“ಪಾಂಡಿತ್ಯದ ರುಚಿ ಹತ್ತಿದವರು ಮಾತ್ರವೇ ತಾಳ ಮದ್ದಲೆ ಕ್ಷೇತ್ರವನ್ನು ಬಹಳಷ್ಟು ಗೌರವಿಸುತ್ತಾರೆ. ಅಥವಾ ತಾಳಮದ್ದಲೆಯ ರುಚಿ ತಿಳಿದವರು ಪಾಂಡಿತ್ಯದ ರುಚಿಯನ್ನು ಸವಿಯುತ್ತಾರೆ.”

ಇದು ಯಕ್ಷಗಾನಕ್ಕೆ ಅವಲಂಬಿಸಿಕೊಂಡು ಜನ ಜನಿತವಾದ ಮಾತಾದರೆ ಅದಕ್ಕೆ ಗಹನವಾದ ಅರ್ಥವಿದೆ. ಹೌದು ಯಕ್ಷಗಾನದ ವಿದ್ವತ್ ರೂಪವೇ ತಾಳ ಮದ್ದಲೆ. ಯಕ್ಷಗಾನವೆಂದರೆ  ಬಣ್ಣ ಬಣ್ಣದ ವೇಷ ಕುಣಿತ ಇವಿಷ್ಟೆ ಅಂತ ಕಲ್ಪಿಸುವವರಿಗೆ ತಾಳ ಮದ್ದಲೆ ಎಂಬ ಪಂಡಿತರ ಸಮ್ಮೇಳನವೊಂದಿದೆ ಎಂದರೆ ಆಶ್ಚರ್ಯವಾಗಬಹುದು. ಬಯಲಾಟದಲ್ಲಿ ಇಲ್ಲದಿದ್ದದ್ದು ಹಲವನ್ನು ಇಲ್ಲಿ ಕಾಣಬಹುದು. ಇಂದಿಗೂ ತಾಳ ಮದ್ದಲೆಯನ್ನಷ್ಟೇ ಬಯಸುವ ಯಕ್ಷಗಾನ ಪ್ರೇಮಿಗಳು ಬಹಳಷ್ಟಿದ್ದಾರೆ. ಒಂದು ಕಾಲದಲ್ಲಿ ಮಡಿವಂತರಿಂದ ದೂರವಿದ್ದ ಯಕ್ಷಗಾನ ಕ್ಷೇತ್ರ ಕ್ರಮೇಣ ವಿದ್ವಾಂಸರ ವಿದ್ಯಾವಂತರ ಪ್ರವೇಶದಿಂದ ಬಹಳಷ್ಟು ಮಡಿವಂತಿಕೆಯನ್ನು ಬಿಟ್ಟು ಬೆಳೆದು ಬಂತು. ಶುದ್ದ ಜನಪದದಲ್ಲೆ ಬೆಳೆದು ಬಂದ ಈ ಕಲೆ ಪಂಡಿತ ಪಾಮರೆರೆನಿಸದೆ ರಂಜಿಸಲ್ಪಡುತ್ತಿದ್ದರೂ ಅದು ರಂಗಸ್ಥಳಕ್ಕಷ್ಟೆ ಮೊದಲು ಸೀಮಿತವಾಗಿತ್ತು. ಹಾಡಿಗೆ ತಕ್ಕ ಸಂವಾದ. ಒಂದಷ್ಟು ದೃಶ್ಯ ವೈಭವ. ಯಾವಾಗ ವಿದ್ವಾಂಸರ ಪ್ರವೇಶವಾಯಿತೋ ಆವಾಗಿಂದ ಯಕ್ಷಗಾನದಲ್ಲಿ ಮತ್ತಷ್ಟು ಹೂರಣ ತುಂಬಿಸಲ್ಪಟ್ಟು ಅದು ಬೆಳೆ ಬೆಳೆ ಇನ್ನೊಂದು ಟಿಸಿಲು ತಾಳ ಮದ್ದಲೆಯ ರೂಪದಲ್ಲಿ ಆವಿಷ್ಕಾರಗೊಂಡಿತು. ಪೌರಾಣಿಕ ಜ್ಞಾನದ ಜತೆಗೆ ಹಲವಾರು ಪಾಂಡಿತ್ಯಗಳ ರಸಬೆರೆತಾಗ ಅದಕ್ಕೆ ಮಾತುಗಾರಿಕೆಯ ಹೊಸ ರೂಪ ಬಂದಿತು. ಹೀಗಾಗಿ ತಾಳ ಮದ್ದಲೆ ಎಂಬುದು ಇದೊಂದು ಪಂಡಿತರ ಕಲೆಯಾಗಿಯೇ ಅನ್ವರ್ಥವಾಯಿತು.

