ಕಟೀಲು ದುರ್ಗಾ ಮಕ್ಕಳ ಮೇಳದ ನವಮ ವಾರ್ಷಿಕ ಯಕ್ಷಗಾನ ಕಲಾಪರ್ವ ಸಮಾರೋಪದಲ್ಲಿ ಡಾ. ಪ್ರಭಾಕರ ಜೋಷಿ

ಯಕ್ಷಗಾನ ಕ್ಷೇತ್ರಕ್ಕೂ ಬೇಡದ ಸಂಗತಿಗಳು ವೈರಸ್ ಗಳ ರೀತಿಯಲ್ಲಿ ಅಟ್ಯಾಕ್ ಮಾಡಿ ಮೂಲ ಚೌಕಟ್ಟನ್ನೇ ಕದಡಿಸುತ್ತಿದ್ದು ಯಕ್ಷಗಾನದ ಚೌಕಟ್ಟಿನ ಶುದ್ದತೆಯನ್ನು ಕಾಪಾಡಿಕೊಳ್ಳುವುದು ಬಹಳ ಮುಖ್ಯ. ಅಡ್ಡಬಿದ್ದ ತೆಂಗಿನ ಮರದಂತಾಗಿರುವ ಯಕ್ಷರಂಗದಲ್ಲಿ ಬೇಕಾಬಿಟ್ಟಿ ನಿಯಮಗಳ ಸಡಿಲಿಕೆಯಾಗುತ್ತಿರುವುದು ದುರದೃಷ್ಟಕರ. ಯಕ್ಷಗಾನವನ್ನು ಇನ್ನೂ ಚೆಂದಮಾಡುವ
ಭರದಲ್ಲಿ ಚೌಕಟ್ಟು ಮೀರದಂತೆ ಪಾಯಸಕ್ಕೆ ಬೆಳ್ಳುಳ್ಳಿ ಒಗ್ಗರಣೆ ಕೊಟ್ಟು ರುಚಿ ಕೆಡಿಸಿದಂತಾದೀತು. ಯಕ್ಷಗಾನ ವ್ಯಕ್ತಿ ಕೇಂದ್ರೀಕೃತವಾಗುವುದು ಸರಿಯಲ್ಲ ಎಂದು ಯಕ್ಷಗಾನ ಕಲಾವಿದ, ವಿದ್ವಾಂಸ ಡಾ. ಎಂ. ಪ್ರಭಾಕರ ಜೋಷಿ ಹೇಳಿದರು.

ಅವರು ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಳದ ಸರಸ್ವತೀ ಸದನದಲ್ಲಿ ಸೋಮವಾರ ಕಟೀಲು ದುರ್ಗಾ ಮಕ್ಕಳ ಮೇಳದ ನವಮ ವಾರ್ಷಿಕ ಯಕ್ಷಗಾನ ಕಲಾಪರ್ವದ ಸಮಾರೋಪ ಸಭಾಪರ್ವದಲ್ಲಿ ಕೃಷ್ಣ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದರು.

ಯಕ್ಷಗಾನ ಕ್ಷೇತ್ರಕ್ಕೆ ಬಡತನ ಬಾಧಿಸದು. 40ಕ್ಕೂ ಹೆಚ್ಚು ಮೇಳಗಳ ಮೂಲಕ ಹತ್ತಾರು ಸಾವಿರ ಮಂದಿ ಯಕ್ಷಗಾನದಲ್ಲಿ ತೊಡಗಿಸಿಕೊಂಡಿರುವುದು ಮಾತ್ರವಲ್ಲದೆ ಇತ್ತೀಚಿನ ದಿನಗಳಲ್ಲಿ ಮಕ್ಕಳಿಗೆ ಯಕ್ಷಗಾನ ತರಬೇತಿಯ ಟ್ರೆಂಡ್ ಹೆಚ್ಚಾಗಿರುವುದು, ಎಲೆಕ್ಟ್ರಾನಿಕ್ ಮಾಧ್ಯಮದ ಭರಾಟೆಯ ಮಧ್ಯೆಯೂ ಯಕ್ಷಗಾನದಲ್ಲಿ ರಚನಾತ್ಮಕ ಬೆಳವಣಿಗೆಗಳೊಂದಿಗೆ ಅಭಿರುಚಿ ಹೆಚ್ಚಾಗುತ್ತಿದೆ ಎಂದು ಅವರು ಹೇಳಿದರು.

