– ಡಾ. ಎಂ. ಪ್ರಭಾಕರ ಜೋಶಿ

ತೊಂಬತ್ತಮೂರರ ಪೂರ್ಣಾಯುಷ್ಯದಲ್ಲಿ ಇತ್ತೀಚೆಗೆ ನಿಧನರಾದ ಪ್ರಸಿದ್ಧ ಯಕ್ಷಗಾನ ಸಂಚಾಲಕ, ಸಾಮಾಜಿಕ ಪ್ರಮುಖ – ಕಸ್ತೂರಿ ವರದರಾಯ ಪೈ ಅವರದು. ತುಂಬ ವಿಶಿಷ್ಟವಾದ ಸಾಧನೆ, ಪ್ರತ್ಯೇಕ ರೀತಿಯ ವ್ಯಕ್ತಿತ್ವ. ದಾಖಲೆಗೆ ಅರ್ಹವಾದ ಯೋಗ್ಯತೆ, ಪ್ರಸಿದ್ಧ ಉದ್ಯಮಿಗಳ ಮತ್ತು ಸಂಸ್ಕೃತಿ ಪ್ರೇಮಿಗಳ ಮನೆತನ ಕಸ್ತೂರಿ. ಅದರ ಕವಲು ಸುರತ್ಕಲ್ಲು ಕಸ್ತೂರಿ ಮನೆತನದಲ್ಲಿ ಜನಿಸಿದ ವರದರಾಯರು, ಅಣ್ಣಂದಿರಾದ ರಾಮರಾಯ ಪೈ, ಭಾಗವತ ವಾಸುದೇವ ಪೈಗಳ ಮೂಲಕ ಯಕ್ಷಗಾನ ಆಸಕ್ತಿ ಬೆಳೆಸಿಕೊಂಡು, ಜತೆಯಲ್ಲೇ ಕೃಷಿ, ವ್ಯವಹಾರ ನಿರತರಾದರು.

ಕಸ್ತೂರಿ ಮನೆತನದ ಮಹಾಮ್ಮಯಿ ದೇವಳದಲ್ಲಿ ಈ ಮೂವರು ಆರಂಭಿಸಿದ ನವರಾತ್ರಿ ಯಕ್ಷಗಾನ ಸೇವೆಗಳು ಮುಂದೆ ಯಕ್ಷಗಾನ ಮೇಳಕ್ಕೆ ಪ್ರೇರಕ. ಕಸ್ತೂರಿ ವಾಸುದೇವ ಪೈ ಭಾಗವತಿಕೆಯಲ್ಲಿ ಯಕ್ಷಗಾನ ಸಂಘವೂ ಬಹುಕಾಲ ನಡೆಯುತ್ತಿತ್ತು.

1960ರ ದಶಕದ ಮಧ್ಯಭಾಗದಲ್ಲಿ ಸುರತ್ಕಲ್ ಶ್ರೀ ಮಹಮ್ಮಾಯಿ ಕೃಪಪೋಷಿತ ಯಕ್ಷಗಾನ, ನಾಟಕ ಸಭಾ ಪ್ರಾರಂಭ. ನಾಲ್ಕು ದಶಕ ಕಾಲ ಇದ್ದ ಈ ಮೇಳ- ಪೈ ಸೋದರರ ವಿಶಿಷ್ಟ ಶೈಲಿಯು ‘ಸಂಘಟನೆ’ ಮೊದಲು ಅಣ್ಣಂದಿರಿಗೆ ಸಹಾಯಕರಾಗಿ, ಮುಂದೆ ಮೂರು ದಶಕ ತಾನೇ ಸಂಚಾಲಕರಾಗಿ ಮೇಳವನ್ನು ಮುನ್ನಡೆಸಿದ ವರದರಾಯರು ಯಕ್ಷಗಾನದಲ್ಲಿ ಸರ್ವರಿಗೆ ‘ವರದಣ್ಣ’ ನಾಗಿ ಆತ್ಮೀಯರು.

