ಬೆಂಗಳೂರು: ಕರ್ನಾಟಕ ಯಕ್ಷಗಾನ ಅಕಾಡೆಮಿಯಿಂದ ನೀಡಲಾಗುವ ಪಾರ್ತಿಸುಬ್ಬ ಪ್ರತಿಷ್ಠಿತ ಪ್ರಶಸ್ತಿಗೆ ಬಲಿಪ ನಾರಾಯಣ ಭಾಗವತರು ಆಯ್ಕೆಯಾಗಿದ್ದಾರೆ. ಇದೇ ಸಾಲಿನಲ್ಲಿ ನೀಡಲಾಗುವ ಪುಸ್ತಕ ಪ್ರಶಸ್ತಿಗೂ ಬಲಿಪ ಅವರ ‘ಜಯಲಕ್ಷ್ಮೀ’ ಪ್ರಸಂಗ ಸಂಕಲನ ಆಯ್ಕೆಯಾಗಿದೆ.

ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಅಕಾಡೆಮಿ ಅಧ್ಯಕ್ಷ ಪ್ರೊ.ಎಂ.ಎ.ಹೆಗಡೆ ಅವರು ಪ್ರಶಸ್ತಿ ಪುರಸ್ಕೃತರ ವಿವರ ನೀಡಿದರು.

ವಾರ್ಷಿಕ ಗೌರವ ಪ್ರಶಸ್ತಿಗೆ ಆಯ್ಕೆಯಾದವರು: ಮದ್ದಳೆ ವಾದಕ ಯಲ್ಲಾಪುರದ ಶಂಕರ ಭಾಗವತ, ತಾಳಮದ್ದಲೆ ಅರ್ಥಧಾರಿ ಬಂಟ್ವಾಳ ತಾಲ್ಲೂಕು ಇರಾ ಗ್ರಾಮದ ಬರೆ ಕೇಶವ ಭಟ್‌, ಬಡಗುತಿಟ್ಟು ಯಕ್ಷಗಾನ ವಿದ್ವಾಂಸ, ಭಾಗವತರಾದ ಕೋಟದ ಎಚ್‌.ಶ್ರೀಧರ ಹಂದೆ, ಮೂಡಲಪಾಯ ಯಕ್ಷಗಾನ ಭಾಗವತರಾದ ತಿಪಟೂರು ತಾಲ್ಲೂಕು ಅರಳಗುಪ್ಪೆಯ ಎ.ಎಂ.ಶಿವಶಂಕರಯ್ಯ, ಮೂಡಲಪಾಯ ಯಕ್ಷಗಾನ ಕಲಾವಿದ ಬೆಂಗಳೂರು ರಾಜಾಜಿನಗರದ ಕರಿಯಣ್ಣ ಆಯ್ಕೆಯಾಗಿದ್ದಾರೆ.

ಪುಸ್ತಕ ಪ್ರಶಸ್ತಿಗೆ ಸಾಗರ ವಿನೋಬನಗರದ ಪ್ರೊ.ಜಿ.ಎಸ್‌.ಭಟ್ಟ ಅವರು ಬರೆದ ಯಕ್ಷಗಾನ ಅಂಗೋಪಾಂಗ ಸಮತೋಲನ ವಿಚಾರ ಎಂಬ ಸಂಶೋಧನಾ ಗ್ರಂಥ ಆಯ್ಕೆಯಾಗಿದೆ ಎಂದು ಪ್ರೊ.ಹೆಗಡೆ ತಿಳಿಸಿದರು.

ಪಾರ್ತಿಸುಬ್ಬ ಪ್ರಶಸ್ತಿಯು ₹ 1 ಲಕ್ಷ ನಗದು, ವಾರ್ಷಿಕ ಗೌರವ ಪ್ರಶಸ್ತಿಯು ₹ 50 ಸಾವಿರ ನಗದು, ಪುಸ್ತಕ ಪ್ರಶಸ್ತಿಯು ₹ 25 ಸಾವಿರ ನಗದು ಹಾಗೂ ಪ್ರಶಸ್ತಿ ಫಲಕಗಳನ್ನು ಒಳಗೊಂಡಿದೆ. ಸೆಪ್ಟೆಂಬರ್‌ ಕೊನೆಯ ವಾರ ಅಥವಾ ಅಕ್ಟೋಬರ್‌ ಮೊದಲ ವಾರದಲ್ಲಿ ಉಡುಪಿಯಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಅವರು ತಿಳಿಸಿದರು.
ಬಲಿಪ ಭಾಗವತರಿಗೆ ಪಾರ್ತಿಸುಬ್ಬ ಪ್ರಶಸ್ತಿ

– ಪ್ರಜಾವಾಣಿ

error: Content is protected !!
Share This