ಯಕ್ಷಗಾನ ರಂಗಭೂಮಿಯ ವಿಶಾಲವಾದ ಸಾಧ್ಯತೆಗಳ ಚೌಕಟ್ಟಿನಲ್ಲಿ ಕೇವಲ ಪ್ರಯೋಗದ ದೃಷ್ಟಿಯಿಂದ ರೂಪಿಸಬಹುದಾದ ಒಂದು ರಂಗ ಕಲ್ಪನೆಯೇ “ತರ್ಕಮದ್ದಲೆ” – ತಾಳಮದ್ದಲೆ ಎಂಬ ಚಾಲ್ತಿಯಲ್ಲಿರುವ ಪದ್ಧತಿಯ ಹೆಸರಿನ ಬಲದಿಂದಲೇ ಈ ಹೆಸರನ್ನು ರೂಪಿಸಲಾಗಿದೆ. ಆದರೆ ಈ ಕಲ್ಪನೆ ಯಕ್ಷಗಾನದ ಸುಧಾರಣೆ ಅಥವಾ ಪರಿವರ್ತನೆ ಇತ್ಯಾದಿ ದೃಷ್ಟಿಕೋನಗಳನ್ನು ಖಂಡಿತ ಹೊಂದಿಲ್ಲ. ಹೊಂದಲೂ ಬಾರದು. ಆದರೆ ಯಕ್ಷಗಾನದ ಸ್ಥೂಲ – ಪರೋಕ್ಷ ಪ್ರೇರಣೆ ಇದಕ್ಕಿದೆ. ಇಲ್ಲಿಯೇ ಹೇಳಬೇಕು-ಇದು ಯಕ್ಷಗಾನಕ್ಕೆ ಏನೋ ಹೊಸ ಪ್ರೇರಣೆ ನೀಡುವಂಥದ್ದಲ್ಲ ಮತ್ತು ಅಂಥ ಉದ್ದೇಶವೂ ಈ ಪ್ರಯತ್ನಕ್ಕಿರಬಾರದು. ಕೇವಲ ಒಂದು ರಂಗಪ್ರಯತ್ನವಾಗಿ ಇದರ (ರಂಗ ಪ್ರಯತ್ನಕ್ಕೆ ಯಾರಾದರೂ ಮನಸ್ಸು ಮಾಡಿದರೆ ಅಂಥ ಪ್ರಯತ್ನದ) ಇತಿಮಿತಿಗಳನ್ನು ಧಾರಾಳವಾಗಿ ವಿಮರ್ಶಿಸಲು, ಟೀಕಿಸಲು ವಿಶ್ಲೇಷಿಸಲು ಅವಕಾಶವಿರುವ ಒಂದು ರಂಗ ಸಾಧ್ಯತೆ ಇದು.

ಹೆಸರೇ ಸೂಚಿಸುವಂತೆ ತರ್ಕಮದ್ದಲೆಯಲ್ಲಿ ತರ್ಕಕ್ಕೇ ಹೆಚ್ಚು ಅವಕಾಶ. ಚಿಂತನೆಗೆ ಹೆಚ್ಚು ಎಡೆ. ವಿಶ್ಲೇಷಣೆಗೆ ಹೆಚ್ಚು ಅವಕಾಶ. ಎಮೋಶನ್‌ಗಿಂತ ಹೆಚ್ಚು ರ‍್ಯಾಶನಾಲಿಟಿಗೆ ಅಂದರೆ ಭಾವಸಂವೇದನೆಗಳಿಗಿಂತ ಹೆಚ್ಚು ವಿಚಾರಣೆಗಳಿಗೆ ಮತ್ತು ವೈಚಾರಿಕತೆಗೆ, ಸರಿತಪ್ಪು ಸದ್ವಿವೇಚನೆಗೆ ಹೆಚ್ಚು ಅವಕಾಶ. ಯಕ್ಷಗಾನದಲ್ಲಿ ಬಳಸುವ ಮೂಲ ಪೌರಾಣಿಕ ಪ್ರಸಂಗಗಳ ಕಥಾಭಾಗಗಳನ್ನೆ ಆಯ್ದು ಆ ಕಥಾ ಪ್ರಸ್ತುತಿಯ ಮೂಲಕ ಪುರಾಣದ ಮಿಥ್‌ನ್ನು ಅಂದರೆ ಭ್ರಾಮಕ ಅವಾಸ್ತವಿಕತೆಯನ್ನು ಅಥವ ಸ್ವಲ್ಪಮಟ್ಟಿಗೆ ದೈವಿಕ ಮಾಯಕತೆಯನ್ನು ಮೀರುವ ರಂಗನಡೆಯೆ ತರ್ಕ ಮದ್ದಲೆಯ ಮುಖ್ಯ ಸಂಗತಿ.

