ರಸ ರಾಮಾಯಣ: ಸಾವಿರದೊಂದು ಪ್ರಶ್ನೆ

ಲೇ: ಶ್ರೀ ಸುಬ್ರಾಯ ಸಂಪಾಜೆ

ಇದು ರಾಮಾಯಣವನ್ನು ಕುರಿತಾದ ನೂರಿಪ್ಪತ್ತು ಪುಟಗಳ ಕೋಶ. ‘ ಪುರಾಣ ಯಾನ’ ಎಂಬ ಕೋಶರೂಪದ ಹೊತ್ತಗೆಯಿಂದ ಪ್ರಸಿದ್ಧರಾದ ಯಕ್ಷಗಾನ ಭಾಗವತರೂ, ಬರಹಗಾರರೂ ಮಾತ್ರವಲ್ಲ ಮಡಿಕೇರಿ ಆಕಾಶವಾಣಿಯಲ್ಲಿ ಹಿರಿಯ ಉದ್ಘೋಷಕರಾಗಿ ಉದ್ಯೋಗದಲ್ಲಿರುವ ಶ್ರೀ ಸುಬ್ರಾಯ ಸಂಪಾಜೆಯವರ ಮತ್ತೊಂದು ಪುಸ್ತಕವಿದು. ಸಾವಿರದೊಂದು ಪ್ರಶ್ನೆಗಳೊಂದಿಗೆ ಇಡೀ ರಾಮಾಯಣದ ಪರಿಕ್ರಮಣ ಇಲ್ಲಿದೆ. ಎಳೆಯರನ್ನು ಗಮನದಲ್ಲಿರಿಸಿಕೊಂಡು ರಚಿಸಿದ ಈ ಪುಸ್ತಕ ಸಲೀಸಾಗಿ ಓದಿಸಿಕೊಂಡು ಹೋಗುತ್ತದೆ.

ಯಕ್ಷಗಾನ – ತಾಳಮದ್ದಳೆ ಕ್ಷೇತ್ರದಲ್ಲಿ ಅರ್ಥಧಾರಿಗಳಾಗಿ ವೇಷಧಾರಿಗಳಾಗಿ  ಉಜ್ಜುಗಿಸುವವರಿಗೆ ಬಹಳ ಉಪಯುಕ್ತವಾದ ಹೊತ್ತಗೆ. ಮಾಹಿತಿಯ ಸಂಗ್ರಹ.  ಮುನ್ನುಡಿಯಲ್ಲಿ ವಿ.ಕೆರೆಕೈ ಉಮಾಕಾಂತ ಭಟ್ಟರಂದಂತೆ ‘ ರಸ ರಾಮಾಯಣ ‘ಈಗ ಓದುಗರ ಅಚ್ಚುಮೆಚ್ಚಿನ ಕೈಗಾಣಿಯಂತೆ ಸಜ್ಜಾಗಿದೆ ‘

ಬೆನ್ನುಡಿಯಲ್ಲಿ ಲೇಖಕರೂ ಹಾಗು ಯಕ್ಷಗಾನ ಅರ್ಥಧಾರಿಯಾದ ಶ್ರೀ ರಾಧಾಕೃಷ್ಣ ಕಲ್ಚಾರರ ಮಾತು ಇದು “ ಬೆರಗು ಕುತೂಹಲವನ್ನು ಹುಟ್ಟಿಸುವ ಪ್ರಶ್ನೋತ್ತರಗಳ ಮುಖೇನ ಒಂದು ಪುರಾಣ ಕಾವ್ಯವನ್ನು ಎಳೆಯ ತಲೆಮಾರಿಗೆ ಹೇಗೆ ಪರಿಚಯಿಸಬಹುದೆಂಬುದಕ್ಕೆ ಇದೊಂದು ಉತ್ತಮ ಮಾದರಿಯಾಗಿದೆ”.

