ಸಾಮಾಗ್ರಿಗಳು

ಅಕ್ಕಿ- ಒಂದು ಕಪ್, ಆಲೂ ಗಡ್ಡೆ – ಒಂದು, ಬೀನ್ಸ್- ಸ್ವಲ್ಪ, ಕ್ಯಾರೆಟ್- ಎರಡು, ಟೊಮ್ಯಾಟೊ- ಒಂದು, ಹಸಿಮೆಣಸು- ಎರಡು ಅಥವಾ ಮೂರು, ಜೀರಿಗೆ- ಒಂದು ಚಮಚ, ಚೆಕ್ಕೆ, ಲವಂಗ- ಸ್ವಲ್ಪ, ಅರಶಿನ- ಒಂದು ಚಮಚ, ಪುದೀನಾ- ಒಂದು ಕಪ್, ಬೆಳ್ಳುಳ್ಳಿ- ಹತ್ತು ಎಸಳು, ನೀರುಳ್ಳಿ- ಎರಡು, ತುಪ್ಪ/ಎಣ್ಣೆ – ನಾಲ್ಕು ಚಮಚ, ಬ್ರೆಡ್ – ಮೂರು ಸ್ಲೈಸ್ (ಬೇಕಾದರೆ ಮಾತ್ರ), ನೀರು, ನಿಂಬೆ ಹುಳಿ- ಒಂದು, ರುಚಿಗೆ ತಕ್ಕಷ್ಟು ಉಪ್ಪು.

ಮಾಡುವ ಕ್ರಮ

ಅಕ್ಕಿಯನ್ನು ಚೆನ್ನಾಗಿ ತೊಳೆದು ಅಕ್ಕಿಯ ಅಳತೆಯ ಎರಡು ಪಟ್ಟು ನೀರು ಹಾಕಿ ಕುಕ್ಕರ್ ನಲ್ಲಿ ಬೇಯಿಸಬೇಕು. ಇನ್ನೊಂದು ಕಡೆ ಪುದೀನಾ, ಹಸಿಮೆಣಸು, ನೀರುಳ್ಳಿ, ಬೆಳ್ಳುಳ್ಳಿ, ಕ್ಯಾರೆಟ್, ಬೀನ್ಸ್, ಟೊಮ್ಯಾಟೋ, ಆಲೂಗಡ್ಡೆಗಳನ್ನು ಸಣ್ಣ ಸಣ್ಣ ದಾಗಿ ಹೆಚ್ಚಿಕೊಳ್ಳಬೇಕು. ಆಮೇಲೆ ಒಂದು ಬಾಣಲೆಗೆ ನಾಲ್ಕು ಚಮಚ ತುಪ್ಪ/ಎಣ್ಣೆ ಹಾಕಿ, ಅದಕ್ಕೆ ಜೀರಿಗೆ, ನೀರುಳ್ಳಿ, ಬೆಳ್ಳುಳ್ಳಿಗಳನ್ನು ಹಾಕಿ ಬಾಡಿಸಬೇಕು. ನಂತರ ಪುದೀನಾ ಹಾಕಿ ಮತ್ತೊಮ್ಮೆ ಕಲಸಬೇಕು. ಇದಾದ ಮೇಲೆ ಕ್ಯಾರೆಟ್, ಬೀನ್ಸ್, ಆಲೂಗಡ್ಡೆ ಗಳನ್ನು ಹಾಕಬೇಕು. ಅರಶಿನ, ಉಪ್ಪು ಹಾಕಿ ಕಲಸಿ, ಆಮೇಲೆ ಟೊಮ್ಯಾಟೋವನ್ನೂ ಹಾಕಿ ಮುಚ್ಚಬೇಕು. ಇದು ಸಣ್ಣ ಉರಿಯಲ್ಲೇ ಬೇಯಲಿ. ಹದಿನೈದು ನಿಮಿಷಗಳಷ್ಟು ಹೊತ್ತು ಬೇಯಲು ಬೇಕಾಗುತ್ತದೆ. ಬೆಂದ ಮೇಲೆ ನಿಂಬೆ ಹಣ್ಣು ಹಿಂಡಿ ಹಾಕಿ ಚೆನ್ನಾಗಿ ಕಲಸಬೇಕು. ಈಗ, ಬೆಂದಿರುವ ಅನ್ನವನ್ನೂ ಹಾಕಿದರೆ ಪುಲಾವ್ ಸಿದ್ಧ.

(ಬ್ರೆಡ್ ಹಾಕಲು ಇಷ್ಟವಿದ್ದರೆ ಎರಡು ಮೂರು ಸ್ಲೈಸ್ ಬ್ರೆಡ್ ಗಳನ್ನು ಚೌಕಾಕಾರದಲ್ಲಿ ಕತ್ತರಿಸಿ ಕಾವಲಿಯಲ್ಲಿ ತುಪ್ಪ/ಎಣ್ಣೆ ಹಾಕಿ ಹುರಿಯಬೇಕು. ಕೊನೇಗೆ ಪುಲಾವಿಗೆ ಮಿಶ್ರ ಮಾಡಿದರಾಯಿತು)