“ ಎಂಕ್ ದಾನೆ ಮಗಾ,  ಪರ್ಕಟ್ ಅಂಗಿಗ್ ಕೈ ಪಾಡ್ನವುಲೇ ಕಿಸೆಗೆ”

ಈ ಮಾತು ಕೇಳಿದಾಗ ಗಂಭೀರ ಸನ್ನಿವೇಶದಲ್ಲೂ ಪ್ರೇಕ್ಷಕ ಮನಸ್ಸಿನೊಳಗೆ ನಕ್ಕುಬಿಡುತ್ತಾನೆ. ಹಾಗೆ ನಕ್ಕುಬಿಡುವ ಹಾಸ್ಯದ ಸನ್ನಿವೇಶವಾದರೆ ಇದು ಅತಿಶಯವಲ್ಲ. ಆದರೆ ಇದು ಕಾಡ ಮಲ್ಲಿಗೆ ಎಂಬ ತುಳು ಪ್ರಸಂಗದ ಗಂಭೀರ ಸನ್ನಿವೇಶವೊಂದರಲ್ಲಿ ಚೋಂಕ್ರ ಎಂಬ ಅರಮನೆಯ ಆಳು  ನೋವಿನಿಂದ ಹೇಳುವ ಮಾತು. ದಯನೀಯತೆಯಲ್ಲೂ ವಿಡಂಬನೆಯನ್ನು ತೋರಿಸುವ ಈ ಗಾದೆ ಮಾತಿನ ಜನಕ ಬೇರಾರೂ ಅಲ್ಲ. ಪ್ರಸಿದ್ಧ ಹಾಸ್ಯಗಾರ, ರಸಿಕ ವಿಶಾರದ ಎಂಬ ಅನ್ವರ್ಥ ನಾಮದ ಮಿಜಾರು ಅಣ್ಣಪ್ಪ. ಬಾಯಿ ತೆರೆದರೆ  ಹಾಸ್ಯದೊಂದಿಗೆ ಅಸ್ಖಲಿತವಾಗಿ ಉದುರಿ ಬೀಳುವ ಶುದ್ದ ಜಾನಪದ ಅಣಿಮುತ್ತುಗಳು ಕರ್ನಾಟಕ ಮೇಳದ ಆಟವನ್ನು ಕಂಡು ಅನುಭವಿಸಿದವರು ಮರೆಯುವುದಕ್ಕೆ ಸಾಧ್ಯವಿಲ್ಲ.  ಕೆಲವಂತೂ ಅದು ಶುದ್ದ ಮಿಜಾರು ಸೃಷ್ಟಿ ಎಂದರೆ ತಪ್ಪಾಗಲಾರದು. ಸಹಜ ಮಣ್ಣಿನ ಪ್ರತಿಭೆ ಎಂದರೆ ಇದುವೆ ಅಲ್ಲವೇ?

ಹಾಸ್ಯಕ್ಕೊಂದು ಅಣ್ಣಪ್ಪನೆಂದರೆ ಅದು ಮಿಜಾರು.  ಒಂದು ದೊಗಲೆ ಅಂಗಿ ಇನ್ನೊಂದು ಕಚ್ಛೆ ಮತ್ತೊಂದು ತಲೆಗೆಗೆ ದಪ್ಪಗೆ ಸುತ್ತಿದ ಮುಂಡಾಸು… .ಕಾಡ ಮಲ್ಲಿಗೆ ಪ್ರಸಂಗದಲ್ಲಿನ ಚೋಂಕ್ರನ ಪಾತ್ರ ಸಾವಿರ ಸಾವಿರ ಸಂಖ್ಯೆಯ ಕಲಾ ರಸಿಕರನ್ನು ಉನ್ಮೇಷಗೊಳಿಸಿದ ಪಾತ್ರ. “ತಾರಾಮೌಲ್ಯ” (ಸ್ಟಾರ್ ವ್ಯಾಲ್ಯು)  ಎಂದು ನಾವು ಏನನ್ನು ಕರೆಯುತ್ತೇವೆಯೋ  ಅದು  ಅದ್ಧೂರಿಯ ಆಡಂಬರದಲ್ಲಿ ಇಲ್ಲ ಎಂದು ತೊರಿಸಿಕೊಟ್ಟದ್ದು ಮಿಜಾರು ಅಣ್ಣಪ್ಪನವರು. ಸುಕ್ಕು ಕಟ್ಟಿದ ಕೈ,  ತೊಗಲು ಅಂಟಿಸಿದಂತಹ ಮುಖ ಬಾಗಿನಿಂತುಕೊಂಡ ಅಂಗಭಂಗಿಯ ಸಣಕಲು ಶರೀರ ..!!!  ಇಡೀ ಸಭೆಯನ್ನು ತನ್ನ ನಿಯಂತ್ರಣದಲ್ಲಿ ತರುತ್ತದೆ ಎಂದರೆ ಸ್ವಾಮಿ ಅದೇನು ಸಾಮನ್ಯವೇ?

