ಪುಸ್ತಕ ಪರಿಚಯ: ವಿದ್ವಾನ್ ಕೊರ್ಗಿ ಶಂಕರನಾರಾಯಣ ಉಪಾಧ್ಯಾಯ, ಬೆಂಗಳೂರು

ಪುಟಗಳು 308                         ಬೆಲೆ : 400 ರೂ

ನೂಪುರ ಭ್ರಮರಿ (ರಿ.)ಮತ್ತು ಕಲಾಗೌರಿ ಸಂಸ್ಥೆಗಳಿಂದ ಪ್ರಕಾಶನ

ಭರತನಾಟ್ಯಬೋಧಿನಿ- ಕನ್ನಡ (ಅಧ್ಯಯನನಿಷ್ಠವಾಗಿ ಮೂಲ ಪಾಠ್ಯ)– ಡಾ. ಮನೋರಮಾ ಬಿ.ಎನ್

ಇಂಗ್ಲಿಷ್ ಗೆ ಭಾಷಾನುವಾದ : ಶಾಲಿನಿ ಪಿ. ವಿಠಲ್ ಮತ್ತು ಡಾ. ದ್ವರಿತಾ ವಿಶ್ವನಾಥ್

ನೀರ್ನಳ್ಳಿ ಗಣಪತಿ ಭಟ್, ಪ್ರವೀಣ್ ಹೆಗಡೆ, ರೇವತಿ ರಘೋತ್ತಮ್, ವಿನೀತ್ ದತ್ತಕುಮಾರ್ (ಚಿತ್ರ ರಚನಕಾರರು)

ಪರೀಕ್ಷೆಗಳನ್ನು ಚೆನ್ನಾಗಿ ಬರೆಯುವುದೆಂದರೆ ವಿಷಯಗಳನ್ನು ಚೆನ್ನಾಗಿ ಅರ್ಥಮಾಡಿಕೊಂಡು ಅರಿವನ್ನು ಹೆಚ್ಚಿಸಿಕೊಳ್ಳುವುದು ಮತ್ತು ಆ ಮೂಲಕ ಸಮಗ್ರ ವ್ಯಕ್ತಿತ್ವ ವಿಕಸನವಾಗುವುದು. ಇದು ಎಲ್ಲಾ ವಿದ್ಯಾಭ್ಯಾಸದ ಗುರಿಯಾಗಬೇಕು. ಹಾಗೆಂದೇ ಈ ಭರತನಾಟ್ಯದ ಅಭ್ಯಾಸ ಮತ್ತು ಪ್ರದರ್ಶನಕ್ಕೆ ಬೇಕಾದ ಶಾಸ್ತ್ರೋಕ್ತ ಪ್ರಯೋಗ ಸಂಸ್ಕಾರವನ್ನು ನೀಡುವುದರತ್ತ ನೂತನ ಕೃತಿ ಭರತನಾಟ್ಯಬೋಧಿನಿಯು ಗಮನವಿರಿಸಿದೆ. ಭರತನಾಟ್ಯವನ್ನು ಕಲಿಯುವ ಪ್ರಾಥಮಿಕ ಪೂರ್ವ/ಪ್ರಾಥಮಿಕ/ಪ್ರಾಥಮಿಕ ಅನಂತರ ಹಂತದವರಿಗಾಗಿ ನೃತ್ಯಾಭ್ಯಾಸ ನಡೆಸಲು ಅನುಕೂಲವಾಗುವಂತೆ, ಅರ್ಥ ಮಾಡಿಸಲು ಸುಲಭವಾಗುವಂತೆ ಈ ಕೃತಿಯನ್ನು ಬರೆಯಲಾಗಿರುವುದು ಸ್ಪಷ್ಟವಾಗುತ್ತದೆ. ಜೊತೆಗೆ ಸಮಗ್ರವಾದ ನೃತ್ಯಾಧ್ಯಯನವು ಸಿದ್ಧಿಸುವಂತೆ ಈ ಪಾಠ್ಯವು ಸೂಕ್ತ ನಿಯಮಗಳನ್ನು ಹೊಂದಿಸಿಕೊಂಡಿದೆ.

