ಕುಮಾರವ್ಯಾಸ ಕಾವ್ಯ ಬರೆಯುವ ಹೊತ್ತಿಗೆ ಯಕ್ಷಗಾನ ಇರದಿದ್ದರೂ ಗಮಕ ಕಲೆ ಇತ್ತು. ಆದರೆ ಕುಮಾರವ್ಯಾಸನ ಕಾವ್ಯಕ್ಕೆ ಮರುಹುಟ್ಟು ನೀಡಿದ್ದು ಮಾತ್ರ ಕರಾವಳಿಯ ಯಕ್ಷಗಾನ ಕಲೆ ಎಂದು ಯಕ್ಷಗಾನ ವಿದ್ವಾಂಸ ಡಾ| ಎಂ. ಪ್ರಭಾಕರ ಜೋಶಿ ಅಭಿಪ್ರಾಯಪಟ್ಟರು.

ಕಾಂತಾವರ ಕನ್ನಡ ಸಂಘ ಮತ್ತು ಕರ್ನಾಟಕ ಗಮಕಕಲಾ ಪರಿಷತ್ತು ಉಡುಪಿ ಜಿಲ್ಲೆ ಇವುಗಳ ಜಂಟಿ ಆಶ್ರಯದಲ್ಲಿ ನಡೆದ ತಿಂಗಳ ನುಡಿನಮನ ಕಾರ್ಯಕ್ರಮದಲ್ಲಿ ಅವರು ‘ಗದುಗಿನ ಭಾರತ ಮತ್ತು ಯಕ್ಷಗಾನ’ವಿಷಯದ ಬಗ್ಗೆ ಮಾತನಾಡಿದರು.

ನಾಲ್ಕು ಸಾವಿರದಷ್ಟು ಯಕ್ಷಗಾನ ಪ್ರಸಂಗ ರಚನೆಯಾಗಿದ್ದು ಅವರಲ್ಲಿರುವ ಸುಮಾರು ಐದು ಲಕ್ಷ ಪದ್ಯಗಳು ಕನ್ನಡದ ಅಪೂರ್ವ ಗೀತ ಸಾಹಿತ್ಯ ಸಂಪತ್ತು ಎಂದು ಖಂಡಿತ ಹೇಳಬಹುದು. ಇಷ್ಟೇ ಸಂಖ್ಯೆಯ ಪದ್ಯಗಳು ನಾನಾ ಕಾರಣಗಳಿಂದ ನಾಶವಾಗಿದ್ದರೂ ಪ್ರತೀ ವರ್ಷವೂ ಹತ್ತಾರು ಪ್ರಸಂಗಗಳು ಈ ಕಣಜಕ್ಕೆ ಸೇರ್ಪಡೆಯಾಗುತ್ತಲೇ ಇವೆ ಎಂಬುದು ಗಮನಿಸಬೇಕಾದ ಅಂಶ ಎಂದರು.

ಸಮ್ಮಾನ

ಗಮಕಿ ಎಸ್. ಮಂಜುಳಾ ಸುಬ್ರಹ್ಮಣ್ಯ ಮಂಚಿ ಅವರು ಕುಮಾರವ್ಯಾಸ ಭಾರತದ ಆಯ್ದ ಪದ್ಯಗಳ ವಾಚನ ಕಾರ್ಯಕ್ರಮ ನಡೆಸಿಕೊಟ್ಟರು. ಬಳಿಕ ಅತಿಥಿಗಳನ್ನು ಸಮ್ಮಾನಿಸಲಾಯಿತು. ಬಾಬುಶೆಟ್ಟಿ ನಾರಾವಿ ನಿರ್ವಹಿಸಿದರು. ನಿಕಟಪೂರ್ವ ಕಾರ್ಯಾಧ್ಯಕ್ಷ ಡಾ| ನಾ. ಮೊಗಸಾಲೆ ಉಪಸ್ಥಿತರಿದ್ದರು. ನೂತನ ಕಾರ್ಯಾಧ್ಯಕ್ಷ ನಿರಂಜನ ಮೊಗಸಾಲೆ ಅವರು ಸ್ವಾಗತಿಸಿ, ಸದಾನಂದ ನಾರಾವಿ ವಂದಿಸಿದರು.

error: Content is protected !!
Share This