ಜಗತ್ತಿನ ಜೀವಂತ ರಂಗಕಲೆಗಳಲ್ಲಿ ಯಕ್ಷಗಾನವೂ ಒಂದು. ಪ್ರಸ್ತುತ ಕಾಲಘಟ್ಟದಲ್ಲಿ ಖ್ಯಾತಿಯ ಹೆಸರಿನಲ್ಲಿ ಕಲಾಗ್ರಹಿಕೆಯನ್ನು ಕೆಡಿಸುವ ಕೆಲಸಗಳು ನಡೆಯುತ್ತಿವೆ ಎಂದು ಯಕ್ಷಗಾನ ವಿದ್ವಾಂಸ ಡಾ.ಎಂ.ಪ್ರಭಾಕರ ಜೋಶಿ ಹೇಳಿದರು.

ನಗರದ ಎಸ್‌ಡಿಎಂ ಕಾನೂನು ಕಾಲೇಜು ಸಭಾಂಗಣದಲ್ಲಿ ಯಕ್ಷಾಂಗಣ ಮಂಗಳೂರು ಮತ್ತು ಕರ್ನಾಟಕ ಯಕ್ಷಭಾರತಿ ವತಿಯಿಂದ 6ನೇ ವರ್ಷದ ಯಕ್ಷಗಾನ ತಾಳಮದ್ದಳೆ ಸಪ್ತಾಹದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.

ಬಡಗುತಿಟ್ಟು ಹವ್ಯಾಸಿ ಯಕ್ಷಗುರು, ಭಾಗವತ ತೋನ್ಸೆ ಜಯಂತ ಕುಮಾರ್ ಅವರಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಶ್ರೀ ದೇವಿ ಸಮೂಹ ಶಿಕ್ಷಣ ಸಂಸ್ಥೆ ಅಧ್ಯಕ್ಷ ಎ. ಸದಾನಂದ ಶೆಟ್ಟಿ ಪ್ರಶಸ್ತಿ ಪ್ರದಾನ ಮಾಡಿದರು.

ಕರ್ನಾಟಕ ಯಕ್ಷಗಾನ ಬಯಲಾಟ ಅಕಾಡೆಮಿ ಅಧ್ಯಕ್ಷ ಪ್ರೊ. ಎಂ.ಎ.ಹೆಗಡೆ ಅಧ್ಯಕ್ಷತೆ ವಹಿಸಿದ್ದರು. ವಿಮರ್ಶಕ ಡಾ.ಚಂದ್ರಶೇಖರ ದಾಮ್ಲೆಯವರ ‘ರಂಗಭಾಷೆ’ ಕೃತಿಯನ್ನು ಡಾ. ಎಂ.ಪ್ರಭಾಕರ ಜೋಶಿ ಬಿಡುಗಡೆಗೊಳಿಸಿದರು. ಅತಿಥಿಗಳಾಗಿ ಶೃಂಗೇರಿ ಶಾಖಾ ಮಠ ಕೋಟೆಕಾರಿನ ಸತ್ಯಶಂಕರ ಬೊಳ್ಳಾವ, ಕಸಾಪ ಜಿಲ್ಲಾಧ್ಯಕ್ಷ ಪ್ರದೀಪ ಕುಮಾರ್ ಕಲ್ಕೂರ, ಮುವಥಾಯಿ ಅಸೋಸಿಯೇಶನ್ ಅಧ್ಯಕ್ಷ ರಾಜಗೋಪಾಲ ರೈ, ಉದ್ಯಮಿ ಜಗದೀಶ್ ಪೂಜಾರಿ ಆಚೆಬೈಲು ಇರಾ ಮತ್ತಿತರರು ಉಪಸ್ಥಿತರಿದ್ದರು. ಯಕ್ಷಾಂಗಣದ ಕಾರ್ಯಾಧ್ಯಕ್ಷ ಭಾಸ್ಕರ ರೈ ಕುಕ್ಕುವಳ್ಳಿ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ತೋನ್ಸೆ ಪುಷ್ಕಳ ಕುಮಾರ್ ಕಾರ್ಯಕ್ರಮ ನಿರೂಪಿಸಿದರು.

“ನಾಟ್ಯ ವೈಭವ, ರಂಗ ವೈಭವದಂಥ ಪ್ರದರ್ಶನಗಳು ಯಕ್ಷಗಾನದಲ್ಲಿ ಒಳ್ಳೆಯ ಬೆಳವಣಿಗೆಗಳಲ್ಲ. ಯಕ್ಷಗಾನವನ್ನು ಸರಿಯಾಗಿ ಅಭ್ಯಾಸ ಮಾಡದೆ ವೇದಿಕೆ ಹತ್ತುವ ಪ್ರವೃತ್ತಿ ಹೆಚ್ಚುತ್ತಿದೆ. ಯಕ್ಷಗಾನ ಸಂರಕ್ಷಣೆ, ಸ್ಥಿರೀಕರಣ, ಪರಿಷ್ಕರಣೆ, ಜತೆಜತೆಯಾಗಿ ನಡೆಯಬೇಕು.”
– ಡಾ.ಎಂ.ಪ್ರಭಾಕರ ಜೋಶಿ ಯಕ್ಷಗಾನ ವಿದ್ವಾಂಸ

error: Content is protected !!
Share This