– ಡಾ. ಎಂ. ಪ್ರಭಾಕರ ಜೋಶಿ

ಈ ವರ್ಷ ಅದೇನೋ ಯಕ್ಷಗಾನ ರಂಗಕ್ಕೆ ನಷ್ಟದ ಕಾಲ. ಇದೀಗ -ಕಲಾವಿದ, ಅಧ್ಯಾಪಕ, ಸಂಘಟಕ ವಿದ್ವಾನ್ ಪುಚ್ಚಕೆರೆ ಕೃಷ್ಣಭಟ್ಟರ ಅಗಲಿಕೆ. ಕಲೆ, ಶಿಕ್ಷಣಗಳಲ್ಲಿ ಪುಚ್ಚಕೆರೆ- ಅನುಪಮ ಸಾಧಕ.

ಬಂಟ್ವಾಳ-ಮಂಚಿ ಗ್ರಾಮದ ಪುಚ್ಚಕೆರೆಯ ನೂಜಿಬೈಲು ಮನೆತನದ ಭಟ್ಟರು ಬಾಲ್ಯದಲ್ಲೆ ಕಲೆಯ ಸೆಳೆತಕ್ಕೆ ಸಿಕ್ಕವರು. ಹಿರಿಯ ಕಲಾವಿದರಾದ ನೆಡ್ಕೆ ನರಸಿಂಹ ಭಟ್, ದೀವಾಣ ಭೀಮಭಟ್, ಕುರಿಯ ವಿಠಲ ಶಾಸ್ತ್ರಿಗಳ ಆಪ್ತರಾಗಿ, ಶಿಷ್ಯರಾಗಿ ಬೆಳೆದವರು. ಉಡುಪಿಯಲ್ಲಿ ವಿದ್ವತ್ ಅಧ್ಯಯನ ಕಾಲಕ್ಕೆ, ಕಲೆ, ಸಾಹಿತ್ಯಾಸಕ್ತಿ ಬೆಳೆಯಿತು. ಪುಚ್ಚಕೆರೆ ರಾಮಕೃಷ್ಣ ಮಯ್ಯ ಮೊದಲಾದ ಅಂದಿನ ಹಿರಿಯ ಮಾರ್ಗದರ್ಶನದಲ್ಲಿ ಒಳ್ಳೆಯ ಅರ್ಥದಾರಿಯಾದರು. ಅಧ್ಯಾಪಕ ತರಬೇತಿ ಪಡೆದರು.

ಉಡುಪಿ ಸಂಸ್ಕೃತ ಪಾಠಶಾಲೆಯ ಸಹಪಾಠಿ ಕಟೀಲು ಲಕ್ಷ್ಮೀ ನಾರಾಯಣ ಅಸ್ರಣ್ಣರ ಒತ್ತಾಯದಿಂದ ಕಟೀಲು ದುರ್ಗಾಪರಮೇಶ್ವರಿ ಶಾಲೆಗೆ ಬಂದು ಅಲ್ಲಿ ದಶಕಗಳ ಕಲಾ ಅಧ್ಯಾಪಕ, ಯಕ್ಷಗಾನ ಚಟುವಟಿಕೆಗಳ ಸಂಚಾಲಕರಾಗಿ- ತುಂಬ ಹೆಸರು ಗಳಿಸಿದರು. ದುಡಿಮೆಯಿತ್ತರು.

ಚೊಕ್ಕ ಚುರುಕು ಮಾತಿನ, ಲವಲವಿಕೆಯ ಅರ್ಥದಾರಿ ಪುಚ್ಚಕೆರೆ, ಸೊಗಸಾದ ಕುಣಿತದ, ಪ್ರಸಂಗದ ಹಿಡಿತವುಳ್ಳ ಸಮರ್ಥ ವೇಷಧಾರಿ ಕೂಡ. ಅವರ ಅತಿಕಾಯ, ಇಂದ್ರಜಿತು, ಕೃಷ್ಣ, ಕೌರವ, ಅರ್ಜುನ, ಬಲರಾಮ, ಸುಗ್ರೀವ ಪಾತ್ರಗಳಿಗೆ ವಿಶೇಷ ಖ್ಯಾತಿ.

