‘ಇವೆಲ್ಲದರ ನಡುವೆ ಯಕ್ಷಗಾನ ತನ್ನ ಅಸ್ತಿತ್ವವನ್ನು ಉಳಿಸಿಕೊಂಡಿದ್ದು, ಕಮ್ಮಟದಲ್ಲಿ ಅದರ ಸೂಕ್ಷ್ಮಗಳನ್ನು ಅರಿತು ಸತ್ವವನ್ನು ವಿಸ್ತರಿಸುವ ಕಾರ್ಯ ಆಗಬೇಕಿದೆ’ ಎಂದು ಯಕ್ಷಗಾನ ವಿದ್ವಾಂಸ ಡಾ. ಎಂ. ಪ್ರಭಾಕರ ಜೋಶಿ ಅಭಿಪ್ರಾಯ ಪಟ್ಟರು.

ಕೊಣಾಜೆ ಮಂಗಳೂರು ವಿಶ್ವವಿದ್ಯಾಲಯ ಯಕ್ಷಗಾನ ಕಲಾಕೇಂದ್ರದಲ್ಲಿ ಬುಧವಾರ ನಡೆದ ತೆಂಕುತಿಟ್ಟು ಯಕ್ಷಗಾನ ಹಿಮ್ಮೇಳದ ಕಮ್ಮಟದ ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು.

ಕರ್ನಾಟಕ ಯಕ್ಷಗಾನ ಅಕಾಡೆಮಿ ಬೆಂಗಳೂರು, ಡಾ.ಪಿ. ದಯಾನಂದ ಪೈ ಮತ್ತು ಪಿ. ಸತೀಶ್ ಪೈ ಯಕ್ಷಗಾನ ಅಧ್ಯಯನ ಕೇಂದ್ರ ಮಂಗಳೂರು ವಿಶ್ವವಿದ್ಯಾಲಯ ಮತ್ತು ಕಲಾಗಂಗೋತ್ರಿ ಯಕ್ಷಗಾನ ಕೇಂದ್ರ ಇವರ ಸಂಯುಕ್ತ ಆಶ್ರಯದಲ್ಲಿ ಕಮ್ಮಟ ಆಯೋಜಿಸಲಾಗಿತ್ತು.

‘ಬೆಳೆದು ನಿಂತ ಪ್ರತಿಯೊಂದು ಕಲೆಯಲ್ಲಿಯೂ ಕಾಲಬಾಧೆಗೊಳಗಾದ ದೋಷಗಳು ಇದ್ದೇ ಇರುತ್ತದೆ. ಸಮರ್ಥ ಕ್ಷೇತ್ರದಲ್ಲಿ ಪ್ರವೃತ್ತಿಗೆ ವಿರುದ್ಧವಾದ ಕೃತಿಗಳು ಇರುತ್ತವೆ. ಬ್ಲೈಂಡ್ ಸ್ಪಾಟ್‌ಗಳನ್ನು ಶಾಸ್ತ್ರೀಯ ಅನ್ನುತ್ತಾ ಒಪ್ಪಿಕೊಳ್ಳುವ ಕಾರ್ಯಗಳು ಮುಂದುವರಿಯಬಾರದು. ತಜ್ಞರು ಸರಿಯಾದುದನ್ನು ಕಾಲಕಾಲಕ್ಕೆ ತಿದ್ದುವ ಜವಾಬ್ದಾರಿಯನ್ನು ಹೊರಬೇಕು’ ಎಂದರು.

ಕಮ್ಮಟದ ಉದ್ಘಾಟನೆಯನ್ನು ನೆರವೇರಿಸಿ ಮಾತನಾಡಿದ ಪ್ರಭಾರ ಕುಲಪತಿ ಡಾ.ಕಿಶೋರ್ ಕುಮಾರ್ ಸಿ.ಕೆ ಅವರು, ಯಕ್ಷಗಾನವನ್ನು ಶೈಕ್ಷಣಿಕವಾಗಿ ಬೆಳೆಸಬೇಕೆಂದು, ಅದಕ್ಕೆ ಅನುಗುಣವಾಗಿ ಕೇಂದ್ರ ಹಿರಿಯ ಕಲಾವಿದರನ್ನು, ಕ್ಷೇತ್ರದ ತಂತ್ರಜ್ಞರನ್ನು ಒಟ್ಟುಗೂಡಿಸಿ ನಡೆಸಿದ ಈ ಹಿಮ್ಮೇಳ ಕಮ್ಮಟ ಮಹತ್ವದ್ದು ಎಂದರು.

