– ಡಾ. ಎಂ. ಪ್ರಭಾಕರ ಜೋಶಿ

ಐವತ್ತೊಂಬತ್ತರ ವಯಸ್ಸಿನಲ್ಲಿ, ಸಾಧನೆಯ ಒಂದು ಹಂತ ತಲುಪಿ, ಪಕ್ವವಾದ ಇನ್ನಷ್ಟು ಎತ್ತರದ ಸಾಧ್ಯತೆಗಳ ಕಾಲಕ್ಕೆ ಬರುತ್ತಲೇ ಆಗಲಿದ, ಬಹುವಿಧ ಸಾಮರ್ಥ್ಯದ ಕಲಾವಿದ – ಕವಿ ಸಿದ್ಧಕಟ್ಟೆ ವಿಶ್ವನಾಥ ಶೆಟ್ಟಿ. ಆಟ, ತಾಳಮದ್ದಳೆ, ಸಂಘಟನೆಗಳಿಗೆಲ್ಲ ಅಗತ್ಯವಿದ್ದ, ಬಹೂಪಯೋಗಿ. ಆದರೆ ಅಷ್ಟೇ ಅಲ್ಲದ, ವಿಶಿಷ್ಟ ಪ್ರತಿಭಾಶಾಲಿ. (ಸಿದ್ಧಕಟ್ಟೆಯ ಇಬ್ಬರು ಕಲಾವಿದರು – ವಿಶ್ವನಾಥ ಶೆಟ್ಟಿ ಮತ್ತು ಕಳೆದ ವರ್ಷ ತೀರಿಕೊಂಡ ಚೆನ್ನಪ್ಪ ಶೆಟ್ಟಿ ಇವರ ನಿಧನವು ಯಕ್ಷಗಾನ ಕ್ಷೇತ್ರಕ್ಕೆ ಖೇದಕರ, ಅಕಾಲಿಕ ನಷ್ಟ).

ಬಂಟ್ವಾಳದಲ್ಲಿ ಕೆಲಕಾಲ ವಿದ್ಯಾಭ್ಯಾಸಕ್ಕೆ ತೊಡಗಿ, ಮುಂದೆ ಉದ್ಯೋಗಿಯಾಗುವ ಅಪೇಕ್ಷೆ ಹೊಂದಿದ್ದು ಅನಿರೀಕ್ಷಿತ ತಿರುವುಗಳಿಂದ- ಕಲೆಯನ್ನು ವೃತ್ತಿಯಾಗಿಸಿದವರು. ಕೆಲಕಾಲ ಹೋಟೆಲ್ ಉದ್ಯೋಗಿಯೂ ಆಗಿದ್ದವರು. ಹೈಸ್ಕೂಲ್ ದಿನಗಳಲ್ಲೆ ಬರವಣಿಗೆ, ಭಾಷಣಗಳಲ್ಲಿ ಸಮರ್ಥರಾಗಿದ್ದರು.

ಕರ್ನಾಟಕ, ಕದ್ರಿ ಮೇಳಗಳಲ್ಲಿ ಆರಂಭ. ಮುಂದೆ ಸಾಲಿಗ್ರಾಮ ಮೇಳದಲ್ಲಿ ಎರಡು ದಶಕ ತಿರುಗಾಟ. ಜೊತೆಗೆ ತಾಳಮದ್ದಳೆಗಳಲ್ಲಿ ಒಳ್ಳೆಯ ಅರ್ಥದಾರಿ. ಸಮರ್ಥ ಯಕ್ಷಗಾನ ಪ್ರಸಂಗ ಕವಿ.

ಹಿತಮಿತವಾದ ಚೊಕ್ಕಮಾತು, ಸರಳ ಸುಂದರ ಭಾಷೆ, ಜತೆಗಾರರೊಡನೆ ಹೊಂದಿಕೊಂಡು ಸಂಭಾಷಣೆ ಹೆಣೆಯುವ ನಾಟಕೀಯ ಪ್ರಾವೀಣ್ಯ, ಚರ್ಚೆಗಿಂತ ರಂಗದ ಸೊಗಸಿಗೆ ಮಹತ್ವ ನೀಡುವ ಧೋರಣೆಗಳಿಂದ ಈ ಕಾಲದ ಒಳ್ಳೆಯ ಮಾತುಗಾರರಲ್ಲಿ ಗಣನೆಗೆ ಸಲ್ಲುವ ವಿಶ್ವನಾಥ ಶೆಟ್ಟಿ, ವಿಶೇಷತಃ ಬಡಗುತಿಟ್ಟಿನಲ್ಲಿ ಅರ್ಥಗಾರಿಕೆಯ ಬೆಳವಣಿಗೆಗೆ ಪ್ರೇರಣೆಯಿತ್ತು. ಹಲವರನ್ನು ಬೆಳೆಸಿದವರು. ಮೇಳದ ಚೌಕಿಯಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಮಾರ್ಗದರ್ಶಕರಾಗಿದ್ದರು. ಸಾಲಿಗ್ರಾಮ ಮೇಳದ ಸಂಘಟಕರಾದ ಪಿ.ಕಿಶನ್ ಹೆಗ್ಡೆ ಅವರ ಮಾತಿನಲ್ಲಿ “ವಿಶ್ವನಾಥಣ್ಣ, ನಮಗೆ ಸದಾ ಸಹಾಯಕರು, ಮಾರ್ಗದರ್ಶಕರು. ರಂಗದ ನಡೆ ಮಾಹಿತಿಗೆ, ಪ್ರಸಂಗ ರಚನೆಗೆ, ಭಾಷಣಕ್ಕೆ, ಸದಾ ಸಿದ್ಧ. ರೆಡಿಮೇಡ್ ಕೋಶದಂತಿದ್ದವರು”

