– ಡಾ. ಎಂ. ಪ್ರಭಾಕರ ಜೋಶಿ

ದಿ| ವಿ.ಎಸ್. ಶಿವರಾವ್, ಮಂಗಳೂರು ವಲಯದ ಯಕ್ಷಗಾನ ಕ್ಷೇತ್ರದಲ್ಲಿ ಕಲಾಪ್ರೀತಿಯ ಸಂಕೇತವಾಗಿದ್ದವರು. ನಮಗವರು ಪರಂಗಿಪೇಟೆ ಶಿವರಾಯರು. ಕಾರಣ ಅಲ್ಲಿ ಅವರು ಬಹುಕಾಲ ವೈದ್ಯ ಸಹಾಯಕರಾಗಿ, ಆ ಬಳಿಕ ವೈದ್ಯರಾಗಿ ಇದ್ದವರು. ಬಾಲ್ಯದಿಂದಲೂ ಯಕ್ಷಗಾನದ ಅಭಿಮಾನಿ. ಹಿರಿಯರಿಂದ ಕಲೆಯ ಆಸಕ್ತಿ ಪಡೆದು – ಭಾಗವತ ದಾಮೋದರ ಮಂಡೆಚ್ಚರ ಆದರ್ಶದಲ್ಲಿ ಹಾಡುಗಾರಿಕೆಯನ್ನು, ಶೇಣಿ ಅನುಸರಣೆಯಲ್ಲಿ ಅರ್ಥಗಾರಿಕೆಯನ್ನು  ರೂಪಿಸಿಕೊಂಡು ಪ್ರವೃತ್ತರಾದವರು.

ಕಲೆಯ ಸೂಕ್ಷ್ಮಗಳ ಕುರಿತು, ವಿವರಗಳ ಕುರಿತು ಆಸಕ್ತಿ, ಕಲಾಸಾಧಕರ ಬಗೆಗೆ ಅಭಿಮಾನಗಳಿಂದ ತುಂಬಿದ ವ್ಯಕ್ತಿತ್ವ ಅವರದು. ಕಲೆ – ಕಲಾವಿದರನ್ನು ಅಷ್ಟೆಂದು ಗಾಢವಾಗಿ ಹಚ್ಚಿಕೊಂಡವರು ವಿರಳ. ಶ್ರೀ ಕಾಳಿಕಾಂಬಾ ಯಕ್ಷಗಾನ ಸಂಘ, ಶ್ರೀ ವಾಗೀಶ್ವರೀ ಸಂಘ, ಅರ್ಕುಳ ಯಕ್ಷಗಾನ ಬಳಗ – ಮೊದಲಾದ ಹಲವು ಕಲಾಸಂಘಗಳಲ್ಲೂ, ಊರ ಪರವೂರ ಮಿತ್ರ ವೃಂದಗಳ ಕಾರ್ಯಕ್ರಮಗಳಲ್ಲೂ ಸಕ್ರಿಯರಾಗಿದ್ದು ನಾಲ್ಕೈದು ದಶಕ ಕಾಲ ಯಕ್ಷಗಾನವನ್ನು ಭಕ್ತಿಯಿಂದ ಆವಾಹಿಸಿಕೊಂಡು ಕೆಲಸ ಮಾಡಿದವರು. ಭಾಗವತಿಕೆ, ಅರ್ಥಗಳಲ್ಲಿ, ಸಾಹಿತ್ಯದ ಸೂಕ್ಷ್ಮಗಳ ಬಗೆಗೆ, ಸೃಜನಶೀಲ ಅಭಿವ್ಯಕ್ತಿಗಳ ಕುರಿತು ಆಸಕ್ತಿಯಿಂದ, ಕಲೆಯ ಕುರಿತು ಗಂಟೆಗಟ್ಟಲೆ ಚರ್ಚಿಸುತ್ತಾ ಸಂತಸಪಡುವಾಗ-ಸ್ವಂತ ಕೆಲಸಗಳನ್ನು ಮರೆತರೂ ಬೇಸರವಿಲ್ಲದವರಾಗಿದ್ದರು. ಉಚಿತ, ಸುಲಭ ವೈದ್ಯಕೀಯ ಸಲಹೆಗಳನ್ನು ನೀಡುತ್ತಾ ಹಲವರಿಗೆ ನೆರವಾದವರು. ಮಂಗಳೂರು ವಲಯದಲ್ಲಿ – ಅರ್ಕುಳ ಮಹಾಬಲ ಶೆಟ್ಟಿ, ಹೊಸಬೆಟ್ಟು ನಾರಾಯಣ ರಾವ್, ಎನ್. ಮಾಧವಾಚಾರ್ಯ, ಮಂದಾರ ಕೇಶವ ಭಟ್, ಹಾಗೆಯೆ ಉಜಿರೆ ಅಶೋಕ್ ಭಟ್, ಬೆಳ್ತಂಗಡಿ ವಲಯದ ಹಲವರು ಅವರ ನಿಕಟವರ್ತಿಗಳು. ಈ ಲೇಖಕನೂ ಶಿವರಾಯರ ಬಹುಕಾಲದ ಒಡನಾಡಿ.

ಫರಂಗಿಪೇಟೆಯನ್ನು ಬಿಟ್ಟು, ತನ್ನ ಊರಾದ ಪಣಕ್ಕಜೆಯಲ್ಲಿ ನೆಲೆನಿಂತ ಬಳಿಕ, ಗೃಹಕೃತ್ಯ ಕೃಷಿ ಕಾರ್ಯಗಳ ಭಾರದಿಂದ ಅವರ ಕಲಾಸಂಪರ್ಕ ಕಡಿಮೆಯಾಯಿತು. ಆ ಬೇಸರವು ಅವರಿಗಿತ್ತು. ಮಧ್ಯೆ ಬಿಡುವು ಮಾಡಿ, ಆಗಾಗ ಯಕ್ಷಗಾನ ವಲಯಕ್ಕೆ ಒಂದು ಸಂತಸಪಡುತ್ತಿದ್ದರು. ಅವರು ಪತ್ರ ವ್ಯವಹಾರವನ್ನು ಪದ್ಯರೂಪದಲ್ಲಿ, ವಿಶೇಷವಾಗಿ ಭಾಮಿನಿ ಷಟ್ಪದಿಗಳಲ್ಲೇ ನಡೆಸುತ್ತಿದ್ದುದು ವಿಶೇಷ.

ಕಲೆಯ ಕುರಿತು ಸದಾ ಕನವರಿಸುವ ಅದನ್ನು ಮನಸ್ಸಿಗೆ ಹಚ್ಚಿಕೊಂಡು ಖುಷಿ ಪಡುತ್ತಿದ್ದ ಶಿವರಾಯರದು, ಮನಸ್ಸಿನಲ್ಲಿ ಹಸಿರಾಗಿ ನಿಲ್ಲುವ ಸ್ಮೃತಿ.

error: Content is protected !!
Share This