ಕರ್ನಾಟಕ ಯಕ್ಷಗಾನ ಅಕಾಡೆಮಿಯ ಬೆಂಗಳೂರು ಇದರ ಅಧ್ಯಕ್ಷ ಪ್ರೊ.ಎಂ.ಎ. ಹೆಗಡೆ ಅಧ್ಯಕ್ಷತೆಯನ್ನು ವಹಿಸಿ ಯಕ್ಷಗಾನದ ಹಿಮ್ಮೇಳವನ್ನು ಕುರಿತು ವಿಶೇಷ ಚರ್ಚೆಗಳು ನಡೆದು ಸೂಕ್ತವಾದ ಶಿಸ್ತು ಬರಬೇಕು. ಈ ಕುರಿತು ಚಿಂತನೆಗಳು ಹೆಚ್ಚಬೇಕು ಎಂದರು. ಕರ್ನಾಟಕ ಯಕ್ಷಗಾನ ಅಕಾಡೆಮಿ ಸದಸ್ಯ ಹಾಗೂ ಕಮ್ಮಟದ ನಿರ್ದೇಶಕ ಬೊಟ್ಟಿಕೆರೆ ಪುರುಷೋತ್ತಮ ಪೂಂಜ, ಕಲಾಗಂಗೋತ್ರಿ ಉಚ್ಚಿಲ ಇದರ ಅಧ್ಯಕ್ಷರಾದ ಯು.ಸತೀಶ್ ಕಾರಂತ ಯಕ್ಷಗಾನ ಅಧ್ಯಯನ ಕೇಂದ್ರದ ಸಂಯೋಜಕ ಡಾ. ಧನಂಜಯ ಕುಂಬ್ಳೆ ಇದ್ದರು. ಸುನಿಲ್ ಪಲ್ಲಮಜಲ್ ವಂದಿಸಿದರು.

‘ಕಲಾವಿದರ ಸಂವಾದ’
ಕಮ್ಮಟದಲ್ಲಿ ಯಕ್ಷಗಾನದ ಹಿರಿಯ ವಿದ್ವಾಂಸರು ಮತ್ತು ಪ್ರಸಿದ್ಧ ಹಿಮ್ಮೇಳ ಕಲಾವಿದರ ಉಪಸ್ಥಿತಿ ಗಮನ ಸೆಳೆಯಿತು. ಡಾ. ಶಿಮಂತೂರು ನಾರಾಯಣ ಶೆಟ್ಟಿ, ಬಲಿಪ ನಾರಾಯಣ ಭಾಗವತ, ಕೆ.ಎಂ. ರಾಘವ ನಂಬಿಯಾರ್, ಸೂರಿಕುಮೇರು ಗೋವಿಂದ ಭಟ್, ಕುರಿಯ, ಸದಾನಂದ ಐತಾಳ್, ಕರ್ಗಲ್ಲು, ಪದ್ಯಾಣ ಶಂಕರನಾರಾಯಣ ಭಟ್, ಪುತ್ತಿಗೆ ರಘುರಾಮ ಹೊಳ್ಳ, ದಿನೇಶ್ ಅಮ್ಮಣ್ಣಾಯ, ಲೀಲಾವತಿ ಬೈಪಾಡಿತ್ತಾಯ, ಜಬ್ಬಾರ್ ಸಮೊ, ಪಟ್ಲ ಸತೀಶ್, ರವಿಚಂದ್ರ ಕನ್ನಡಿಕಟ್ಟೆ ಸೇರಿದಂತೆ 150 ಕ್ಕೂ ಅಧಿಕ ಕಲಾವಿದರು ಸಂವಾದದಲ್ಲಿ ಪಾಲ್ಗೊಂಡರು.

ಕಲೆಗಳ ಮಿಶ್ರಣ
“ಆಧುನಿಕತೆ ಪ್ರಭಾವದಿಂದ ಸಂಪರ್ಕ ಬೆಳೆದು ಕಲೆಗಳು ಮಿಶ್ರಣವಾಗುತ್ತಿದೆ. ರಿಯಾಲಿಟಿ ಷೋ, ಸಾಮಾಜಿಕ ಜಾಲತಾಣ, ಮಾಧ್ಯಮಗಳ ಪ್ರಭಾವದಿಂದ ಕಲೆಗಳ ಮೂಲವನ್ನು ಕಳೆದುಕೊಳ್ಳುತ್ತಿದ್ದೇವೆ.” ಎಂದು ಪ್ರಭಾಕರ ಜೋಶಿ ಹೇಳಿದರು.

error: Content is protected !!