ಡಾ. ಎಂ. ಪ್ರಭಾಕರ ಜೋಶಿ

ನಮ್ಮ ಪೈವಳಿಕೆ ಶಾಲಾ ವಠಾರದಲ್ಲಿ ಶ್ರೀ ಧರ್ಮಸ್ಥಳ ಮೇಳದ ಆಟ. ಪ್ರಸಂಗ ಅಮರೇಂದ್ರ ಪಥ ವಿಜಯ. ಅದರ ಒಂದು ಹಾಸ್ಯ ಸನ್ನಿವೇಶ. ಅಡುಗೆ ಭಟ್ಟರಾಗಿ ವಿಟ್ಲ ಗೋಪಾಲಕೃಷ್ಣ ಜೋಯಿಸರ ಪ್ರವೇಶ.  ತೆರೆ ಸರಿಯುತ್ತಿದ್ದಂತೆ ನಿರ್ವಿಕಲ್ಪ ಮುಖದ ಜೋಯಿಸರ ನಿಂತ ಭಂಗಿ ಕಾಣುತ್ತಿದ್ದಂತೆ ಸಭೆಯಲ್ಲಿ ಹರ್ಷೋದ್ಗಾರ. ಹಾಸ್ಯಗಾರನ ಹೆಗ್ಗಳಿಕೆ ಎಂದರೆ ಅದುವೇ. ಕೇವಲ ದರ್ಶನ ಮಾತ್ರದಿಂದಲೇ ಮುಂದಿನ ಸನ್ನಿವೇಶಕ್ಕೆ  ಪ್ರೇಕ್ಷಕರನ್ನು ಮಾನಸಿಕವಾಗಿ ಸಿದ್ದಮಾಡಿ ಬಿಡುತ್ತಾನೆ. ಬೇರೆ ಯಾವುದೇ ಸನ್ನಿವೇಶವಾದರೂ ಪೂರ್ವಭಾವಿ ಅನುಭವ ಇರುವುದಿಲ್ಲ. ಸನ್ನಿವೇಶದ ಜತೆಗೆ ರಸಾನುಭವ ವ್ಯಕ್ತವಾಗುತ್ತ ಸಾಗುತ್ತದೆ. ಆದರೆ ಹಾಸ್ಯ ಇದೆಲ್ಲದರಿಂದ ಭಿನ್ನವಾಗುವುದು ಅದು ಇನ್ನಿಲ್ಲದ ನಿರೀಕ್ಷೆಯನ್ನು ಮೊದಲ ಕ್ಷಣದಲ್ಲೆ ತರಿಸಿಬಿಡುತ್ತದೆ.   ಒಂದು ಸಮಾರಂಭದ ಊಟದ ಪ್ರಸಂಗ. ಎಲ್ಲ ಬ್ರಾಹ್ಹಣರು ಊಟಕ್ಕೆ ಕುಳಿತಿದ್ದಾರೆ. ರಂಗಸ್ಥಳದ ಎರಡು ಕಡೆ ಕುಳಿತವರಿಗೆ ಗೊಣಗುತ್ತ ಬಡಿಸುವ ಅಡುಗೆ ಭಟ್ಟ ಜೋಯಿಸರು ತನ್ನ ಸಿಡುಕು ಅಭಿನಯದಿಂದ ನಿಲ್ಲದ ನಗೆಯ ಅಲೆಯನ್ನು ತೇಲಿಸುತ್ತಿದ್ದರು. ಒಂದು ಪಂಕ್ತಿಗೆ ಸಾರು ಬಡಿಸುತ್ತಾ.. ಮತ್ತೊಂದು ಪಂಕ್ತಿಯಲ್ಲಿ ಕೀಟಲೆ ಮಾಡಿದ ಮಾಣಿಯನ್ನು ಬೈಯುತ್ತಾ ಸಾರು ಬಡಿಸುತ್ತಲೆ ಇದ್ದರು. ಇಕ್ಕಿಸಿಕೊಂಡ ಮಾಣಿ …” ಓಯ್ ಭಟ್ರೆ …ಓಯ್ ಭಟ್ರೆ …” ಎಂದು ಎಷ್ಟು