ವಿಷಮ ಸಮರಂಗ, ವರ್ಣವೈಷಮ್ಯ, ಶಶಿವಂಶ, ಶ್ರೀರಾಮ ಸೇತು, ಚಾಣಕ್ಯ, ಬೊಳ್ಳಿದಂಡಿಗೆ ಮೊದಲಾದ ಇಪ್ಪತ್ತಕ್ಕೂ ಮಿಕ್ಕಿದ ಅವರ ರಚನೆಗಳಲ್ಲಿ ಸರಳ, ಸುಂದರ ಭಾಷೆಸಂಗಕ್ಕೆ ಅನುಕೂಲವಾದ ಕಥಾರೇಖೆ, ಅಭಿನಯಕ್ಕೆ ಮಾತಿಗೆ ಅನುಕೂಲಿಸುವ ಪದರಚನೆ, ಛಂದೋವೈವಿಧ್ಯ ಕಾಣುತ್ತೇವೆ. ಹಲವು ಇತರ ಪ್ರಸಂಗಗಳಿಗೆ ಪ್ರದರ್ಶನಗಳಿಗೆ ಆ ಆ ದಿನದ ಅವಶ್ಯಕತೆಗಾಗಿ ಅವಸರದಲ್ಲಿ ಅವರು ರಚಿಸಿ ಕೊಟ್ಟ ಬಿಡಿಪದ್ಯಗಳು ಸಾವಿರಕ್ಕೂ ಮಿಕ್ಕಿ ಇರಬಹುದು.

ವಾಲಿವಧೆಯ ಶ್ರೀರಾಮ, ಕೃಷ್ಣ ಪರಂಧಾಮದ ಶ್ರೀಕೃಷ್ಣ, ಹಲವು ಋಷಿ ಪಾತ್ರಗಳು, ತುಳು ಪ್ರಸಂಗಗಳ ವೇಷಗಳು ಅವರಿಗೆ ಹೆಸರನ್ನು ತಂದಿತ್ತವು. ಪುರುಷೋತ್ತಮ ಪೂಂಜರ ‘ಮಾನಿಷಾದ’ ದ ವಾಲ್ಮೀಕಿ- ಅವರ ಒಂದು ಅತ್ಯಂತ ಪ್ರತಿಭಾ ಪೂರ್ಣ ಸೃಷ್ಟಿ. ಆ ಪ್ರಸಂಗದ ರಚನೆಯ ಉದ್ದೇಶಕ್ಕೆ ಕಲಶವಿಟ್ಟ ನಿರ್ವಹಣೆ.

ಸೌಮ್ಯ, ಗಂಭೀರ ಸ್ವಭಾವ, ವ್ಯಕ್ತಿತ್ವದ ಬಗೆಗೆ ಗೌರವ, ಸೂಕ್ಷ್ಮ ಅವಲೋಕನ ಶಕ್ತಿಯ ವಿಶ್ವನಾಥ, ಸಾಹಿತ್ಯದ ಅಂದ, ಪುರಾಣ, ಕಲೆಗಳ ಹಾಗೆಯೆ, ತುಳುನಾಡಿನ ಆಚಾರ ವಿಚಾರಗಳ ವಿವರಗಳ ಬಗೆಗೆ ಚರ್ಚಿಸುವಲ್ಲಿ ಆಸಕ್ತರು. ಒಳ್ಳೆಯ ತಮಾಷೆಯ ಸಂಗ್ರಹವುಳ್ಳ ವಿನೋದಪ್ರಿಯ.

ಇಂತಹ ಸಜ್ಜನ ಕಲಾವಿದ – ಆರೋಗ್ಯವನ್ನು ಕೆಡಿಸಿಕೊಳ್ಳುವ ದೌರ್ಬಲ್ಯಕ್ಕೆ ತುತ್ತಾದುದು. ವಿಷಾದಕರ.

error: Content is protected !!
Share This