ಇದು ಕೇವಲ ಪ್ರಾಥಮಿಕ (ಜೂನಿಯರ್ ಹಂತ)ಕ್ಕಷ್ಟೇ ಸೀಮಿತವಲ್ಲ. ಆಗತಾನೇ ನೃತ್ಯಕ್ಷೇತ್ರದಲ್ಲಿ ಹೆಜ್ಜೆಯಿಡುವವರಿಂದ ಮೊದಲ್ಗೊಂಡು ಒಂದೊಂದೇ ಮೆಟ್ಟಿಲುಗಳನ್ನು ಕಲಿಕೆಯಲ್ಲಿ ಏರುತ್ತಾ ಮಾಧ್ಯಮಿಕ (ಸೀನಿಯರ್ ಹಂತ)ದ ಬಾಗಿಲನ್ನು ಬಡಿಯುವ ಪ್ರಾಥಮಿಕ ಅನಂತರದ ವಿದ್ಯಾಭ್ಯಾಸಿಗಳಿಗೂ ಹೊಂದಬಲ್ಲ ಪಾಠ್ಯ. ಪ್ರಾಥಮಿಕ ಪರೀಕ್ಷೆ ಪೂರ್ಣಗೊಂಡ ಬಳಿಕ ಏಕಾಏಕಿ ಮಾಧ್ಯಮಿಕ ಪರೀಕ್ಷೆಗೆ ತಯಾರಾಗುವ ಹಂತಕ್ಕೆ ವಿದ್ಯಾರ್ಥಿಗಳು ಇನ್ನೂ ಏರಿರುವುದಿಲ್ಲ. ಹೀಗಿದ್ದಾಗ ವಿದ್ಯಾರ್ಥಿಗೆ/ಶಿಕ್ಷಕರಿಗೆ ಈ ಅಂತರದಲ್ಲಿ ನೃತ್ಯಪಾಠ ಏನಿರಬೇಕೆಂಬುದೇ ಸಮಸ್ಯೆಯಾಗಿ ಕಾಣುತ್ತದೆ. ಅದನ್ನು ಬಗೆಹರಿಸುವ ಎಲ್ಲಾ ಮಾರ್ಗೋಪಾಯಗಳನ್ನೂ ಇಲ್ಲಿ ಕಾಣಬಹುದು. ಬದಲಾದ ಕಾಲಕ್ಕನುಗುಣವಾಗಿ ರೂಪಿತವಾಗಿರುವ ವಿದ್ಯಾಭ್ಯಾಸ ಮತ್ತು ಪರೀಕ್ಷಾ ಕ್ರಮ, ಉತ್ತರಪತ್ರಿಕೆಗಳಲ್ಲಿ ಅನುಸರಿಸಬೇಕಾದ ರೀತಿನೀತಿ, ನೃತ್ಯಾಭ್ಯಾಸ ಮತ್ತು ಶಿಕ್ಷಣವ್ಯವಸ್ಥೆಯನ್ನು ಉದ್ದೇಶಿಸಿರುವುದು ಇಲ್ಲಿನ ರಚನಾವಿಧಾನದಿಂದ ಸ್ಪಷ್ಟವಾಗುತ್ತದೆ. ಕ್ಲಪ್ತವಾಗಿ, ಕ್ಷಿಪ್ರವಾಗಿ ವಿಷಯಪ್ರಸಾರ ಮಾಡುವಂತೆ ಬರೆವಣಿಗೆಯ ರೀತಿ ಮೂಡಿಬಂದಿದೆ.