ಚೀರಿದರು ಬಡಿಸುವ ಈ ಭಟ್ಟರಿಗೆ ಪರಿವೇಯೇ ಇಲ್ಲ.. ಊಟಕ್ಕೆ ಕುಳಿತ ಮಾಣಿ ಎದ್ದು ನಿಂತು ಭಟ್ಟರನ್ನು ಹಿಡಿದು ಅಲುಗಾಡಿಸಿದರೂ  ಊಹುಂ …  ನಮ್ಮ ಜೋಶಿಯವರಲ್ಲಿ ಆವಾಹನೆಯಾದ ಅಡುಗೆ ಭಟ್ಟ  ಒಂದು ಕಡೆ ನಿಂತು ವಾಲಿದಾ ಭಂಗಿ ಅತ್ತನೋಡುತ್ತ ಇತ್ತ ಬಡಿಸುತ್ತಲೇ ಇತ್ತು…ಸಾರು ಹೊಳೆಯಾಗಿ ಹರಿಯುತ್ತಿದ್ದರೆ ನೆರೆದ ಪ್ರೇಕ್ಷಕ ನಗು ತಡೆಯದೆ ಕುಳಿ ಈಸಿಚೆಯರ್ ನಿಂದ ನೆಗೆದು ಬೀಳುತ್ತಿದ್ದ..!!

ಇದು ವಿಟ್ಲದ ಜೋಯಿಸರ ನವಿರಾದ ಹಾಸ್ಯದ ಒಂದು ಘಟನೆ. ಅಡುಗೆಯವ ತಾನುಂಡು ಉಳಿದವರಿಗೆ ಬಡಿಸುವಂತಾಗಬಾರದು.. ಅರ್ಥಾತ್ ಹಾಸ್ಯಗಾರನೂ ಹಾಗೆ.. ತನ್ನ ಹಾಸ್ಯಕ್ಕೆ ತಾನು ನಗಬಾರದು. ತನ್ನ ಹಾಸ್ಯಕ್ಕೆ ಸ್ವತಃ ಅವನು ನಕ್ಕರೆ ಅಡುಗೆಯವ ಎಲ್ಲರಿಗಿಂತ ಮೊದಲು ತಾನು ಊಟ ಮಾಡಿ ತೇಗಿದ ಹಾಗೆ ಎಂದೇ ಅರ್ಥ. ವಿಟ್ಲ ಜೋಷಿಯವರ ಹಾಸ್ಯ ನೋಡುವಾಗ ಈ ಭಾವನೆ ಮೊದಲಿಗೆ ಬರುತ್ತದೆ. ಅವರ ಹಾಸ್ಯ ಪ್ರಸಂಗಕ್ಕೆ ಅವರು ನಕ್ಕಿದ್ದೇ ಇಲ್ಲ… ಬದಲಾಗಿ ಬಿದ್ದು ಬಿದ್ದು ನಗುವ ಪ್ರೇಕ್ಷಕನನ್ನು ಕಂಡು ಮತ್ತೂ ಅವೇಶ ಭರಿತರಾಗಿ ಇವರೊಳಗಿನ ಹಾಸ್ಯಗಾರ ವಿಜ್ರಂಭಿಸುತ್ತಿದ್ದ.  ಹಾಸ್ಯಕ್ಕಾಗಿ ಯಾವುದೇ ಸರ್ಕಸ್ ಇಲ್ಲದ ನೇರ ಮತ್ತು ನವಿರಾದ ಹಾಸ್ಯ. ಹಲವು ಸಲ ನಮಗೆ ಮಾರ್ಮಿಕವಾದ ಚಿಂತನೆಯ ಕಿಡಿಯನ್ನು ಹಚ್ಚುತ್ತಿದ್ದರೆ…ಕೆಲವುಸಲ ಇವರ ಹಾಸ್ಯ ತತ್ಸಮಯಕ್ಕೆ ಅರ್ಥವಾಗದೆ ತುಸು ಬಿಟ್ಟು ಅರ್ಥವಾಗಿ ಬಿದ್ದು ಬಿದ್ದು ನಗುವ ಹಾಗೆ ಆಗುತ್ತಿತ್ತು. ಒಂದು ರೀತಿಯಲ್ಲಿ ನಮ್ಮ ಬುದ್ದಿಮತ್ತೆಯನ್ನು ಒರೆಗೆ ಹಚ್ಚುತ್ತಾ ಯಾರು ಯಾವುದಕ್ಕೆ ನಗುತ್ತಿದ್ದಾರೆ ಎಂಬುದೇ ಸೋಜಿಗವಾಗುತ್ತಿತ್ತು. ಒಬ್ಬನನ್ನು ಅಳುವಂತೆ ಮಾಡುವುದು ಸುಲಭ ಆದರೆ ನಗುವಂತೆ ಮಾಡುವುದು ಬಹಳ ಕಷ್ಟ.  ಅಭಿನಯ ಕಲೆ ಎಂದರೆ ಒಂದು ರೀತಿಯ ವಿಪರ್ಯಾಸದ ಅನುಭವ.  ಪೆಟ್ಟು ಕೊಡುವ ಅಭಿನಯಕ್ಕಿಂತಲೂ ಪೆಟ್ಟು ತಿನ್ನುವ ಅಭಿನಯ ಬಹಳ ಕಷ್ಟ. ಹೊರ ಪ್ರಪಂಚಕ್ಕೆ ಪೆಟ್ಟು ಕೊಡುವವ ವೀರನಂತೆ ವಿಜ್ರಂಭಿಸಬಹುದು ಆದರೆ ನೈಜ ಅಭಿನಯ ವಿಜ್ರಂಭಿಸುವುದು ಪೆಟ್ಟು ತಿನ್ನಿವವನ ಅಭಿನಯದಿಂದ. ಅದೇ ರೀತಿ ಹಾಸ್ಯಗಾರನ ಇರುವಿಕೆ. ಒಂದೆರಡು ಸನ್ನಿವೇಶವಾದರೂ  ಬೇರೆ ಪಾತ್ರಗಳು ಅತ್ಯಂತ ಗಾಢವಾದ ಪರಿಣಾಮ ಬೀರಬೇಕಾದರೆ ಇವೇ ಜೀವಾಳವಾಗಿ ಬಿಡುತ್ತದೆ. ಪಾಯಸದಲ್ಲಿನ ಗೋಡಂಬಿ ಎದ್ದು ಕಂಡ ಹಾಗೆ ಹಾಸ್ಯ.

ನನ್ನ ಬಾಲ್ಯದಲ್ಲಿ ಧರ್ಮಸ್ಥಳದ ಮೇಳದ ಆಟಗಳು  ಕಂಡದ್ದು ಹಲವು. ಇದರಲ್ಲಿ ಆಗ  ವಿಟ್ಲ ಜೋಷಿಯವರ ತಾರುಣ್ಯದ ಹುಮ್ಮಸ್ಸಿನ ಪಾತ್ರಗಳನ್ನು ಹಾಸ್ಯವನ್ನು ಕಂಡದ್ದು ಕೆಲವೇ.. ” ಲಾಲೀಸಬೇಕು ಜೀಯಾ….” ಎಂಬ ಪದಕ್ಕೆ ಆಗಿನ ಹಾಸ್ಯದ ಕುಣಿತ.. ಮರೆಯುವುದುಂಟೇ? ಯಕ್ಷಗಾನದಲ್ಲಿ ಹಾಸ್ಯದ ಕುಣಿತಕ್ಕೆ ಒಂದು ಪರಂಪರೆಯಿದೆ. ಇವರ ಹಲವು ರೀತಿಯ ಹಾಸ್ಯದ ಕುಣಿತಗಳು ಪರಿಶುದ್ದ ಯಕ್ಷಗಾನದ ಶೈಲಿಯ ಅಚ್ಜುಗಟ್ಟುತನವನ್ನು ಬಿಂಬಿಸುತ್ತಿದ್ದವು. ಪ್ರತಿಯೊಂದರಲ್ಲೂ ವಿಶಿಷ್ಟವಾದ ನರ್ತನವೇ ರಸಿಕತೆಗೆ ಹಿಡಿದ ಕನ್ನಡಿಯಂತೆ ಇರುತ್ತಿದ್ದವು. ಎಲ್ಲ ಶಿಸ್ತುಬದ್ದ ಕುಟಿತಗಳು.  