ಮೈಸೂರು: ಯಕ್ಷಗಾನ, ತಾಳಮದ್ದಳೆಗಳು ಪ್ರತಿಯೊಬ್ಬರಲ್ಲಿ ವಿಮರ್ಶಾ ಮನೋಭಾವ ಬೆಳೆಸುವಲ್ಲಿ ಪ್ರಮುಖ ಪಾತ್ರ ನಿರ್ವಹಿಸುತ್ತವೆ ಎಂದು ಕರ್ನಾಟಕ ಪೊಲೀಸ್ ಅಕಾಡೆಮಿ ಉಪ ನಿರ್ದೇಶಕಿ ಡಾ. ಧರಣಿದೇವಿ ಮಾಲಗತ್ತಿ ಅಭಿಪ್ರಾಯಪಟ್ಟರು.

ಸಂಶೋಧಕ, ಅರ್ಥಧಾರಿ ಡಾ. ಎಂ. ಪ್ರಭಾಕರ ಜೋಶಿ ಅಭಿನಂದನಾ ಸಮಿತಿ ನಗರದ ಜಗನ್ಮೋಹನ ಅರಮನೆ ಸಭಾಂಗಣದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ‘ಜೋಶಿ ವಾಗಾರ್ಥ ಗೌರವ’ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು. ತಾಳಮದ್ದಳೆಯಲ್ಲಿ ನಡೆಯುತ್ತಿದ್ದ ತರ್ಕಗಳು ನನ್ನಲ್ಲಿ ವಿಮರ್ಶಾ ಮನೋಭಾವ ಬೆಳೆಸಿತು. ಅರ್ಥಧಾರಿ ಡಾ.ಎಂ.ಪ್ರಭಾಕರ ಜೋಶಿ ಅವರ ತರ್ಕಗಳು ನನ್ನ ಮನಸ್ಸಿನ ಮೇಲೆ ಗಾಢವಾದ ಪರಿಣಾಮ ಬೀರಿವೆ. ಅವರು ಪ್ರತಿಯೊಂದನ್ನು ವಿಮರ್ಶಾ ದೃಷ್ಟಿಯಿಂದ ನೋಡುತ್ತಿದ್ದರು. ಅವರು ಮಾಡುತ್ತಿದ್ದ ತರ್ಕಗಳು ನನ್ನ ಮನಸ್ಸಿನಲ್ಲಿ ಆಳವಾಗಿ ಬೇರೂರಿವೆ ಎಂದರು.

ನಾನು ಯಕ್ಷಗಾನ, ತಾಳಮದ್ದಳೆಯ ಪರಿಸರದಲ್ಲಿ ಬೆಳೆದು ಬಂದವಳು. ಯಕ್ಷಗಾನ ನೋಡುತ್ತಿದ್ದರೆ ಪ್ರತಿಯೊಬ್ಬರಲ್ಲೂ ವಿಮರ್ಶಾ ಮನೋಭಾವ ಬೆಳೆಯುತ್ತದೆ. ನಾನು ‘ಇಳಾಭಾರತಂ’ ಮಹಾಕಾವ್ಯ ಬರೆಯಲು ಹಾಗೂ ಪುರಾಣ ಕೃತಿಯನ್ನು ವಿಮರ್ಶಾ ದೃಷ್ಟಿಯಿಂದ ನೋಡಲು, ಯಕ್ಷಗಾನ, ತಾಳಮದ್ದಳೆ ಪ್ರಮುಖ ಕಾರಣವಾಯಿತು ಎಂದರು.

ಸಾಹಿತಿ ವಿಜಯನಾಥ ಕೌಂಡಿನ್ಯ, ಯಕ್ಷಚಿಂತಕ ಡಾ.ಕೆ. ಎಂ. ರಾಘವ ನಂಬಿಯಾರ್, ಡಾ.ಜೋಶಿ ಅಭಿನಂದನಾ ಸಮಿತಿ ಗೌರವಾಧ್ಯಕ್ಷ ಸೀತಾರಾಮ್ ಭಟ್ ದಾಮ್ಲೆ, ಅಧ್ಯಕ್ಷ ಎಂ. ಬಾಲಚಂದ್ರ ಡೋಂಗ್ರೆ, ಅರ್ಥಧಾರಿ ಅಶೋಕ್ ಭಟ್, ರಂಗಕರ್ಮಿ ಕೆ.ವಿ. ಅಕ್ಷರ, ಸುರತ್ಕಲ್ ಗೋವಿಂದದಾಸ ಕಾಲೇಜಿನ ನಿವೃತ್ತ ಪ್ರಾಧ್ಯಾಪಕಿ ಪ್ರೋ. ಲೀಲಾವತಿ ರಾವ್, ಕಾರ್ಯದರ್ಶಿ ಗ.ನಾ.ಭಟ್ಟ ಇತರರು ಇದ್ದರು.

ವಿಜಯವಾಣಿ ದಿನಾಂಕ 15-05-2017 ರಲ್ಲಿ ಪ್ರಕಟಿತ