ಸದ್ಯದ ತಾಳಮದ್ದಲೆಯೋ ಅಥವಾ ಗಂಭೀರ ವೈಚಾರಿಕ ನೆಲೆಗಟ್ಟಿನ ರಂಗಕೃತಿಗಳೋ (ಉದಾ : ಕುರುಕ್ಷೇತ್ರಕ್ಕೊಂದು ಆಯೋಗ) ಇದನ್ನು ಮಾಡುತ್ತಿವೆಯಲ್ಲ ಎಂಬ ಪ್ರಶ್ನೆ ಉದ್ಭವಿಸಬಹುದು. ಒಟ್ಟು ಪರಿಣಾಮದಲ್ಲಿ ಅಂಥ ವ್ಯತ್ಯಾಸ ಕಾಣಿಸದಿರಬಹುದು, ಪ್ರಯೋಗನಿರತರ ಪ್ರತಿಭೆಯಿಂದಾಗಿ ಕಾಣಲೂಬಹುದು ಎಂದು ಪ್ರಾರಂಭದಲ್ಲಿಯೇ ಒಪ್ಪಿಕೊಳ್ಳುತ್ತ ‘ತರ್ಕಮದ್ದಲೆ’ ಪಡೆಯಬಹುದಾದ ಅಂಥ ಯಶಸ್ಸು ಪ್ರಯೋಗಾಸಕ್ತರ ಕಾಳಜಿಯನ್ನವಲಂಬಿಸಬೇಕಾದುದು ಅನಿವಾರ್ಯ ಎಂದಷ್ಟೇ ಈ ಹಂತದಲ್ಲಿ ಹೇಳಬಹುದು. ಪ್ರಯೋಗದ ನಂತರವೇ ಅದರ ಕಲಾ ಪ್ರಭಾವವು ಖಂಡಿತ ತಿಳಿದೀತು. ಒಂದೆರಡು ಪ್ರಯತ್ನಗಳಿಂದ ನಿಶ್ಚಿತ ಸಿದ್ಧಾಂತಗಳು ಅಸಾಧ್ಯ. ನಿರಂತರ ನಡೆದರೂ ವಸ್ತು, ವ್ಯಕ್ತಿ, ವಿವೇಚನೆಗಳ ಮಟ್ಟದಲ್ಲಿ ವ್ಯತ್ಯಾಸಗಳು ಆಗಬಹುದು. ‘ಏಕವ್ಯಕ್ತಿ ತಾಳಮದ್ದಲೆ’ ಎಂಬುದನ್ನು ಡಾ. ಎಂ. ಪ್ರಭಾಕರ ಜೋಷಿ ಅವರು ಪಾತ್ರಧಾರಿಯಾಗಿ ಉಡುಪಿಯ ‘ಸಮೂಹ’ ಮೊದಲ ಬಾರಿಗೆ ಪ್ರಯತ್ನಿಸಿದಾಗಲೂ ನಮಗಾದ ಅನುಭವದಿಂದ ಹೇಳಬಹುದಾದ ಮಾತು – ಯಾವುದೇ ನೂತನ ಆವಿಷ್ಕಾರವನ್ನು ಒಂದು ಜನಸಮುದಾಯ ಒಪ್ಪಿಕೊಂಡು ಕೆಲವೊಮ್ಮ ಪ್ರಚಾರದ ಬಲದಿಂದ ಅದು ಸ್ವೀಕರಿಸುವ ಅಥವಾ ಸಹಿಸಿಕೊಳ್ಳುವ ರಂಗ ಪ್ರಕಾರವಾಗುವುದೇ ಅಂಥ ಪ್ರಯತ್ನದ ಸಾಧನೆ ಎಂದು ಹೇಳುವಂತಿಲ್ಲ.ಅದೇ ಹೊತ್ತಿಗೆ ಬಲವಾದ ಕಾರಣದಿಂದ ಮತಧರ್ಮಗಳಲ್ಲಿ ಪಂಥಗಳು ಟಿಸಿಲೊಡೆದಂತೆ ಕಲಾಪ್ರಕಾರಗಳಲ್ಲಿ ನಡೆಯುವ ಶಾಖಾವಿನ್ಯಾಸ, ಶೈಲಿಭೇದಗಳು ಚಾಲ್ತಿಯಲ್ಲಿ ಉಳಿಯುವುದು ಸಾಧ್ಯ. ಉದಾಹರಣೆಗೆ, ಕಥಕಳಿಯಲ್ಲಿ ರಾಜನ ಆಸ್ಥಾನದಲ್ಲಿ ಪಾತ್ರ ವಹಿಸುವ ಅವಕಾಶದಿಂದ ವಂಚಿತನಾದ ಕುಂಚನ್‌ನಂಬಿಯಾರ್ ಎಂಬ ಕಲಾವಿದ ಸುಮಾರು 200 ವರ್ಷಗಳ ಹಿಂದೆ ತಾನೇ ಒಬ್ಬ ಏಕಪಾತ್ರಧಾರೀ ಕಥಕ್ಕಳಿ ಪ್ರದರ್ಶನಕಾರನಾಗಿ ಆರಂಭಿಸಿದ ‘ಓತ್ತುಂತುಳಲ್’ (ಓಟಂತುಳಲ್) – ಅಂದರೆ ಓಟ, ನೆಗೆತದ ಸರಳ ಕಲಾಪ್ರಕಾರವನ್ನು ಆರಂಭಿಸಿ ಜನಮನ ಗೆದ್ದಂತೆ ಇಂಥ ಪ್ರಯತ್ನ ಸಾಗಬೇಕಾಗಿದೆ.

ತರ್ಕಮದ್ದಲೆಯ ರಂಗ ಸ್ವರೂಪವನ್ನು ಸರಳವಾಗಿ ಹೀಗೆ ನಿರ್ದೇಶಿಸಬಹುದು.

  1. ಸಾಧ್ಯವಾದಷ್ಟು ವಿವೇಚನೆಗೆ ಎಡೆಮಾಡಿ ಕೊಡುವ ಮತ್ತು ಕಾಡುವ ಕಥಾಭಾಗವನ್ನು ಆಯ್ದುಕೊಂಡು ಅದರ ಪ್ರಸಂಗ ಪದ್ಯಗಳನ್ನು ಸುಸಂಬದ್ಧಗೊಳಿಸಲು ಒಂದು ರಂಗಪಠ್ಯವನ್ನು ನಿರ್ಮಿಸುವುದು ಮೊದಲ ಹೆಜ್ಜೆ. ಈಗೀಗ ತಾಳ ಮದ್ದಲೆಯಲ್ಲಿ ಇಂಥ ಪದ್ಯಗಳ ಆಯ್ಕೆ ಮತ್ತು ಮರು ಜೋಡಣೆ ನಡೆಯುತ್ತಿವೆಯಾದರೂ ತರ್ಕಮದ್ದಲೆಯಲ್ಲಿ ಇದು ಇನ್ನಷ್ಟು ಸೂಕ್ತವಾಗಿ ನಡೆಯಬೇಕು. ಇಲ್ಲಿಯೇ ಹೇಳಬೇಕು. ಅನೇಕ ಪ್ರಸಂಗಗಳ ಪದ್ಯಗಳಲ್ಲಿ ಖಂಡಿತಕ್ಕೂ ಇದೀಗ ತಾಳಮದ್ದಲೆ ಪಾತ್ರಧಾರಿಗಳು ಅದ್ಭುತವಾಗಿ ವಿಸ್ತಾರಗೊಳಿಸುವಂಥ ಅರ್ಥಗಾರಿಕೆಗೆ ನೇರವಾಗಿ ಎಡೆಯಿಲ್ಲ. ಪ್ರಸಂಗಗಳು ಸಂದರ್ಭಗಳನ್ನು ಮಾತ್ರ ಒದಗಿಸುತ್ತವೆ. ಹೆಚ್ಚಿನ ಪ್ರಸಂಗಗಳು ಸುಂದರ ಸರಳ ಹಾಡುಗಬ್ಬಗಳು. ರಂಗ ಕಾವ್ಯಗಳು. ಅವುಗಳನ್ನು ಆಧರಿಸಿ ಅರ್ಥಧಾರಿಗಳು ಉತ್ಕೃಷ್ಟ ಪಾತ್ರ ಚಿತ್ರಣ, – ಚಿಂತನೆಗಳನ್ನು ಮಾಡುತ್ತಿರುವುದಕ್ಕೆ ಕಾರಣ ಅವರ ಅಧ್ಯಯನ ಮತ್ತು ವಾಕ್‌ಪ್ರತಿಭೆ. ತರ್ಕಮದ್ದಲೆಗೂ ಈ ಸಿದ್ಧತೆ ಅಗತ್ಯ.

