ಯಕ್ಷಗಾನದಲ್ಲಿ ಭಾರತೀಯತೆ

 


ಭಾರತೀಯವಾದೊಂದು ಚಿಂತನಾ ಕ್ರಮ ಇದೆಯೇ? ಇದ್ದರೆ ಹೇಗಿದೆ ಎಂಬ ಕುರಿತು ಅನೇಕ ಚಿಂತಕರು ಪ್ರತ್ಯಕ್ಷ, ಪರೋಕ್ಷವಾಗಿ ಚರ್ಚಿಸಿದ್ದಾರೆ (ಸ್ವಾಮಿ ವಿವೇಕಾನಂದ, ಡಾ.ಎಸ್ ರಾಧಾಕೃಷ್ಣನ್, ಪ್ರೊ ಎ.ಕೆ.ರಾಮಾನುಜನ್, ಹೀಗೆ ಇನ್ನೆಷ್ಟೋ ಜನರು). ಹೌದು, ಭಾರತೀಯ ಜೀವನ-ಚಿಂತನ ವಿಧಾನವೊಂದು ಇದೆ. ಹಾಗೆಯೇ ಭಾರತೀಯ ಸಂವೇದನೆಯೆಂಬುದೂ ಒಂದಿದೆ (ಇದು ಅದ್ವೈತ ವೇದಾಂತ ಪರವಾಗಿದೆಯೆಂದು ಚಿಂತಕ ಪಾದೆಕಲ್ಲು ನರಸಿಂಹ ಭಟ್ಟರು ಸೂತ್ರಿಸಿದ್ದಾರೆ, ಇರಲಿ. ಹಾಗೆಯೆ ಭಾರತೀಯತೆ ಎಂಬುದೂ ಅನುಭಾವಕ್ಕೆ ಸಿಗುವ ಸಂಗತಿ.

ಏನು ಭಾರತೀಯ ಚಿಂತನಾ ವಿಧಾನದ ಮುಖ್ಯ ಲಕ್ಷಣಗಳು? ಹೆಗ್ಗುರುತುಗಳು? ನಿರ್ವಚಿಸಲು ಕಡುಕಷ್ಟ. ಆದರೂ ಸ್ಥೂಲವಾಗಿ ಹೀಗೆ ಹೇಳಬಹುದು.

1.           ಎಲ್ಲೆಡೆ ಕಾಣುವ ದೇವಾಲಯ ಸಂಸ್ಕೃತಿ.

2.           ಪ್ರಾಚೀನ ನಾಟ್ಯ ಪ್ರಕಾರಗಳ ಅನನ್ಯ ನಿಕಟರೂಪ-ಅಖಿಲಭಾರತ-ಯಕ್ಷಗಾನರಂಗ’ ಎನ್ನಬಹುದಾದ ರೀತಿ

3.           ಏಕದೇವಪ್ರಧಾನ-ಬಹುದೇವ ವಾದ

4.           ಅವತಾರ, ಭೂತ, ಕ್ಷೇತ್ರ, ಜಾಗ್ರತಶಕ್ತಿ, ಸಂನ್ಯಾಸ, ವೃಕ್ಷ ತೀರ್ಥಾದಿಗಳಲ್ಲಿ ನಂಬಿಕೆ.

5.           ಮತ ಶ್ರದ್ಧೆಗಳ ಅವಿರೋಧ-ವಿಚಿತ್ರ ಸಮನ್ವಯ; ಅಪಾರ ವೈವಿದ್ಯ ಕಲ್ಪನೆ.

