– ರಘು ಕಟ್ಟಿನಕೆರೆ, Toronto Canada

 

ಭಾರತೀಯ ಸಾಂಪ್ರದಾಯಿಕ ರಂಗಭೂಮಿಗಳನ್ನು ಚೆನ್ನಾಗಿ ಅರ್ಥೈಸಿಕೊಳ್ಳಲು ಕಾಲ ಅವಕ್ಕೆ ಒಡ್ಡಿರುವ ಹೊಸ ಸಮಸ್ಯೆಗಳನ್ನು ಅಧ್ಯಯನ ಮಾಡುವ ಮೂಲಕ ಸಾಧ್ಯ ಎನ್ನುವುದು ನಿಜ ಹೌದು. ಹೊಸ ವಿಷಯ ವಸ್ತುಗಳನ್ನು ಹೇಗೆ ಬಳಸಬೇಕು ಬಳಸಬೇಡವೇ, ರಂಗ ಮಾಧ್ಯಮದ ಚೌಕಟ್ಟೇನು ಇತ್ಯಾದಿ ಪ್ರಶ್ನೆಗಳಿಗೆ ಉತ್ತರ ಹುಡುಕುವಲ್ಲಿ ರಂಗಭೂಮಿಯ ರೂಪ ಎದ್ದು ನಿಲ್ಲುತ್ತದೆ. ಹೀಗೆ ಯಕ್ಷಗಾನ ಬಯಲಾಟದ ಸ್ವರೂಪ ಆಗುತ್ತಿರುವ ಬದಲಾವಣೆ ಹಾಗೂ ಸಂಬಂಧಿಸಿದ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳುವುದರಲ್ಲಿ ಯಕ್ಷಗಾನದ ಮತ್ತು ತನ್ಮೂಲಕ ಭಾರತೀಯ ರಂಗಭೂಮಿಯ ಹಲವು ವಿಚಾರಗಳನ್ನು ಸ್ಪಷ್ಟವಾಗಿ ಮಂಡಿಸಿ ಅರ್ಥಮಾಡಿಸುವ ಕೆಲಸವನ್ನು ಡಾ ಪ್ರಭಾಕರ ಜೋಶಿಯವರ ಯಕ್ಷಗಾನ ಸ್ಥಿತಿ ಗತಿ ಮಾಡುತ್ತದೆ. ಈ ವಿಚಾರವಾಗಿ ಹಲವಾರು ಮಾತಾಡುವುದು ಬರೆಯುವುದು ಇದೆಯಾದರೂ ಸುಮಾರು ೫೦ ವರ್ಷಕ್ಕೂ ಹೆಚ್ಚು ವರ್ಷ ಕಲಾವಿದರಾಗಿ ಕಲೆಯನ್ನು ಒಳಗಿಂದಬಲ್ಲದ್ದಷ್ಟೇ ಅಲ್ಲದೆ ತಾಳಮದ್ದಲೆಯ ಶ್ರೇಷ್ಠ ಅರ್ಥಧಾರಿಯೂ ಯಕ್ಷಗಾನದ ನಿಘಂಟಿನಂತಹ ವಿಶೇಷ ಗ್ರಂಥಬರೆದ ಜೋಶಿಯವರ ಸಮಗ್ರ ಅವಲೋಕನ ರಂಗಭೂಮಿಯ ವಿದ್ಯಾರ್ಥಿಗಳಿಗೆ ಪಾಟರೂಪದಲ್ಲಿಯೂ ಇದೆ ಎಂದರೆ ತಪ್ಪಲ್ಲ. ಎಲ್ಲಾ ಭಾರತೀಯ ಹಾಗೂ ಆಸುಪಾಸಿನ ದೇಶಗಳಲ್ಲಿನ ರಂಗಭೂಮಿಯ ತುಲನೆಯಲ್ಲಿ ಯಕ್ಷಗಾನವನ್ನು ಕಾಣುವ ಪ್ರಯತ್ನ ಒಂದು ರೀತಿಯಲ್ಲಿ ವಿಸ್ತಾರವಾದ ನೋಟ. ಇದರಲ್ಲಿನ ವಿಷಯಗಳನ್ನು ಗಮನಿಸೋಣ.

