ಪಣಂಬೂರು ರಾಘವ ರಾವ್ ಸಂಸ್ಮರಣಾ ಗ್ರಂಥ

ಜಿಲ್ಲೆಯ ಯಕ್ಷಗಾನ, ನಾಟಕ ರಂಗಗಳಲ್ಲಿ ಬಣ್ದದ ರಾಘವ ರಾಯರೆಂದು ಪರಿಚಿತರಾಗಿದ್ದ ದಿ.ಪಣಂಬೂರು ರಾಘವ ರಾಯರ ಕಲಾ ಕೈಂಕರ್ಯ ಬಹುಮುಖಿಯಾಗಿತ್ತು. ಮೇಕಪ್, ವೇಷಭೂಷಣದ ತಯಾರಿ, ನಾಟಕದ ಸೀನರಿಗಲು, ಪರದೆ, ಮೂರ್ತಿ ನಿರ್ಮಾಣ, ಭಿತ್ತಿ ಚಿತ್ರ, ಮುಖವಾಡದ ರಚನೆ, ತಟ್ಟಿರಾಯನ ರಚನೆ ಹೀಗೆ ಅಸಂಖ್ಯ ಕಲಾ ನಿರ್ಮಿತಿಯಿಂದ ಮನೆಮಾತಾಗಿದ್ದ ಚೇತನವಿದು. ಮಂಗಳೂರಿನ ಹೆಮ್ಮೆಯ ಕಲಾವಿದರಿವರು. ಯಕ್ಷಗಾನ ಭಾಗವತಿಕೆಯನ್ನೂ ಮಾಡುತ್ತಿದ್ದರು. ಸತತವಾದ ದಣಿವರಿಯದ ದುಡಿಮೆ, ನಿಸ್ಪ್ರಹತೆ, ಆದರ್ಶ ಜೀವನ, ಕರ್ತವ್ಯ ಪರಾಯಣತೆ ಇವಕ್ಕೆಲ್ಲಾ ಮಾದರಿಯಂತಿದ್ದವರು.

ಇವರ ಸಂಸ್ಮರಣಾ ಗ್ರಂಥ “ ರಾಘವಾಯಣ”. ಯಕ್ಷಗಾನ ಸಂಘಟಕ, ನಿವೃತ್ತ ಸೇನಾಧಿಕಾರಿ ರಾಘವರಾಯರ ಮಗನಾದ ಶ್ರೀ ಮಧುಕರ ಭಾಗವತರ ನೇತ್ರತ್ವದಲ್ಲಿ ಶ್ರೀ ಸೇರಾಜೆ ಸೀತಾರಾಮ ಭಟ್ ಮತ್ತು ಶ್ರೀ ಪಿ.ವಿ ಪರಮೇಶ್ ಇವರ ಸಂಪಾದಕತ್ವದಲ್ಲಿ ಈ ಹೊತ್ತಗೆ ಹೊರಬಂದಿದೆ. ಹಿರಿಯರಿಂದ ರಾಘವರಾಯರ ಕುರಿತಾದ ಸ್ಮರಣೆ, ಯಕ್ಷಗಾನದ ಮತ್ತು ಇತರ ವೈಚಾರಿಕ ಬರಹಗಳು ಕೊನೆಗೆ ಒಂಭತ್ತು ಪ್ರಸಂಗಗಳ ಸಂಗ್ರಹ ಇವುಗಳೊಂದಿಗೆ ಗ್ರಂಥವು ಸಂಪನ್ನಗೊಂಡಿದೆ.

ಒಟ್ಟು ೪೪೮ ಪುಟಗಳ ಹರವು ಗ್ರಂಥಕ್ಕಿದೆ. ಮಂಗಳೂರಿನ ಸಾಂಸ್ಕೃತಿಕ ಚರಿತ್ರೆಯ ಭಾಗವಾಗಿ ಈ ಗ್ರಂಥವನ್ನು ಗಮನಿಸಬಹುದು.

ಬೆನ್ನುಡಿಯಾಗಿ ಉದ್ಯಾವರ ಮಾಧವ ಆಚಾರ್ಯರು ಬರೆದ ಮಾತು ಮುಖ್ಯವಾಗುತ್ತದೆ. “ಇರುವುದನ್ನು ಇಲ್ಲವಾಗಿಸುವ ಮತ್ತು ಇಲ್ಲದಿರುವುದನ್ನು ಭ್ರಮೆಯಾಗಿಸುವ ಸರಳ ಉದ್ದೇಶದಿಂದ ಪ್ರಾರಂಭಗೊಂಡ ವರ್ಣಾಲಂಕಾರ (ಮೇಕಪ್) ಕ್ರಮೇಣ ಸಂಕೀರ್ಣಗೊಂಡು ಇಂದಿಗೆ ಯಾವುದೇ ರಂಗ ಪ್ರಕಾರದಲ್ಲಿ ತನ್ನ ಪ್ರತ್ಯೇಕತೆಯನ್ನು ಬಹಳ ಎತ್ತರಕ್ಕೇರಿಸಿದೆ.”.

ಕೃಷ್ಣಪ್ರಕಾಶ ಉಳಿತ್ತಾಯ

ಈಶಾವಾಸ್ಯ
ಸದಾಶಿವ ದೇವಸ್ಥಾನದ ಬಳಿ
ಪೆರ್ಮಂಕಿ, ಉಳಾಯಿಬೆಟ್ಟು ಗ್ರಾಮ
ಮಂಗಳೂರು

error: Content is protected !!
Share This