6.           ದಾನ-ಪರೋಪಕಾರ-ಆತಿಥ್ಯ, ಮಾನವ ಪ್ರೀತಿ

7.           ಮಾಯಾವಾದಿ ಅಚಿಂತ್ಯತೆ, ವೇದಾಂತ-ಲೀಲೆಗಳಲ್ಲಿ ವಿಶ್ವಾಸ

8.           ಪುರಾಣಗಳಲ್ಲಿ ಶ್ರದ್ಧೆ, ಸರ್ವದೇವ ಪೂಜ್ಯತಾಭಾವ

9.           ತ್ರಿಮೂರ್ತಿ-ರಾಮ, ಕೃಷ್ಣ-ಗಣಪತಿ-ದೇವಿಯರಲ್ಲಿ ಸಾರ್ವತ್ರಿಕ ವಿಶ್ವಾಸ

10.        ತೀಕ್ಣ, ತೀವ್ರ ಅಭಿವ್ಯಕ್ತಿ ಮತ್ತು ಬುದ್ಧನಂತಹ ಮೌನಗಳ ವಿಚಿತ್ರ ಸಮ್ಮಿಶ್ರಣ

11.        ಎತ್ತರದ ಸೂಕ್ಷ್ಮದ ಚಿಂತನೆ ಮತ್ತು ತೀರಾ ಮುಗ್ಧತೆ, ಸ್ವೀಕಾರ ಮನೋಧರ್ಮ

12.        ಬಡತನ-ಪ್ರತಿಕೂಲಗಳಲ್ಲೂ ಸಂತೋಷವಾಗಿರುವಿಕೆ

13.        ಐಕ್ಯ-ತಾರತಮ್ಯಗಳ ವಿಚಿತ್ರ ಮಿಶ್ರಣ

14.        ಪುನರ್ಜನ್ಮ, ಭವಿಷ್ಯದ ಶುಭಗಳಲ್ಲಿ ವಿಶ್ವಾಸ, ಇದರಿಂದ ತಾಳ್ಮೆ-ಜಡತ್ವ

15.        ಭೋಗವಿಮುಖ, ಸರಳ ಜೀವನ, ಅರ್ಪಣಾಭಾವ

16.        ವಾಚಾಳಿತನ, ಸಹಜಕವಿತ್ವ, ಜಗಳ-ರಾಜಿ, ಸುಖಾಂತ ವಿಶ್ವಾಸ

ಹೀಗೆ ಇನ್ನೂ ಎಷ್ಟೋ ಹೇಳಬಹುದು. ಇವೆಲ್ಲ ಒಟ್ಟಾಗಿ ಪ್ರಾತಿನಿಧಿಕವಾಗಿರುವ ಒಂದು ಸಂಸ್ಕೃತಿ ಪ್ರಕಾರ ನಮ್ಮ ಯಕ್ಷಗಾನ ಎಂದು ಅತಿಶಯೋಕ್ತಿಯಿಲ್ಲದೇ ಹೇಳಬಹುದು. ಕಲಾರೂಪ, ಪ್ರಸಂಗ, ಪ್ರಯೋಗ, ಕಲಾ ವಾತಾವರಣ ನಾಲ್ಕರಲ್ಲೂ ಇದು ಕಾಣುತ್ತದೆ.

 

ಸಭಾಲಕ್ಷಣವೆನ್ನಲಾಗುವ ಯಕ್ಷಗಾನ ಪೂರ್ವರಂಗವು ವಿಸ್ತಾರವಾಗಿದ್ದು ಅದರಲ್ಲಿ ಗಣಪತಿ, ಶಿವ, ಕೃಷ್ಣ, ಪಾರ್ವತಿ, ಸುಬ್ರಹ್ಮಣ್ಯ, ಮುಕಾಂಬಿಕೆ ಮೊದಲಾದ ದೇವತೆಗಳ ಸ್ತುತಿ, ಬಾಲಗೋಪಾಲ(=ಬಲ, ಗೋಪಾಲ?) ನೃತ್ಯ, ಕೋಡಂಗಿ (=ಪಾರಿಪಾರ್ಶ್ವಕ) ವೇಷಗಳಿವೆ. ಬಾಲಗೋಪಾಲರಿಂದ ತೊಡಗಿ ಕಥಾಪ್ರದರ್ಶನದ ಕೊನೆಗೆ ಬರುವ