ಈ ಪಂಡಿತರ ಕಲೆಯಲ್ಲಿ ಪಂಡಿತರು ಗುರುಗಳು ಎಂದು ಅನ್ವರ್ಥರಾದವರು ವಿದ್ವಾನ್  ಗುರು ಪೆರ್ಲ ಕೃಷ್ಣ ಭಟ್ಟರು. ಪೆರ್ಲ ಎಂಬ ಸ್ಥಳಾನಮಕ್ಕೆ ಪಂಡಿತ ಎಂಬ ವಿಶೇಷಣವನ್ನೊದಗಿಸಿದವರು.  ಬಹುಮುಖ ಪ್ರತಿಭೆಯ ವಿದ್ವಾಂಸರು ಇವರು. ವೃತ್ತಿ ಯಲ್ಲಿ ಗುರುಗಳಾಗಿ ಆ ಗುರು ಸ್ಥಾನವನ್ನು ಸ್ಥಾಯಿಯಾಗಿ ಉಳಿಸಿಕೊಂಡವರು. ವೇದ ಭಾಷೆ, ರಾಷ್ಟ್ರ ಭಾಷೆ ಜತೆಗೆ ಕನ್ನಡ ಅಲ್ಲದೆ ಇನ್ನು ಹಲವು ಭಾಷೆಯಲ್ಲಿ ಪ್ರಾವಿಣ್ಯವನ್ನು ಪಡೆದು ನಿಜಕ್ಕೂ ಪಂಡಿತರೆಂದೇ ಖ್ಯಾತಿಯನ್ನು ಗಳಿಸಿದವರು. ತಾಳಮದ್ದಲೆಯಾಗಲಿ ಇನ್ನಿತರ ಕೂಟಗಳಲ್ಲೇ ಆಗಲಿ ಪುರಾಣ ಉಪನಿಷತ್ ಅಥವ ದರ್ಮ ಕರ್ಮಗಳ ಜಿಜ್ಞಾಸೆಯಿರಲಿ ಹಲವು ಸಮಸ್ಯೆಗಳಿಗೆ ಇದಮಿತ್ಥಂ ಎಂಬ ಸ್ಥಾನದಲ್ಲಿದ್ದವರು. ಇದು ಒಡನಾಡಿ ದಿವಂಗತ ಶೇಣಿಯವರ ಮಾತು. ಉತ್ತಮ ಸಂಘಟಕರು ವಾಗ್ಮಿಗಳು ಬರಹಗಾರರೂ  ಗುರುಗಳೂ ಆಗಿ ಕೇರಳ ರಾಜ್ಯ ಪ್ರಶಸ್ತಿಗೆ ಭಾಜನರಾದವರು. ಪಂಡಿತರಾದವರೆಲ್ಲ ಗುರುಗಳಾಗಬೇಕೆಂದೇನೂ ಇಲ್ಲ ಗುರುಗಳಾದವರೂ ಪಂಡಿತ ಅಂತ ಎನಿಸಿಕೊಳ್ಳುವುದೂ ಅಪರೂಪ ಇವರಡನ್ನೂ ತನ್ನಲ್ಲಿ ಹೊಂದಿಕೊಂಡವರು ಪೆರ್ಲ ಪಂಡಿತರು.