2. ಈ ಹಿಂದೆ ‘ಸಮೂಹ’ ಪ್ರಯತ್ನಸಿದ ಕಡೆಂಗೋಡ್ಲು ಅವರ “ಸೀತಾಪಹಾರ” ಕಾವ್ಯಾಧಾರಿತ ‘ಕಾವ್ಯ ತಾಳಮದ್ದಲೆ’ಯಂತೆ ಈ ಪ್ರಯತ್ನಕ್ಕೆ ಅನುಕೂಲವಾಗುವ ಆಯ್ದ ಕಥಾಭಾಗಕ್ಕೆ ಪೂರಕವಾಗುವ ಪದ್ಯಗಳನ್ನು ಹೊಸದಾಗಿ ರಚಿಸಿ ಮೂಲ ಪ್ರಸಂಗದೊಂದಿಗೆ ಅಲ್ಲಲ್ಲಿ ಜೋಡಿಸಿಕೊಳ್ಳಬೇಕಾದುದು ತರ್ಕಮದ್ದಲೆಗೆ ಅಗತ್ಯ. ಪಾತ್ರಗಳು ತರ್ಕಸರಣಿಯನ್ನು ಪೋಣಿಸುವ ಹಾಗೆ ಪ್ರಸಂಗಪದ್ಯಗಳ ಜಾಡು, ಜೋಡಣೆ ಸಾಗಬೇಕು.

3. ಯಾವುದೇ 2 ಯಾ 3 ಪಾತ್ರಗಳ, ಒಂದು ಕಥಾ ಸಂದರ್ಭದ – ಉದಾಹರಣೆಗೆ, ಶ್ರೀರಾಮ ಬಾಣ ಬಿಟ್ಟ ಮೇಲೆ ವಾಲಿ ಬಾಣ ಸಹಿತ ರಾಮನಿಗೆ ಮುಖಾಮುಖಿಯಾಗುವ ಭಾಗಶಃ ಕಥಾ ಸಂದರ್ಭವಾಗದೆ ಒಂದು ಪೌರಾಣಿಕ ಕಥೆಯ ಪೂರ್ಣಚಿತ್ರಣ ದೊರಕುವಂತೆ ಪ್ರಸಂಗದರಚನೆ, ಆಯ್ಕೆ ಅಥವಾ ಸಂಪಾದನೆ ನಡೆಯಬೇಕು. ಎಲ್ಲ ಸಂದರ್ಭಗಳಿಗೂ ತರ್ಕ ಬೇಕಾಗಿಲ್ಲ. ಮುಖ್ಯ ಘಟ್ಟಗಳಲ್ಲಿ ಮಾತ್ರ ತರ್ಕ ಸರಣಿ ಮೂಡಿಬರಬೇಕು.

4. ಚಾಲ್ತಿಯಲ್ಲಿರುವ ತಾಳಮದ್ದಲೆಗಿಂತ ಭಿನ್ನ ಸ್ವರೂಪನ್ನು ತರ್ಕ ಮದ್ದಲೆ ಹೊಂದುವುದೇ ಬಹುಮುಖ್ಯವಾದ ಪಾತ್ರಭಿನ್ನತೆಯಿಂದ. ಕಥೆಯ ಪಾತ್ರಗಳಲ್ಲದೆ ವೈಚಾರಿಕ ವಾದಗಳನ್ನು ಮಂಡಿಸುವ ಕೃತಕಪಾತ್ರಗಳನ್ನು ತರ್ಕಮದ್ದಲೆಯ ನಿರ್ದೇಶಕ ರೂಪಿಸಬೇಕಾದುದು ಅಗತ್ಯ. ಪ್ರಸಂಗದ ಪಾತ್ರಗಳಲ್ಲದೆ ಈ ಪ್ರತ್ಯೇಕ ‘ಪಾತ್ರ ಸಮೂಹ’ ತರ್ಕಮದ್ದಲೆಯ ಪ್ರಮುಖ ಅಂಗ. ಏನಿದು ಪ್ರತ್ಯೇಕ ಪಾತ್ರ? ಕೃತಕ ಪಾತ್ರ ಸಮೂಹ? ಬೇರೇನು ಅಲ್ಲ. ಕಥೆಯ ಭಾವ ಸಂದರ್ಭಕ್ಕೆ ತಾರ್ಕಿಕ ಆಯಾಮ ನೀಡುವ ಪಾತ್ರಗಳೇ ಈ ಪ್ರತ್ಯೇಕ ಪಾತ್ರಗಳು. ಗ್ರೀಕ್ ನಾಟಕದಂತೆ ಇದು ಮೇಳ – ಕೊರಸ್‌ಪಾತ್ರ. ಉದಾಹರಣೆಗೆ ರಾಮ ಒಂದು ಪಾತ್ರವಾದರೆ ರಾಮನಿಗೆ ಮುಖಾಮುಖಿಯಾಗುವ ತರ್ಕವ್ಯಕ್ತಿ ಇನ್ನೊಂದು ಪಾತ್ರ.

ಪ್ರಾಯೋಗಿಕವಾಗಿ ಕನಿಷ್ಠ 2 ಮಂದಿ ಗರಿಷ್ಠ 4 ಮಂದಿ ಇಂಥ ಪ್ರತ್ಯೇಕ ವಾದ ಅರ್ಥ ಕಲಾವಿದರನ್ನು ‘ಪಾತ್ರ ಸಮೂಹ’ವಾಗಿ ಬಳಸಿಕೊಳ್ಳಬೇಕು. ತರ್ಕಮದ್ದಲೆ ಎಂಬೀ ಪರಿಕಲ್ಪನೆ ಹೆಚ್ಚು ಕಡಿಮೆ ಗ್ರೀಕ್ ನಾಟಕದ ಮೇಳದ ಸೈದ್ಧಾಂತಿಕ ಸೂತ್ರದಿಂದ ಸ್ಫೂರ್ತಿಯನ್ನು ಪಡೆದಿದೆ. ತರ್ಕಮದ್ದಲೆಯಲ್ಲಿ ಇವರನ್ನು ವಾದಿ ಪ್ರತಿವಾದಿಗಳು ಎಂಬುದಾಗಿ ಕರೆಯಬಹುದು. ತರ್ಕಪಂಡಿತರೆಂದೂ ಕರೆಯಬಹುದು. ವಾದಿರಾಜರೆಂದೂ ಕರೆಯಬಹುದು. ಸರಳವಾಗಿ ತರ್ಕ ಪಾತ್ರ ಒಂದು, ಎರಡು – ಎಂಬುದಾಗಿ ಗುರುತಿಸಬಹುದು.