“ರಾಮಕೃಷ್ಣರು ಮನೆಗೆ ಬಂದರು ಬಾಗಿಲು ತೆರೆಯೊರೋ” – ಎಂಬ ಪದ್ಯ ಇದೆ, ಇದು ಇಡೀ ರಾತ್ರೆ ನಡೆಯುವ ಆಟವು ದೇವರ ಸೇವೆ ಆಟ ಎಂಬ ಸಾಂಕೇತಿಕತೆ ಹೊಂದಿದೆ ಎಂದು ಡಾ| ಶಿವರಾಮ ಕಾರಂತರು ಹೇಳಿದ್ದಾರೆ. ಅರ್ಧನಾರೀಶ್ವರ (ಶಿವಪಾರ್ವತಿ) ನೃತ್ಯದಲ್ಲಿ ಒಬ್ಬರನ್ನು ಒಬ್ಬರು ಕಳಕೊಂಡು ಹುಡುಕುವ ಪ್ರತ್ಯಭಿಜ್ಞಾನದರ್ಶನ ಎಂಬ ಗಹನ ವಿಚಾರವಿದೆ. ಸಭಾಲಕ್ಷಣದುದ್ದಕ್ಕೂ ಅಲ್ಲಲ್ಲಿ ಹಾಸ್ಯಗಾರರು ದೇವರುಗಳನ್ನು ತಮಾಶೆ ಮಾಡುವ, ದೇವರಜತೆ ಸಲುಗೆ ವಹಿಸುವ ದೃಶ್ಯಗಳಿದ್ದು ಇದು ಭಾರತೀಯ ಮತ ಪರಂಪರೆಯ ವೈಶಿಷ್ಟ್ಯ. ದೇವರ ಬಗೆಗೆ ಭಕ್ತಿ, ಅವನ ಬಗೆಗೆ ಸಲುಗೆ, ಜೀವದೇವಕ್ರೀಡೆ.

“ನೀನ್ಯಾಕೋ ನಿನ್ನ ಹಂಗ್ಯಾಕೋ” – ಮೊದಲಾದ ಭಾವಗಳು ಯಕ್ಷಗಾನದಲ್ಲಿ ಪೂರ್ವರಂಗದಲ್ಲೂ ಕಥಾಪ್ರದರ್ಶನದಲ್ಲೂ ಉದ್ದಕ್ಕೂ ಬರುತ್ತಿರುತ್ತವೆ. ಹಳೇ ಪೂರ್ವರಂಗದ ಕಟ್ಟು ಹಾಸ್ಯಗಳಾದ ಬ್ರಾಹ್ಮಣ, ಕುಲಾಲ, ವ್ಯಾಪಾರಿ ಬೋವಿ, ಶಿಲ್ಪಿ, ಹರಿವೆಸೊಪ್ಪು ಮಲ್ಲಮ್ಮ, ಗುಲಾಂಅಲಿ, ಕ್ರಿಶ್ಚಿಯನ್ ಮೊದಲಾದ ತಿಳಿಹಾಸ್ಯಗಳು ಇಡಿಯ ಭಾರತೀಯ ಸಮುದಾಯವನ್ನು ರಂಗಕ್ಕೆ ತರುವ ವಿಧಾನವಾಗಿದೆ. (ಈಗ ಈ ಭಾಗ ಬಳಕೆಯಲ್ಲಿ ಇಲ್ಲ).