ಒಂದೊಂದು ರಂಗಕಲೆ ಒಂದೊಂದು ಭಾಷೆ, ಯಕ್ಷಗಾನದ ರಂಗಕಲಾಭಾಷೆಯ ರೂಪ ಏನು ಎಂದು ವಿವರಿಸುತ್ತಾ ಈ ಲೇಖನ ಸಂಗ್ರಹ ಆರಂಭವಾಗುತ್ತದೆ. ಅವಸ್ಥಾನುಕೃತಿ: ನಾಟ್ಯಮ್ ಎಂದಾಗಿ, ಅಭಿವ್ಯಕ್ತಿ ವ್ಯಕ್ತಿ ಪ್ರದೇಶ ಸಂಪ್ರದಾಯ ದೇಶ ಕಾಲ ಇವುಗಳ ಆನಾವರಣದಲ್ಲಿ ಯಕ್ಷಗಾನದ ರಂಗಕಲಾಭಾಷೆ ಹೇಗೆ ಮೂಡುತ್ತದೆ ಎಂದು ಜೋಶಿಯವರು ವಿವರಿಸುತ್ತಾರೆ. ಇದು ಯಕ್ಷಗಾನ ಮಾಧ್ಯಮದ ಚೌಕಟ್ಟನ್ನು ವಿವರಿಸಲು ಹೇಗೆ ಹಿನ್ನೆಲೆಯಾಗಿದೆ ಎಂದು ಉದಾಹರಣೆಗಳ ಮೂಲಕ ವಿವರಿಸಿದ್ದಾರೆ. ಈ ಮೂಲಭೂತ ನೋಟ ವಿಶಿಷ್ಠವಾದ್ದು. ಆಟ ಎಂಬ ಭಾಷೆ, ಆಟವೆಂಬ ಪೂಜೆ, ಆಟದ ನಡೆ, ಹಿಮ್ಮೇಳದ ಭಾಷೆ ಇವೆಲ್ಲ ಯಕ್ಷಗಾನವನ್ನು ಅಧ್ಯಯನ ಮಾಡುವವರಿಗೆ ಹೇಳಿ ಬರೆಸಿದ ಹಾಗಿದೆ. ಇಲ್ಲಿ ಮೇಳದ ವೇಷಗಳ ವ್ಯವಸ್ಥೆ, ರಂಗದ ರಚನೆ ಇವೆಲ್ಲ ಇದೆ. ಹೊಸತನ ಹೀಗೆ ತರಬೇಕು ಹೇಗೆ ತರಬೇಕು ತರಬೇಕೇ ಇವೆಲ್ಲ ವಿಚಾರವು ಇದೆ. ನಿರ್ದೇಶನ ಬೇಕು ವ್ಯವಸ್ಥೆ ಹಾಳಾಗಬಾರದು ಸಂಪ್ರದಾಯದ ಹಿಡಿತ ಸಡಿಲವಾಗಿದೆ ಎನ್ನುವುದು ನಿಶ್ಚಿತವಾಗಿದೆ.

ಮಾಧ್ಯಮದ ವಸ್ತು ರಚನಾ ವ್ಯವಸ್ಥೆ, ಭಾಗವತಿಕೆಯಲ್ಲಿ ಹೃಸ್ವಸ್ವರ ಎಳೆಯಬಹುದೇ, ಕಲೆಯ ಲೌಕಿಕೀಕರಣ, ತಾಳಮದ್ದಳೆ ಕಲೆ ಹೌದೇ. ಅರ್ಥಗಾರಿಕೆಗೆ ಹೀಗೆ ನಾವು ಯೋಚಿಸಬಹುದಾದ ಹೆಚ್ಚಿನ ರಂಗಭೂಮಿಯ ಸಮಸ್ಯೆಗಳ ಚರ್ಚೆ ಮತ್ತು ಒಂದು ಹಂತಕ್ಕೆ ಪರಿಹಾರವೂ ಈ ಪುಸ್ತಕದಲ್ಲಿ ಇದೆ.