ಇಂದೀಗ ದಶಕದ ಹಿಂದಿನ ಪುರಾತನ ಹಾಸ್ಯದ ಕೊಂಡಿ ತನ್ನ ಹಿಡಿತವನ್ನು ಸಡಿಲಿಸಿ  ಕಳಚಿಕೊಂಡಿದೆ. ಹೀಗೆ ಒಂದು ಭವ್ಯ ಇತಿಹಾಸದ ಅಂತಿಮ ಪುಟವೂ ದಾಖಲಾಗಿಬಿಟ್ಟದ್ದು ಯಕ್ಷಕಲಾರಸಿಕರ ಹೃದಯವನ್ನು ಭಾರಗೊಳಿಸಿದೆ.

ಎಪ್ಪತ್ತು ಎಂಭತ್ತರ ದಶಕದ ಕರ್ನಾಟಕ ಮೇಳದ ಆಟ ಎಂದ ತಕ್ಷಣ ಅಬಾಲ ವೃದ್ದರಿಗೆ ಕಂಡುಬರುವ ಮುಖಗಳಲ್ಲಿ ಮಿಜಾರು ಚಹರೆಯೂ ಒಂದು. ಅಂದು ಹಲವರು ಆಟ ಆರಂಭವಾಗುವ ಮೊದಲು ಚೌಕಿಯಲ್ಲಿ ಇಣುಕಿ ಮಿಜಾರು ಹಾಜರಾತಿಯನ್ನು ಖಚಿತ ಪಡಿಸಿಕೊಂಡು ರೋಮಾಂಚನ ಅನುಭವಿಸುವುದನ್ನು ಕಣ್ಣಾರೆ ಕಂಡಿದ್ದೇನೆ.  ಕೇವಲ ತನ್ನ ನಿಲುವಿನಂದಲೇ ನಗುವನ್ನು ಉಕ್ಕಿಸಬಲ್ಲ ಸಾಮಾರ್ಥ್ಯ ಮಿಜಾರು ಅಣ್ಣಪ್ಪನವರಂತೆ ಬೇರೆ ಯಾವ ಕಲಾವಿದನಲ್ಲೂ ನಾನು ಕಂಡಿಲ್ಲ ಎಂದರೆ ಅದು ಅತಿಶಯವಾಗಲಾರದು. ಓಟದ ಸ್ಪರ್ಧಾಳುಗಳು ಸೀಟಿ ಊದುವ ಮೊದಲೇ ಓಡಲು ತೊಡಗುವಂತೆ, ಇವರು ಮಾತನಾಡುವುದಕ್ಕೆ ತೊಡಗುವ ಮೊದಲೇ ಸಭೆ ನಗುವುದಕ್ಕೆ ಆರಂಭಿಸುತ್ತದೆ. ಆಲ್ಲಿ ಹಾಸ್ಯವಿದ್ದೇ ಇರುತ್ತದೆ ಎಂಬ ಖಿಚಿತ ವಿಶ್ವಾಸ ಸಭೆಯ ಪ್ರೇಕ್ಷಕನದ್ದು.

