ಸಾಮಾಗ್ರಿಗಳು

ಪಾಲಕ್ ಸೊಪ್ಪು – ಒಂದು ಕಟ್ಟು, ಕೊತ್ತಂಬರಿ ಸೊಪ್ಪು – ಸ್ವಲ್ಪ, ಟೊಮ್ಯಾಟೊ – ಒಂದು, ಹಸಿಮೆನಸಿನ ಕಾಯಿ – ಮೂರು, ನೆಲಕಡಲೆ – ನಾಲ್ಕು ಚಮಚ, ಗಸಗಸೆ – ಎರಡು ಚಮಚ, ನೀರುಳ್ಳಿ – ಎರಡು, ಸ್ವೀಟ್ ಕಾರ್ನ್ – ಎರಡು ಮುಷ್ಟಿ, ದೊಡ್ದ ಮೆಣಸು – ಒಂದು, ಎಣ್ಣೆ – ನಾಲ್ಕು ಚಮಚ, ಉಪ್ಪು- ರುಚಿಗೆ ತಕ್ಕ ಹಾಗೆ

ತಯಾರಿಸುವ ಕ್ರಮ

ನೆಲಗಡಲೆ ಮತ್ತು ಗಸಗಸೆಯನ್ನು ಬೇರೆಬೇರೆಯಾಗಿ ಹುರಿದು, ಮಿಕ್ಸಿ ಜಾರಲ್ಲಿ ಹಾಕಿಡಿ (ಎಣ್ಣೆ ಹಾಕದೆ). ಒಂದು ಬಾಣಲೆಯಲ್ಲಿ ಎರಡು ಚಮಚ ಎಣ್ಣೆ ಹಾಕಿ, ಅದು ಬಿಸಿ ಆದ ಮೇಲೆ ತೊಳೆದ ಪಾಲಕ್ ಸೊಪ್ಪನ್ನು ಹಾಕಿ ಬಾಡಿಸಿ. ಸುಮಾರು ಐದು ನಿಮಿಷ ಇದು ಒಲೆಯ ಮೇಲಿರಲಿ. ಆಮೇಲೆ ಒಲೆ ಆರಿಸಿ ಇದನ್ನು ತಣಿಯಲು ಬಿಡಿ. ಇದು ಸ್ವಲ್ಪ ತಣ್ಣಗಾದ ಮೇಲೆ ಗಸಗಸೆ ಮತ್ತು ನೆಲಗಡಲೆ ಹಾಕಿರುವ ಮಿಕ್ಸಿ ಜಾರಿಗೆ ಹಾಕಿ. ಜೊತೆಗೆ ಕೊತ್ತಂಬರಿ ಸೊಪ್ಪು, ಕತ್ತರಿಸಿದ ಟೊಮ್ಯಾಟೊ, ಹಸಿ ಮೆಣಸುಗಳನ್ನೂ ಸೇರಿಸಿ ನುಣ್ಣಗೆ ಕಡೆಯಿರಿ. (ಬೇಕಾದರೆ ನೀರು ಸೇರಿಸಬಹುದು. ಪಾಲಕ್ ಸೊಪ್ಪಿನಲ್ಲೇ ಸ್ವಲ್ಪ ನೀರಿರುತ್ತದೆ)

ಬಾಣಲೆಗೆ ಎರಡು ಚಮಚ ಎಣ್ಣೆ ಹಾಕಿ ಕತ್ತರಿಸಿದ ಈರುಳ್ಳಿ, ದೊಡ್ಡ ಮೆಣಸು ಹಾಗೂ ಸ್ವೀಟ್ ಕಾರ್ನ್ಗಳನ್ನು ಒಂದಾದ ಮೇಲೊಂದು ಹಾಕುತ್ತಾ ಸಣ್ಣ ಒಲೆಯಲ್ಲಿ ಹುರಿಯಿರಿ. ಎರಡು ನಿಮಿಷ ಮುಚ್ಚಿಟ್ಟು ಉಪ್ಪು ಹಾಕಿ ಮತ್ತೆ ಮುಚ್ಚಿಡಿ. ಏಳೆಂಟು ನಿಮಿಷ ಬೇಯಲಿ. ಆಮೇಲೆ ಕಡೆದಿರುವ ಮಸಾಲೆಯನ್ನು ಇದಕ್ಕೆ ಸೇರಿಸಿ. (ನೀರು ಬೇಕಾದರೆ ಸೇರಿಸಬಹುದು. ಗಟ್ಟಿಯಾಗಿರಬೇಕಾದರೆ, ನೀರು ಹಾಕುವುದು ಬೇಡ.) ಎರಡು ನಿಮಿಷ ಕುದಿಸಿ ಒಲೆ ಆರಿಸಿ. ಪಾಲಕ್ ಗಸಿ ಈಗ ರೆಡಿ! ಇದು ಚಪಾತಿಯ ಜೊತೆ ನಂಚಿಕೊಳ್ಳಲು ಬಹಳ ಚೆನ್ನಾಗಿ ಸೇರುತ್ತದೆ.

error: Content is protected !!
Share This