5. ತರ್ಕಮದ್ದಲೆಯ ಕಥಾ ಪಾತ್ರಧಾರಿಗಳು – ಉದಾಹರಣೆಗೆ, ರಾಮ, ರಾವಣ ಇತ್ಯಾದಿ, ಆ ಪಾತ್ರಗಳು ಮಾತ್ರ ಆಗಿರಬೇಕು. ಸಾಧ್ಯವಾದಷ್ಟು ಮಟ್ಟಿಗೆ ಆ ಪಾತ್ರಗಳ ಪೌರಾಣಿಕ ಸಂದರ್ಭಗಳಿಗೆ ಮಾತ್ರ ತಮ್ಮ ಅರ್ಥಗಾರಿಕೆಯನ್ನು ಸೀಮಿತಗೊಳಿಸಬೇಕು. ಹೀಗೆ ಅರ್ಥ ಹೇಳುವಾಗ ಅಡಿಗಡಿಗೆ ಸೂಕ್ಷ್ಮ, ನಿರ್ಣಾಯಕ ಸಂದರ್ಭಗಳಲ್ಲಿ ಅವರು ತರ್ಕ ಪಾತ್ರಧಾರಿಗಳಿಗೆ ಮುಖಮುಖಿಯಾಗಿ ತಮ್ಮ ಪಾತ್ರ ಸಂದರ್ಭಗಳ ತರ್ಕಬದ್ಧ ಸರಿತಪ್ಪುಗಳಿಗೆ, ವಿಶ್ಲೇಷಣೆಗೆ, ತಮ್ಮನ್ನು ಒಡ್ಡಿಕೊಳ್ಳಬೇಕು.

6. ತರ್ಕಮದ್ದಲೆಯ ಜೀವಾಳವೇ ಈ ತರ್ಕಪಾತ್ರಧಾರಿಗಳ (ಅ) ಮಧ್ಯ ಪ್ರವೇಶ ಆ) ಉದ್ಗಾರ, ಪ್ರತಿಕ್ರಿಯೆ, ಅವಲೋಕನ ಮತ್ತು (ಇ) ತರ್ಕಬದ್ಧ ಕಥಾ ಜೋಡಣೆ.

7. ಅಂದರೆ ತರ್ಕಪಾತ್ರಗಳು – ಪೌರಾಣಿಕ ಕಥಾಭಾಗದ, ಮೌಲ್ಯಗಳ, ಆಧುನಿಕ ಪ್ರಸ್ತುತತೆಯ, ಪಾತ್ರಗಳ ಆತ್ಮಾವಲೋಕನದ, ಹಾಗೂ ಪ್ರೇಕ್ಷಕರ ಎಲ್ಲ ಸಂಶಯಗಳಿಗೆ, ಧ್ವನಿಗಳಿಗೆ ಮುಖವಾಣಿಯಾಗಿ ತರ್ಕಮದ್ದಲೆಯಲ್ಲಿ ಮೂಡಿಬರಬೇಕು.

8. ತರ್ಕಪಾತ್ರಧಾರಿ ಎಲ್ಲಂದರಲ್ಲಿ, ಪಾತ್ರಗಳ ಮಾತಿನ ಸರಣಿಯನ್ನು ತುಂಡರಿಸಿ ಪ್ರಶ್ನೋತ್ತರವಾದರೆ ಪ್ರಶ್ನೋತ್ತರ, ಪ್ರತಿಕ್ರಿಯೆ, ಶಹಭಾಸ್‌ಗಿರಿ, ಉದ್ಗಾರವಾದರೆ ಹಾಗೆ – ನಡೆಸುತ್ತ ತರ್ಕ ಸರಣಿಯನ್ನು ರಸಭಂಗವಾಗದಂತೆ ಜೋಡಿಸಬೇಕು. (ಅಷ್ಟಾವಧಾನದಲ್ಲಿ ನಡುನಡುವೆ ಒಬ್ಬರು ಮಧ್ಯಪ್ರವೇಶಿಸಿದಂತೆ ಇದನ್ನು ಊಹಿಸಬಹುದಾದರೂ ಕಥೆಯ ಹಂದರ ಶಿಥಿಲಗೊಳ್ಳಬಾರದು ಎಂಬುದು ಇಲ್ಲಿ ಮುಖ್ಯ.)

9. ಈ ತರ್ಕ ವಿವೇಚನೆಯು ತರ್ಕಪಾತ್ರಗಳ ನಡುವೆ, ಪಾತ್ರಧಾರಿಗಳೊಡನೆ, ಕೆಲವೊಮ್ಮೆ ಭಾಗವತರೊಡನೆ ಲವಲವಿಕೆಯಿಂದ ಸರಾಗವಾಗಿಸಾಗಬೇಕು. ಕಥೆಯ ಓಟವನ್ನು ಬಿಡದಿರುವುದು ಮುಖ್ಯ. ಅತಿವಾಚಾಳಿತನ, ಅನಗತ್ಯ ಪಾತ್ರನಿಂದನೆ, ಪೌರಾಣಿಕ ಛಿದ್ರೀಕರಣ ನಡೆಯದಂತೆ ಸದ್ವಿಚಾರಗಳ ವಿವೇಚನೆ ನಡೆಯಬೇಕು. ಆಶು ಸಂಭಾಷಣೆಯೇ ಆಧಾರವಾಗಬೇಕು.

