ಇಂತಹಾ ಕೃತಿಗಳು ಇನ್ನೂ ಹೆಚ್ಚಿಗೆ ಪ್ರಕಟಗೊಳ್ಳಬೇಕು” ಎಂದು ಅವರು ತಿಳಿಸಿದರು. ಆಂಜನೇಯ ಯಕ್ಷಗಾನ ಸಂಘದ ಗೌರವಾಧ್ಯಕ್ಷ ಮುಳಿಯ ಶ್ಯಾಂ ಭಟ್ ಕೃತಿ ಬಿಡುಗಡೆಗೊಳಿಸಿದರು. ಡಾ. ಎಂ. ಪ್ರಭಾಕರ ಜೋಶಿ, ಕಣಿಪುರ ಯಕ್ಷಗಾನ ಪತ್ರಿಕೆಯ ಸಂಪಾದಕ ಎಂ. ನಾ. ಚೆಂಬಲ್ತಿಮಾರ್, ಕೃತಿಯ ಲೇಖಕ ಡಾ. ಸುಂದರ ಕೇನಾಜೆ, ಆಕೃತಿ ಪ್ರಕಾಶನದ ಮಾಲಕ ಕಲ್ಲೂರು ನಾಗೇಶ, ಕಲಾವಿದೆ ಗೌರಿ ಸಾಸ್ತಾನ, ಆಂಜನೇಯ ಯಕ್ಷಗಾನ ಸಂಘದ ಅಧ್ಯಕ್ಷ ಭಾಸ್ಕರ ಬಾರ್ಯ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಸಂಘದ ವತಿಯಿಂದ ಡಾ. ಸುಂದರ ಕೇನಾಜೆಯಲ್ಲಿ ಸನ್ಮಾನಿಸಲಾಯಿತು. ಕಲಾವಿದರಾದ ಗುಡ್ಡಪ್ಪ ಬಲ್ಯ ಸ್ವಾಗತಿಸಿ ಗಣರಾಜ ಕುಂಬಳೆ ವಂದಿಸಿ ಕಾರ್ಯಕ್ರಮ ನಿರೂಪಿಸಿದರು.

error: Content is protected !!
Share This