ಅರ್ಥಧಾರಿ, ಚಿಂತಕ ಪ್ರಭಾಕರ ಜೋಶಿ ಸಂವಾದ ಕಾರ್ಯಕ್ರಮಕ್ಕೆ ಚಾಲನೆ

ದೌರ್ಬಲ್ಯಗಳನ್ನು ಮೆಟ್ಟಿ ನಿಲ್ಲುವುದೇ ಮನುಷ್ಯ ಜೀವನದ ಪ್ರಮುಖ ಪಾತ್ರ ಎಂದು ವಿಮರ್ಶಕ ಡಾ. ರಮಾನಂದ ಬನಾರಿ ಹೇಳಿದರು.

ಹಿರಿಯ ಸಂಸ್ಕೃತಿ ಚಿಂತಕ, ಯಕ್ಷಗಾನ ಅರ್ಥಧಾರಿ ಡಾ. ಎಂ. ಪ್ರಭಾಕರ ಜೋಶಿ ಅವರ ಕುರಿತು, ಪ್ರಭಾಕರ ಜೋಶಿ ಅಭಿನಂದನಾ ಸಮಿತಿ ವತಿಯಿಂದ ಭಾನುವಾರ ಮೈಸೂರಿನ ಜಗನ್ಮೋಹನ ಅರಮನೆ ಸಭಾಂಗಣದಲ್ಲಿ ಆರಂಭವಾದ ಎರಡು ದಿನಗಳ ‘ಜೋಶಿ ವಾಗರ್ಥ ಗೌರವ’ ಹೆಸರಿನ ಸಂವಾದ, ವಿಚಾರ ಸಂಕಿರಣ, ತಾಳಮದ್ದಳೆ, ಬಯಲಾಟ ಕಾರ್ಯಕ್ರಮದ ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು.

“ಓಂಕಾರವನ್ನು ಹೊರತುಪಡಿಸಿದರೆ ಪ್ರೀತಿ ಎಂಬ ಎರಡಕ್ಷರಕ್ಕೆ ಜಗತ್ತಿನಲ್ಲಿ ಹೆಚ್ಚಿನ ಮಹತ್ವ ಮತ್ತು ಶಕ್ತಿ ಇದೆ. ಪ್ರತಿಯೊಬ್ಬ ಮನುಷ್ಯನಿಗೂ ದೌರ್ಬಲ್ಯವಿರುತ್ತದೆ. ಆದರೆ ಅದನ್ನು ಮೀರಿ ನಿಲ್ಲಬೇಕಾದದ್ದು ಮನುಷ್ಯನ ಜೀವನದ ಮುಖ್ಯ. ಹೀಗೆ ಹಲವು ದೌರ್ಲಭ್ಯಗಳನ್ನು ಚಿಂತಕ ಡಾ. ಎಂ. ಪ್ರಭಾಕರ ಜೋಶಿ ಮೆಟ್ಟಿ ನಿಂತಿದ್ದಾರೆ.” ಎಂದು ತಿಳಿಸಿದರು.

“ ಕಲಾ ಜೀವನ ಹಾಗೂ ನೈಜ ಬದುಕಿನ ನಡುವೆ ಅಂತರವಿದೆ. ಅರಿವಿನ ಕೊರತೆಯಿಂದ ತಾಳಮದ್ದಳೆಯಂತಹ ಅದ್ಭುತ ರಸಲೋಕ ಈಗಿನವರೆಗೆ ನಿಲುಕದಂತಾಗಿದೆ. ಯಕ್ಷಗಾನ ಬದುಕಿನ ಪ್ರತ್ಯೇಕ ಮಾಧ್ಯಮವಾಗಿದೆ. ಪ್ರಸ್ತುತ ಯಕ್ಷಗಾನಕ್ಕೆ ದೊರೆಯಬೇಕಾದ ಮಾನ್ಯತೆ ದೊರೆಯುತ್ತಿಲ್ಲ. ಕಲೆ, ಸಾಹಿತ್ಯ, ಸಂಸ್ಕೃತಿಯನ್ನು ಹಗುರವಾಗಿಸುವ ಸಂದರ್ಭಗಳು ಸೃಷ್ಟಿಯಾಗುತ್ತಿವೆ. ಇದು ಅತ್ಯಂತ ಮಾರಕವಾದ ಬದಲಾವಣೆಯಾಗಿದೆ. ಪ್ರತಿಯೊಂದು ಕಲೆಯಲ್ಲಿಯೂ ವಿಶೇಷ ಅನುಭವ ಹಾಗೂ ಶಕ್ತಿ ಇರುತ್ತದೆ. ಯಕ್ಷಗಾನ ಪಾತ್ರಧಾರಿಗೆ ಕಲೆ ಮತ್ತು ಪ್ರತಿಭೆ ಇರಲೇಬೇಕು.” ಎಂದರು.