ರಂಗಿನಮನೆಯಿಂದ ರಂಗಸ್ಥಳದವರೆಗೆ, ದೇವಾಲಯದಿಂದ ತಿರುಗಾಟದ ವಿವರಗಳವರೆಗೆ ಯಕ್ಷಗಾನ ಆಟವು ಒಂದು ಆಧ್ಯಾತ್ಮಿಕ ಮಹಾಸಂಕೇತವಾಗಿದೆ. ಬೆಳಕು ಸೇವೆ, ಪೂಜೆ, ಭಕ್ತಿ, ಪುರಾಣ ಅಭಿವ್ಯಕ್ತಿ, ಅಖ್ಯಾನ-ವ್ಯಾಖ್ಯಾನ, ಸೃಷ್ಟಿಗೆ ಉದ್ದಕ್ಕೂ ಇದ್ದು ಅದು ರಾತ್ರೆಯ ಬೆಳಕು, ಬೆಳಕಿನ ರಾತ್ರೆ. ಕ್ಷಣಕ್ಷಣಕ್ಕೆ ಕಾಣುವ ಪುರಾಣಚಿತ್ರಣ, ಚಿಂತನ, ವಿಸ್ತರಣೆಯು ನಿತ್ಯ ಪೌರಾಣಿಕವಾಗಿರುವ, ನಿತ್ಯ ವಾಗ್ಮಿಯಾಗಿರುವ “Expressive-Talkative-Philosophical Indian” ನ ಚಿತ್ರಗಳ ನಿರಂತರ ಧಾರಾವಾಹಿ. ಅದರಲ್ಲಿ `ಭಾಗವತ’ ಭಕ್ತರಿದ್ದಾರೆ, ಹಾಸ್ಯಗಾರನಿದ್ದಾನೆ, ದುಷ್ಟ ಶಿಷ್ಟ, ರಕ್ಕಸ-ದೇವ, ತರುಣ-ಪ್ರೌಢ, ಗರತಿ-ಗಯ್ಯಾಳಿ, ಪ್ರೇಮ-ವಿರೋಧ, ಯುದ್ಧ-ಶಾಂತಿ, ವೇದಾಂತ ಲೌಕಿಕಗಳ ಅಪಾರ ಚಿತ್ರಗಳಿದ್ದು ಭಾರತೀಯತೆಯ ಸತತ ಪಾರಂಪರಿಕ-ಚಲನಶೀಲ ಸಂಸರಣವಿದೆ. ಸಂಸಾರ ವಿಶ್ವಾಮಿತ್ರತ್ವವಿದೆ.

ಯಕ್ಷಗಾನದ ಭವ್ಯ ಸುಂದರ ವೇಷವಿಧಾನವು ಜಗತ್ತಿನ ಶ್ರೇಷ್ಠ ಕಲಾಸೃಜನಗಳಲ್ಲಿ ಒಂದಾಗಿದೆ. ಅದರ ಬಣ್ಣ, ನಾಮ, ಮುದ್ರೆಗಳಲ್ಲಿ ಬುಡಕಟ್ಟುಗಳ ಮುಖವರ್ಣಿಕೆ, ಶೈವ-ವೈಷ್ಣವದ ಮುದ್ರೆ, ಸ್ವಭಾವ ಸ್ವರೂಪ ಚಿತ್ರಣದ ಚುಕ್ಕಿ, ಚುಟ್ಟಿ, ಚಿತ್ತಾರ, ರೇಖೆ, ವರ್ಣ ಸಮನ್ವಯ, ಸೂಚಕತೆಗಳ ಭಾರತೀಯ ಇತಿಹಾಸವೇ ಏಕೀಭವಿಸಿ ಕಾಣುತ್ತದೆ. ಯಕ್ಷಗಾನದ ಬಣ್ಣದ ವೇಷ (ರಾಕ್ಷಸ ಪಾತ್ರ)ದ ರೂಪವೇ ಸಾಕು, ಭಾರತೀಯ ವರ್ಣಚಿತ್ರಣದ ಬೆರಗಿನ ದರ್ಶನಕ್ಕೆ. ವೇಷಗಳನ್ನು ನೋಡಿದರೆ, ರಾಜಕಿರೀಟ, ಬಟ್ಟಲುಕಿರೀಟ (ತಡ್ಪೆ, ಗೆರಸೆಕಿರೀಟ) ಮುಂಡಾಸು ಪಗಡಿ, ಮುಡಿ, ಕಿರಣ, ಭುಜಕೀರ್ತಿ, ಎದೆಹಾರ, ಡಾಬು, ಗೆಜ್ಜೆ, ಅಂಗಿ, ನೇತಾಡುವ ಅಂಗಿ, ಸುರಾಲು, ಸರ, ವಲ್ಲಿ, ಬಾಲಮುಂಡು (ಸೊಂಟದ ಸುತ್ತ ನಿಲ್ಲುವಕಿರ್ಗಿ).ಕರ್ಣ ಪಾತ್ರ, ಇಳಿಗೂದಲುಗಳು ಕಂದಹಾರ್ ಪಂಜಾಬಿನಿಂದ ಅಂಡಮಾನ್ ತನಕ ಇದ್ದ, ಈಗಲೂ ಇರುವ ದಕ್ಷಿಣೋತ್ತರ ಪೂರ್ವಪಶ್ಚಿಮ ವೇಷ ಶೈಲಿಗಳ ವಿರಳ ಪಾಕಸ್ಪಷ್ಟ. ಆದರೂ ಅದು `ಹಾಗೇ’ ಇರುವ ಪ್ರತಿ, copy (ಕಾಪಿ) ಅಲ್ಲ. ರಂಗ-ಪುನಃಸೃಷ್ಟಿ, Re-re-creation (ರಿ`ರಿಕ್ರಿಯೇಷನ್’). ಏಷ್ಯಾದ ಇಡೀ ಪ್ರಾಚೀನ ಪದ್ಧತಿಗಳ ಚಿತ್ರಗಳನ್ನು ನೋಡಿದರೆ, ಹಿಂದಿನ-ಇಂದಿನ ವೇಷಭೂಷಣಗಳನ್ನು ಭಾವಿಸಿದರೆ ಇದು ಸ್ಪಷ್ಟ.

