ಕಲಾವಿದರಾಗಿ, ಕಲಾ ಪ್ರೋತ್ಸಾಹಕರಾಗಿ ಪಣಂಬೂರು ವೆಂಕಟ್ರಾಯ ಐತಾಳರು ಸಮಾಜಕ್ಕೆ ನೀಡಿದ ಕೊಡುಗೆ ಅಪೂರ್ವವಾದುದು. ಅವರ ಹೆಸರಿನಲ್ಲಿ ಮಕ್ಕಳು ನಡೆಸುತ್ತಿರುವ ಕಾರ್ಯಗಳು ಸ್ತುತ್ಯರ್ಹವಾದುದು ಎಂದು ಪರ್ಯಾಯ ಪಲಿಮಾರು ಮಠಾಧೀಶ ವಿದ್ಯಾಧೀಶ ತೀರ್ಥ ಸ್ವಾಮೀಜಿ ಹೇಳಿದರು.

ಶ್ರೀ ಕೃಷ್ಣಮಠದ ರಾಜಾಂಗಣದಲ್ಲಿ ಈಚೆಗೆ ನಡೆದ ಪಿ.ವೆಂಕಟ್ರಾಯ ಐತಾಳರ ಸಾಂಸ್ಕೃತಿಕ ಪ್ರತಿಷ್ಠಾನದ ಪ್ರಥಮ ವಾರ್ಷಿಕೋತ್ಸವದಂದು ಅನುಗ್ರಹ ಸಂದೇಶ ನೀಡಿ ನುಡಿದರು.

60ಕ್ಕೂ ಮೇಲ್ಪಟ್ಟು ವಿದ್ಯಾರ್ಥಿಗಳು ಮಠದಲ್ಲೇ ಪ್ರತಿವಾರ ಶಿಸ್ತುಬದ್ಧವಾಗಿ, ಆಸಕ್ತಿಯಿಂದ ಯಕ್ಷಗಾನ ಅಭ್ಯಾಸ ಮಾಡುತ್ತಿರುವುದು ಅಭಿನಂದನಾರ್ಹ ಸಂಗತಿ ಎಂದು ಸೋದೆ ಮಠಾಧೀಶರಾದ ವಿಶ್ವವಲ್ಲಭತೀರ್ಥ ಶ್ರೀಪಾದರು ನುಡಿದರು.

ಯಕ್ಷಗಾನ ವಿದ್ವಾಂಸ ಡಾ.ಎಂ.ಪ್ರಭಾಕರ ಜೋಷಿ ಸಂಸ್ಮರಣ ಭಾಷಣ ಮಾಡಿದರು. ಯಕ್ಷಗಾನ ಕಲಾರಂಗದ ಕಾರ್ಯದರ್ಶಿ ಮುರಳಿ ಕಡೇಕಾರ್, ಸಿರಿಬಾಗಿಲು ವೆಂಕಟಪ್ಪಯ್ಯ ಪ್ರತಿಷ್ಠಾನದ ರಾಮಕೃಷ್ಣ ಮಯ್ಯ ಹಾಗೂ ವೆಂಕಟ್ರಾಯ ಐತಾಳರ ಪತ್ನಿ ಜಯಂತಿ ಐತಾಳ್ ಉಪಸ್ಥಿತರಿದ್ದರು.

ಈ ಸಂದರ್ಭ ಗುರುಗಳಾದ ಗಿರೀಶ್ ಅಡ್ಕ ಅವರನ್ನು ಗೌರವಿಸಲಾಯಿತು. ವಲ್ಲಭಾ ತಂತ್ರಿ ಸ್ವಾಗತಿಸಿದರು. ಡಾ. ಸುನೀಲ್ ಕಾರ್ಯಕ್ರಮ ನಿರ್ವಹಿಸಿ, ಚಿನ್ಮಯಿ ಎಸ್. ಮಯ್ಯ ವಂದಿಸಿದರು.

error: Content is protected !!
Share This