ಯಕ್ಷಗಾನ ತಾಳಮದ್ದಲೆಯಲ್ಲಿ ಪರಿಶುದ್ದ ಅರ್ಥಗಾರಿಕೆ ಹೆಸರಾದವರು. ಅನಾವಶ್ಯಕ ಅಸಾಂದಾರ್ಭಿಕ ಚರ್ಜೆಗೆ ಇವರು ಕಾರಣರಾಗುವುದಿಲ್ಲ. ಪೆರ್ಲ ಪಂಡಿತರ ಅರ್ಥಗಾರಿಕೆಯ ರುಚಿಯನ್ನು ಆ ವರಸೆಯನ್ನು ಅರ್ಥವಿಸಿಕೊಳ್ಳಬೇಕಾದರೆ ಸ್ವಲ್ಪ ಪಾಂಡಿತ್ಯದ ಹಸಿವನ್ನೂ ಹೊಂದಿರಬೇಕು. ವಿದ್ವತ್ ನ ಸರಸ ಅರ್ಥಗಾರಿಕೆಯ ಸೊಗಸು ಅಂಥಾದ್ದು. ಪ್ರಸಂಗಕ್ಕೆ ಪಾತ್ರಕ್ಕೆ ಔಚಿತ್ಯವಲ್ಲದೇ ಇದ್ದದ್ದು ಇವರಿಂದ ನಿರೀಕ್ಷಿಸುವುದೂ ತರವಲ್ಲ. ಎಂತಹಾ ವಾಗ್ಮಿಯೇ ಆಗಲಿ ಇವರ ವಿದ್ವತ್ ಗೆ ತಲೆದೂಗಲೇ ಬೇಕು. ತಾಳ ಮದ್ದಲೆಯ ರಂಗವೇರಿದರೆ ನಿಷ್ಠೂರವಾದಿಯಾಗಿಯೂ ಸೌಜನ್ಯಮೂರ್ತಿಯಾಗಿಯೂ ಕಂಡುಬರುತ್ತಾರೆ.

ಇಂದಿಗೂ ನಾನು ಯಕ್ಷಗಾನ ತಾಳ ಮದ್ದಲೆಯ ಅಭಿರುಚಿಯನ್ನು ಬೆಳೆಸಿಕೊಳ್ಳುವುದಕ್ಕೆ ಮತ್ತು ಉಳಿಸಿಕೊಳ್ಳುವುದಕ್ಕೆ ಮೂಲ ಕಾರಣ ಪೆರ್ಲ ಕೃಷ್ಣ ಭಟ್ಟರ ಅರ್ಥಗಾರಿಕೆ. ಬಾಲ್ಯದಲ್ಲೇ ಬಾಯಾರು ಪರಿಸರದಲ್ಲಿ ಅದು ನಮ್ಮ ಮಠದ ನೆರಳಲ್ಲಿ ಆದ ಹಲವಾರು ತಾಳ ಮದ್ದಲೆಯನ್ನು ಕಂಡವನು. ಸುಧನ್ವನಾಗಿ, ಅತಿಕಾಯನಾಗಿ ರಾವಣನಾಗಿ ರಾಮನಾಗಿ ಬಹುಮುಖ ರೂಪವನ್ನು ಕಂಡು ತಾಳ ಮದ್ದಲೆಯ ಅರ್ಥವೆಂದರೆ ಮೊದಲು ಮನಸ್ಸಿನಲ್ಲಿ ಬರುತ್ತಿದ್ದದ್ದು ಇವರ ರೂಪ. ಅಕಾಶವಾಣಿಯಲ್ಲಿ ಅಗಾಗ ಪ್ರಸಾರವಾಗುತ್ತಿದ್ದ ಪೆರ್ಲ ಕೃಷ್ಣ ಭಟ್ ಬಳಗದವರ ತಾಳ ಮದ್ದಲೆ ಬಹಳಷ್ಟು ವೈಶಿಷ್ಟ್ಯದಿಂದ ಕೂಡಿರುತ್ತಿತ್ತು. ಹಿಮ್ಮೇಳದಲ್ಲಿ ಬಲಿಪ್ಪ, ಪುಂಡಿಕಾಯಿ, ಕುದ್ರೆಕೂಡ್ಲು ಅಂತೇ  ಅರ್ಥಗಾರಿಕೆಯಲ್ಲಿ ಪೆರ್ಲ ಪಂಡಿತರೊಂದಿಗೆ ಜೋಷಿ ಮೂಡಂಬೈಲು ಮುಂತಾದವರುಗಳೊಂದಿಗೆ ಮೂಡಿಬರುತ್ತಿದ್ದ ಕಿರು ತಾಳಮದ್ದಲೆ ನಾನು ಬಹಳಷ್ಟು ಅಸ್ವಾದಿಸಿದ್ದೇನೆ. ಇಂದಿಗೂ ಅದರ ಧ್ವನಿ ಮುದ್ರಣ ಕೇಳಿ ಆನಂದಿಸುತ್ತೇನೆ.