ಕಟೀಲಿನ ಭ್ರಾಮರೀ ಯಕ್ಷಗಾನ ಮಂಡಳಿಯು ಸ್ಥಾಪಕರಲ್ಲಿ ಒಬ್ಬರಾಗಿ, ನಿರ್ವಾಹಕರಾಗಿ ಅವರ ಸೇವೆ, ಅಸಾಮಾನ್ಯ. ಕಟೀಲು ನವರಾತ್ರಿ ಯಾವಾಗಲೂ ಭ್ರಾಮರೀ ಸಪ್ತಾಹಗಳನ್ನು ಅವರು ನಿರ್ವಹಿಸುತ್ತಿದ್ದ ರೀತಿ – ಅಚ್ಚರಿಯದು, ಸದಾ ಕಾರ್ಯನಿರತ, ಸದಾಸಿದ್ಧ, ಪುಚ್ಚಕೆರೆ ಮತ್ತು ಅವರ ತಂಡ. ಕಟೀಲು ಹರಿನಾರಾಯಣ ಆಸ್ರಣ್ಣ ಮಾತಿನಲ್ಲಿ “ಪುಚ್ಚಕೆರೆ ಮಾಸ್ಟರರ ನಿವೃತ್ತಿ, ಕಟೀಲಿನ ಯಕ್ಷಗಾನ ಚಟುವಟಿಕೆಗಳಿಗೆ, ಮಕ್ಕಳ ಮೇಳ, ನವರಾತ್ರಿ ಯಕ್ಷಗಾನಗಳಿಗೆ ದೊಡ್ಡ ನಷ್ಟ.’’

ಅವರ ಸಹೋದ್ಯೋಗಿ ಸಂಶೋಧಕ ವಿದ್ವಾನ್ ಪು. ಶ್ರೀನಿವಾಸ ಭಟ್ಟರು ಹೇಳಿದಂತೆ “ಅಂತಹ ಸಾಮರ್ಥ್ಯ , ಹೃದಯ ಎರಡೂ ಇರುವ ವ್ಯಕ್ತಿ ಅಪೂರ್ವ”. ಕಟೀಲು ಕ್ಷೇತ್ರದ ಯಕ್ಷಗಾನ ಉತ್ಸವಗಳ ಹೊಣೆ ಮತ್ತು ಶಾಲಾಡಳಿತಗಳ ಹೊಣೆಯಿಂದಾಗಿ – ಅವರು, ವ್ಯಕ್ತಿಶಃ ಕಲಾವಿದರಾಗಿ ಭಾಗವಹಿಸುವುದನ್ನು ಕಡಿಮೆ ಮಾಡುತ್ತಾ ಬಂದರು. ಅರ್ಥತ್ ವ್ಯಯಕ್ತಿಕ ಸಾಧನೆ, ಕೀರ್ತಿಗಳನ್ನು ತ್ಯಾಗ ಮಾಡಿದರು.

ಚೈತನ್ಯಮೂರ್ತಿ, ಸದಾಕ್ರಿಯಾಶೀಲ, ಚಟುವಟಿಕೆಯ ಮುದ್ದೆ, ಜೋಕುಗಳ ರಾಶಿ- ಪುಚ್ಚಕೆರೆ ಅವರು ತುಂಬ ಸ್ನೇಹಮಯ, ಒಳ್ಳೆಯ ಆತಿಥೇಯ, ನೈಜ ಕಲಾ ವಿದ್ವತ್ ಅಭಿಮಾನಿ, ಆತ್ಮಪ್ರತ್ಯಯವುಳ್ಳ ವಿನಯವಂತ. ಕಲೆ ಕಲಾವಿದರ ಕುರಿತು ಅಪಾರ ಮಾಹಿತಿ ಇದ್ದ, ಹದವರಿತ ವಿಮರ್ಶಕ, ಹೃದಯವುಳ್ಳ ರಸಿಕ, ಕಟ್ಟುನಿಟ್ಟಿನ ಶಿಸ್ತುಗಾರ. ಉತ್ಕೃಷ್ಟ ಬೋಧಕ. ‘ಇಲ್ಲ ಒಲ್ಲೆ’ ಎಂಬ ಶಬ್ದವಿಲ್ಲದ ಸದಾ ಮುಕ್ತದ್ವಾರದ ಸಹಾಯಹಸ್ತದ ಸಜ್ಜನ.

ಅವರ ನಿವೃತ್ತಿ ಸಂದರ್ಭ ಕಟೀಲಲ್ಲಿ ಜರಗಿದ ಸಾರ್ವಜನಿಕ ಸಂಮಾನ-ಒಂದು ದಾಖಲೆ. ಅವರ ಜನಪ್ರಿಯತೆಗೆ ಸಾಕ್ಷಿ. ಕಟೀಲು ಪ್ರದೇಶದ ಮನೆ ಮನೆಗಳಲ್ಲೂ ಅವರಿಗೆ ದೊರೆತ ಖಾಸಗಿ ಸಂಮಾನಗಳೂ, ಒಂದು ವಿರಳ, ವಿಶೇಷ ಸರಣಿ.

ದುರ್ಲಭವಾಗುತ್ತಿರುವ ಬಹುಮುಖಿತ್ವದ, ನಿಜದ ಮಾಸ್ತರಿಕೆಯ ಕಲಾವಿನೋದಿಗಳ ಅಪೂರ್ವ ಮಾದರಿ, ಪುಚ್ಚಕೆರೆ.

ಅಂತಹವರು ಅವರೊಬ್ಬರೆ.

error: Content is protected !!
Share This