ಹಾಸ್ಯಗಾರ ತಾಳ ತಪ್ಪಿದಂತೆ  ತಾಳದ ಪರಿಜ್ಞಾನವೇ ಇಲ್ಲದಂತೆ ಕುಣಿದರೂ ತಾಳಬದ್ದವಾಗಿರಬೇಕು. ಸಮ-ವಿಷಮದ ಮಿಶ್ರಣದ ಕುಣಿತ. ಎಲ್ಲ ತಾಳ ತಪ್ಪಿತು.. ಹೆಜ್ಜೆ ಹಿಂದು ಮುಂದಾಯಿತು ಎಂದು ದಿಗ್ಭ್ರಮೆಯನ್ನು ತರುವಾಗ ಎಲ್ಲವು ಒಂದು ಲಯದಲ್ಲಿ ಇದೆ ಎಂಬ ಭಾವನೆಯನ್ನು ತರುತ್ತದೆ. ಹಾಸ್ಯ ಕೇವಲ ಸಂಭಾಷಣೆಗೆ ಸೀಮಿತವಲ್ಲ. ಸಮಯ ಪ್ರಜ್ಞೆಯೊಂದಿಗೆ ಪರಂಪರೆಯ ಹಾಸ್ಯಕುಣಿತಗಳನ್ನು ಕಾಣುವಾಗಲೇ ಯಕ್ಷಗಾನದ ಹಾಸ್ಯದ ವಿಭಿನ್ನತೆ ಅರಿವಾಗುತ್ತದೆ. ದೇವಲೋಕದ ದ್ವಾರಪಾಲಕನಾಗಲೀ ರಾಕ್ಷಸ ದೂತನಾಗಲೀ ಕುಣಿತಗಳಿಂದಲೂ ಅದರದ್ದೇ  ಆದ ವಿಭಿನ್ನತೆಗೆ ಹೆಸರಾಗಿದ್ದವು. ಆದರೆ ಇಂದು ಈ ಹಾಸ್ಯದ ಕುಣಿತಗಳು ಕೇವಲ ಕಾಟಾಚರಕ್ಕೆ ಎಂಬಂತೆ ಭಾಸವಾಗುತ್ತದೆ. ನಗಿಸುವುದಕ್ಕಾಗಿ ಮಾಡುವ ಸರ್ಕಸ್ ಗೆ  ಪರಿಮಿತಿಯೇ ಇಲ್ಲ. ಡಿಸ್ಕೋ ಬ್ರೇಕ್ ಡಾನ್ಸ್  ಇನ್ನು ಗಂಗಂ ಸ್ಟೈಲ್ ಎಲ್ಲ ಬಳಕೆಗೆ ಬರುತ್ತದೆ.  ಯಕ್ಷಗಾನದ ಪರಂಪರೆಯ ಸಾಂಪ್ರದಾಯಿಕ ಹಾಸ್ಯವೇ ನಗೆಪಾಟಲು ಎಂಬಂತಾಗಿದೆ. ಹಾಸ್ಯದ ಕುಣಿತ ಕರುಣಾರಸವನ್ನು ಬಿಂಬಿಸಿ ಒಟ್ಟು ಸನ್ನಿವೇಶವೇ ಶೋಚನೀಯ ಎಂಬಂತಾಗುತ್ತದೆ. ರಂಗದ ಮೇಲೆ ಹಾಸ್ಯದ ಅಕ್ರಮಣವನ್ನೂ ಆ ಮೂಲಕ ಆಕ್ರಂದನವನ್ನು  ಕಾಣುವಾಗ ಜೋಷಿಯವರ ಪ್ರಭುದ್ದ ಹಾಸ್ಯ ಮುಂದಿನ ಪೀಳಿಗೆಗೆ ಕೇವಲ ಕಥೆಯಾಗಿಬಿಡುತ್ತದೆಯೇ ಅನಿಸುತ್ತದೆ.