ತುಳು ಪ್ರಸಂಗವೆಂದರೆ ಸ್ವಲ್ಪ ಮಡಿವಂತರಿಂದ ದೂರವಿದ್ದ ಕಾಲವದು. ’ತುಳು ವಾ….’ ಎಂದು ಮೂಗು ಮುರಿದು ರಾಗ ಎಳೆಯುವಲ್ಲಿ  ಮಿಜಾರು ಹಾಸ್ಯ ಮೊದಲು ನೆನಪಿಗೆ ಬಂದು ಎಲ್ಲ ಪ್ರತಿಬಂಧಕವನ್ನು ಮೀರಿ ಆಟದ ಟೆಂಟೆನೊಳಗೆ ಸೆಳೆಯಲ್ಪಡುತ್ತದೆ. ಕಣ್ಣಿಗೆ ಕಾಣುವ ನಿಲುವು ಅಂಗ ಭಂಗಿಯ ಮಾತು ಹಾಗಿರಲಿ…ಕೇವಲ ಧ್ವನಿಯನ್ನು ಕೇಳುವಾಗಲೂ ಶುದ್ದ ಭಾಷಾಪರಿಜ್ಞಾನದ ಮಾತುಗಳಿಗೆ ಮೌಲ್ಯವನ್ನು ಕಟ್ಟುವುದು ಸಾಧ್ಯವಾಗುವುದಿಲ್ಲ.  ಕಾಡ ಮಲ್ಲಿಗೆ ಚೋಂಕ್ರ ಎಂಬ ಪಾತ್ರ ಆ ಪ್ರಸಂಗದ ಹಲವು ಆಕರ್ಷಣೆಗಳಂತೆ ಇದು ಒಂದಾಗಿದ್ದರೂ ಉಳಿದ ಪಾತ್ರಗಳಂತೆ ವೈಭವೀಕರಿಸಲ್ಪಡುವುದಿಲ್ಲ. ಆದರೂ ಅದಕ್ಕೆ ತಾರಾಮನ್ನಣೆ ಸಿಗುವುದರಲ್ಲಿ ಮಿಜಾರು ಪ್ರತಿಭೆ ಬಹಳಷ್ಟು ಕೆಲಸ ಮಾಡುತ್ತದೆ. ಇದು ಕೇವಲ ಒಂದು ಪಾತ್ರಕ್ಕಷ್ಟೇ ಸೀಮಿತವಲ್ಲ. ಹಲವು ಪೌರಾಣಿಕ ಪ್ರಸಂಗಗಳು ಒಂದು ಕಾಲದಲ್ಲಿ ಇವರ ಅನಿವಾರ್ಯತೆಯನ್ನು ಹೇಳುತ್ತಿತ್ತು. ನಳದಮಯಂತಿಯ ಬಾಹುಕ ಇದರಲ್ಲಿ ಒಂದು.  ಮಾಗಧವಧೆಯ ಶ್ರೀಕೃಷ್ಣ ಬ್ರಾಹ್ಮಣನಾಗಿ ಬರುವ ಪಾತ್ರವನ್ನು ಬಹಳ ಸುಂದರವಾಗಿ ಪ್ರಸ್ತುತ ಪಡಿಸಿದ್ದನ್ನು ಕಣ್ಣಾರೆ ಕಂಡಿದ್ದೇನೆ. ಹೀಗೆ ಹತ್ತು ಹಲವು ಪಾತ್ರಗಳು ಇರಬಹುದು. ಅವುಗಳಲ್ಲಿ ಬಹಳಷ್ಟು ಅನಾಮಧೇಯವಾಗಿ ಎಲ್ಲೋ ನೆನಪಿನಾಳದಲ್ಲಿ ಹುದುಗಿದ್ದರೆ ಅವುಗಳು ಪರ್ಯಾಯವಾಗಿ ಮಿಜಾರು ಮುಖದಿಂದಲೇ ನೆನಪಿಗೆ ಬರುತ್ತದೆ.