ಇನ್ನು ತಾಳಮದ್ದಳೆಯಲ್ಲಿ ಅಥವಾ ಯಕ್ಷಗಾನದಲ್ಲಿ ಅರ್ಥಗಾರಿಕೆ ಹೇಗಿರಬೇಕು, ಶಿಸ್ತು ಹೇಗೆ, ಕ್ರಮ ಹೇಗೆ ಇವನ್ನು ಕಲಿಯುವುದಾದರೆ ಜೋಶಿಯವರಂತ ಶ್ರೇಷ್ಠ ಅರ್ಥಧಾರಿಗಳಿಂದಲ್ಲದೆ ಇನ್ಯಾರಿಂದ? ಯಕ್ಷಗಾನದ ಬಳಕೆಯಲ್ಲಿರುವ ಇರದ ಹೆಚ್ಚಿನ ಪ್ರಸಂಗಗಳ ಸನ್ನಿವೇಷ ಕ್ರಮ ಜೋಶಿಯವರಲ್ಲಿ ಇರುವುದರಿಂದ ಅವನ್ನೆಲ್ಲ ಸಂಗ್ರಹಿಸಿಟ್ಟರೆ ಹಲವಾರು ಪುಸ್ತಕವಾದೀತು! ಆದರೆ ಇಲ್ಲಿ ಮೇಲ್ನೋಟ ಇದೆ. ಕಲಾವಿದರು ಇದನ್ನು ಓದಿ ಅಳವಡಿಸಿಕೊಂಡರೆ ಔಚಿತ್ಯದಲ್ಲಾಗುತ್ತಿರುವ ಅವ್ಯವಸ್ಥೆ ಕಡಿಮೆಯಾದೀತು. ಪಾತ್ರಗಳ ಸಂಬಂಧ ಗಮನದಲ್ಲಿಟ್ಟು ಅರ್ಥಹೇಳಬೇಕು ಯಾವ ಕ್ಷಣದಲ್ಲೂ ಅದನ್ನು ಮರೆಯುವಂತಿಲ್ಲ ಎಂಬಿತ್ಯಾದಿ ಮೂಲಭೂತ ಶಿಕ್ಷಣ ಈ ಪುಸ್ತಕದಲ್ಲಿ ಇದೆ. ಈ ಪುಸ್ತಕದ ಇನ್ನೊಂದು ವಿಶೇಷ ಎಂದರೆ ಬರಿ ಗಹನವಾದ ವಿಷಯಗಳಲ್ಲದೆ ಬಳಕೆಗೆ ಬೇಕಾದ ಮೇಲೆ ಹೇಳಿದ್ದಲ್ಲದೇ ಮೇಳದ ಸಂಘಟನೆಯ ಸೂಕ್ಷ್ಮಗಳು ಇವೆ.

ಪ್ರಯೋಗಗಳನ್ನು ವಿರೋಧಿಸದೆ ಪ್ರಯೋಗಗಳಿಗೆ ಯಕ್ಷಗಾನ ಬಲಿಯಾಗದೆ ಬಲಿಷ್ಠವಾಗಬಹುದು ಎಂಬ, ಪ್ರಯೋಗಗಳನ್ನು ಯಾವಾದೃಷ್ಠಿಯಿಂದ ನೋಡಬೇಕು ಎಂಬ ವಿವರ ಕೊನೆಯಲ್ಲಿ ಇದೆ. ಯಕ್ಷಗಾನದ ದ್ವಿಮುಖ ಚಲನೆ ಬೇರೆ ಭಾರತೀಯ ಕಲೆಗಳ ಬೆಳವಣಿಗೆ ಮತ್ತು ಸ್ವರೂಪಗಳ ತುಲನೆಯಲ್ಲಿ ಹೇಗಿದೆ ಎನ್ನುವುದು ಯಕ್ಷಗಾನ ಸ್ಥಿತಿ ಗತಿಯ ಒಂದು ಹೈಲೈಟ್. ಕಲೆ ಹಾಳೂ ಆಗುತ್ತಿದೆ ಬೆಳೆಯುತ್ತ ಶಿಸ್ತುಬರುವ ಕಡೆಗೂ ಹೋಗುತ್ತಿದೆ ಎನ್ನುವುದರ ಜೊತೆಗೆ ಯಕ್ಷಗಾನ ಮತ್ತು ಬೇರೆ ಭಾರತೀಯಕಲೆಗಳ ಚಿತ್ರ ಸಮೇತ ತುಲನೆ ಹೇಗೆ ಕಲೆಗಳಲ್ಲಿ ಸಾಮ್ಯ ಇದೆ ಎನ್ನುವುದನ್ನು ಕಣ್ಣಮುಂದಿಡುತ್ತದೆ.