ಜಗವೆಲ್ಲವು ನಿನ್ನುದರದೊಳಿರುತಿರೆ| ಸಿರಿಯೆಂಬಳು

ನಿನ್ನ ಚರಣದೊಳಿರುತಿರೆ| ಶರಣಾಗತರಕ್ಷಾಮಣಿ ನರಹರಿ

ಗಗನವೆಲ್ಲವು ನಿನ್ನ ನಾಭಿ|| (ಸಭಾಲಕ್ಷಣ)

– ಇದು ಯಕ್ಷಗಾನದ ವಿಶ್ವವೇದಾಂತ. ‘ನಾಭ್ಯಾಸಿತ್ ಅಂತರಿಕ್ಷಂ’ ಎಂಬ ಶ್ರುತಿವಚನದ ಅನುರಣನ ವಿಸ್ತರಣ. ಯಕ್ಷಗಾನದ ಹಾಡುಗಾರನು ಭಾಗವತ, ಕಿರೀಟವು ದೇವರು ಚೌಕಿಮನೆ, ರಂಗಗಳು ಲೀಲಾಭೂಮಿ, ಎಲ್ಲವೂದೇವರ ಆಟ.

‘ಶ್ರುತಿ-ಸ್ಮೃತಿ-ಪುರಾಣ’ ಎಂದು ಭಾರತೀಯ ಪರಂಪರೆಯ ತ್ರಿವಳಿ. ಜ್ಞಾನಚಿಂತನ ಅನ್ವಯಗಳ ತ್ರಿವಿಧ, ತ್ರಿಸ್ತರಕಥನ. ಇದನ್ನೂ ಅದರ ಜೊತೆಗೆ ಸ್ಥಳಿಯ ಜಾನಪದ ಅಂಶಗಳನ್ನು ಕುಟುಂಬ, ಸಮಾಜ, ಸ್ವಸ್ಥಾನ-ಆಸ್ಥಾನ, ಅರಮನೆ ಅಡುಗೆಮನೆಗಳನ್ನು ಕೂಡಿಸಿ ಅತ್ಯದ್ಭುತ ಸಂಕಥನವಾಗಿಸುವುದು ಯಕ್ಷಗಾನದ ಸಮಗ್ರ ಭಾರತೀಯತೆ. ಭಾರತೀಯತೆ ಸಾಮಗ್ರಿ, ಸಾಮರ್ಥ್ಯ.