ಇದೇ ಸಂದರ್ಭ ಶಂಕರನಾರಾಯಣ ಮಾರ್ಪಾಡಿ ಇವರಿಗೆ ಗೌರವಾರ್ಪಣೆ ನೀಡಿ ಸನ್ಮಾನಿಸಲಾಯಿತು ಹಾಗೂ ದುರ್ಗಾ ಮಕ್ಕಳ ಮೇಳದಲ್ಲಿ ಭಾಗವತಿಕೆ, ಹಿಮ್ಮೇಳ, ಯಕ್ಷನಾಟ್ಯ ಅಧ್ಯಯನ ನಡೆಸಿ ಉನ್ನತ ದರ್ಜೆಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ ವಿತರಿಸಲಾಯಿತು.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಕರ್ಣಾಟಕ ಬ್ಯಾಂಕ್ ನ ಅಧ್ಯಕ್ಷ ಪಿ. ಜಯರಾಂ ಭಟ್ ಅವರು ಮಾತನಾಡಿ ಯಕ್ಷಗಾನದಲ್ಲಿ ಮೂಲ ಪರಂಪರೆ, ಚೌಕಟ್ಟನ್ನು ಕಾಯ್ದುಕೊಂಡಾಗ ಮಾತ್ರ ಭಕ್ತಿಯ ಹರಕೆಗೆ ಅರ್ಥ ಸಿಗುತ್ತದೆ ಎಂದರು.

ಅರ್ಚಕರಾದ ಅನಂತ ಪದ್ಮನಾಭ ಅಸ್ರಣ್ಣ, ಕಮಲಾದೇವಿ ಪ್ರಸಾದ ಅಸ್ರಣ್ಣ ಶುಭಾಶಂಸನೆಗೈದರು.

ಶಾಸಕ ಅಭಯಚಂದ್ರ ಜೈನ್, ದೇವಳದ ಅನುವಂಶಿಕ ಮೊಕ್ತೇಸರ ಹಾಗೂ ಆಡಳಿತ ಸಮಿತಿಯ ಅಧ್ಯಕ್ಷ ಕೊಡೆತ್ತೂರು ಗುತ್ತು ಸನತ್ ಕುಮಾರ್ ಶೆಟ್ಟಿ, ಕಾವೂರು ಶ್ರೀ ಮಹಾಲಿಂಗೇಶ್ವರ ದೇವಳದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ರಾಮಣ್ಣ ಶೆಟ್ಟಿ ಬೊಂದೆಲ್, ಉದ್ಯಮಿಗಳಾದ ಸುಂದರ ಶೆಟ್ಟಿ, ಗಿರೀಶ್ ಎಂ. ಶೆಟ್ಟಿ, ತಾರಾನಾಥ ವರ್ಕಾಡಿ ಮತ್ತಿತರರು ಉಪಸ್ಥಿತರಿದ್ದರು. ಉದ್ಯಮಿ ಕಮಲಾಕ್ಷ ಕಾಮತ್ ಅವರು ಚೆಂಡೆ ಬಾರಿಸುವುದರೊಂದಿಗೆ ಕಟೀಲು ಶ್ರೀದುರ್ಗಾ ಮಕ್ಕಳ ಮೇಳದ ದಶಮಾನೋತ್ಸವ
ವರ್ಷಾಚರಣೆಗೆ ಚಾಲನೆ ನೀಡಿದರು. ಮೇಳದ ಅಧ್ಯಕ್ಷ ಹರಿನಾರಾಯಣದಾಸ ಅಸ್ರಣ್ಣ ಸ್ವಾಗತಿಸಿದರು. ಕಾರ್ಯದರ್ಶಿ ವಾಸುದೇವ ಶೆಣೈ ಕಾರ್ಯಕ್ರಮ ನಿರೂಪಿಸಿದರು.

ವಿಜಯ ಕರ್ನಾಟಕ

error: Content is protected !!
Share This