ಶ್ರೀ ಕಲ್ಚಾರರ ಮಾತು ಅತಿಶಯೋಕ್ತಿಯಲ್ಲ. ಅದಕ್ಕೆ ಪೂರಕವಾಗಿ ಅದರ ಓದಲ್ಲಿ ತೊಡಗಿದ್ದ ನನಗಾದ ಅನುಭವ ಇಲ್ಲಿ ಉಲ್ಲೇಖಿಸಬಹುದೆಂಬ  ನಂಬಿಕೆಯಿಂದ ಹೇಳುತ್ತಿದ್ದೇನೆ. ಪುಸ್ತಕವನ್ನು ಸುಮ್ಮನೆ ಅದರ ಮೊದಲ ಪ್ರಶ್ನೆ ‘ ರಾಮಾಯಣದಲ್ಲಿ ಎಷ್ಟು ಶ್ಲೋಕಗಳಿವೆ’ ಎಂಬುದರಿಂದ ಗಟ್ಟಿಯಾಗಿ ಓದಲು ಉಪಕ್ರಮಿಸಿದೆ. ರಾಮಾಯಣ ಎಂಬ ಶಬ್ದ ಕೇಳಿದೊಡನೆಯೇ ದೂರದಲ್ಲಿ ಮಲಗಿದ್ದ ನನ್ನ ಐದು ವರುಷದ ಹಿರಿಯ ಮಗ ಎದ್ದ. ಎರಡನೆಯ ಪ್ರಶ್ನೆಯಲ್ಲಿ ನನ್ನ ಹತ್ತಿರ ಬಂದು ಕೂತ. ಆ ಪುಟದಲ್ಲಿದ್ದ ಪುತ್ರಕಾಮೇಷ್ಟಿ ಯಾಗದ ಚಿತ್ರದಲ್ಲಿದ್ದವರು ಯಾರೆಂದು ಕೇಳಿ ಪರಿಚಯ ಪಡೆದುಕೊಂಡ. ಮತ್ತೆ ಪ್ರಶ್ನೆ- ಉತ್ತರ ಓದಲು ಮುಂದುವರಿಸಿದೆ. ಸುಮ್ಮನೆ ಒಂದರೆ ನಿಮಿಷ ನಾನು ಓದಲಿಲ್ಲ. ಮಗನ ಒತ್ತಾಯ, ಕತೆ ಹೇಳು ಎಂದು. ಪುನಃ ಓದಲು ತೊಡಗಿದವನಿಗೆ ಪ್ರಶ್ನೆ ನೂರು ದಾಟಿದ್ದೇ ತಿಳಿಯಲಿಲ್ಲ. ಪ್ರಶ್ನೆಗೆ ಅವನ ಉಪ ಪ್ರಶ್ನೆಗಳು  ಅನೇಕವಿದ್ದವು. ಮತ್ತೂ ಓದೆಂದು ಮಗನ ಹಠ ಮುಂದುವರೆದಿತ್ತು. ರಾತ್ರಿ ಹೊತ್ತು ಬಹಳವಾಗಿದ್ದುದರಿಂದ ನನ್ನ ಒತ್ತಾಯದಿಂದ ಮಲಗಲು ಹೋದ. ಶ್ರೀ ಸುಬ್ರಾಯ ಸಂಪಾಜೆಯವರ ಈ ಕೃತಿ ತಾನು ಮಾಡಬೇಕಾದ ತನ್ನ ಕೆಲಸ ಮಾಡಲು ಆರಂಭಿಸಿದೆ. ನಿಸ್ಸಂದೇಹವಾಗಿ ಈ ಪುಸ್ತಕ ಯಶಸ್ಸನ್ನು ಕಂಡಿದೆ. ಮಕ್ಕಳಿಗೆ ಓದಲು ಕೊಡಬೇಕಾದ ಅಥವಾ ಓದಿ ಹೇಳಬೇಕಾದ ಪುಸ್ತಕವಿದು. ಪ್ರಶ್ನೆ ಪ್ರಶ್ನೆಗಳಲ್ಲೂ ಮಕ್ಕಳಲ್ಲಿ ಕುತೂಹಲ ಹುಟ್ಟಿಸುತ್ತದೆ.

ನಮ್ಮವರೇ ಬರೆದವರೆನ್ನುವ ಹೆಮ್ಮೆ ಇದೆ.

ಮುನ್ನುಡಿಯ ಶ್ರೀ ಉಮಾಕಾಂತ ಭಟ್ಟರ ಮಾತನ್ನು ಉಲ್ಲೇಖಿಸುವೆ: ರಾಮಾಯಣ ಮಹಾಭಾರತಗಳು ಎಂದರೆ ಭಾರತೀಯರ ಜೀವನವಿಧಾನ. ಅವು ಅವರ ಆಲೋಚನಾ ಪದ್ಧತಿ. ಅವು ಎಲ್ಲಾ ಭಾಷೆಗಳನ್ನೂ ಒಳಗೊಳ್ಳುವ ಎಲ್ಲಾ ಭಾಷೆಗಳನ್ನು ಮೀರುವ, ನಿರಂತರ ರೂಪಕ ನಿರ್ಮಾಣದ ವಿಶಿಷ್ಟಭಾಷೆ. ಭಾರತೀಯತೆಯ ಸ್ವರೂಪದರ್ಶನ ಮಾಡಿಸುವ ಸಂಸ್ಕಾರಗಳ ಮಹಾಪೂರ ಅವು. ಅವುಗಳನ್ನು ಕಳೆದರೆ ಭಾರತದಲ್ಲಿ ಭಾರತತ್ವವೇ ಉಳಿಯಲಾರದು”.

ಅಭಿರುಚಿ ಪ್ರಕಾಶನ, ವಿಟ್ಲ. ದ.ಕ. ಇವರ ಸಾರ್ಥಕ ಪ್ರಕಟಣೆ. ಬೆಲೆ ರೂಪಾಯಿ ಅರವತ್ತು.

ಅಧಿಕೃತ ಮಾರಾಟಗಾರರ ದೂರವಾಣಿ ಸಂಖ್ಯೆ: 9535623603

ಕೃಷ್ಣಪ್ರಕಾಶ ಉಳಿತ್ತಾಯ

ಈಶಾವಾಸ್ಯ, ಸದಾಶಿವ ದೇವಸ್ಥಾನದ ಬಳಿ,

ಪೆರ್ಮಂಕಿ, ಉಳಾಯಿಬೆಟ್ಟು ಗ್ರಾಮ,

ಮಂಗಳೂರು. ೫೭೪೧೪೫

error: Content is protected !!
Share This