ಯಕ್ಷಗಾನದ ಅರ್ಥಗಾರಿಕೆ (ಪ್ರಸಂಗಕಾವ್ಯದ ರೇಖೆಯನ್ನು ಆಧರಿಸಿ ಸ್ವಂತ ರಚಿಸಿ ಆಡುವ ಮಾತು) ಭಾರತೀಯ ವಾಙ್ಮಯದ ಉತ್ತುಂಗ ಶ್ರೇಣಿಗಳಲ್ಲಿ ಒಂದು. ಹಾಡು, ಕಥೆ, ಕಾವ್ಯ, ಕಾದಂಬರಿ, ಮಹಾಕಾವ್ಯ, ಹರಟೆ, ಪ್ರಹಸನ, ಪ್ರವಚನಗಳೆಲ್ಲ ಸಾರಿದ ಮಹಾಭಾರತೀಯ ‘ಜ್ಞಾನ-ನಾಟಕ- ಕರ್ನಾಟಕ’. ‘ಜನಪ್ರಿಯ ವೇದಾಂತವು’ ಯಕ್ಷಗಾನದ ಮಾತುಗಾರಿಕೆಯಲ್ಲಿ ಓತಪ್ರೋತ ಪ್ರವಾಹವಾಗಿ ಇರುತ್ತದೆ. ಮಕರಂದನ ಹಾಸ್ಯ, ‘ಹೆಡ್ಡ’ ಚಂದಗೋಪನ ಪೆದ್ದುತನದ ಒಳಧ್ವನಿ, ‘ಖಳ’ ರಾವಣ, ಕಂಸರಿಗೂ ಕೊನೆಗಾಲದಲ್ಲಿ ಆಗುವ ದೇವಸಾಕ್ಷಾತ್ಕಾರ, ಶಿವ-ವಿಷ್ಣುಗಳು ಮಾಡಿಕೊಳ್ಳುವ ತಮಾಷೆ, ಹರಿಶ್ಚಂದ್ರಕಥೆಯ ಉದ್ದಕ್ಕೂ ಇರುವ ಸತ್ಯವೆಂಬುದೆ ಹರನೆಂಬ ಪ್ರತಿಜ್ಞೆಯ ಅನುಕೃತಿ, ಭೀಷ್ಮ-ಕೃಷ್ಣರಕರ್ಮ ಬಂಧನದ ಚರ್ಚೆ, ಬಲಿಚಕ್ರವರ್ತಿಯ ಭೂ-ದಾನ, ವಾಮನನ ತ್ರಿವಿಕ್ರಮತ್ವ, ದೇವಕಿ-ಯಶೋದೆ, ಗೋಪಿಕೆ, ಶಬರಿಯರದೇವ ಅನುಸಂಧಾನ, ಈಶ್ವರನನ್ನುಈ ಸರಬೇರ್ ಎಂದು ಬೂದಿಗುಡ್ಡೆ ಪುರ್ಸನೆಂದು ತಮಾಷೆ ಮಾಡುವ ಹಾಸ್ಯಗಾರನ ವಕ್ರ ವೇದಾಂತ, ದೇವೀ ಮಹಾತ್ಮೆಯ ದೇವಿ, ಜಗತ್ತಿನದೇವದೇವರಾದ ಬ್ರಹ್ಮ-ನಾರಾಯಣ-ಶಿವನನ್ನು ‘ಮಕ್ಕಳೇ’ ಎನ್ನುವಾಗ ಆಗುವ ವಿಚಿತ್ರ ಸ್ಪಂದನ-ಆಹಾ ಎಂತಹ ಸಮಗ್ರ ಭಾರತೀಯತಾ ಚಿತ್ರಗಳು ಅವು ಅನುಭವೈಕಗಮ್ಯ.

ಯಕ್ಷಗಾನದ ಚೌಕಿ (ಬಣ್ಣದ ಮನೆ) ಅದರ ಸುತ್ತಲ ಸಂತೆ, ಮುಂಡಕ್ಕಿ ಅಂಗಡಿಗಳು, ಸಭೆಗಳು ಎಲ್ಲರನ್ನೂ ಕೂಡಿಸುತ್ತವೆ. ಮಟ್ಟ ಮಾಡುತ್ತವೆ. levelling (ಲೆವೆಲಿಂಗ್) ಮಾಡುತ್ತದೆ. ವಸ್ತು, ವಾದ್ಯ, ಬಣ್ಣ, ಕುಣಿತಗಳೆಲ್ಲ ನಿಜದ ದೇವತ್ಪಗಳೇ. ತಾಳವೆಂದರೇನು? ನೋಡಿ.