ಇಲ್ಲಿರುವ ಪ್ರಾಥಮಿಕ ಪಾಠ್ಯವಸ್ತು-ವಿಷಯಗಳನ್ನು ಎಲ್ಲರಿಗೂ ಸುಲಭದಲ್ಲಿ ಗ್ರಹಿಸಲು ಅನುಕೂಲವಾಗುವಂತೆ ಅಭಿನಯಾಧಾರಿತವಾಗಿ ವಿಭಾಗಿಸಿ ರಚಿಸಲಾಗಿದೆ. ತರಬೇತಿಯ ಕ್ರಮ, ಅರ್ಥ, ವಿವರಣೆಗಳನ್ನು ಕ್ವಚಿತ್ತಾಗಿ ಅಲ್ಲಲ್ಲಿಯೇ ನೀಡಲಾಗಿದೆ. ಭರತನಾಟ್ಯ ಪ್ರಯೋಗಕ್ಕೆ ಪೂರಕವಾದ ಇತಿಹಾಸ, ಶಾಸ್ತ್ರ ಇತ್ಯಾದಿ ಪಾಠಗಳನ್ನು ನೃತ್ಯಸಂಸ್ಕೃತಿ, ಅಂಗಸಾಧನೆ ಎಂದು ಮತ್ತೆರಡು ವಿಭಾಗದಿಂದ ಕಾಣಲಾಗಿದೆ. ಭರತನಾಟ್ಯ ಕಛೇರಿಗನುಗುಣವಾದ ಪ್ರಯೋಗಮುಖವಾದ ಪ್ರದರ್ಶನವಿಭಾಗವನ್ನು ಮತ್ತೊಂದು ಅಧ್ಯಾಯವಾಗಿಸಲಾಗಿದೆ. ಕರ್ನಾಟಕದ ನೃತ್ಯಸಂಸ್ಕೃತಿಗೆ ಪೂರಕವಾಗುವ ಅಧ್ಯಾಯಗಳನ್ನು ವಿಶೇಷವಾಗಿ ಸೇರಿಸಲಾಗಿದೆ. ಇದು ಮರೆಯಾಗುತ್ತಿರುವ ಕರ್ನಾಟಕ ನೃತ್ಯಸಂಸ್ಕೃತಿಯ ಪುನರ್ದರ್ಶನಕ್ಕೆ ಒಳ್ಳೆಯ ಹೆಜ್ಜೆ. ಜೊತೆಗೆ ಅಡವಿನ ವಿಭಾಗಕ್ರಮಕ್ಕೆ ವೈಜ್ಞಾನಿಕವಾದ, ಸೈದ್ಧಾಂತಿಕವಾದ ಬಲವನ್ನು ದೊರಕಿಸಿಕೊಡಲು ಯತ್ನಿಸಲಾಗಿದೆ. ಸಂಶೋಧನೆಗಳನ್ನು ಪ್ರಯೋಗಸ್ನೇಹಿಯಾಗಿ, ವಿದ್ಯಾರ್ಥಿಪ್ರಿಯವಾಗಿ, ಸಾಮಾನ್ಯಜನರಿಗೆ ಓದಿಕೊಂಡು ಅರ್ಥ ಮಾಡಿಕೊಂಡು ಹೋಗುವ ನೆಲೆಯಲ್ಲಿ ಮಾಡುವ ಪ್ರಯತ್ನವೂ ಈ ಪುಸ್ತಿಕೆಯಲ್ಲಿದೆ.

ಈ ಪಾಠ್ಯದ ವಿಶೇಷತೆಯೇ – ವಿಶೇಷ ಶಿಕ್ಷಣವೆಂಬ ವಿಭಾಗ. ಅದು ಆಯಾ ವಿಷಯದ ಬಗ್ಗೆ ಇನ್ನಷ್ಟು ಆಳವಾಗಿ ತಿಳಿಯಬಯಸುವ ಮತ್ತು ಸಮಗ್ರ ಚಿಂತನೆಗೆ ಅನುವಾಗುವಂತೆ ಯಾವುದೇ ಹಂತದವರಿಗೂ ಉಪಯೋಗಕಾರಿ. ದೀರ್ಘವಾದ ಪ್ರಬಂಧ ಮಾದರಿಯ ಪಾಠ್ಯದಿಂದ ವಿದ್ಯಾರ್ಥಿಗಳು ಅಭ್ಯಾಸವಿಮುಖರಾಗುವ ಸಂಭವನೀಯತೆ ಹೆಚ್ಚು. ಹಾಗೆಂದೇ ಪ್ರಾಥಮಿಕ ಹಂತದಲ್ಲಿರುವ ವಿದ್ಯಾರ್ಥಿಗಳಿಗೆ ಓದಿ ಅರಿತು, ನೆನಪಿನಲ್ಲಿಟ್ಟುಕೊಳ್ಳುವಂತೆ ಪಾಠ್ಯವಿಷಯಗಳನ್ನು ಕ್ರಮವತ್ತಾಗಿ ಚಿಕ್ಕದಾಗಿ ಚೊಕ್ಕದಾಗಿ ಹೊಂದಿಸಲಾಗಿದೆ. ತಿಂಗಳುಗಳ ಆಧಾರದಲ್ಲಿ ವಿದ್ಯಾರ್ಥಿಗಳು ಕಲಿತುಕೊಂಡು ಹೋಗುವಂತೆ ಪಾಠವನ್ನು ರೂಪಿಸುವ ವ್ಯವಸ್ಥೆಯನ್ನೂ ಸೂಚಿಸಲಾಗಿದೆ.

