ಮೈಸೂರು: ಡಾ. ಎಂ. ಪ್ರಭಾಕರ ಜೋಶಿ ಅಭಿನಂದನಾ ಸಮಿತಿ ವತಿಯಿಂದ ಯಕ್ಷಗಾನ ಅರ್ಥಧಾರಿ ಪ್ರಭಾಕರ ಜೋಶಿ ವಾಗರ್ಥ ಗೌರವ, ಸಂವಾದ, ವಿಚಾರಸಂಕಿರಣ, ತಾಳಮದ್ದಳೆ, ಬಯಲಾಟ ಪ್ರದರ್ಶನಕ್ಕೆ ಜಗನ್ಮೋಹನ ಅರಮನೆಯಲ್ಲಿ ಶನಿವಾರ ಚಾಲನೆ ನೀಡಲಾಯಿತು.

ಈ ಸಂದರ್ಭ ಉಪಸ್ಥಿತರಿದ್ದ ಅಭಿನಂದನಾ ಸಮಿತಿಯ ಕಾರ್ಯದರ್ಶಿ ವಿದ್ವಾನ್ ಗ.ನಾ.ಭಟ್ಟ ಮಾತನಾಡಿ, ಜೋಶಿಯವರು ಪ್ರತಿಭೆಗಳ ಸಂಗಮ. ಅವರೊಬ್ಬ ಸಂಪನ್ಮೂಲ ವ್ಯಕ್ತಿ, ಸಲಹೆಗಾರ. ತಾಳಮದ್ದಲೆಯಲ್ಲಿ ಅರ್ಥಧಾರಿಯಾಗಿ ಗಳಿಸಿರುವ ಕೀರ್ತಿ ಜನಮಾನಸದಲ್ಲಿ ಬೇರೂರಿದೆ. ಯಕ್ಷಗಾನದ ಕಲಾವಿದರು, ವಿಮರ್ಶಕರು, ಪಾತ್ರಧಾರಿಗಳು ದ್ವೀಪದಂತಾಗಿದ್ದು ಸಂಗಮವಿಲ್ಲದಂತಾಗಿದೆ. ಇಂಥಹ ಸಂದರ್ಭದಲ್ಲಿ ಯಕ್ಷಗಾನದ ಕುರಿತು ಜೋಶಿ ತಿಳಿಸುತ್ತಿರುವುದು ನಿಜಕ್ಕೂ ಶ್ಲಾಘನೀಯ. ಅವರೊಬ್ಬ ವ್ಯಕ್ತಿಯಾಗಿ, ಶಕ್ತಿಯಾಗಿ, ಸಂಸ್ಕೃತಿಯಾಗಿ ಸಮಾಜದಲ್ಲಿ ಯಕ್ಷಗಾನ ಕಲೆಯನ್ನು ಬೆಳೆಸುತ್ತಿದ್ದಾರೆ ಎಂದು ಬಣ್ಣಿಸಿದರು.

ಬಳಿಕ ಮಾತನಾಡಿದ ವಿಮರ್ಶಕ ಡಾ. ರಮಾನಂದ ಬನ್ಸಾರಿ, ಓಂಕಾರ ಬಿಟ್ಟರೇ ಪ್ರೀತಿ ಎಂಬ ಎರಡಕ್ಷರಕ್ಕೆ ಹೆಚ್ಚಿನ ಮಹತ್ವ ಮತ್ತು ಶಕ್ತಿ ಇರುವುದು. ದೌರ್ಬಲ್ಯ ಇಲ್ಲದವರು ಮನುಷ್ಯರಲ್ಲ. ನಾವು ದುಡಿಯುವ ಕ್ಷೇತ್ರದಲ್ಲಿ ದೌರ್ಬಲ್ಯಗಳು ಇದ್ದೇ ಇರುತ್ತದೆ. ಆದರೆ ಅದನ್ನು ಮೀರಿ ನಿಲ್ಲಬೇಕಾದದ್ದು ಮನುಷ್ಯನ ಜೀವನದ ಪಾತ್ರ. ಹಲವು ದೌರ್ಬಲ್ಯಗಳನ್ನು ದಾಟಿ ಪಾರ್ಥಿಸುಬ್ಬ ಪ್ರಶಸ್ತಿಯನ್ನು ಜೋಶಿಯವರು ಪಡೆದುಕೊಂಡಿದ್ದಾರೆ. ಯಕ್ಷಗಾನ ಮೂಲಭೂತವಾಗಿ ಮತ್ತು ಅಂತರ್ಗತವಾಗಿ ದೌರ್ಬಲ್ಯಗಳಿಂದ ಕೂಡಿದೆ ಎಂದು ತಿಳಿಸಿದರು.