ಅಂಬರಂಕುಂಭೀನೀದೇವೀ ತಾಳವೃತ್ತಂ ಚ ಯುಗ್ಮಕಂ

ಉಭಯರ‍್ಯೊಗರೂಪೇಣತಾಲಸೂತ್ರಂ ಚವಾಸುಕೀ||

ಆಕಾಶ, ಭೂಮಿ ಎರಡು ತಾಳ, ಅದರ ನೂಲು ವಾಸುಕೀ ಯೋಗರೂಪ ಕುಂಡಲನೀ! ದ್ಯಾವಾಪೃಥ್ವಿ ಇದಕ್ಕಿಂತ ಹೆಚ್ಚೇನು ಹೇಳಬಹುದು.

ಯಕ್ಷಗಾನದ ಅರ್ಥಗಾರಿಕೆಯಲ್ಲಿ ಒಂದೇ ವಾಕ್ಯದಲ್ಲಿ ಬರುವ ವೇದದ ಉಕ್ತಿ, ಕಾವ್ಯದ ಸೂಕ್ತಿ, ಶಾಸ್ತçದ ವೃತ್ತಿ, ಗಾದೆಯ ಮಾತು, ಸ್ಥಳೀಯವಾದ ವಿನೋದಧ್ವನಿ, ಉದಾಹರಣೆಯ ಉಪ್ಪಿನಕಾಯಿ, ಚಾಟುಉತ್ತರ, ವಾದ ಸಂವಾದ ಚುಟುಕು, ಚುಟುಕು ವಾದದುರ್ವಾದ, ಒಗಟು, ವಾಗ್ರೂಢಿ, ಕುಶಾಲುಗಳ ಒಗ್ಗರಣೆ ಸೇರಿ ಅಖಿಲ ಭಾರತೀಯವನ್ನು ಕನ್ನಡದಲ್ಲಿ (ತುಳು, ಕೊಂಕಣಿಯಲ್ಲಿ) ಹಿಡಿವ ಪುಷ್ಪಕನ್ನಡಿ- ಯಕ್ಷಗಾನದ ಅರ್ಥಗಾರಿಕೆ.

ತಾಳಮದ್ದಲೆಯೆಂಬ (ವೇಷ ಕುಣಿತಗಳಿಲ್ಲದ ಸಾದಾ ಉಡುಪಿನಲ್ಲಿ ಹಾಡು-ಮಾತು ಭಾವಗಳ ಆಶುನಾಟಕ) ಪ್ರಕಾರವು ಮಾತುಗಾರಿಕೆ, ವಾಚಿಕ, ವಾಚಾಳಿತ್ವಗಳ, ಪುರಾಣ ಅಧ್ಯಾತ್ಮ, ತತ್ತ್ವ ಮನನಗಳ ವಿಶ್ವರೂಪ. ಅಲ್ಲಿ ಪುರಾಣದ ವಿಸ್ತರಣ ಇದೆ. ಭಂಜನವೂ ಇದೆ. ಒಡೆದು ಕಟ್ಟುವ ಶಿಲ್ಪಗಳಿವೆ. ರಾವಣನು ರಾಮನನ್ನು, ದುರ್ಯೋಧನ ಜರಾಸಂದರು ಕೃಷ್ಣನನ್ನು, ಮಹಿಷನು ದೇವಿಯನ್ನು ಬಲವಾಗಿ, ಬಹುವಾಗಿ ತೀಕ್ಣವಾಗಿ ಆಕ್ಷೇಪಿಸಿದಾಗ “ನಮಗೆ ಅವಮಾನವಾಯಿತು” ಎಂದು ಯಾರೂ ಬೊಬ್ಬಿಡುವುದಿಲ್ಲ. ಹರಿದಾಸರಾಗಿದ್ದ ಶೇಣಿಯವರ ‘ಪ್ರತಿನಾಯಕತ್ವ’ ನಾಸ್ತಿಕ್ಯಗಳು ಅವರ ರಾಮಕೃಷ್ಣರ ಚಿತ್ರಣಗಳಷ್ಟೇ ಬಲಿಷ್ಠ. ‘ಇದು ಭಾರತ ಇದು ಭಾರತಿ’ ಎಂದು ಬನ್ನಂಜೆ ಹೇಳಿದುದರ ಕ್ರಿಯಾರೂಪ, ಆಶು ಮಹಾಕಾವ್ಯ, ಪ್ರತಿಕಾವ್ಯ.