ಮಿಜಾರು ಹಾಸ್ಯ ಎಂದರೆ ಅದು ಶುದ್ದ ಜಾನಪದ ಹಾಸ್ಯ. ಸರಳವಾದ ಉಪಮೆಯ ಕಲ್ಪನೆಗಳು. ಪರಿಶುದ್ದ ಉಚ್ಚಾರ.ಅದರಲ್ಲೂ ತುಳು ಭಾಷೆಯ ಸೊಗಸು ಕೇಳುವುದೇ ಮಧುರ ಅನುಭವ. ಅದೆಂತಹ ಪಾಂಡಿತ್ಯವೋ ಬೆರಗಾಗಿಬಿಡುತ್ತದೆ. ಇವರ ಹಾಸ್ಯಗಳಲ್ಲಿ ಸಂಪ್ರದಾಯವೋ ಶಾಸ್ತ್ರೀಯತೆಯೋ ಅದಾವ ಗೋಜಿಗೂ ಹೋಗದ,  ಮನುಷ್ಯ ಜೀವನದ ವಿಡಂಬನೆಗಳೇ ಹಾಸ್ಯದ ರೂಪಲ್ಲಿ ರಂಗದಲ್ಲಿ ಹಾಸುಹೊಕ್ಕಾಗುತ್ತದೆ. ಸರಳವಾದ ಹಾಸ್ಯ ಗಂಭೀರ ಚಿಂತನೆಗಳೊಂದಿಗೆ  ರಂಗದ ಮೇಲಿನ ಸನ್ನಿವೇಶಗಳಿಗೆ ಅಡಿಗೆರೆಗಳನ್ನು ಎಳೆಯುತ್ತಿದ್ದರೆ ಎಂತಹ ಪ್ರಸಂಗಗಳೂ ಕಳೆಕಟ್ಟುತ್ತವೆ. ಕೆಲವೊಮ್ಮೆ ಇವರ ಹಾಸ್ಯ ಮತ್ತು ಪಾತ್ರ ಪೋಷಣೆ ಸಂಪ್ರದಾಯವನ್ನು ಮೀರಿದಂತೆ ವಿಮರ್ಶೆಗೆ ಒಳಗಾದರೂ ಹಾಸ್ಯವೆಂಬುದು ಹಲವು ಸಲ ವಿಮರ್ಶೆಗೆ ಅತೀತವಾಗಿ ಇರಬೇಕು ಎಂದು ಅನ್ನಿಸುವುದು,  ಅದರ ಅನಿವಾರ್ಯತೆಯಿಂದ. ಆದರೆ ಮಿಜಾರು ಹಾಸ್ಯಗಳು ಹೆಚ್ಚು ಅನಿವಾರ್ಯತೆಯನ್ನು ಸೃಷ್ಟಿಸುತ್ತದೆ. ಅದಕ್ಕೆ ಕಾರಣ ಮಿಜಾರು ಹಾಸ್ಯದ ಗಟ್ಟಿತನವೇ ಕಾರಣ. ಕಥಾಹಂದರವೋ ಸನ್ನಿವೇಶವೋ ಅದಕ್ಕೊಪ್ಪುವ ಪಾತ್ರ ಪೋಷಣೆಯೋ ಮಿಜಾರು ವಹಿಸುವ ಪಾತ್ರಗಳಲ್ಲಿ ಪ್ರತಿಯೊಂದು ಅನನ್ಯ ಸಂಬಂಧಗಳನ್ನು ಹೊಂದಿರುತ್ತದೆ. ರಂಗದ ಮೇಲೆ ಇವು ಸಕ್ರಿಯವಾಗುವಾಗ ಪ್ರೇಕ್ಷಕ ಎಲ್ಲವನ್ನೂ ಮರೆತು ಪಾತ್ರದೊಂದಿಗೆ ವಲೀನವಾಗಿ ಪಾತ್ರದ ಬಗ್ಗೆ ಮಾತ್ರವೇ ಯೋಚಿಸುತ್ತಾನೆ. ಇದು ಮಿಜಾರು ಪ್ರತಿಭೆಯ ಸೆಳೆತ ಎನ್ನಬೇಕು. ಹಾಗಾಗಿಯೇ ತುಳು ಪ್ರಸಂಗಕ್ಕೆ ಮಿಜಾರು ಹೆಚ್ಚು ಅನಿವಾರ್ಯವಾಗಿ ಎಲ್ಲರನ್ನೂ ಆಕರ್ಷಿಸುತ್ತದೆ.