10. ತುಂಬ ಪ್ರಾಥಮಿಕ ಹಂತದ ರೂಪುರೇಷೆ ನೀಡಿದ್ದೇನೆ ಎಂಬ ಅರಿವು ನನಗಿದೆ. ಸಾಧ್ಯತೆಯ ದಾರಿಯೂ ಅಷ್ಟು ಸುಗಮವಾಗಿಲ್ಲ ಎಂಬುದೂ ತಿಳಿದಿದೆ. ಆದರೆ ಬೌದ್ಧಿಕವಾಗಿ ಬಹು ಎತ್ತರಕ್ಕೆ ಬೆಳೆದಿರುವ ‘ತಾಳಮದ್ದಲೆ’ ಎಂಬ, ಜಗತ್ತಿನಲ್ಲಿ ಇದು ಒಂದೇ ಒಂದು ಎಂದು ಹೇಳಬಹುದಾದ, ರಂಗ ಪ್ರಕಾರದಲ್ಲಿ ಅನೇಕ ಪ್ರತಿಭಾವಂತ ಹಿರಿಯ – ತರುಣ (ಮಹಿಳೆಯರೂ ಸೇರಿ) ಅರ್ಥಧಾರಿ ಕಲಾವಿದರು ಸಾಧಿಸುತ್ತಿರುವ ವೈಚಾರಿಕ – ವಾಕ್ ಸಿದ್ಧಿಯನ್ನು ಕಂಡು ಕೇಳಿ ಆನಂದಿಸಿದ ನನಗೆ ಅದು ತನ್ನೊಳಗಿರುವ ಅಪಾರ ಸಾಧ್ಯತೆಗಳನ್ನು ಇನ್ನಷ್ಟು ಕ್ರಿಯಾಶೀಲ ಗೊಳಿಸಬಹುದು ಎಂಬ ಹಸಿ ಹಸಿ ಹಸಿವಿರುವುದರಿಂದ ತರ್ಕಮದ್ದಲೆಯ ಪರಿಕಲ್ಪನೆಯನ್ನು ಟಿಪ್ಪಣಿಯಾಗಿಸಿದ್ದೇನೆ. ತಾಳಮದ್ದಲೆಯ ಭಾವನಾತ್ಮಕ ಮತ್ತು ವೈಚಾರಿಕ ಅಂಶಗಳನ್ನು ಪ್ರತ್ಯೇಕಿಸುವುದರಲ್ಲಿ ತರ್ಕಮದ್ದಲೆಯ ಸೂಕ್ಷö್ಮ ಅಡಗಿದೆ ಎಂಬುದನ್ನಷ್ಟೆ ಈ ಹಂತದಲ್ಲಿ ಟಿಪ್ಪಣಿಯ ಮುಕ್ತಾಯ ವಾಗಿಸುತ್ತಿದ್ದೇನೆ.

ಈ ಪರಿಕಲ್ಪನೆ ಬೀಜಾಂಕುರವಾದುದು 3 ವರ್ಷಗಳ ಹಿಂದೆ. ಅಮೇರಿಕಾದ ನ್ಯೂಜೆರ್ಸಿಯಲ್ಲಿ ಮಗಳಮನೆಯಲ್ಲಿ ಅವಳ ಬಾಣಂತಿತನದಿಂದಾಗಿ ಅನಿವಾರ್ಯ ಗೃಹಬಂಧನದಲ್ಲಿರುವಾಗ. ಆದರೂ ಅವಳ ನೆರವಿನಿಂದ ರಂಗಭೂಮಿಗೆ ಸಂಬಂಧಿಸಿದ ಕೆಲವು ಗ್ರಂಥಗಳನ್ನು ಮತ್ತು ಅಂತರ್‌ಜಾಲಮಾಹಿತಿ ಸಂಗ್ರಹಗಳನ್ನು ಅವಲೋಕಿಸುವುದು ಸಾಧ್ಯವಾಯಿತು. ಗ್ರೀಕ್ ರಂಗಭೂಮಿಯ ಕುರಿತು ಒಂದೆರಡು ಮುಖ್ಯ ಗ್ರಂಥಗಳ ಓದು ಸಾಧ್ಯವಾಗಿ “ತರ್ಕಮದ್ದಲೆ” ಯ ಅಸ್ಪಷ್ಟ ಸಾಧ್ಯತೆ ಕೆಲಸವಿಲ್ಲದವನ ಕೈ(ಮನ) ಕೂಸಾಯಿತು. ಅದರೊಂದಿಗೆ ನನ್ನದೇ ಓದಿನ ಧ್ವನಿ ಗ್ರಹಣದ ನೆರವಿನಿಂದ ಒಂದು ಏಕವ್ಯಕ್ತಿ ಗದ್ಯ ರಂಗಾಭಿವ್ಯಕ್ತಿಯ ಪ್ರಯತ್ನವೂ (ಸೀಳುಬಿದಿರಿನ ಸಿಳ್ಳು) ಸಾಗಿತು.

ತರ್ಕಮದ್ದಲೆಯನ್ನು ಟಿಪ್ಪಣಿಯಾಗಿಸುವಾಗ ನನ್ನ ಮನಸ್ಸಿನಲ್ಲಿ ಮೂಡಿದ ಒಂದು ವಿಚಾರವನ್ನು ಇಲ್ಲಿಯೇ ಪ್ರಸ್ತಾಪಿಸಬೇಕು. ಯಕ್ಷಗಾನ ಕಲಾರಂಗವು ನಿರಂತರ ಪ್ರಯೋಗ ಶೀಲ ರಂಗಭೂಮಿಯಾದರೂ ಅದರಲ್ಲಿ ನಡೆಯುವ ಪ್ರಯೋಗಗಳು ಭಿನ್ನ ರಂಗವಲಯದ (ನಾಟಕ, ನೃತ್ಯ, ಲೇಖನ ವ್ಯವಸಾಯ) ಪ್ರಯೋಗಾಸಕ್ತರಿಂದಲೇ ನಡೆಯುತ್ತಿದ್ದು ಯಕ್ಷಗಾನದ ಮೂಲ ಚೌಕಟ್ಟಿನೊಳಗಿರುವ ಕಸುಬುದಾರಿಗಳಿಂದ ನಡೆಯುತ್ತಿರುವುದು ಕಡಿಮೆ ಅಥವಾ ಅವರು ಪ್ರಯೋಗ ನಡೆಸುತ್ತಿದ್ದೇವೆ ಎಂಬ ಅರಿವಿಲ್ಲದೆ “ಅಪ್ರಜ್ಞಾಪೂರ್ವಕ” ಪ್ರಯೋಗದ ಹರಹುವನ್ನು ವಿಸ್ತಾರಗೊಳಿಸುತ್ತಿದ್ದಾರೆ. ಇತ್ತೀಚೆಗೆ ತಾಳಮದ್ದಲೆಯ ಕುರಿತಾಗಿಯೂ ಭೌಗೊಳಿಕವಾಗಿ ಮತ್ತು ಸಾಂಸ್ಕೃತಿಕವಾಗಿ ತಾಳಮದ್ದಲೆ ಕ್ಷೇತ್ರದ ಹೊರಗಿನವರೇ ಒಳಗೆ ಇಣುಕುತ್ತಿರುವುದು ಅಲ್ಲಲ್ಲಿ ಕಂಡು ಬರುತ್ತಿರುವುದು ಯಕ್ಷಗಾನದ ಮೇಲೆ ಆಗುತ್ತಿರುವ ಬಾಹ್ಯ ಪ್ರಭಾವ (ಆಕ್ರಮಣ?)ಕ್ಕೆ ಸ್ಪಷ್ಟನಿದರ್ಶನ. “ತರ್ಕಮದ್ದಲೆ”ಯೂ ಅಂಥ ಅಪಾಯಕ್ಕೆ ಕಾರಣವಾದೀತು ಎಂಬ ಭಯವೂ ನನ್ನೊಳಗಿದೆ.