 ೬

ಯಕ್ಷಗಾನ ಪ್ರಸಂಗಗಳನ್ನು ಬರೆದ ಸಾವಿರಕ್ಕೂ ಮಿಕ್ಕಿದ (ನಾಲ್ಕು ಸಾವಿರ ಪ್ರಸಂಗಗಳಿವೆ) ಕವಿಗಳು, ನೂರಕ್ಕೂ ಮಿಕ್ಕಿ ಪ್ರಸಂಗಗಳನ್ನು ಬರೆದ ಹಲವರಿದ್ದಾರೆ. ರಾಮಾಯಣ ವಾಲ್ಮೀಕಿ, ಪಾರ್ತಿಸುಬ್ಬನಂದ ಇಂದಿನ ತನಕ ಭಾರತೀಯತೆಯ ಕನ್ನಡ-ಕನ್ನಡದ, ಕಲಾತ್ಮಕ-ಕಲಾತ್ಮಕದ, ದೇಸೀ-ಶಾಸ್ತ್ರೀಯ, ಸ್ಥಳಿಯ ‘ಅನು-ವಾದ’ ಮಾಡುತ್ತ ಬಂದ ಕವಿಗಳು, ಅವುಗಳನ್ನು ಅನುಸೃಷ್ಟಿಸಿದ ಕಲಾವಿದರು, ಅಗಣ್ಯಗಣಿತರು, ಹರಕೆ ಆಟವಾಗಿ ಸೇವಾರೂಪವಾಗಿ ಆಡಿಸುವುದು, ದೇವಾಲಯದ ಹೆಸರಿನಲ್ಲಿ ಯಕ್ಷಗಾನ ಮೇಳಗಳು ನಡೆಯುವುದು, ದೇವತಾಸ್ತುತಿಗಳು, ಪುರಾಣಪುಣ್ಯ ಕಥಾಭಾಗಗಳ ಪ್ರದರ್ಶನ, ಅವುಗಳ ಭಕ್ತಿ-ವೇದಾಂತ, ತಾತ್ವಿಕತೆ, ಲೌಕಿಕ ಆಧ್ಯಾತ್ಮಿಕ ಸಮಿಶ್ರ ಸಂದೇಶ, ವೇಷವಿಧಾನ, ಸಂಗೀತ-ಹೀಗೆ ವಿವಿಧ ಮುಖಗಳಲ್ಲಿ ಅದರ ಶಾಸ್ತ್ರೀಯ-ಸ್ಥಳಿಯ ದೇಸೀತನ ಕಾಣುತ್ತದೆ. ಅದೇ ಬೃಹತ್ ದೇಸಿ, ಅದೇ ಸೇಕ್ರೆಡ್ ಸೆಕ್ಯುಲರ್.

ಇಷ್ಟಿದ್ದೂ

ವಾಚಾತೀತಂ ಮನೋತೀತಂ ಭಾವಾತೀತಂ ನಿರಂತರಂ|

ಸರ್ವಶೂನ್ಯಂ ನಿರಾಕಾರಂ ನಿಶ್ಶಬ್ದಂ ಬ್ರಹ್ಮಉಚ್ಯತೇ ||    (ಸಭಾಲಕ್ಷಣ)

ಎಂಬ ಎಚ್ಚರವೂ ಯಕ್ಷಗಾನಕ್ಕಿದೆ. ಅದು ಭಾರತೀಯತೆಯ ಸಾರ.


ಭಾರತೀಯ ಕಲೆಗಳಲ್ಲಿ ಆಧ್ಯಾತ್ಮ, ಗ್ರಂಥಕ್ಕಾಗಿ ಬರೆದ ಲೇಖನ

– ಸಂಪಾದಕರು, ಎಸ್ ಡಿ ಆರ್  ದೀಪಾ  ಫಡ್ಕೆ  ಬೆಂಗಳೂರು


– ಡಾ. ಎಂ ಪ್ರಭಾಕರ ಜೋಶಿ

ವಾಗ್ಮಿ, ಅರ್ಥದಾರಿ, ಲೇಖಕ, ಪ್ರಾಧ್ಯಾಪಕ, ಸಾಂಸ್ಕೃತಿಕ ಚಿಂತಕ.