ಹಿಂದೆ ಧರ್ಮಸ್ಥಳ ಮೇಳದ ಆಟವೆಂದರೆ ಅದು ಊರಿಗೆ ಹಬ್ಬ ಜಾತ್ರೆ ಎಲ್ಲವೂ ಆಗಿರುತ್ತಿತ್ತು. ಮಧ್ಯಾಹ್ನವಾದರೆ ಚೌಕಿಯ ಮಹಾಗಣಪತಿ ಪೂಜೆಗೆ ಹಣ್ಣುಕ್ಕಾಯಿ ಕೊಂಡೊಯ್ಯುವ ಸಂಭ್ರಮ, ಇರುಳಿನ ಆಟದ ಪ್ರದರ್ಶನಕ್ಕೆ ರಂಗಸ್ಥಳ ಸಿದ್ದವಾಗುವುದನ್ನು ಬೆರೆಗು ಕಣ್ಣಿಂದ ನೋಡುವ ರೀತಿ. ಈ ನಡುವೆ ನೆತ್ತಿಯಲ್ಲಿ ಮೈಕುಗಳನ್ನು ಕಟ್ಟಿ ಊರೆಲ್ಲ ಕರಪತ್ರವನ್ನು ಚೆಲ್ಲುತ್ತಾ ಆಟದ ಪ್ರಚಾರ ಮಾಡುವ ಜೀಪು ಮತ್ತೆ ಅದರ ಹಿಂದೆ ಕರಪತ್ರವಾದ  ಬಣ್ಣದ ಕಾಗದವನ್ನು ಹೆಕ್ಕುವುದಕ್ಕೆ ಓಡುವ ಚಿಣ್ಣರು, ಊರ ನಡುವೆ ಸರಕಾರಿ ಬಾವಿಯಿದ್ದರೆ ಅದರ ಸುತ್ತ ಮೇಳದ ಕಲಾವಿದರಾದಿಯಾಗಿ ಹಲವರು ಸ್ನಾನ ಬಟ್ಟೆ ಒಗೆಯುತ್ತಿರುವುದು ಇದೆಲ್ಲ ಸರ್ವೇಸಾಮಾನ್ಯವಾದ ದೃಶ್ಯವಾಗಿತ್ತು. ರಾತ್ರಿಯ ಆಟಕ್ಕೆ ಇಂದ್ರನೋ ಭೀಮನೋ ಶೂರ್ಪನಖಿಯೋ ಆಗುವವರನ್ನು ಮಕ್ಕಳು ಬಾಯಿಯೊಳಗೆ ಬೆರಳಿಟ್ಟು ಸಡಗರದಿಂದ ನೋಡುತ್ತಿರುವುದು ಕೇವಲ ಒಂದೂರಿನ ಕಥೆಯಲ್ಲ. ಆಟವೆಂದರೆ ಹಾಗೆ. ಅದೊಂದು ಪರ್ವ. ಅದೇ ಬಾವಿಕಟ್ಟೆಯಲ್ಲಿ ಭುಜದವರೆಗೂ ಇಳಿಬಿಟ್ಟ ಕೂದಲು ಸೊಂಟದೊಲ್ಲೊಂದು ತೋರ್ತಮುಂಡು ಸುತ್ತಿಕೊಂಡು ಸ್ನಾನ ಮಾಡುತ್ತಿದ್ದ ಏರು ಜವ್ವನಿಗ ಗೋವಿಂದಣ್ಣನೂ ಒಬ್ಬರು. ಸರಳತೆಯೇ ಮೈವೆತ್ತ ಮುಂಡು ಬೈರಾಸಿನ  ಗೋವಂದಣ್ಣ ಇಂದು ಭಾರತದ ಪ್ರಥಮ ಪ್ರಜೆ  ರಾಷ್ಟ್ರ ಪತಿ ಕೋವಿಂದರ ಎದುರು ಕೈ ಮುಂದೆ ಮಾಡಿ ನಗುತ್ತಾ ನಿಂತಿದ್ದಾರೆ. ಎಲ್ಲಿನ ನಮ್ಮೂರ ಬಾವಿಕಟ್ಟೆ ಎಲ್ಲಿನ ರಾಷ್ಟ್ರ ಪತಿ. ಅಚ್ಚರಿಯಾಗುತ್ತದೆ. ಮನುಷ್ಯನ ಆದ್ಯಾಕ್ಷರಗಳು ಮತ್ತರದ ಅಂಕಗಳು ತುಂಡು ಬಟ್ಟೆಯಲ್ಲೇ ಬರೆಯಲ್ಪಡುತ್ತದೆ. ಆದರೆ ಆ ಬದುಕಿನ ಪಯಣ ಸಾಗುತ್ತಾ ಸಾಗುತ್ತಾ ರೇಷ್ಮೆಯ ಶಲ್ಯ ಹಗೆಲೇರುತ್ತದೆ.