ವಿಮರ್ಶಕ ಸೀತಾರಾಮ ಭಟ್ ದಾಮ್ಲೆ ಮಾತನಾಡಿ, “ ಡಾ. ಪ್ರಭಾಕರ ಜೋಶಿಯವರೇ ಒಂದು ವಿಶ್ವಕೋಶವಿದ್ದಂತೆ. ಯಾವುದೇ ವಿಚಾರ ಕೇಳಿದರೂ ತೃಪ್ತಿದಾಯಕ ಉತ್ತರ ನೀಡುತ್ತಾರೆ. ಅಲ್ಲದೆ ಯಾವುದೇ ವಿಚಾರವನ್ನು ಚಿಕಿತ್ಸಕ ಮನೋಭಾವದಿಂದ ಸ್ವೀಕರಿಸುತ್ತಾರೆ. ಅಲ್ಲದೆ ಶೈಕ್ಷಣಿಕ ದೃಷ್ಟಿಕೋನದಿಂದಲೇ ವಿಚಾರಗಳನ್ನು ಜನರಿಗೆ ಮುಟ್ಟಿಸುತ್ತಿದ್ದಾರೆ.” ಎಂದರು.

“ಯಕ್ಷಗಾನ, ತಾಳಮದ್ದಳೆ ಕಲೆಯು ಇತ್ತೀಚೆಗೆ ಕಡಿಮೆಯಾಗುತ್ತಿದೆ. ಪ್ರಸ್ತುತ ಕಲಾವಿದರು ಹಿಂದಿನ ಕಲಾವಿದರಂತೆ ಉದಾರ ಮನಸ್ಸಿನವರಲ್ಲ. ಬೇರೊಬ್ಬ ಕಲಾವಿದರಿಗೆ ತಮ್ಮ ಕಲೆಯನ್ನು ಹೇಳಿಕೊಡುವುದಿಲ್ಲ. ಮಾತ್ರವಲ್ಲದೆ ಕಲಾವಿದರ ನಡುವೆ ವೈಮನಸ್ಸು ಹೆಚ್ಚಾಗುತ್ತಿದೆ. ಹೀಗಿರುವಾಗ ಈ ಕಲೆಗಳ ಬೆಳವಣಿಗೆ ಸಾಧ್ಯವಿಲ್ಲ.” ಎಂದು ವಿಷಾದಿಸಿದರು.

ಕುವೆಂಪು ವಿಶ್ವವಿದ್ಯಾನಿಲಯ ವಿಶ್ರಾಂತ ಕುಲಪತಿ ಡಾ.ಕೆ. ಚಿದಾನಂದಗೌಡ, ಪಾರ್ಥಿಸುಬ್ಬ ಪ್ರಶಸ್ತಿ ಪುರಸ್ಕೃತ ಡಾ.ಎಂ. ಪ್ರಭಾಕರ ಜೋಶಿ, ಜೋಶಿ ಅಭಿನಂದನಾ ಸಮಿತಿ ಅಧ್ಯಕ್ಷ ಎಂ.ಬಾಲಚಂದ್ರ ಡೋಂಗ್ರೆ, ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಪ್ರದೀಪ್ ಕುಮಾರ ಕಲ್ಕೂರ, ಸಮಿತಿ ಕಾರ್ಯದರ್ಶಿ ವಿದ್ವಾನ್ ಗ.ನಾ.ಭಟ್ಟ ಇದ್ದರು.

ಜಗಜನ್ಮೋಹನ ಅರಮನೆ ಆವರಣದಲ್ಲಿ ಡಾ.ಎಂ.ಪ್ರಭಾಕರ ಜೋಶಿ ಅವರ ಕುರಿತಾದ ಸಾಕ್ಷ್ಯ ಚಿತ್ರ ಪ್ರದರ್ಶನ ನಡೆಯಿತು. ಮಧ್ಯಾಹ್ನದ ನಂತರ ಜೋಶಿ ಅವರೊಂದಿಗೆ ಸಂವಾದ ನಡೆಯಿತು. ಬಳಿಕ ‘ಅಂಬಾ ದುರಂತ’ ಯಕ್ಷಗಾನ ತಾಳಮದ್ದಳೆ ನಡೆಯಿತು.

ವಿಜಯ ಕರ್ನಾಟಕ ದಿನಾಂಕ: 14-05-2017 ರಂದು ಪ್ರಕಟಿತ