ವರದಣ್ಣನವರ ಆಡಳಿತ ಶೈಲಿ ವಿಶಿಷ್ಟ. ಇದಕ್ಕೆ ಅವರು ಆರ್.ಎಸ್.ಎಸ್ ಮೂಲಕ ಗಳಿಸಿದ ಶಿಸ್ತು ಸಂಸ್ಕಾರಗಳು ಕಾರಣ. ಮೇಳದ ಸಂಚಾಲಕರಲ್ಲಿ ಇತರ ಸಂಚಾಲಕ ಸಂಘಟಕರಿಗಿಂತ ಭಿನ್ನವಾಗಿ, ಸದಾ ಮೇಳದೊಂದಿಗೆ ಇರುತ್ತಿದ್ದರು. ಸಂಬಂಧಿಕರ ಮನೆ ಭೇಟಿ ಕೂಡ ಕಡಿಮೆ. ಮೇಳವೇ ಮನೆ, ಸ್ವಂತ ಉಸ್ತುವಾರಿ. ಮಾತು ತೀರ ಮಿತ, ಚೊಕ್ಕ, ನಾಜೂಕಿನ, ಜಾಗ್ರತೆಯ ವ್ಯವಹಾರ. ಕಲಾವಿದರ ಬಗೆಗೆ ಗಾಢ ಪ್ರೀತಿ, ಅಭಿಮಾನ. ಮೇಳದ ದೇವರಿಗೆ ಸ್ವತಃ ಅವರೇ ನಿತ್ಯ ಪೂಜೆ ಸಲ್ಲಿಸುತ್ತಿದ್ದುದೂ ವಿಶೇಷ.

ಅವರ ತಂಡದ ಸುಮಾರು ಮುಕ್ಕಾಲು ಭಾಗ ಕಲಾವಿದರೂ, ಸಹಾಯಕರೂ ಮೇಳದ ಅವಧಿಯ ಉದ್ದಕ್ಕೂ ಮೇಳದಲ್ಲಿದ್ದುದು ಅವರ ಕಲಾವಿದರ ಸಂಬಂಧಕ್ಕೆ ಸಾಕ್ಷಿ. ಉದಾ: ಶೇಣಿಯವರು, ಅಗರಿ ರಘುರಾಮ ಭಾಗವತರು, ಉದ್ಯಾವರ ಬಸವ, ಶಿವರಾಮ ಜೋಗಿ, ಪದ್ಯಾಣ ಗಣಪತಿ ಭಟ್, ತೆಕ್ಕಟ್ಟೆ ಆನಂದ ಮಾಸ್ತರ್, ದಡ್ಡಿ ನಾರಾಯಣ ಶೆಟ್ಟಿಗಾರ, ಎಂ.ಟಿ.ಎಸ್. ಕುಲಾಲ್, ಪ್ರಕಾಶ್ಚಂದ್ರ್ರ ಬಾಯಾರು, ಬಣ್ಣದ ಮಾಲಿಂಗ, ಸುಂದರ ಮದ್ಲಗಾರ್, ಕೊಕ್ಕಡ ಈಶ್ವರ ಭಟ್, ಹಾಸ್ಯಗಾರ ವೇಣೂರು ಸುಂದರ ಆಚಾರ್ಯ, ಎಂ.ಕೆ.ರಮೇಶ್ ಆಚಾರ್ಯ, ಜಲವಳ್ಳಿ ವೆಂಕಟೇಶ ರಾವ್ ಚೌಕಿ ಸಹಾಯಕ ಶಿಲ್ಪಿ, ಮೇನೇಜರ್ ಐತಪ್ಪ ಇತ್ಯಾದಿ ಹಲವರು. ಶೇಣಿ ಅವರನ್ನು ಆ ಮೇಳದಲ್ಲಿ ಸುಮಾರು ಎರಡೂವರೆ ದಶಕ ತಿರುಗಾಟ ಮಾಡಿಸಿದೆ. ಅವರೀರ್ವರ ಆತ್ಮೀಯತೆಗೆ ಸಾಕ್ಷಿ. ಉದ್ಯಾವರ ಬಸವನವರು ಕಲಾವಿದರಾಗಿ ಮತ್ತು ಆಡಳಿತ ಸಹಾಯಕರಾಗಿ ದೀರ್ಘ ಕಾಲ ಸೇವೆ ಸಲ್ಲಿಸಿದವರು.

ಅಲ್ಲದೆ, ಇತರ ಹಿರಿಯ ಕಲಾವಿದರಾದ ಅಗರಿ ಶ್ರೀನಿವಾಸ ಭಾಗವತರು, ದೊಡ್ಡಸಾಮಗರು, ಕುಂಬ್ಳೆ ಸುಂದರ ರಾವ್, ಕೋಟ ವೈಕುಂಠ, ಕೋಳ್ಯೂರು ರಾಮಚಂದ್ರರಾವ್, ಆರಾಟೆ ಮಂಜು, ಕೆ. ಗೋವಿಂದ ಭಟ್, ಪುತ್ತೂರು ನಾರಾಯಣ ಹೆಗ್ಡೆ. ಇವರೆಲ್ಲರೂ ವರದರಾಯರ ಮೇಳದಲ್ಲಿ ತಿರುಗಾಟ ನಡೆಸಿ ಖ್ಯಾತಿ ಗಳಿಸಿದವರು.