ಕರ್ನಾಟಕದ ಪ್ರಾಥಮಿಕ ಪರೀಕ್ಷೆಗಳಿಗಷ್ಟೇ ಅಲ್ಲದೆ, ಗಂಧರ್ವ ಮಹಾವಿದ್ಯಾಲಯ, ನಾಟ್ಯಶಾಸ್ತ್ರ ಮತ್ತು ಇನ್ನಿತರ ನೃತ್ಯಸಂಬಂಧೀ ಸ್ಪರ್ಧಾತ್ಮಕ / ಪ್ರವೇಶ ಪರೀಕ್ಷೆಗಳಿಗೂ ಸಹಕಾರಿಯಾಗುವಂತೆ ಪಾಠ್ಯವಿದೆ. ಹಾಗಾಗಿ ಕರ್ನಾಟಕವೊಂದಕ್ಕೆ ಈ ಪಾಠ್ಯವು ಸೀಮಿತವಾಗಿರದೆ ಎಲ್ಲಾ ಭಾಷೆ, ಪ್ರದೇಶ, ಹೊರನಾಡಿನ ಕಲಾಭ್ಯಾಸಿಗಳಿಗೂ ಅನುಸರಿಸುವ ಮಟ್ಟಿಗೆ ವಿಸ್ತಾರವುಳ್ಳದ್ದು. ಕನ್ನಡದೊಂದಿಗೇ ಇರುವ ಇಂಗ್ಲಿಷ್ ಅವತರಣಿಕೆಯು ಉಭಯ ವಿಷಯ ಪರಾಮರ್ಶನಕ್ಕೂ, ಭಾಷಾವಿವೇಕಕ್ಕೂ ಮತ್ತು ಭಾಷಾಸೀಮೆಯನ್ನು ವಿಸ್ತರಿಸಿಕೊಳ್ಳುವ ನೆಲೆಗಳಿಗೂ ಅನುಕೂಲಕಾರಿ.

ಸಾಮಾನ್ಯವಾಗಿ ಪ್ರಶ್ನಾವಳಿಗಳನ್ನು ನೀಡುವ ಕ್ರಮವನ್ನು ಪಾಠ್ಯಗಳಲ್ಲಿ ಕಾಣುತ್ತೇವೆ. ಆದರಿಲ್ಲಿ ಪ್ರಶ್ನಾವಳಿಗಳನ್ನು ಬೇಕೆಂದೇ ನೀಡಲಾಗಿಲ್ಲ. ಪ್ರಶ್ನಾವಳಿಗಳನ್ನು ನೀಡಿದರೆ ಕೇವಲ ಪರೀಕ್ಷೆಗೆಂದೇ ವಿದ್ಯಾರ್ಥಿಗಳು ಕಲಿಯುವ ಸಂಭವನಿಯತೆಗಳಿದ್ದು ಸಮಗ್ರ ಶಿಕ್ಷಣದ ಆಯಾಮಗಳು ಕಳೆದುಹೋಗುವ ಕಾರಣಕ್ಕೆಂದು ಆಯಾ ವಿಷಯ/ಪಾಠದ ಮುಂದೆ ಆ ಪಾಠವು ಎಷ್ಟು ಅಂಕಗಳಿಗೆ ಕೇಳಲಾಗುವುದೆಂಬ ಸೂಚನೆಯನ್ನು ಮಾತ್ರ ನೀಡಲಾಗಿದೆ. ಪೂರಕವಾದ ಅತ್ಯವಶ್ಯ ರೇಖಾಚಿತ್ರಗಳನ್ನು ಪರಾಮರ್ಶನಕ್ಕೆಂದು ಒದಗಿಸಲಾಗಿದೆ.