ಇದೊಂದು ಸ್ಥೂಲ ಕಲ್ಪನಾತ್ಮಕ ಚೌಕಟ್ಟು ಮಾತ್ರ. ತಾಳಮದ್ದಲೆ ಮತ್ತು – ಯಕ್ಷಗಾನ ಪ್ರದರ್ಶನ ಸಾಕಷ್ಟು ಪ್ರಬುದ್ಧವಾಗಿ ವಿಕಾಸಗೊಂಡಿರುವಾಗ ಇಂಥ ಅಧಿಕಪ್ರಸಂಗ – ಪ್ರಯತ್ನ ಬೇಕೇ ಎಂಬ ಉದ್ಗಾರ ಉದ್ಭವಿಸಬಹುದು. ಸಹಜ. ಮೊದಲೆ ಹೇಳಿದಂತೆ ಪ್ರಬುದ್ಧವಾಗಿರುವ ಯಕ್ಷಗಾನದ ಯಾವತ್ತು ಸುಧಾರಣೆ ಈ ರಂಗ ಕಲ್ಪನೆಯ ಉದ್ದೇಶವಲ್ಲ. ಇದೊಂದು ಸಾಧ್ಯತೆಯ ರಂಗಕಲ್ಪನೆ ಮಾತ್ರ. ಆದರೆ ಇದರ ಹಿಂದೆ ಒಂದು ಚಿಂತನೆ ಇದೆ. ಯಕ್ಷಗಾನ ತಾಳಮದ್ದಲೆಯ ವಿಶಾಲ ಚೌಕಟ್ಟಿಗೆ ಗ್ರೀಕ್, ಬ್ರೆಕ್ಟ್, ಸಂಸ್ಕೃತ ನಾಟಕಗಳ ರಂಗ ಸೂಕ್ಷ್ಮಗಳನ್ನು ಮತ್ತು ನಮ್ಮದೇ ಪರಂಪರೆಯ ಹರಿಕಥೆ, ಗಮಕ ವಾಚನ ಇತ್ಯಾದಿಗಳ ಕಲಾತ್ಮಕತೆಯನ್ನು ಸಮಹದದಲ್ಲಿ ಬೆರಸಿ ಒಂದು ರಂಗಾನುಭವನ್ನು ಪಡೆಯುವುದೇ ಈ ‘ತರ್ಕಮದ್ದಲೆ’ ಎಂಬ ರಂಗಕಲ್ಪನೆಯ ಉದ್ದೇಶ. ಜಗತ್ ಪ್ರಸಿದ್ಧ ನಾಟಕಗಳನ್ನು ಉದಾಹರಣೆಗೆ – ರೋಮಿಯೋ ಎಂಡ್ ಜೂಲಿಯಟ್‌ನ್ನು ಬ್ಯಾಲೆಯಾಗಿಸಿದಂತೆ, ಸ್ವ್ಯಾನ್ ಲೇಕ್‌ನಂಥ ಆಕರ್ಷಕ ಬ್ಯಾಲೆಗಳನ್ನು ಭಿನ್ನರೀತಿಗಳಲ್ಲಿ ಭಿನ್ನತಂಡಗಳು ಮತ್ತೆ ಮತ್ತೆ ನಾಟಕವಾಗಿ ಪ್ರಯೋಗಿಸಿದಂತೆ ನಮಗೆ ದಕ್ಕಿದ ಒಂದು ಮಾಧ್ಯಮದಲ್ಲಿ ಪ್ರಯೋಗದ ದೃಷ್ಟಿಯಿಂದ ನಡೆಸಬಹುದಾದ ಇಂಥ ಪ್ರಯತ್ನ ಕೇವಲ ಜನಾಕರ್ಷಣೆಯ ದೌರ್ಬಲ್ಯವನ್ನು ಮೀರಬೇಕಾದುದು ಅಗತ್ಯ.