ಆರಂಭದಿಂದಲೇ ಒಂದು ಪಂಚ್ ಹಾಸ್ಯವನ್ನು ಕೊಡುವುದು ಇವರ ಅದ್ಭುತ ಶೈಲಿಯಲ್ಲಿ ಒಂದು. ಕಾನದ ತನಿಯೆ ಎಂಬ ಪ್ರಸಂಗದಲ್ಲಿ ಕಾಡಿನ ಬದಿಯ ತನಿಯ ನೆಂಬ ಪಾತ್ರ ಆರಂಭವಾಗುತ್ತದೆ. ಇಲ್ಲಿ ಪರದೆ ಸರಿದ ಕೂಡಲೇ ಮಿಜಾರು ವೃದ್ದ ಒಂದು ಕಾಲು ಕೆಳಗೆ ಹಾಕಿ ಮತ್ತೊಂದನ್ನು ಮೇಲೆ ಮಡಿಸಿ ಕುಳಿತಿದ್ದು ಮಾತಿಗೆ ತೊಡಗುವುದು ಹೀಗೆ…” ಹೂಂ ಈ ದಾಯೆ ನೇಲುನೂ…ಮಿತ್ತ್ ಕುಲ್ಲು…” ಎಂದು ಕೆಳಗೆ ಇಳಿಬಿಟ್ಟಿರುವ ಕಾಲನ್ನು ಮೇಲೆತ್ತಿ ಇಡುತ್ತಾರೆ. ಸಹಜವಾಗಿ ಹಾಸ್ಯದ  ನಿರೀಕ್ಷೆಯಲ್ಲಿದ್ದ ಸಭೆ ಕೇಕೆ ಹಾಕಿ ನಗುವಕ್ಕೆ ಆರಂಭಿಸುತ್ತದೆ. ಇದರ ಸಂಕೇತಾರ್ಥ ಪಾತ್ರದಲ್ಲೂ ಮತ್ತೆ ವ್ಯಕ್ತವಾಗುವುದು ಬೇರೆ ವಿಚಾರ.