ಭರತನಾಟ್ಯಕ್ಕೆಂದೇ ಶಾಸ್ತ್ರ ಗ್ರಂಥವೊಂದನ್ನು ಬರೆಯಬಹುದು. ಆದರೆ ಅಂತಹ ಶಾಸ್ತ್ರ ಗ್ರಂಥವೊಂದನ್ನು ತಂದರೆ ವಿದ್ಯಾರ್ಥಿಗಳೂ ಓದಿಕೊಳ್ಳುವ ಸಾಧ್ಯತೆಗಳು ಕಡಿಮೆ. ಈವರೆಗೆ ಹಲವು ಶಾಸ್ತ್ರ ಗ್ರಂಥಗಳು, ಅಧ್ಯಯನಪುಸ್ತಿಕೆಗಳು, ಸಂಶೋಧನ ಕೃತಿಗಳು ನೃತ್ಯವನ್ನಾಧರಿಸಿ ಕರ್ನಾಟಕದಲ್ಲಿ ಮತ್ತು ಇಡಿಯ ನೃತ್ಯಪ್ರಪಂಚದಲ್ಲಿ ಸಾಕಷ್ಟು ಬಂದಿವೆ. ನಾಟ್ಯಶಾಸ್ತ್ರ ಮತ್ತು ಅಭಿನಯದರ್ಪಣವನ್ನಾಧರಿಸಿದ ವಿದ್ವದ್ ಪ್ರಸಕ್ತಿಗಳೂ, ಸಂಶೋಧನಾ ಲೇಖನಗಳೂ ಹಲವಿವೆ. ಆದರೆ ವಿದ್ಯಾರ್ಥಿಗಳನ್ನು ಅವು ವ್ಯಾಖ್ಯಾನ/ಟಿಪ್ಪಣಿಗಳ ಸಹಿತ ತಲುಪುವಲ್ಲಿ ಅನೇಕ ತೊಡಕುಗಳು ಎದುರಾಗುತ್ತವೆ. ಶಾಸ್ತ್ರಗ್ರಂಥಗಳಲ್ಲಿರುವ ಎಲ್ಲಾ ವಿಚಾರಗಳು ಇಂದಿನ ನೃತ್ಯಪ್ರಯೋಗದಲ್ಲಿ ಅಳವಡಿಸಲ್ಪಡದೆ ಹೋಗಿರುವುದರಿಂದ ಸಮಕಾಲೀನ ಸಾಧ್ಯತೆ, ವಿದ್ಯಾಭ್ಯಾಸ ಕ್ರಮ ಮತ್ತು ಆಧುನಿಕ ಬದುಕಿನ ಪ್ರೇರಣೆಗಳ ಬಲವೂ ಇಂದಿನ ಭರತನಾಟ್ಯ ಅಧ್ಯಯನಕ್ರಮವನ್ನು ಕಟೆಯುತ್ತವೆ. ಹಾಗೆಂದೇ ಶಾಸ್ತ್ರ ಗ್ರಂಥ ವಿಚಾರಗಳನ್ನು ವಿದ್ಯಾರ್ಥಿಸ್ನೇಹಿಯಾಗಿ, ಪ್ರಯೋಗನಿಷ್ಠವಾಗಿ ಹೇಗೆ ರೂಪಿಸಬಹುದೋ ಆ ಬಗೆಯಲ್ಲಿ ಈ ಕೃತಿಯನ್ನು ಬರೆಯಲಾಗಿದೆ. ಎಷ್ಟೋ ಸಲ ಶಾಸ್ತ್ರವು ಪ್ರಯೋಗಮುಖಿಯಾಗಿ ಅನ್ವಯವಾಗದೇ ಓದಿಗೆ, ಅಧ್ಯಯನಕ್ಕಷ್ಟೇ ಸೀಮಿತಗೊಳ್ಳುತ್ತದೆ. ಆದರಿಲ್ಲಿ ಸಮಕಾಲೀನ ಭರತನಾಟ್ಯ ಕ್ಷೇತ್ರದಲ್ಲಿ ಶಾಸ್ತ್ರವು ಪ್ರಯೋಗವಾಗಿ ಅನ್ವಯವಾಗುವ ವಿವೇಚನೆ ಮತ್ತು ಪ್ರಯೋಗದಲ್ಲಿ ಲುಪ್ತವಾಗುತ್ತಿರುವ ಶಾಸ್ತ್ರಾಂಶಗಳನ್ನೂ ಹೇಳಲಾಗಿದೆ.