ಸೂರಿಕುಮೇರಿ ಅದು ಎಲ್ಲಿದೆ ಎಂದು ಎಷ್ಟು ಜನ ಬಲ್ಲವರೋ ಗೊತ್ತಿಲ್ಲ. ಆದರೆ ಸುಮಾರು ಕಳೆದ ಐದು ದಶಕಗಳಷ್ಟು ಸಮಯ ಧರ್ಮಸ್ಥಳ ಮೇಳದ ಕರಪತ್ರದಲ್ಲಿ ಈ ಹೆಸರು ರಾರಾಜಿಸುತ್ತಾ ಇದೆ. ಈ ಒಂದು ಸಾಧನೆಯೇ ಈ ವ್ಯಕ್ತಿತ್ವದ ಎತ್ತರವನ್ನು ಯೋಗ್ಯತೆಯನ್ನು ಅಳೆಯಬಲ್ಲುದು. ಇದು ಸಾರ್ವಜನಿಕವಾದರೆ, ಮೊನ್ನೆ ಮೊನ್ನೆ ಹೀಗೆ ಗೋವಿಂದಣ್ಣನಿಗೆ ಕರೆ ಮಾಡಿದ್ದೆ. ಫೋನ್ ತೆಗೆದಾಗ ಯಥಾವತ್ ಅದೇ ಶಾಂತ ಸ್ವರ. ಒಂದು ಕ್ಷಣ ಮನಸ್ಸು ಹಿಂದಕ್ಕೇ ಓಡಿತು. ಧರ್ಮಸ್ಥಳ ಮೇಳದ ಆಟ ನಡೆಯುತ್ತಿರುತ್ತದೆ. ತಡರಾತ್ರಿ ಉಚ್ಚೆ ಹೊಯಲ್ಲು ಬಯಲಂಚಿಗೆ ಹೋಗಿ ಕುಳಿತಿರಬೇಕಾದರೆ ಇತ್ತ ರಂಗಸ್ಥಳದಲ್ಲಿ ಅಬ್ಬರದ ರಂಗ ಪ್ರವೇಶ ಹಿಂದೆಯೇ ಅದೇ ಹರಿತವಾದ ಕಂಠ ಸ್ವರ. ಇಂದ್ರನೋ ವಿಶ್ವಾ ಮಿತ್ರನೋ ರಂಗಸ್ಥಳದಲ್ಲಿ ಧೂಳೆಬ್ಬಿಸುವುದಕ್ಕೆ ತೊಡಗಿತ್ತು. ಬಯಲಂಚಿನಲ್ಲಿ ಕುಳಿತಿದ್ದವರು ರಂಗಸ್ಥಳದತ್ತ ಓಡಿ ಬರುವಾಗ ಇನ್ನೂ ಸುರಿಯುತ್ತಿದ್ದದ್ದು ಕಾಲ ಮೇಲೆ ಹೊಯ್ದರೂ ಪರಿವೆ ಇಲ್ಲ. ಬೆರಗು ಕಣ್ಣಿಂದ ರಂಗಸ್ಥಳದಲ್ಲಿ ನೋಡಿದರೆ ಗೋವಿಂದಣ್ಣ ಕುತ್ತು ಹಾರುತ್ತಿದ್ದರು. ಅದೇ ಗೋವಿಂದಣ್ಣನ ಮೃದು ಸ್ವರ  ಈಗ  ಅತ್ತ ಕಡೆಯಿಂದ ಕೇಳಿಸುತ್ತಿತ್ತು. ಆಗಲೇ ಹೇಳಿದ್ದರು ಮುಂದಿನವಾರ ಡೆಲ್ಲಿಗೆ ಹೋಗುತ್ತಿದ್ದೇನೆ. ಒಂದು ಪ್ರಶಸ್ತಿ ತೆಗೆದುಕೊಳ್ಳುವುದಕ್ಕಿದೆ. ಆಹಾ,  ಇನ್ನೊಂದು ಗರಿ ಅಲ್ಲಿ ದೆಹಲಿಯ ರಾಷ್ಟ್ರಪತಿ ಭವನದಲ್ಲಿ ಇವರುನ್ನು ಕಾದು ಕುಳಿತಿದೆ ಎಂದು ಅನಿಸಿತ್ತು.

