ಮೈಸೂರು: ಸಂಪ್ರದಾಯದ ಪಠ್ಯ ಹಾಗೂ ಪುರಾಣಗಳನ್ನು ಕೇವಲ ನಿರಾಕರಣೆ ಇಲ್ಲವೆ ಸ್ವೀಕರಣೆ ಮಾಡದೆ ಹೊಸ ವಿಮರ್ಶಾತ್ಮಕ ಓದಿನೊಂದಿಗೆ ಅದನ್ನು ವರ್ತಮಾನಕ್ಕೆ ಸಮೀಕರಿಸುವ ಸಾಧನವಾಗಿ ತಾಳಮದ್ದಲೆ ಮಾಡುತ್ತಿದೆ ಎಂದು ರಂಗಕರ್ಮಿ ಕೆ.ವಿ.ಅಕ್ಷರ ಹೇಳಿದರು.

ಯಕ್ಷಗಾನ ಅರ್ಥಧಾರಿ ಡಾ.ಎಂ. ಪ್ರಭಾಕರ ಜೋಶಿ ಅವರ ಅಭಿನಂದನಾ ಸಮಿತಿಯು ನಗರದಲ್ಲಿ ಏರ್ಪಡಿಸಿದ್ದ ‘ಜೋಶಿ ವಾಗರ್ಥ ಗೌರವ’ ಸಮಾರೋಪ ಸಮಾರಂಭದಲ್ಲಿ ಭಾನುವಾರ ಅವರು ಮಾತನಾಡಿದರು.

ಇಡೀ ಜಗತ್ತು ಬಿಕ್ಕಟ್ಟಿನಲ್ಲಿ ಸಿಲುಕಿಕೊಂಡಿದೆ. ನಮ್ಮ ಗತಕಾಲವನ್ನು ವರ್ತಮಾನದ ಜತೆಗೆ ಅನುಸಂಧಾನ ಮಾಡಿಕೊಳ್ಳುವುದು. ಹೇಗೆಂದು ಬಿಕ್ಕಟ್ಟು. ಭಾರತದಲ್ಲಿ ಮೋದಿ ಪ್ರಧಾನಿಯಾಗಿದ್ದು, ಇಂಗ್ಲೆಂಡಿನಲ್ಲಿ ನಡೆದ ಬ್ರೆಕ್ಸಿಟ್ ಎಂಬ ವಿದ್ಯಮಾನ, ಡೊನಾಲ್ಡ್ ಟ್ರಂಪ್ ಅಮೆರಿಕದ ಅಧ್ಯಕ್ಷನಾಗಿದ್ದು, ಇವು ಮೂರೂ ಆಯಾಯ ದೇಶದ ಬುದ್ಧಿವಂತರಿಗೆ ಮತ್ತು ಧೀಮಂತರಿಗೆ ಅರ್ಥವಾಗದ ವಿದ್ಯಮಾನಗಳಾಗಿವೆ. ಅಂದರೆ ಈ ವಿದ್ಯಮಾನಗಳ ಹಿನ್ನೆಲೆಯಲ್ಲಿ ನಮ್ಮ ನಾಡಿನ ಬುದ್ಧಿವಂತರು ಮತ್ತು ವಿಶಾಲ ಜನಸಮುದಾಯದ ನಡುವೆ ವರ್ತಮಾನವನ್ನು ಅರ್ಥ ಮಾಡಿಕೊಳ್ಳುವ, ಗತಕಾಲವನ್ನು ಸಮೀಕರಿಸಿಕೊಳ್ಳುವ ನಡುವೆ ಬಿರುಕು ಕಾಣಿಸಿಕೊಂಡಿದೆ. ಆದರೆ, ಗತಕಾಲವನ್ನು ಸ್ವೀಕರಿಸಬೇಕೋ, ನಿರಾಕರಿಸಬೇಕೋ ಎಂಬ ಒತ್ತಡವಿದೆ. ಉದಾಹರಣೆಗೆ ಭಗವದ್ಗೀತೆಯನ್ನು ನಾಶ ಮಾಡಿ ಎನ್ನುವ ಒಂದು ವರ್ಗವಿದೆ. ಹಾಗೆಯೇ ಪೂಜೆ ಮಾಡಿ ಎಂಬ ಇನ್ನೊಂದು ವರ್ಗವಿದೆ. ಈ ಎರಡೂ ವರ್ಗಗಳು ಭಗವದ್ಗೀತೆಯನ್ನು ಹೊಸ ವಿಮರ್ಶಾ ದೃಷ್ಟಿಕೋನದಿಂದ ಅರ್ಥ ಮಾಡಿಕೊಳ್ಳುವ ವ್ಯವಧಾನವಿಲ್ಲ ಎಂದರು.

ಸಂಪ್ರದಾಯವನ್ನು ಅರ್ಥ ಮಾಡಿಕೊಳ್ಳಲು, ಸಂಪ್ರದಾಯದೊಳಗೇ ಸಿಗುವ ಸಾಧನ ತಾಳಮದ್ದಲೆ. ಇಂಥ ಕೆಲಸದಲ್ಲಿ ತೊಡಗಿರುವ ಪ್ರಭಾಕರ ಜೋಶಿ ಅವರಿಗೆ ಹೆಚ್ಚಿನ ಮನ್ನಣೆ ಸಿಗಬೇಕು ಎಂದು ಆಶಿಸಿದರು.

ಸೀತಾರಾಮ ಭಟ್ ದಾಮ್ಲೆ, ಎಂ. ಬಾಲಚಂದ್ರ ಡೋಂಗ್ರೆ, ಅಶೋಕ್ ಭಟ್, ಡಾ. ಧರಣಿದೇವಿ ಮಾಲಗತ್ತಿ, ಪ್ರೊ.ಲೀಲಾವತಿ ಎಸ್.ರಾವ್ ಮಾತನಾಡಿದರು. ಡಾ.ಕೆ.ಎಂ.ರಾಘವ ನಂಬಿಯಾರ್ ಅಧ್ಯಕ್ಷತೆ ವಹಿಸಿದ್ದರು.
ಇದಕ್ಕೂ ಮೊದಲು ಜೋಶಿ ಅವರ ಜೀವನ ಹಾಗೂ ಸಾಧನೆ ಕುರಿತು ತಜ್ಞರು ಪ್ರಬಂಧ ಮಂಡಿಸಿದರು. ನಂತರ ‘ಚಕ್ರಗ್ರಹಣ’ ತಾಳಮದ್ದಲೆ, ‘ರಾಧಾಂತರಂಗ’ ಯಕ್ಷಗಾನ ಪ್ರದರ್ಶನಗೊಂಡಿತು.

ಪ್ರಜಾವಾಣಿ ದಿನಾಂಕ: 15-05-2017 ಪ್ರಕಟಿತ