ಸಮುದ್ರ ಮಥನದ ಮೂಕಾಸುರ ಬಹುಶಃ ನಾನು ಕಂಡ ಜೋಯಿಸರ ಮಾಸ್ಟರ್ ಪೀಸ್ ಗಳಲ್ಲಿ ಒಂದು. ಬಹುಶಃ ಇವರಿಗಾಗಿಯೆ ಸೃಷ್ಟಿಯಾದ ಪಾತ್ರವೇ ಇದು ಎಂದು ನನ್ನ ಅನಿಸಿಕೆ. ಅಥವಾ ಆ ಪಾತ್ರ ನಿರ್ವಹಣೆಯಲ್ಲಿ ಇವರು ಆವಿಷ್ಕರಿಸಿದ ವಿಧಾನಗಳು ಈ ಪಾತ್ರ ಮೂಲಕಥೆಗೆ ಬಿಡದಂತಹ ಸಂಬಂಧವನ್ನು ಬೆಸೆದಹಾಗಿದೆ. ಇಂದು ಯಾರು ಇ ಪಾತ್ರ ನಿರ್ವಹಿಸಿದರೂ  ಆ ಆವಿಷ್ಕಾರದ ಪೊರೆ ಕಳಚಿ ಬರುವುದು ಸಾಧ್ಯವೇ ಇಲ್ಲದಷ್ಟು ಜೋಯಿಸರ ಮೂಕಾಸುರ ತನ್ನ ನೆರಳನ್ನು ಪಸರಿಸಿಯಾಗಿದೆ. ಅದರ ಒಂದೊಂದು ಸನ್ನಿವೇಶಗಳು ಈಗಲೂ ಕಣ್ಣಿಗೆ ಕಟ್ಟಿದಂತಿರುತ್ತದೆ. ಎಲ್ಲವನ್ನು ಕಳೆದುಕೊಂಡು ದೂರ್ವಾಸ ಶಾಪಗ್ರಸ್ಥನಾದ ದೇವೆಂದ್ರ ಬಂದಾಗ ಇವರು ನಡೆಸಿಕೊಳ್ಳುವ ರೀತಿ.. …ಪದೇ ಪದೇ.. ” ಗಾಳಿ ಹಾಕು…ಗಾಳಿ ಹಾಕು ” ಎಂದು ದೇವೆಂದ್ರನಿಂದ ಚಾಕಿರಿ ಮಾಡಿಸಿಕೊಳ್ಳುವದ್ದು….ಮೂಕಾಸುರ ಒಂದು ಅದ್ಭುತ ಪಾತ್ರ.

ಅದರಂತೆ ಅವರಿಗೆ ಅತ್ಯಂತ ಜನಪ್ರಿಯತೆಯನ್ನು ತಂದುಕೊಟ್ಟದ್ದು.. ಶೇಣಿಯವರ ಬಪ್ಪಬ್ಯಾರಿ ಜತೆಗಿನ “ಉಸ್ಮಾನ್:”  ಪಾತ್ರ. ಉಸ್ಮಾನ್ ನ ಆ ಮುಗ್ಧತೆ, ಆ ಶರೀರ ಭಾಷೇ ಆ ಸಂಭಾಷಣೇ ಛ್ಹೇ.., ಅದನ್ನು ಶಬ್ದಗಳಲ್ಲಿ ವರ್ಣಿಸುವುದು ಖಂಡಿತ ನನ್ನ ಸಾಮರ್ಥ್ಯಕ್ಕೆ ಮೀರಿ ನಿಂತ ವಿಷಯ. ಹಾಗೇನೇ ಬಹಳ ಸರಳವಾಗಿ ರಂಗಸ್ಥಳದಲ್ಲಿ  ಕುಲುಕಾಡುತ್ತ ಕುಣಿವ ಚಂದ್ರಾವಳಿ ಪ್ರಸಂಗದ ಅತ್ತೇ ಪಾತ್ರ. ಇಂದು ಈ ಪಾತ್ರವನ್ನು  ಕೆಟ್ಟದಾಗಿ ಚಿತ್ರೀಕರಿಸುವುದನ್ನು ಕಾಣುವಾಗ ಬಹಳ ಸರಳವಾಗಿ ರಂಗಸ್ಥಳ ತುಂಬಿಕೊಳ್ಳುತ್ತಿದ್ದ ಜೋಯಿಸರ ಅತ್ತೆ ಪದೇ ಪದೇ ನೆನಪಿಗೆ ಬರುತ್ತದೆ.

