ಇತ್ತೀಚೆಗಿನ ದಿನಗಳು ಯಕ್ಷಗಾನ ಕಲೆಯಲ್ಲಿ ಜಾಣ್ಮೆಯ ಕಾಲ. ಯಕ್ಷಗಾನದಲ್ಲಿ ಕೌಶಲ ಮುಖ್ಯ. ಆದರೆ ಆಡಂಬರ ಸಲ್ಲದು ಎಂದು ಯಕ್ಷಗಾನ ವಿದ್ವಾಂಸ ಡಾ| ಎಂ. ಪ್ರಭಾಕರ ಜೋಶಿ ಹೇಳಿದರು.

ಯಕ್ಷಾರಾಧನಾ ಕಲಾಕೇಂದ್ರ ಉರ್ವ, ಮಂಗಳೂರು ಸಂಸ್ಥೆಯ 9 ನೇ ವಾರ್ಷಿಕೋತ್ಸವ ಮತ್ತು ಮದ್ದಳೆಗಾರ ಪದ್ಯಾಣ ಸಿ. ಶಂಕರನಾರಾಯಣ ಭಟ್, ಯಕ್ಷಗಾನ ಕಲಾವಿದ ಲಕ್ಷ್ಮಣ ಕುಮಾರ ಮರಕಡ ಅವರಿಗೆ ಪ್ರಶಸ್ತಿ ಪ್ರದಾನಿಸಿ ಅವರು ಮಾತನಾಡಿದರು.

ಪದ್ಯಾಣ ಶಂಕರನಾರಾಯಣ ಭಟ್ ಅವರು ಮಾಂಬಾಡಿ, ತಲೆಂಗಳ ಕುಟುಂಬದ ಶ್ರೀಮಂತಿಕೆಯನ್ನು ಉಳಿಸಿಕೊಂಡಿದ್ದಾರೆ. ಅವರು ನಾದದ ಮರ್ಮ ಅರಿತವರು. ಇತ್ತೀಚೆಗಿನ ದಿನಗಳಲ್ಲಿ ರಂಗಭೂಮಿಯಲ್ಲಿ ಕಲೆಯನ್ನು ಕಾಣುವವರು ಕಡಿಮೆ. ಪದ್ಯಾಣರು ಸಮಗ್ರ ಯಕ್ಷಗಾನದ ಉತ್ಕೃಷ್ಟ ಮದ್ದಳೆಗಾರ. ಅದೇ ರೀತಿ ಲಕ್ಷ್ಮಣ ಕುಮಾರ ಮರಕಡ ಅವರು ತೆಂಕುತಿಟ್ಟಿನ ಮುಂದಿನ ತಲೆಮಾರಿನ ಭರವಸೆಯ ಯುವ ಕಲಾವಿದ ಎಂದರು.

ಪ್ರಶಸ್ತಿ ಸ್ವೀಕರಿಸಿದ ಬಳಿಕ ಪದ್ಯಾಣ ಶಂಕರನಾರಾಯಣ ಭಟ್ ಮಾತನಾಡಿ, ನನಗೆ ನೀಡಿದ ಪ್ರಶಸ್ತಿಯು ಕಲಾಮಾತೆಗೆ ಸಂದ ಗೌರವ ಎಂದರು. ಯಕ್ಷಗಾನ ಕಲಾವಿದ ಲಕ್ಷ್ಮಣ ಕುಮಾರ ಮರಕಡ ಮಾತನಾಡಿ, ಕಲಿತ ವಿದ್ಯೆಯನ್ನು ಮತ್ತೊಬ್ಬರಿಗೆ ಕಲಿಸಿದಾಗ ಸಾರ್ಥಕತೆ ಹೊಂದುತ್ತದೆ ಎಂದರು.

ಸಮ್ಮಾನ

ಸಮಾರಂಭದಲ್ಲಿ ಮದ್ದಳೆಗಾರ ಪದ್ಯಾಣ ಸಿ. ಶಂಕರನಾರಾಯಣ ಭಟ್ ಅವರಿಗೆ ಯಕ್ಷಕಲಾರಾಧಕ ಪ್ರಶಸ್ತಿ ಮತ್ತು ಯಕ್ಷಗಾನ ಕಲಾವಿದ ಲಕ್ಷ್ಮಣ ಕುಮಾರ ಮರಕಡ ಅವರಿಗೆ ಯುವ ಯಕ್ಷಕಲಾರಾಧಕ ಪ್ರಶಸ್ತಿ ನೀಡಿ ಸಮ್ಮಾನಿಸಲಾಯಿತು. ಕಸಾಪ ಮಾಜಿ ರಾಜಾಧ್ಯಕ್ಷ ಹರಿಕೃಷ್ಣ ಪುನರೂರು, ಮದ್ದಳೆಗಾರ ಕೃಷ್ಣಪ್ರಕಾಶ್ ಉಳಿತ್ತಾಯ, ಕಾರ್ಪೊರೇಟರ್ ರಾಧಾ ಕೃಷ್ಣ ಸುಮಂಗಲಾ ರತ್ನಾಕರ್, ಕೋಶಾಧಿಕಾರಿ ರತ್ನಾಕರ ರಾವ್ ಬಿ. ಉಪಸ್ಥಿತರಿದ್ದರು.

– ಉದಯವಾಣಿ (ದಿನಾಂಕ 24 ಆಗಸ್ಟ್ 2018)

error: Content is protected !!
Share This