ತಾಳಮದ್ದಳೆಯ ಅರ್ಥದಾರಿ, ಚಿಂತಕ, ಡಾ. ಎಂ. ಪ್ರಭಾಕರ ಜೋಶಿಯವರ ‘ವಾಗರ್ಥ’ ಕೃತಿಯು ಕನ್ನಡ ವಿಮರ್ಶಾ ರಂಗದಲ್ಲೆ ಅತ್ಯಂತ ವಿಶಿಷ್ಟ ಗ್ರಂಥ ಎಂದು ವಿಮರ್ಶಕ ಎಸ್. ಆರ್. ವಿಜಯಶಂಕರ್ ಬಣ್ಣಿಸಿದರು.

ಬೆಂಗಳೂರಿನ ಸಪ್ತಕ ಸಂಸ್ಥೆಯು ಅಖಿಲ ಕರ್ನಾಟಕ ಹವ್ಯಕ ಮಹಾಸಭೆಯ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಹವ್ಯಕ ಮಹಾಸಭೆಯಲ್ಲಿ ಡಾ. ಪ್ರಭಾಕರ ಜೋಶಿ ಅವರನ್ನು ಸನ್ಮಾನಿಸಿ ಮಾತನಾಡಿದರು.

“ಜೋಶಿ ಅವರನ್ನು ಯಾವುದೇ ಒಂದು ವಲಯಕ್ಕೆ ಸೀಮಿತಗೊಳಿಸಲು ಸಾಧ್ಯವೇ ಇಲ್ಲ. ವಿಮರ್ಶಕ, ಚಿಂತಕ, ತಾಳಮದ್ದಳೆ ಅರ್ಥದಾರಿ, ವಾಗ್ಮಿ ಎನಿಸಿಕೊಂಡಿದ್ದಾರೆ. ಅವರ ಒಂದೊಂದು ಲೇಖನವನ್ನು ಓದಿದಾಗ ಹೊಸ ಹೊಸ ಸಂಗತಿಗಳು ತೆರೆದುಕೊಳ್ಳುತ್ತವೆ. ‘ಭಾರತೀಯ ತತ್ತ್ವ ಶಾಸ್ತ್ರದ ಪ್ರವೇಶ’ ವು ದರ್ಶನ ಶಾಸ್ತ್ರದ ಹರವನ್ನು ಅರ್ಥ ಮಾಡಿಸುತ್ತದೆ. ಕಾಲೇಜು ದಿನಗಳಲ್ಲಿ ನನ್ನನ್ನು ಓದಿನತ್ತ ಸೆಳೆಯಲು ಕಾರಣ ಜೋಶಿ ಅವರ ಬರಹಗಳು” ಎಂದು ಹೇಳಿದರು.

ಸಂಸ್ಥೆಯ ಸಂಚಾಲಕ ಜಿ.ಎಸ್. ಹೆಗಡೆ ಮಾತನಾಡಿ “ಡಾ.ಜೋಶಿ ಅವರಂಥ ವಿದ್ವಾಂಸರಿಗೆ ಸನ್ಮಾನ ಮಾಡಬೇಕೆಂಬುದು ಬಹುದಿನಗಳ ಕನಸಾಗಿತ್ತು. ಅದು ಈಗ ಈಡೇರಿದೆ” ಎಂದರು.

ಸನ್ಮಾನ ಸ್ವೀಕರಿಸಿ ಮಾತನಾಡಿದ ಡಾ. ಎಂ. ಪ್ರಭಾಕರ ಜೋಶಿ, “ನಾನು ಈ ಮಟ್ಟಕ್ಕೆ ಬೆಳೆಯಲು ತನ್ನ ಅಣ್ಣಂದಿರು ಮತ್ತು ಹವ್ಯಕ ಸಮಾಜವೇ ಕಾರಣ,” ಎಂದು ಸ್ಮರಿಸಿದರು.

ಈ ವೇಳೆ ಯಕ್ಷಗಾನ ಪ್ರದರ್ಶನ ನಡೆಯಿತು. ತಾಳಮದ್ದಳೆಯಲ್ಲಿ ಭಾಗವತರಾಗಿ ರವೀಂದ್ರ ಭಟ್ಟ ಅಚವೆ, ಮದ್ದಳೆ ವಾದನದಲ್ಲಿ ಅನಂತ ಪದ್ಮನಾಭ ಪಾಠಕ, ಮುಮ್ಮೇಳದಲ್ಲಿ ಡಾ. ಎಂ. ಪ್ರಭಾಕರ ಜೋಶಿ, ಉಮಾಕಾಂತ ಭಟ್ಟ ಕೆರೆಕೈ, ರಾಧಾಕೃಷ್ಣ ಕಲ್ಚಾರ, ನಾರಾಯಣ ಯಾಜಿ ಸಾಲೇಬೈಲು ಪಾಲ್ಗೊಂಡರು.

– ವಿಜಯ ಕರ್ನಾಟಕ