ಬಹಳ ವರುಷಗಳಿಂದ ಕರ್ನಾಟಕದಲ್ಲಿ ನೃತ್ಯಪರೀಕ್ಷೆ ಮತ್ತು ನೃತ್ಯ ಪಾಠ್ಯಪುಸ್ತಕದ ಸುಧಾರಣೆ, ತಪ್ಪು ತಿದ್ದುಪಡಿಗಳ ಕುರಿತಾಗಿ ಹಲವು ವಾದ-ವಿವಾದ, ಅರಣ್ಯರೋದನ ಕೇಳಿಬರುತ್ತಿರುವುದೂ ಸರಿಯಷ್ಟೇ. ಈ ಹಿನ್ನೆಲೆಯಲ್ಲಿ ಈ ಪಾಠ್ಯಪುಸ್ತಿಕೆಯು ಅಲಭ್ಯವಾಗುತ್ತಿರುವ ಅನೇಕ ಉತ್ತರಗಳನ್ನು ಯತೋಚಿತವಾಗಿ ದೊರಕಿಸಿಕೊಡಬಹುದೆಂಬ ವಿಶ್ವಾಸವಿದೆ. ಪ್ರಾಮಾಣಿಕವಾಗಿ ನೃತ್ಯಾಭ್ಯಾಸ ಮತ್ತು ಕಲಿಕೆಯನ್ನೇ ಗುರಿಯಾಗಿಸಿರುವ ಗುರುಗಳಿಗೆ, ಶಿಕ್ಷಕರು, ವಿದ್ಯಾರ್ಥಿಗಳು ಮತ್ತು ಪೋಷಕರುಗಳಿಗೆ ಈ ಪಾಠ್ಯದಿಂದ ಪ್ರಯೋಜನವಾದೀತು. ನೃತ್ಯಕಲಿಕೆಯಲ್ಲಿ ಆಗುವ ಉಭಯನೆಲೆಯ ಮನಃಕ್ಲೇಶಗಳಿಗೆ ಇದರಿಂದ ಸಮಾಧಾನ ದೊರಕಬಹುದು. ನೃತ್ಯಾಭ್ಯಾಸವು ಯುಕ್ತ ಮಾರ್ಗದಿಂದ ಕ್ರಮವತ್ತಾಗಿ ಸಾಗುವಂತೆ ವ್ಯವಸ್ಥಿತ ನೆಲೆಯನ್ನು ಕಂಡುಕೊಳ್ಳುವಂತೆ ಮಾಡಲಾದ ಒಂದು ಯೋಚನೆಯಿದು. ಈ ಪ್ರಸಕ್ತಿಯು ಒಂದೆರಡು ವರುಷಗಳಲ್ಲಿ ಸಾಧಿತವಾಗುವುದೇನಲ್ಲ. ಕಲಿಕೆಯಲ್ಲಿ, ಪರೀಕ್ಷೆಗಳಲ್ಲಿ ಇದನ್ನು ಪರಿಪಾಲಿಸಿದರೆ ವಿಳಂಬವಾದರೂ ಸರಿಯೇ, ದೀರ್ಘಕಾಲದ ವರೆಗೆ ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ಗುಣಾತ್ಮಕ ಬದಲಾವಣೆ ಸಾಧನೆಯಾಗಬಹುದು.

error: Content is protected !!
Share This