ಇವರೀಗ ನಮ್ಮೊಂದಿಗಿಲ್ಲ ಎಂಬುದು ನಂಬಲೇ ಬೇಕಾದ ಸತ್ಯ. ಬದುಕಿನಲ್ಲಿ ಶಿಸ್ತು ಎಂಬುದು ಅವರ ಉಸಿರಾಗಿತ್ತು. ಕಿನ್ನಿಗೋಳಿಗೆ ಅವರು ಬರುವುದಕ್ಕೆ ಮೊದಲೇ ನಾನು ಬಂದವ. ಪ್ರಸಿದ್ಧ ಪೆರ್ಲ ಪಂಡಿತರ ಮನೆತನದ ಭಟ್ಟರು ಅರ್ಥಶಾಸ್ತ್ರದಲ್ಲಿ ಬಂಗಾರದ ಪದಕದೊಂದಿಗೆ ಹೊರಬಂದ ಪ್ರತಿಭೆ. ಮುಂದೆ ದ.ಕ ದ ಗ್ರಾಮೀಣ ಬ್ಯಾಂಕಿಂಗ್ ಕ್ಷೇತ್ರ ಕಾರ್ಯ ನಡೆಸಿ ಡಾಕ್ಟರೇಟ್ ಪಡೆದರು. ಪಾಂಪೆ ಕಾಲೇಜಿನಲ್ಲಿ ಪ್ರೊಫೆಸರ್ ಹುದ್ದೆಯಲ್ಲಿ ಇವರ ಸಾಧನೆ ಬಹುದೊಡ್ಡದು. ಆ ಸಂಸ್ಥೆಗೆ ಯು ಜಿ ಸಿ ಯಲ್ಲಿ ನ್ಯಾಕ್ ಎ ಗ್ರೇಡ್ ಪಡೆಯುವಲ್ಲಿ ಡಾ.ಭಟ್ಟರ ಕೊಡುಗೆ ಬಹು ವಿಶಿಷ್ಟ.
ಇವರ ಹಿನ್ನೆಲೆ ಯಕ್ಷಗಾನದ್ದು.ತಾಳಮದ್ದಲೆ ಕ್ಷೇತ್ರವನ್ನು ಬೆಳೆಸಬೇಕೆಂಬ ಆಸೆ ಹೊತ್ತ ನಾವು ಸಹಜವಾಗಿ ಗೆಳೆಯರಾದೆವು.ಅದೇ ಸಮಯದಲ್ಲಿ ಉತ್ತರಕನ್ನಡದಿಂದ ಬಂದ ನಾರಾಯಣ ಹೆಗಡೆಯವರು,ನಾನು, ಹಿರಿಯರಾದ ಯು.ಗೋಪಾಲ ಶೆಟ್ಟರು ಕಿನ್ನಿಗೋಳಿಯಲ್ಲಿ ತಾಳಮದ್ದಲೆ ಸಂಸ್ಥೆಯನ್ನು ಹುಟ್ಟು ಹಾಕಿ ಬೆಳೆಸಲು ಪರಿಶ್ರಮಿಸಿದೆವು.
 ಯಕ್ಷಲಹರಿ ಎಂಬ ಹೆಸರು ನೀಡಿದವರೂ ಡಾ.ಭಟ್ಟರೇ.
ಕ್ರಮೇಣ ಈ ಸಂಸ್ಥೆ ನಡೆಸಿದ ಸ್ಪರ್ಧೆಯಲ್ಲಿ ಡಾ. ಭಟ್ಟರ ಕ್ರತು ಶಕ್ತಿಯ ಅರಿವು ನನಗಾಯಿತು. ಕಾಲಮಿತಿಯ ಅತ್ಯಂತ ಶಿಸ್ತಿನ ಸ್ವರೂಪ ನೀಡಿದವರು ಅವರು.ನಾನು ಪ್ರಸಂಗವನ್ನು ಆಯ್ದು, ಸರಣಿಗೆ ಸೂಕ್ತವಾಗಿ ಕಥೆ ಪದ್ಯಗಳನ್ನು ಕೊಟ್ಟರೆ ಒಂದು ವಾರದೊಳಗೆ ಅವರು ಕಂಪ್ಯೂಟರ್ ನಲ್ಲಿ ಅದರ ಸಂದರ್ಭ,ನಡೆಯಬೇಕಾದ ಹೊತ್ತಿನ ಒಳ ವಿನ್ಯಾಸ, ಪಾತ್ರಕ್ಕಿರುವ ಅವಕಾಶ ಇತ್ಯಾದಿಗಳನ್ನು ಮುದ್ರಿಸಿ ಬೇಕಾಗುವ ವಿಳಾಸವನ್ನು ಜೋಡಿಸಿ ಅಂಚೆಗೆ ಕಳಿಸುವಲ್ಲಿಯವರೆಗಿನ ಕೆಲಸವನ್ನು ಅಚ್ಚುಕಟ್ಟಾಗಿ ಮಾಡಿ ನನಗೊಪ್ಪಿಸುತ್ತಿದ್ದರು .
