ಬೆಂಗಳೂರು ಯಕ್ಷಗಾನ ಪ್ರಿಯರಿಗೆ ಇವರ ಹೆಸರು ಚಿರಪರಿಚಿತ. ಸುಮಾರು ಎಪ್ಪತ್ತರ ದಶಕದಲ್ಲಿ ಬೆಂಗಳೂರಿಗೆ ಹೋಟೇಲ್ ಉದ್ಯಮಿಯಾಗಿ ಬಂದವರು. ಮೂಲತಃ ಪಾವಂಜೆಯವರಾದ ಶಿವರಾಮ ಭಟ್ಟರು ಪ್ರಖ್ಯಾತ ಯಕ್ಷಗಾನ ಕಲಾವಿದ ಕುರಿಯ ವಿಠಲ ಶಾಸ್ತ್ರಿಗಳಿಂದ ಯಕ್ಷಗಾನದ ಹೆಜ್ಜೆ ಕಲಿತವರು. ಬಾಲ್ಯದಿಂದಲೇ ಹಲವು ಮೇರು ಕಲಾವಿದರ ಒಡನಾಟ ಹೊಂದಿ, ಹವ್ಯಾಸಿ ಕಲಾವಿದರಾದರೂ ವೃತ್ತಿಪರರಂತೆ ಪಾತ್ರನಿರ್ವಹಣೆ ಮಾಡುತ್ತಾ ಜನಮನ್ನಣೆ ಗಳಿಸಿದವರು. ಬೆಂಗಳೂರಿನಲ್ಲಿ ಯಕ್ಷಗಾನ ಎಂದಾಗ ಎಲ್ಲರೂ ಬಡಗು ತಿಟ್ಟು ಎಂದೇ ಪರಿಭಾವಿಸುತ್ತಿದ್ದ ಕಾಲದಲ್ಲಿ ತೆಂಕು ತಿಟ್ಟಿನ ದಿಗ್ಗಜರನ್ನು ಬೆಂಗಳೂರಿಗೆ ಕರೆಸಿ ಪ್ರದರ್ಶನಗಳನ್ನು ಕೊಟ್ಟು ತೆಂಕುತಿಟ್ಟು ಯಕ್ಷಗಾನಕ್ಕಾಗಿ ಅಪಾರ ಸೇವೆ ಸಲ್ಲಿಸಿದವರು. ವೃತ್ತಿಪರ ಕಲಾವಿದರ ತಂಡಗಳು ಬೆಂಗಳೂರಿಗೆ ಬಂದಾಗ ಅವರಿಗೆ ನಿಸ್ವಾರ್ಥ ಆಶ್ರಯವನ್ನಿತ್ತ ಮಹನೀಯರು. ಹಲವು ಬಾರಿ ಯಕ್ಷಗಾನದ ಉತ್ಕಟ ಪ್ರೇಮದಿಂದಾಗಿ ಕೈಸುಟ್ಟುಕೊಂಡರೂ ಮತ್ತೆ ಯಕ್ಷಗಾನಕ್ಕಾಗಿಯೇ ಹಾತೊರೆದ ಮಹಾನುಭಾವ. ಬೆಂಗಳೂರಿನ ಹಲವು ಆಸಕ್ತರಿಗೆ ಯಕ್ಷಗಾನದ ಬಾಲಪಾಠ ಹೇಳಿಕೊಟ್ಟವರು. ಕರಾವಳಿ ಯಕ್ಷಗಾನ ಸಂಘದ ಮೂಲಕ ಹಲವಾರು ಯಕ್ಷಗಾನ ಪ್ರದರ್ಶನ, ಸನ್ಮಾನ, ಯಕ್ಷಗಾನ ಚಿಂತನ ಹಾಗೂ ಕಮ್ಮಟಗಳನ್ನು ಏರ್ಪಡಿಸಿದವರು. ಅದ್ಭುದ ಚಿತ್ರ ಕಲಾವಿದರೂ ಹೌದು. ಯಕ್ಷಗಾನದ ಮುಖವರ್ಣಿಕೆಗಳ ಹಲವು ಆಕೃತಿಯ ತಯಾರಿಕೆಯಲ್ಲಿ ಸಿದ್ಧಹಸ್ತರು. ಅಪ್ಪಟ, ಪ್ರಾಮಾಣಿಕ, ನಿಸ್ವಾರ್ಥ ಯಕ್ಷಗಾನ ಪ್ರಿಯರು, ಕಲಾವಿದರು, ಸಂಘಟಕರು ಆಗಿರುವ ಗುರುಗಳಿಗೆ ಶುಭಾಶಯಗಳು.

ಅವರ 70ನೇ ಜನ್ಮದಿನದ ಅಂಗವಾಗಿ ಬೆಂಗಳೂರಿನ ಸರ್ವ ಯಕ್ಷಮಿತ್ರ ಸಂಘಟನೆಗಳ ಸಹಭಾಗಿತ್ವದಲ್ಲಿ “ಈ ಹೊತ್ತು ಪಾವಂಜೆ ಎಪ್ಪತ್ತು- ಶಿವರಾಮಾಭಿನಂದನಂ-2018” ಕಾರ್ಯಕ್ರಮ ಬೆಂಗಳೂರಿನ ವಾಸ್ಕ್ ಯೋಗಕೇಂದ್ರ, ಹಾವನೂರು ಬಡಾವಣೆ, ದಾಸರಹಳ್ಳಿಯಲ್ಲಿ ದಿನಾಂಕ 01-07-2018 ರಂದು ಜರಗಲಿದೆ.

– ವಿಜಯಶಂಕರ ಆಳ್ವ, ಮಿತ್ತಳಿಕೆ

error: Content is protected !!
Share This