ಮುಗಿಸುವ ಮುನ್ನ :
ಯಾರ ಸಿದ್ಧಿಸಾಧನೆಗಳ ದಾಖಲೆ ಮತ್ತು ಬೌದ್ಧಿಕ ಸಂಸ್ಮರಣೆಗಾಗಿ ಈ ಗ್ರಂಥವು ಪ್ರಕಟಣೆಗೊಳ್ಳುತ್ತಿದೆಯೋ ಆ ಪ್ರಬುದ್ಧ “ಆಶುವಾಕ್‌ಕೋಶ” ದಿ. ರಾಮದಾಸ ಸಾಮಗರು ಇಂಥ ಸೈದ್ಧಾಂತಿಕ ಪರಿಕಲ್ಪನೆಯನ್ನು ಬಾಹ್ಯವಾಗಿ ಘೋಷಿಸದೆ ತನ್ನ ಅರ್ಥಗಾರಿಕೆಯಲ್ಲಿ ನಿಡುಗಾಲ ಜನಮನದಲ್ಲಿ ಸ್ಥಾಪಿಸಿದ್ದರು ಎಂಬುದನ್ನು ಗೌರವದಿಂದ ನೆನಪಿಸಿಕೊಂಡೇ ಎಂದೋ ಟಿಪ್ಪಣಿಯಾಗಿಸಿದ್ದ ಈ ಕಿರುಲೇಖನವನ್ನು ಪ್ರಕಟಣೆಗಾಗಿ ಅಣಿಗೊಳಿಸುತ್ತಿದ್ದೇನೆ. ಕಲಾ ಮಾಧ್ಯಮವಾಗಿ ಯಕ್ಷಗಾನದ ಹುಚ್ಚನ್ನು ಅಂಟಿಸಿಕೊಂಡ ಮೊದಲ ದಿನಗಳಲ್ಲಿ ಸಾಮಗರು, ಶ್ರೇಣಿಯವರು, ತೆಕ್ಕಟ್ಟೆಯವರಂಥ ವಾಗ್‌ವೈಭವದ ಪ್ರಸಿದ್ಧರ ರಂಗ ಕಸುಬು ನನ್ನಲ್ಲಿ ಗೊಂದಲವನ್ನುಂಟುಮಾಡಿತ್ತು. ಮಾತಿನಹದ, ಭಾಗವತಿಕೆಯನಾದ ಒಂದು ಮಿತವಾದ ಪಾಕದಲ್ಲಿ ಕುಣಿತದೊಂದಿಗೆ ಬೆರೆಯುವುದನ್ನೇ ಎದೆ ತುಂಬಿಸಿಕೊಂಡು ಮೆಚ್ಚಿಕೊಳ್ಳುತ್ತಿದ್ದ ಅಂದಿನ ದಿನಗಳಲ್ಲಿ (60-70ರ ದಶಕಗಳಲ್ಲಿ) ಪಾತ್ರಧಾರಿಗಳ ಮಾತು ವೈಚಾರಿಕಗೊಂಡಷ್ಟು ರಂಗಸ್ಥಳದ ಸಮತೋಲ ಕದಡಿದ ಹಾಗನ್ನಿಸುತ್ತಿತ್ತು. ಸದಾ ಪ್ರಯೋಗಗಳಲ್ಲಿ ರುಚಿ ಹತ್ತಿಸಿಕೊಂಡರೂ ಯಕ್ಷಗಾನದ ನಾದನೃತ್ಯ ನುಡಿನಡೆಯ ಈ ಹದವೆ ರಂಗಸ್ಥಳದ ಮೂಲಪಂಚಾಂಗವೆಂದು ಇಂದೂ ಬಲವಾಗಿ ನಂಬಿದ್ದೇನೆ. ಆದರೆ ಈ ನಂಬಿಕೆಯನ್ನುಬಲವಾಗಿ ಅಪ್ಪಿಕೊಂಡೇ ಯಕ್ಷಗಾನದ ಅಪಾರ ಪ್ರಯೋಗ ಶಕ್ತಿಯನ್ನು ಮನಗಾಣುವಲ್ಲಿ ಸಾಮಗರಂಥವರ ಕೊಡುಗೆಯನ್ನು ಖಂಡಿತಕ್ಕೂ ಅಲ್ಲಗಳೆಯಲಾರೆ.

ಒಂದು ಸಂದರ್ಭ. ಎಪ್ಪತ್ತರದಶಕದ ಕೊನೆ. ದಿನ ನೆನಪಾಗದು. ಮಣಿಪಾಲದಲ್ಲಿ ಅಂದು ಅಪೂರ್ವವಾಗಿದ್ದ, ತಿರುಗಾಟದ ದಿನಗಳಿಗೆ ಹೊರತಾದ ವಿಶೇಷ ಪ್ರದರ್ಶನ. ಪ್ರವೇಶ ಧನವಿರಿಸಿದ್ದ ಕಾರ್ಯಕ್ರಮ. ಹಿರಿಯ ಕಲಾವಿದರ ವಿಶೇಷ ಆಕರ್ಷಣೆಯ ಪ್ರಚಾರ ಸಾಕಷ್ಟು ನಡೆದಿತ್ತು. ಸಭಾಭವನಕ್ಕೆ ಮಧ್ಯಾಹ್ನದ ಹೊತ್ತೆÃ ಕಲಾವಿದರೆಲ್ಲ ಬಂದು ಸೇರತೊಡಗಿದರೂ ಆ ಪ್ರಸಿದ್ಧ ಕಲಾವಿದರು ಮಾತ್ರ ಬರುವ ಸೂಚನೆ ಕಾಣಲಿಲ್ಲ. ಬದಲು ‘ಬರಲಾರೆ’ ಎಂಬ ತಂತಿ ಕೊನೆಯ ಹಂತದಲ್ಲಿ ಸಂಘಟಕರ ಕೈಸೇರಿ ಅವರು ತಲೆಯ ಮೇಲೆ ಕೈ ಇಡುವಂತಾಗಿತ್ತು. ಬರಲಾಗದವರ ಬದಲು ಯಾರು ಎಂಬ ಪ್ರಶ್ನೆ ಉದ್ಭವಿಸಿದಾಗ ಮಿಂಚಿದ್ದು ರಾಮದಾಸ ಸಾಮಗರ ನೆನಪು. ಸಂಚಾಲಕರು ಕೈಜೋಡಿಸಿದಾಗ ವಿಮುಖನಾಗಲಾರದೆ ಎಲ್ಲಿಲ್ಲದ ಧೈರ್ಯವನ್ನು ಎದೆಯೊಳಗೆ ತುಂಬಿಸಿಕೊಂಡು ಮೂಡುಬೆಟ್ಟಿನ ಸಾಮಗರ ಮನೆಗೆ ಹೋಗಿ ಬಾಗಿಲು ತಟ್ಟಿದ್ದೆ.