ಶೇಣಿಯವರೊಂದಿಗಿನ ಇವರ ಸಂವಾದ ಅದೊಂದು ಪಾಂಡಿತ್ಯದ ಬಿರುಸಾದ ಘರ್ಷಣೆ ಎಂದೇ ಹೇಳಬಹುದು. ಮರಯಲಾಗದ ಹಲವು ಪಾತ್ರಗಳು ಇಂದೂ ಕಣ್ಣೆದುರಿಗೆ ಮಾತನಾಡುತ್ತಿವೆ ಎಂದರೆ ಅದರ ವೈಶಿಷ್ಟ್ಯತೆಯನ್ನು ಬಣ್ಣಿಸುವುದು ಕಷ್ಟೆ. ಶೇಣಿ,  ತೆಕ್ಕಟ್ಟೆ,  ಪೆರ್ಲ, ಕುಂಬ್ಳೆ ಜೋಷಿ ಯವರ ತಾಳ ಮದ್ದಲೆಯ ಘನ ವೈಭವ ಬಹುಷಃ ಇನ್ನು ವರ್ತಮಾನಕ್ಕೆ ಬರಲಾರದು ಎಂದೇ ಅನ್ನಿಸುತ್ತದೆ.  ಗೀತೋಪದೇಶ ಎಂಬ ತಾಳ ಮದ್ದಲೆಯಲ್ಲಿ ಶೇಣಿಯವರು ಕೃಷ್ಣನಾಗಿ ಪೆರ್ಲ ಪಂಡಿತರು ಅರ್ಜುನನಾಗಿ ಇದ್ದ ತಾಳ ಮದ್ದಲೆ ಕೇಳುವಾಗ ಅನ್ನಿಸುತ್ತದೆ ಯಕ್ಷಗಾನ ಅರ್ಥಗಾರಿಕೆ ಅದೆಷ್ಟು ಶ್ರೀಮಂತ? ಹಿಂದೆ ನಡೆದ ಭೀಷ್ಮ ವಿಜಯ ತಾಳ ಮದ್ದಲೆಯ ಭೀಷ್ಮ ಪರಶುರಾಮರ ಸಂಭಾಷಣೆಯಲ್ಲಿ ಶೇಣಿಯವರು ಭೀಷ್ಮರಾದರೆ ಗುರು ಪರಶುರಾಮರಾಗಿ ಪೆರ್ಲ ಪಂಡಿತರು ಬೆರಗಾಗುವಂತಹ ವಾಕ್ ಸಂಘರ್ಷವನ್ನೇ ನಡೆಸಿದ್ದಾರೆ. ಅದನ್ನು ಅದೆಷ್ಟು ಸಲ ಕೇಳಿದರೂ ರೋಮಾಂಚನವಾಗುತ್ತದೆ. ಅಂತಹ ಶ್ರೀಮಂತ ಸಂವಾದವದು.