ಆರಂಭದಲ್ಲಿ ಬಣ್ಣದ ವೇಷಧಾರಿಯಾಗಿದ್ದರು ಎಂದು ಕೇಳಿದ್ದೆ. ಆದರೆ ನಂತರ ಹಾಸ್ಯಕ್ಕೆ ಅನ್ವರ್ಥವಾಗಿ ಬೆಳೆದದ್ದು ಇತಿಹಾಸ.  ಕರ್ನಾಟಕ ಮೇಳದ ಕರಪತ್ರ ಕಂಡಾಗ, ಆ ಮೇಳದಲ್ಲಿನ ದೈತ್ಯ ಪ್ರತಿಭೆಗಳು ಅದೆಷ್ಟೋ ಇರಬಹುದು, ಆದರೆ ಮೊದಲು ಕಂಡುಬರುವ ಮುಖವೆಂದರೆ ಅದು ಮಿಜಾರು ಚಹರೆ. ಇದಕ್ಕೆ ಕಾರಣ ಮಿಜಾರು ತನ್ನ ಪಾತ್ರಗಳಿಂದ ಜನಜೀವನಕ್ಕೆ ಹತ್ತಿರವಾಗುವ ರೀತಿ. ಶುದ್ದ ಜಾನಪದ ಹಾಸ್ಯ, ಗಾದೆಗಳು, ಉಪಮೆಗಳು, ಸರಳವಾದ ಸುಂದರವಾದ ಸಂಭಾಷಣೆ ಇವುಗಳಿಗೆಲ್ಲ ಹೊಂದಿಕೆಯಾಗುವ ಅವರ ಸ್ವರ ಭಾರ ಎಲ್ಲವನ್ನೂ ಸೇರಿಕೊಂಡ ಮೊನಚು ಹಾಸ್ಯ ಇಂತಹ ಮಿಜಾರು ಪಾತ್ರಗಳಿಗೆ ಅನ್ಯರನ್ನು ಹೋಲಿಸುವುದು ಕಠಿಣವಾದ ಕೆಲಸ. ಇಂದು ಹಾಸ್ಯಗಳಿಗೆ ಪ್ರಸಂಗಗಗಳಲ್ಲಿ ತಾರಾಮೌಲ್ಯ ವಿದ್ದರೂ ಅದು ಮೌಲ್ಯವನ್ನು ಕಂಡುಕೊಳ್ಳುವ ಅಭಿರುಚಿಯನ್ನು ಹೊಂದಿಲ್ಲ. ಹಾಸ್ಯಕ್ಕಾಗಿ ಬಗೆ ಬಗೆಯ ಸರ್ಕಸ್ ನ ಸರಕುಗಳ ನೈಪುಣ್ಯತೆಯೊಂದೆ ಕಾಣುತ್ತದೆ.  ಕಲೆಯಲ್ಲಿ ಸದಭಿರುಚಿ ಅಂತೆಯೇ ಸದಭಿರುಚಿಯ ಕಲೆ ನೆಲೆಗೊಳ್ಳಬೇಕಿದ್ದರೆ ಪ್ರಜ್ಞಾವಂತ ಪ್ರೇಕ್ಷಕನ ಆನಿವಾರ್ಯತೆ ಹೇಗೋ ಹಾಗೆ ಕಲಾವಿದನ ಇರುವಿಕೆಯೂ ಅಗತ್ಯ.  ಇಂತಹ ಸಂದಿಗ್ಧತೆಯಲ್ಲಿ ಸರಳವಾದ ಮಿಜಾರು ಪಾತ್ರಗಳು ಬಹುವಾಗಿ ನೆನಪಿಗೆ ಬರುತ್ತವೆ. ಹಿತ ಮಿತವಾದ ಕುಣಿತ ಸಂದರ್ಭೋಚಿತ ಮೊನಚು ಸಂಭಾಷಣೆ ಅತ್ಯಂತ ಶ್ರೀಮಂತ ಶರೀರ ಭಾಷೆ ಮತ್ತು ಆರ್ಜಿಸಿದ ವಿಪುಲವಾದ ಲೋಕಾನುಭವ ಇನ್ನು ರಂಗದ ಮೇಲೆ ಕಾಣುವುದು ದುರ್ಲಭ ಎಂತಲೇ ಹೇಳಬೇಕು.  ಹಲವು ರಾತ್ರಿಗಳನ್ನು ಇವರ ಹಾಸ್ಯದ ಹೊನಲಿನಲ್ಲಿ ಮಿಂದು ನಕ್ಕು ಕಳೆದವರು ನಾವು.  ಮಿಜಾರು ಎಂದಾಕ್ಷಣ ಎಲ್ಲವನ್ನು ಮರೆತ ಆ ನಮ್ಮ ನಗು ಮತ್ತೆ ಮತ್ತೆ ನೆನಪಾಗುತ್ತದೆ.

ಕಲಾವಿದನಾಗಿ ಉನ್ನತ ವ್ಯಕ್ತಿತ್ವದಿಂದ ಕೂಡಿದ ಪರಿಪೂರ್ಣ ಜೀವನವನ್ನು ಕಂಡ ಶ್ರೀ ಮಿಜಾರು ಅಣ್ಣಪ್ಪ ತಮ್ಮ ಪಾತ್ರಗಳ ನೆನಪಿನ ಗಾಢ ಮುದ್ರೆಯನ್ನು ಬಿಟ್ಟು ಐಹಿಕ ಲೋಕದಿಂದ ದೈಹಿಕವಾಗಿ ಕಣ್ಮರೆಯಾದರೂ ರಸಿಕರ ಹೃದಯದಲ್ಲೂ ಯಕ್ಷಗಾನ ಲೋಕದಲ್ಲೂ ಮರೆಯದ ಚಿರಸ್ಥಾಯಿ ಸ್ಥಾನವನ್ನು ತನ್ನದಾಗಿಸಿಕೊಂಡಿದ್ದಾರೆ. ಭಗವಂತನುಅವರ ಆತ್ಮಕ್ಕೆ ಸದ್ಗತಿಯನ್ನು ಕರುಣಿಸಲಿ.

(ರಾಜಕುಮಾರ್ ಬೆಂಗಳೂರು)

error: Content is protected !!
Share This