ಅವರ ಕಾರ್ಯ ಬಾಹುಳ್ಯ ಬಹಳವಿದ್ದಾಗಲೂ ನನಗೆ ತುಂಬಾ ಸಹಾಯಮಾಡಿದವರು ಭಟ್ಟರು. ಹೊರ ನೋಟಕ್ಕೆ ಸಾಧಾರಣರಲ್ಲಿ ಸಾಧಾರಣವೆನ್ನುವ ನಡೆ. ಗಟ್ಟಿಯಾಗಿ ಮಾತಾಡಲೂ ಮುಂದಾಗುವವರಲ್ಲ. ಆದರೆ ಅವರು ಆಡಿದ ಮಾತನ್ನು ತೆಗೆದು ಹಾಕಲು ಯಾರಿಗೂ ಸಾಧ್ಯವಾಗದ ಚಿಂತನೀಯ ವಿಚಾರ ಅಲ್ಲಿರುತ್ತಿತ್ತು. ಒಳ್ಳೆಯ ಅಧ್ಯಯನ ಶೀಲ ಅರ್ಥಧಾರಿ.
ನಮ್ಮೂರಿಗೆ ಅವರನ್ನು ತಾಳಮದ್ದಲೆ ಅರ್ಥಕ್ಕಾಗಿ ಹಲವು ಬಾರಿ ಕರೆದುಕೊಂಡು ಹೋಗಿದ್ದೆ. ನನ್ನ ಬರೆಹ ಮತ್ತು ಇತರ ವಿಚಾರಗಳ ಮೇಲೆ ಅವರು ಬರೆದ ಬರಹ ನನಗೆ ಅಮೂಲ್ಯ. ಉಡುಪಿಯ ಕಲಾರಂಗ ನನಗೆ ಕೊಡಮಾಡಿದ ಕನಕಾ ಅಣ್ಷಯ್ಯ ಪ್ರಶಸ್ತಿಯ ಸಂದರ್ಭದಲ್ಲಿ ಅವರು ಕೊಟ್ಟ ಅಭಿನಂದನ ಭಾಷಣ ಮರೆಯಲಾಗದ್ದು. ಅವರ ಅನಾರೋಗ್ಯದ ತೀವ್ರತೆ ನನಗೆ ತಿಳಿಯುವಾಗ ತಡವಾಗಿತ್ತು.
ಮಂಗಳೂರು ಕೆಎಂಸಿಯಲ್ಲಿ ಕಾಣಲು ಹೋದಾಗ (ತುಂಬಾ ಅನಾರೋಗ್ಯದಲ್ಲಿ) ಎರಡೇ ಮಾತಾಡಲು ಸಿಕ್ಕಿದ್ದು. ಅದೇ ಪುಣ್ಯ.ಪಿತ್ಥ ಕೋಶದ ಕಸಿಯಾಗಬೇಕಂತೆ ಎಂದಿದ್ದರು.ಮತ್ತೆ ಅವರ ದರ್ಶನ ಸಿಗಲೇ ಇಲ್ಲವಾಯಿತು. ನನಗಿಂತ ಹತ್ತು ವರ್ಷ ಕಿರಿಯರವರು. ಹತ್ತು ವರ್ಷ ಹಿರಿಯರಂತಿದ್ದರು. ಕಿನ್ನಿಗೋಳಿಯಲ್ಲಿ ನನಗಾದ ಒಂದು ತೀವ್ರ ತೊಂದರೆಯಲ್ಲಿ (ನಾನು ತುಂಬಾ ಸೆನ್ಸಿಟಿವ್, ಅದು ಅವರಿಗೆ ತಿಳಿದಿತ್ತು .ಎರಡು ಗಂಟೆಯ ಬೈಗುಳ ಕೇಳಿಯೂ ನಾನು ಪ್ರತಿಕ್ರಿಯೆ ನೀಡದೆ ಸುಮ್ಮನಿರುವುದು ಅವರಿಗೆ ಸಂಶಯವಾಗಿರಬೇಕು. ನಮ್ಮೊಂದಿಗಿದ್ದ ಲಕ್ಷ್ಮೀಶ ಶಾಸ್ತ್ರಿಯವರಲ್ಲಿ ಅವರ ಮನೆಗೆ ನನ್ನನ್ನು ಕಳಿಸಿ ಅಂದು ಮನೆಗೆ ಹೋಗದಂತೆ ನೋಡಿಕೊಂಡರು) ಹತಾಶನಾದಾಗ ಧೈರ್ಯ ಹೇಳಿ ನನ್ನನ್ನು ಉಳಿಸಿದ ಅವರಿಂದು ಉಳಿಯಲಿಲ್ಲ ಎಂಬುದೇ ನನ್ನ ಚಿಂತೆ. ನನಗೆ ಆತಂಕ ಬೇಡವೆಂದು ಬರವಣಿಗೆಯ ದಾರಿಯನ್ನು ಎಚ್ಚರಿಸಿ ತೋರಿ ಆ ಕ್ಷೇತ್ರದಲ್ಲಿ ಉಳಿಯುವಂತೆ ಮಾಡಿ ಅನೇಕ ಕೃತಿಗಳ ಮಾರ್ಗದರ್ಶಕರೂ ಆಗಿ  ಸಹಕರಿಸಿದ,ಬದುಕಿನಲ್ಲೂ, ಕಿನ್ನಿಗೋಳಿಯಲ್ಲೂ, ಬರವಣಿಗೆಯಲ್ಲೂ, ಉಳಿಸಿದ ಭಟ್ಟರನ್ನು ನೆನಪಿಸಿಕೊಳ್ಳುವುದಷ್ಟೇ ನಮಗುಳಿದ್ದು. ಅವರಿಗೆ ಸದ್ಗತಿ ದೊರೆಯಲಿ ಎನ್ನಬೇಕಿಲ್ಲ ಅದಿದ್ದರೆ ಅವರಿಗದು ದೊರೆತೇ ಇರುತ್ತದೆ.
– ಶ್ರೀ ಡಿ. ಎ. ಶ್ರೀಧರ್ 
error: Content is protected !!
Share This