ಯಕ್ಷಗಾನದಲ್ಲಿ ಕಲಾವಿದರಾಗಿ ನಿಜ ಜೀವನದ ವ್ಯಕ್ತಿಯಾಗಿ ಗೋವಿಂದಣ್ಣನಷ್ಟು ವ್ಯಾವಹಾರಿಕ ಜ್ಞಾನವನ್ನು ಕಂಡ ವ್ಯಕ್ತಿಯ ಬಗ್ಗೆ ನನಗರಿವಿಲ್ಲ. ಗೋವಿಂದಣ್ಣ ಸ್ವತಃ ಬದುಕನ್ನು ಕಂಡ ರೀತಿಯದು. ವಾಸ್ತವವನ್ನು ಅರಿತುಕೊಂಡ ಮನುಷ್ಯ. ಬಹಳವಾಗಿ ನಿರ್ವಿಕಲ್ಪ ಮತ್ತು ನಿರ್ದಾಕ್ಷಿಣ್ಯ ವ್ಯಕ್ತಿತ್ವ. ತನ್ನನ್ನು ಯಾವ ಬಗೆಯಲ್ಲಿ ಹೇಳಿದರು ಅದೊಂದು ವಿಷಯವೇ ಅಲ್ಲವೇನೋ ಎಂಬಂತೆ ಹೇಳಿದವರನ್ನು ಮುಗುಳು ನಗೆಯಲ್ಲಿ ಮಾತನಾಡಿಸುವ ವ್ಯಾವಹಾರಿಕ ಮತ್ತು ಪ್ರಾಮಾಣಿಕ ವ್ಯಕ್ತಿತ್ವದ ಗೋವಿಂದಣ್ಣ ಒಂದು ರೀತಿಯಲ್ಲಿ ಅಜಾತಶತ್ರು. ಬದುಕನ್ನು ಯಕ್ಷಗಾನಕ್ಕೆ ಅಥವಾ ಕಲೆಗೆ ಮುಡಿಪಾಗಿಟ್ಟೆ ಅಂತ ಹೇಳುವವರಿದ್ದಾರೆ. ಆದರೆ ಇವರು ಅದಾವ ಸಿದ್ಧಾಂತಕ್ಕೂ ಅನ್ವಯವಾಗದೇ ಬದುಕಿಗಾಗಿ ಕಲೆಯನ್ನು ಒಪ್ಪಿಕೊಂಡೆ ಅಂತ ಪ್ರಾಮಾಣಿಕತೆ ತೋರುತ್ತಾರೆ. ಅಲ್ಲಿಯೂ ಎಷ್ಟು ಸಾಧ್ಯ ಎನ್ನುವುದಕ್ಕಿಂತಲೂ ಎಷ್ಟು ಬೇಕೋ ಅನ್ನುವಷ್ಟು ಪ್ರಾಮಾಣಿಕವಾಗಿ ದುಡಿಮೆ ಸಲ್ಲಿಸಿದ್ದಾರೆ. ಇದೀಗ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯ ಗರಿ ಅಲಂಕರಿಸಲಿದೆ. ರಾಷ್ಟ್ರ ಪತಿ ಭವನದ ಗೊಡೆಗಳಲ್ಲಿ ಒಂದು ಸಲವಾದರೂ ಸೂರಿಕುಮೇರಿ ಗೋವಿಂದ ಭಟ್ ಅಂತ ಮೊಳಗದೇ ಇರಲಾರದು. ಯಕ್ಷಗಾನದ ಮಟ್ಟಿಗೆ ಅದು ಒಂದು ಬೃಹತ್ ಸಾಧನೆ.