‘ದಿನಕ್ಕೊಂದು ಕ್ಯಾಂಪು’ ಪದ್ಧತಿ, ಪ್ರಚಾರ ಫಲಕಗಳ ಬಳಕೆ, ಪ್ರಸಿದ್ಧ ಸಾಹಿತ್ಯ, ನಾಟಕ ಕೃತಿಗಳ ಯಕ್ಷಗಾನ ರೂಪದ (ಸದಾರಮೆ, ಕುಮಾರರಾಮ, ಯಯಾತಿ, ವಿಕ್ರಮಾದಿತ್ಯ, ಚಂದ್ರಗುಪ್ತ, ಭೂಕೈಲಾಸ) ಪ್ರಸ್ತುತಿ, ಗಟ್ಟದ ಮೇಲಣ ಕ್ಯಾಂಪು ವಿಸ್ತಾರ, ಕೌಟುಂಬಿಕ ರೂಪದ ಆಡಳಿತ ವಿಧಾನ- ಇವೆಲ್ಲ ವರದಣ್ಣನ ಮೇಳದ ವಿಶಿಷ್ಟ ಸಾಧನೆಗಳು. ಹಲವು ಊರುಗಳಲ್ಲಿ ಜನರಿಗೆ ಅವರ ಮೇಳ ‘ನಮ್ಮ ಮೇಳ’ ಆಗಿತ್ತು.

ಸಂಘ ಪರಿವಾರದ ಸಕ್ರೀಯ ನೇತಾರ – ಕಾರ್ಯಕರ್ತರಾದ ವರದಣ್ಣ ಅದೇ ರೀತಿಯ ಆಡಳಿತ ಶೈಲಿಯವರು. ಕಲಾವಿದರಿಂದಲೂ ಸಂಘ ಶೈಲಿಯ ನಿಷ್ಠೆಯನ್ನು ನಿರೀಕ್ಷಿಸುತ್ತಿದ್ದರು. ವ್ಯವಸಾಯದಲ್ಲಿ ಸ್ಪರ್ಧೆ, ಮಾರಾಟ ಮಾಡದೆ-ತನ್ನದೆ ದಾರಿಯಲ್ಲಿ ಸಾಗಿದವರು.

ಯಕ್ಷಗಾನ ಡೇರೆ ಮೇಳಗಳ ವ್ಯವಸಾಯದ ಕುಸಿತವನ್ನು ಸಾಕಷ್ಟು ಮೊದಲೇ ಕಂಡು-ನಷ್ಟವಿಲ್ಲದೆ ಮೇಳವನ್ನು ನಿಲ್ಲಿಸಿದ ವ್ಯವಹಾರೋದ್ಯಮಿ ವರದಣ್ಣ, ಆ ಬಳಿಕವೂ ತನ್ನ ದೇವಸ್ಥಾನದಲ್ಲಿ ಕಲಾ ಕಾರ್ಯಕ್ರಮಗಳನ್ನು ನಡೆಸುತ್ತ ಬಂದರು. ನವರಾತ್ರಿ ಯಕ್ಷಗಾನ ಆಟಗಳನ್ನು ಮುಂದುವರಿಸಿದರು.

ಉತ್ತಮ ಆರೋಗ್ಯ, ದೃಢಕಾಯದ, ಸದಾ ಮುಗುಳ್ನಗೆಯ, ಮೌನ ಆಪ್ತತೆಯ ವರದಣ್ಣ – ಸಾಮಾಜಿಕ ಕ್ಷೇತ್ರದಲ್ಲೂ ಕೊಡುಗೆ ನೀಡಿದವರು. ಸುರತ್ಕಲ್ಲು ಪ್ರದೇಶದಲ್ಲಿ, ಯಕ್ಷಗಾನ ವಲಯದಲ್ಲಿ ನಮ್ಮ ವರದಣ್ಣನಾಗಿ – ಸ್ನೇಹ, ಅಭಿಮಾನ, ಗೌರವಗಳನ್ನು ಗಳಿಸಿದ ನಾಯಕ-ಕಾರ್ಯಕರ್ತ-ಮಿತ್ರ.

– (ಉದಯವಾಣಿ ದೈನಿಕದ ಲಲಿತರಂಗ ವಿಭಾಗದಲ್ಲಿ ಪ್ರಕಟಿತ)

error: Content is protected !!
Share This