ಭೀಷ್ಮವಿಜಯದ ಭೀಷ್ಮನ ಗುರುಸ್ಥಾನದ ಪರಶುರಾಮರಾಗಿ ಮಾತ್ರವಲ್ಲ ನಿಜ ಜೀವನದಲ್ಲೂ ಅದೇ ಸ್ಥಾನದಲ್ಲಿ ವಿರಾಜಮಾನರಾಗಿರುತ್ತಿದ್ದ ಪೆರ್ಲ ಗುರುಗಳು ಇಂದು ನಮ್ಮೋಂದಿಗಿಲ್ಲ ಎಂದಾಗ ಕಳೆದು ಹೋದ ಹಲವು ಅವಿಸ್ಮರಣೀಯ ಘಳಿಗೆಗಳು ನೆನಪಿಗೆ ಬರುತ್ತದೆ. ಯಕ್ಷಗಾನದ ಶ್ರೀಮಂತ ಅರ್ಥಗಾರಿಕೆಯ ಮತ್ತೊಂದು ಕೊಂಡಿಯೂ ಕಳಚಿಕೊಂಡಿತೇ? ಮನಸ್ಸು ಭಾರವಾಗುತ್ತದೆ.

ಮುಂಜಾನೆ ದೇವರ ಕೊಣೆ ಹೊಕ್ಕು ಸಂಧ್ಯೆಗೆ ಅಣಿಯಾಗುವಾಗ ಪೆರ್ಲ ಕೃಷ್ಣ ಭಟ್ಟರು ಬರೆದ ’ಸಾರ್ಥ ಷೋಡಷ ಸಂಸ್ಕಾರ”  ವೆಂಬ ಪುಸ್ತಕದತ್ತ ಕಣ್ಣು ಹಾಯಿಸುತ್ತೆನೆ. ಅಲ್ಲಿ ಮೊದಲಿಗೆ ಕಾಣುವ ಈ ಗುರುಮುಖ ಮತ್ತಷ್ಟು ಗುರುಸ್ಮರಣೆಯನ್ನು ಮನಸ್ಸಲ್ಲಿ ಸ್ಫುರಿಸುತ್ತದೆ.  ಆ ಮಹಾನ್ ಚೇತನ ದೇಹರೂಪದಲ್ಲಿ ಇಲ್ಲದೇ ಇದ್ದರೂ ಅವ್ಯಕ್ತವಾಗಿ ಸದಾ ಬೆಳಗುತ್ತಿದೆ. ಈಗ ಮೃತರ ಆತ್ಮಕ್ಕೆ ಶಾಂತಿಯನ್ನು ಕೋರುವುದರಿಂದ ನಮ್ಮ ಆತ್ಮ ತೃಪ್ತಿಯನ್ನು ಅನುಭವಿಸುತ್ತಿದೆ. ಭಗವಂತನು ಸದ್ಗತಿಯನ್ನು ಕರುಣಿಸಲಿ ಎಂದು ಮನಸಾರೆ ಪ್ರಾರ್ಥಿಸೋಣ ಆಗದೇ?

ಬಹಳ ಹಿಂದಿನ ತಾಳಮದ್ದಲೆಯ ಒಂದು ತುಣುಕು. ಶೇಣಿ ಗೋಪಾಲಕೃಷ್ಣ ಭಟ್ಭೀಷ್ಮನಾದರೆ ಪೆರ್ಲಕೃಷ್ಣಭಟ್ಟರ ಗುರು ಪರಶುರಾಮ.

(ರಾಜಕುಮಾರ್ ಬೆಂಗಳೂರು)

error: Content is protected !!
Share This