ಯಕ್ಷಾಗನದ ಹಾಸ್ಯಪಾತ್ರಗಳಿಗೆ ತಾರಾಮೌಲ್ಯವನ್ನು ಒದಗಿಸಿಕೊಟ್ಟ ಇವರ ಪಾತ್ರನಿರ್ವಹಣೆ ಹಾಸ್ಯವೆಂದರೆ ಜೋಯಿಸರದ್ದು ಎನ್ನುವಷ್ಟರ ಮಟ್ಟಿಗೆ ಆಪ್ಯಾಯಮಾನವಾಗಿತ್ತು. ಇಂದು ಹತ್ತು ಹಲವು ರೂಪದಲ್ಲಿ ಹಾಸ್ಯ ಪಾತ್ರಗಳು ಹೊಸಬಗೆಯಲ್ಲಿ ಅನಾವರಣಗೊಂಡಂತೆ ಕಂಡರೂ ಜೋಯಿಸರ ಅನುಕರಣೆಯನ್ನೇ ಗುರುತಿಸುವಂತಾಗುತ್ತದೆ.  ಹಾಸ್ಯಗಾರ ತನ್ನ ಹಾಸ್ಯಕ್ಕೆ ಸ್ವತಃ ತಾನೇ ಮೊದಲ ಪ್ರೇಕ್ಷಕನಾಗಬಾರದು. ಹಾಸ್ಯ ರಸಾಭಿವ್ಯಕ್ತಿ ನವರಸಗಳಲ್ಲಿ ಅತ್ಯಂತ ವಿಶಿಷ್ಟವಾಗಿ ಬಿಂಬಿಸಲ್ಪಡುವ ರಸ. ಹಲವು ಸಲ ಹಾಸ್ಯ ಅದೆಷ್ಟು ನಿಗೂಢವಾಗಿರುತ್ತದೆ ಎಂದರೆ ಅದು ಮನವರಿಕೆಯಾಗುವವರೆಗೂ ಅದು ಹಾಸ್ಯದ ಅನುಭವವೇ ಆಗದೇ ಕೊನೆಗೆ ಅರಿವಾದಾಗ ತಮ್ಮ ನಿಯಂತ್ರಣವನ್ನು ಕಳೆದುಕೊಳ್ಳುವಷ್ಟರ ಮಟ್ಟಿಗೆ ಪ್ರಚೋದನೆಯನ್ನು ಉಂಟು ಮಾಡುತ್ತದೆ. ಹಾಸ್ಯ ಬಹುಮುಖೀ ರಸ. ಇದರಲ್ಲಿ ವಿಡಂಬನೆ ಇರಬಹುದು, ವಿನೋದವಿರಬಹುದು, ಲಾಸ್ಯವಿರಬಹುದು, ಲೇವಡಿಯಿರಬಹುದು..ಎಲ್ಲದಕ್ಕೂ ಹಾಸ್ಯ ಕೆಲವೊಮ್ಮೆ ಉಪಾಧಿಯಾಗಿಬಿಡುತ್ತದೆ.  ಹಾಸ್ಯದ ಮುಖಗಳನ್ನು ಅರಿತರೆ ಮಾತ್ರ ವಿದೂಷಕನಾಗಬಹುದು. ಆದರೂ ಇದು ಪರಿಪೂರ್ಣ ಎಂದು ಅನಿಸುವುದಿಲ್ಲ. ಆದರೆ ಜೋಯಿಸಿಯವರು ಇದರಲ್ಲಿ ಪರಿಪೂರ್ಣತೆಯನ್ನು ಗಳಿಸಿದವರು. ಹಾಸ್ಯಕ್ಕೆ ಅನ್ವರ್ಥರಾಗಿ ಬೆಳೆದು ನಿಂತವರು.

(ರಾಜಕುಮಾರ್ ಬೆಂಗಳೂರು)

error: Content is protected !!
Share This