ಕಲೆಯೇ ಬೇರೆ ಬದುಕೇ ಬೇರೆ, ತಾಳಮದ್ದಳೆ ಈಗಿನವರಿಗೆ ಅರಿವೇ ಇಲ್ಲದಂತಾಗಿದೆ. ಅದೊಂದು ರಸಲೋಕ. ಯಕ್ಷಗಾನವನ್ನು ಬದುಕಿನ ಪ್ರತ್ಯೇಕವಾದ ಮಾಧ್ಯಮವೆಂದು ಕರೆಯಬಹುದು. ಆದರೆ, ಇಂದು ಯಕ್ಷಗಾನವನ್ನು ಹಗುರವಾಗಿ ಕಾಣಲಾಗುತ್ತಿದೆ. ಕಲೆ, ಸಾಹಿತ್ಯ, ಸಂಸ್ಕೃತಿಯನ್ನು ಹಗುರವಾಗಿಸಬಾರದು. ಪ್ರತಿಯೊಂದರಲ್ಲೂ ಅಭೂತಪೂರ್ವವಾದಂತಹ ಮಾಯಾಶಕ್ತಿ ಇರುತ್ತದೆ. ಯಕ್ಷಗಾನದಲ್ಲಿ ಅರ್ಥಧಾರಿಕೆಯೇ ಪ್ರತ್ಯೇಕವಾದ ಕಲೆ ಎಲ್ಲರಿಗೂ ಸುಲಭವಾಗಿ ಬರುವುದಿಲ್ಲ. ಪಾತ್ರಧಾರಿಗೆ ಪ್ರತಿಭೆ ಇರಲೇಭೆಕು. ಇಲ್ಲವಾದರೆ ಸಮಚಿತ್ತವಾದ ಪಾತ್ರ ನಿರ್ವಹಿಸಲು ಆಗುವುದಿಲ್ಲ ಎಂದರು.

ವಿಮರ್ಶಕ ಸೀತಾರಾಮ ಭಟ್ ಮಾತನಾಡಿ, ಡಾ. ಪ್ರಭಾಕರ ಜೋಶಿಯವರು ಒಂದು ಎನ್ ಸೈಕ್ಲೋಪಿಡಿಯಾದಂತೆ ಸಕಲವನ್ನು ತಿಳಿದವರು. ಯಾವುದೇ ವಿಷಯವಾದರೂ ಚಿಕಿತ್ಸಕ ರೂಪದಲ್ಲಿ ನೋಡಬಲ್ಲವರು. ಪ್ರತಿಯೊಂದನ್ನು ಅಕಾಡೆಮಿಕ್ ಆಗಿ ಮಾಡುವಂತವರು. ಯಕ್ಷಗಾನ, ತಾಳಮದ್ದಳೆ ಪ್ರಸ್ತುತ ಕಡಿಮೆಯಾಗಿದೆ. ಕಳೆದದ್ದನ್ನು ಹಿಂದಿರುಗಿಬೇಕಾಗಿದೆ. ಇಂದಿನ ಕಲಾವಿದರಲ್ಲಿ ಸೌಜನ್ಯವಿಲ್ಲದಂತಾಗಿದೆ. ಇನ್ನೊಬ್ಬ ಕಲಾವಿದನನ್ನು ಬೆಳೆಸುವುದಿರಲಿ ಆ ಕ್ಷೇತ್ರದಲ್ಲಿ ಉಳಿಸಿಕೊಳ್ಳುವ ಕೆಲಸವನ್ನು ಮಾಡರು. ವಾಲ್ಮೀಕಿ, ಕುಮಾರವ್ಯಾಸರು ಒಂದು ಮಹಾಕಾವ್ಯಗಳನ್ನು ಬರೆದು ಮಹಾಕವಿಯಾದರೂ ಅದರಂತೆಯೇ ಜೋಶಿಯವರ ವಾಗರ್ಥ ಮಹಾಕಾವ್ಯವಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಕುವೆಂಪು ವಿಶ್ವವಿದ್ಯಾನಿಲಯ ವಿಶ್ರಾಂತ ಕುಲಪತಿ ಕೆ. ಚಿದಾನಂದ ಗೌಡ, ಪಾರ್ಥಿ ಸುಬ್ಬ ಪ್ರಶಸ್ತಿ ವಿಜೇತ ಡಾ. ಎಂ. ಪ್ರಭಾಕರ ಜೋಶಿ, ಡಾ. ಜೋಶಿ ಅಭಿನಂದನಾ ಸಮಿತಿ ಗೌರವಾಧ್ಯಕ್ಷ ಸೀತಾರಾಮ ಭಟ್ ದಾಮ್ಲೆ, ಜೋಶಿ ಅಭಿನಂದನಾ ಸಮಿತಿ ಅಧ್ಯಕ್ಷ ಎಂ. ಬಾಲಚಂದ್ರ ಡೋಂಗ್ರೆ, ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಪ್ರದೀಪ್ ಕುಮಾರ ಕಲ್ಕೂರ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ರಾಜ್ಯಧರ್ಮ ಪತ್ರಿಕೆ, ಮೈಸೂರು ದಿನಾಂಕ 14-05-2017ರಂದು ಪ್ರಕಟಿತ