ಕಲಾವಿದರಾಗಿ ಗೋವಿಂದಣ್ಣನನ್ನು ಮೆಚ್ಚಿಕೊಂಡಷ್ಟೇ ಅವರ ವ್ಯಕ್ತಿತ್ವವನ್ನು ಹಿರಿತನವನ್ನು ನಾನು ಮೆಚ್ಚಿಕೊಂಡಿದ್ದೇನೆ. ರಂಗದಲ್ಲಿ ಸುಡು ಜವ್ವನಿಕೆಯ ಗೋವಿಂದಣ್ಣನ ವೇಷವನ್ನೂ ಕಂಡಿದ್ದೇನೆ. ಇದೀಗ ದಶಕಗಳು ಕಳೆದರೂ ಅದೇ ಗೋವಿಂದಣ್ಣನನ್ನು ಅವರ ಪಾತ್ರಗಳಲ್ಲಿ ಕಾಣುತ್ತೇನೆ. ಕಲೆಗಿಂತಲೂ ಮಿಗಿಲಾಗಿದೆ ಇವರ ದೈಹಿಕ ಕ್ಷಮತೆ ಅಂತ ಅನ್ನಿಸುತ್ತದೆ. ಯೋಗ ನಿತ್ಯಾನುಷ್ಠಾನಗಳನ್ನು ಶ್ರಧ್ದೆಯಿಂದ ಆಚರಿಸುವ ಗೋವಿಂದಣ್ಣ ಕಲಾವಿದರಿಗೆ ಕೇವಲ ಅಷ್ಟು ಮಾತ್ರದಿಂದಲೇ ಒಂದು ಮಾದರಿಯಾಗಬಲ್ಲರು. ನನಗೂ ಯೋಗಭ್ಯಾಸಕ್ಕೆ ಮೂಲ ಪ್ರೇರಣೆಯನ್ನು ಒದಗಿಸಿದವರು. ಇಂದಿಗೂ ಪ್ರಾತಃ ಕಾಲದ ಪ್ರಾಣಾಯಾಮದ ವೇಳೆಯಲ್ಲಿ ಒಂದು ಬಾರಿಯಾದರೂ ಇವರ ಸ್ಮರಣೆ ಆಗದೇ ಇರುವುದಿಲ್ಲ. ಆಧ್ಯಾತ್ಮ ಚಿಂತನೆಗೆ  ಚಿತ್ತಶುದ್ದಿಗೆ ಅದೇ ಒಂದು ಪ್ರೇರಣೆ.  ಅಸಂತುಲಿತ ಮನಸ್ಸು ಈ  ಸೌಮ್ಯ ಸ್ಮೃತಿಯಿಂದ ಚಂಚಲತೆಯನ್ನು ಬಿಟ್ಟು ಸ್ಥಿರತೆಯನ್ನು ಕಾಣುತ್ತದೆ.

ಪ್ರಶಸ್ತಿಗಾಗಿ ಅರ್ಜಿದಾರರಾಗುವ ಮನೋಭಾವ ಗೋವಿಂದಣ್ಣನದಲ್ಲ. ಆದರೂ ಇಂದಿನ ಸರಕಾರಿ ವ್ಯವಸ್ಥೆಯಲ್ಲಿ ಶ್ರಮವಿಲ್ಲದೇ ಯಾವುದೂ ಬರುವುದಿಲ್ಲ. ಹಾಗಾಗಿ ಇದಕ್ಕೂ ಶ್ರಮಿಸಿದ ವ್ಯಕ್ತಿಗಳು ಇರಬಹುದು. ಅವರಿಗೂ ಒಂದು ಆತ್ಮ ತೃಪ್ತಿ ತಂದಿರಬಹುದು. ಅವರಿಗೂ ಕೃತಜ್ಞತೆ ಸಲ್ಲಿಸಲೇಬೇಕು.

error: Content is protected !!
Share This