ತೆರುಕೂತ್ತು, ಕೂಚಿಪುಡಿ ಭಾಗವತ ಮೇಳ, ಛಾವು, ಅಂಖಿಯನಾಟ, ಭವಾಯಿ, ಕೋಲ, ಇಂಡೋನೇಷಿಯಾ, ಮಲೇಶಿಯಾ, ಬರ್ಮಾಗಳ ರಂಗಭೂಮಿ ಇವುಗಳ ಜೊತೆ ಯಕ್ಷಗಾನವನ್ನು ‘ಯಕ್ಷಗಾನ ಸ್ಥಿತಿ ಗತಿ’ ನಮಗೆ ತೋರಿಸಿದಾಗ ಓಹ್ಹೊ ಈ ರಂಗಭೂಮಿಗಳಲ್ಲಿ ಇಷ್ಟು ಸಾಮ್ಯ ಇದೆ ಎಂಬ ಕಲ್ಪನೆ ಮೂಡುತ್ತದೆ. ಕಲೆಯ ಜೀವನದ ಬೇರೆಬೇರೆ ಹಂತದಲ್ಲಿರುವ ಈ ರಂಗಭೂಮಿಗಳ ಇತಿಹಾಸ ನಮ್ಮ ಯಕ್ಷಗಾನದ ಭವಿಷ್ಯಕ್ಕೆ ಹೇಗೆ ಸಹಕಾರಿ ಎಂಬ ಆಲೋಚನೆಗೆ ಎಡೆ ಮಾಡಿಕೊಡುತ್ತದೆ.

ಕೊನೆಯಲ್ಲಿ ಹೇಳಲೇಬೇಕಾದ್ದು ಒಂದಿದೆ. ಜೋಶಿಯವರು ಖ್ಯಾತ ವಿಮರ್ಶಕರಾದ್ದರಿಂದ ಈ ಪುಸ್ತಕ ರಂಗಭೂಮಿಗಳ ವಿಮರ್ಶಕರಿಗೆ ಒಂದು ಕೈಪಿಡಿಯಂತಿದೆ. ಯಾವ ದೃಷ್ಠಿಯಿಂದ ಅರ್ಥಗಾರಿಕೆ, ಆಟ, ಭಾಗವತಿಕೆ, ವೇಷ ಹಿಮ್ಮೇಳ ಇವನ್ನೆಲ್ಲ ನೋಡಬೇಕು ಎಂಬ ಒಳ್ಳೆಯ ವಿಮರ್ಶೆಗೆ ಬೇಕಾಗುವ ಬುನಾದಿ ಇಲ್ಲಿದೆ. ಯಕ್ಷಗಾನದ ಅಭಿಮಾನಿಗಳು, ರಂಗಭೂಮಿಗಳನ್ನು ಅಧ್ಯಯನ ಮಾಡುವ ವಿದ್ಯಾರ್ಥಿಗಳು ಹಾಗೂ ವಿಮರ್ಶಕರು ಓದಿ ಪರಾಮರ್ಶನೆಗೆ ಇಟ್ಟು ಕೊಳ್ಳಬೇಕಾದ ಪುಸ್ತಕ ಯಕ್ಷಗಾನ ಸ್ಥಿತಿ ಗತಿ.

error: Content is protected !!
Share This