ನೆನಪು ಅಸ್ಪಷ್ಟ. ನನ್ನೊಡನೆ ನನ್ನ ವಿದ್ಯಾರ್ಥಿ ಮಿತ್ರ ವಿಶ್ವೇಶ್ವರ ಭಟ್ಟರೋ ಗೆಳೆಯ ಕಲಾವಿದ ದಿ. ಡಿ.ಜಿ ಹೆಗಡೆಯವರೋ ಇದ್ದಿದ್ದರು. ತುಂಬು ಹೃದಯದ ಸಾತ್ವಿಕ ನುಡಿಕಟ್ಟಿನ ಉಪಚಾರ, ಅತಿಥಿ ಸತ್ಕಾರ ನಡೆಯಿತು ಸಾಮಗ ದಂಪತಿಗಳಿಂದ. ಅಳುಕುತ್ತ ಬಂದ ಉದ್ದೇಶ ವಿವರಿಸಿದಾಗ ಯಾವ ಕೃತಕ ಧೋರಣೆಯನ್ನೂ ವ್ಯಕ್ತಪಡಿಸದೆ, ನಿರಾಕರಣೆಯ ಗತ್ತು-ಗರ್ವ ತೋರದೆ – “ಬರುತ್ತೇನೆ. ಆದರೆ ನನ್ನ ಪ್ರವೇಶವಾದೊಡನೆ ‘ಇವ ಯಾಕೆ ಬಂದ’ ಎಂದು ಸಭೀಕರಲ್ಲಿ ಯಾರಾದರೂ ಒಬ್ಬ (ಒಬ್ಬ ಎಂಬುದನ್ನು ಸಾಮಗರ ರಂಗಶೈಲಿಯಲ್ಲೇ ‘ಏರುಬೀಳು’ ಸ್ವರದಲಿ ಎರಡೆರಡು ಬಾರಿ ಹೇಳುತ್ತ) ಕೇಳಿದರೆ ನಾನು ಏನು ಮಾಡಲಿ?” ಎಂದು ಕಣ್ಣರಳಿಸಿದ್ದು ಮಾತ್ರ ನನಗೆ ಇಂದಿಗೂ ಒಂದು ಶಿಲ್ಪದಂತೆ ನನ್ನ ಮನಸ್ಸಿನ ಪರದೆಯಲ್ಲಿ ಅಚ್ಚೊತ್ತಿದೆ. “ಅಂಥದ್ದೇನಾದರೂ ಆದರೆ ಆಟವನ್ನು ಅಲ್ಲಿಗೇ ನಿಲ್ಲಿಸಿ ರಂಗಸ್ಥಳಕ್ಕೆ ಬಂದು ಉತ್ತರಕೊಟ್ಟು ನಿಮ್ಮ ಕಾಲು ಹಿಡಿಯುವ ಹೊಣೆಗಾರಿಕೆ ನಮ್ಮದು ಎಂಬ ನನ್ನ ಭಾವನುಡಿ ಅವರಿಗೆ ಎಷ್ಟು ಸಮಾಧಾನ ನೀಡಿತ್ತೋ ಹೇಳಲಾರೆ. ಅಂದಿನ ಬಿಕ್ಕಟ್ಟನ್ನು ಮನಃಪೂರ್ವಕ ಅರ್ಥೈಸಿಕೊಂಡು, ಯಕ್ಷಗಾನದ ಮೇಲಿನ ನಿಜವಾದಪ್ರೀತಿಯಿಂದ (ಪ್ರಸಿದ್ಧರು ಒಟ್ಟಾರೆಯಾಗಿ ಬದಲಿ ಕಲಾವಿದರಾಗಿ ಬರಲು ಒಪ್ಪಿಕೊಳ್ಳುವುದು ಸುಲಭದಮಾತಲ್ಲ, ಅಂದು, ಇಂದು, ಎಂದೂ) ರಾಮದಾಸ ಸಾಮಗರು ನಮ್ಮೊಂದಿಗೆ ಸಭಾಭವನಕ್ಕೆ ಬಂದಿದ್ದರು. ಅಂದು ಸಾಮಗರು ಪ್ರವೇಶದ ಮೊದಲ ಮಾತಿನಿಂದ ಹಿಡಿದು (ನನ್ನ ಶ್ರೀಮತಿ ಇದೀಗ ನೆನಪಿಸಿಕೊಂಡ ಸಾಮಗರ ಆ ಮೊದಲ ಮಾತು- ನಿಮ್ಮ ನಿರೀಕ್ಷೆಯ ಮಟ್ಟ ಹೇಗೋ ನಾನು ಆ.. ಶ್ರೇಣಿಯವನಲ್ಲ- ಎಂಬುದಕ್ಕೆ ಸಮುದ್ರದಲೆಯಂತೆ ಕರತಾಡನ ಬಂದಿತ್ತು.) ಪಾತ್ರ ನಿರ್ಗಮನದ ಕೊನೆಯ ಬಿಂದುವಿನ ತನಕ ತಮ್ಮ ವಾಗ್‌ಪ್ರೌಢಿಮೆಯನ್ನು ಅಡಿಗಡಿಗೆ ಬಹಳ ಎತ್ತರದ ಮಟ್ಟದಲ್ಲಿ ಬಿಂಬಿಸಿ ತುಂಬಿದ ಸಭಾ ಭವನದ ಮನಗೆದ್ದಿದ್ದರು. ಯಾರ ಬದಲಿಗೋ ಇವರು ಬಂದಿದ್ದರು ಎಂಬುದು ಯಾರಿಗೂ ನೆನಪಿಗೆ ಬರದಂತೆ! ಯಕ್ಷಗಾನದಲ್ಲಿ ಮಾತ್ರ ಎಂಬಂತೆ ನಿರಂತರ ನಡೆಯುತ್ತಿರುವ ಪ್ರಯೋಗಶೀಲತೆಗೆ ಸಾಮಗರೋ ಅವರಂಥ ಸಂದ ದಿನಗಳ ಅಪ್ರತಿಮ ಕಲಾವಿದರೋ ಪ್ರೇರಣೆಯನ್ನು ಹೀಗೆ ನೀಡುತ್ತಲೇ ಬಂದಿದ್ದರು ಎಂಬುದನ್ನು ಈ ಲೇಖನದ ಸಂದರ್ಭದಲ್ಲಲ್ಲದೆ ಇನ್ನೆಲ್ಲಿ ಪ್ರಸ್ತಾಪಿಸಲಾದೀತು? “ತರ್ಕಮದ್ದಲೆ”ಯಂಥ ವಿವಿಧ ರಂಗಸ್ಫೂರ್ತಿಗಳು ತುಂಬಿಹರಿಯುವ ಹಿಮಾಲಯ ಈ ಕಲಾವಿದರು. ಹೌದು. ಹತ್ತಾರು ವರ್ಷಗಳ ಹಿಂದೆ ಉಡುಪಿ ಬನ್ನಂಜೆ ಶ್ರೀ ಗುರುನಾರಾಯಣ ಸನ್ನಿಧಿಯಲ್ಲಿಯೂ ಪ್ರವಚನಸರಣಿಯ ಸಮಾರೋಪದಂದು ಶ್ರೇಣಿ ಸಾಮಗರನ್ನು ಸನ್ಮಾನಿಸುವ ಪುಣ್ಯ ಸಂದರ್ಭದಲ್ಲಿ ನಡುಗುವ ಕೈಗಳೆಡೆಯಲ್ಲಿ ಶಾಲು – ಹಿಡಿದ ನನನಗನಿಸಿದ್ದೂ ಅದೇ ಅಲ್ಲವೇ ? ಮಾತು ಮಂಜಾಗಿ ಕರಗಿ ಧಾರಾಕಾರವಾಗಿ ಪ್ರವಹಿಸುವ ಶಿಖರದ ಬುಡದಲ್ಲಿ ಹೂವಿನೆಸಳನ್ನೆಸೆಯುತ್ತಿದ್ದೇನೆ ಎಂದು.

ಉದ್ಯಾವರ ಮಾಧವ ಆಚಾರ್ಯ

“ವ್ಯಾಸ”
ಉಡುಪಿ, 576101

error: Content is protected !!
Share This