ಅಗರಿ ರಘುರಾಮ ಭಾಗವತರು

ಅಗರಿ ಶೈಲಿಯ ಖ್ಯಾತ ಭಾಗವತ, ಎರಡು ತಲೆಮಾರಿನ ಭಾಗವತರ ನಡುವಿನ  ಕೊಂಡಿಯಂತಿದ್ದ ಅಗರಿ ರಘುರಾಮ ಭಾಗವತರು (84) ಜ. 27ರಂದು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನ ಹೊಂದಿದರು. ಅವರು ಅಗರಿ ಎಂಟರ್‌ಪ್ರೈಸಸ್‌ ಮಾಲಕ ಅಗರಿ ರಾಘವೇಂದ್ರ ರಾವ್‌ ಸಹಿತ ಮೂವರು ಪುತ್ರರು ಹಾಗೂ ಪುತ್ರಿಯನ್ನು ಅಗಲಿದ್ದಾರೆ.

ವರ್ತಮಾನ ಕಾಲದಲ್ಲಿ ತೆಂಕುತಿಟ್ಟಿನ ಅತಿ  ಹಿರಿಯ ಭಾಗವತರಾಗಿದ್ದ ಅವರು ಅಗರಿ ಶೈಲಿಯ ಸಮರ್ಥ ಪ್ರತಿನಿಧಿಯಾಗಿದ್ದು,  ಪರಂಪರೆ ಹಾಗೂ ಸಂಗೀತ  ಶೈಲಿಯನ್ನೂ ಅರಿತಿದ್ದ ಅಪರೂಪದ ಭಾಗವತರೆನಿಸಿಕೊಂಡಿದ್ದರು.

ಖ್ಯಾತ ಭಾಗವತರಾಗಿದ್ದ ದಿ| ಅಗರಿ  ಶ್ರೀನಿವಾಸ ಭಾಗವತ – ರುಕ್ಮಿಣಿ ಅಮ್ಮನವರ  ಪುತ್ರರಾಗಿ 1935ರಲ್ಲಿ ಜನಿಸಿದ್ದ ಇವರು ಸುರತ್ಕಲ್‌ ವಿದ್ಯಾದಾಯಿನಿ ಹಾಗೂ ಮಂಗಳೂರಿನ ಅಲೋಶಿಯಸ್‌ ಕಾಲೇಜಿನ ಹಳೆ ವಿದ್ಯಾರ್ಥಿ. ಕರ್ನಾಟಕ ಸರಕಾರದ ಶಿಕ್ಷಣ ಇಲಾಖೆಯಲ್ಲಿ ನೌಕರಿಗೆ ಸೇರಿದ್ದ ಅವರಿಗೆ ಬಾಲ್ಯದಲ್ಲೇ ಯಕ್ಷಗಾನದ ಆಸಕ್ತಿ ಬೆಳೆದಿತ್ತು. ತಂದೆಯವರನ್ನೇ ಗುರುವಾಗಿ ಸ್ವೀಕರಿಸಿ ಭಾಗವತಿಕೆಯ ಪಟ್ಟುಗಳನ್ನು ಕರಗತ ಮಾಡಿಕೊಂಡಿದ್ದರು.

ಸರಕಾರಿ ನೌಕರಿಯಲ್ಲಿದ್ದರೂ ಸುರತ್ಕಲ್‌ ಮೇಳದಲ್ಲಿ ಪೂರ್ಣ ಪ್ರಮಾಣದಲ್ಲಿ ಭಾಗವತರಾಗಿದ್ದರು. ತುಳುನಾಡ ಸಿರಿ, ಶನೈಶ್ಚರ ಮಹಾತ್ಮೆ, ಪಾಪಣ್ಣ ವಿಜಯ, ಸಾಧ್ವಿ ಸದಾರಮೆ, ತಿರುಪತಿ ಕ್ಷೇತ್ರ ಮಹಾತ್ಮೆ, ಬೇಡರ ಕಣ್ಣಪ್ಪ , ಚಂದ್ರಾವಳಿ ವಿಲಾಸ ,  ಬಪ್ಪನಾಡು ಕ್ಷೇತ್ರ ಮಹಾತ್ಮೆ, ಕೋಟಿ ಚೆನ್ನಯ, ಕೋರ್ದಬ್ಬು ಬಾರಗ, ಸತಿ ಶೀಲವತಿ , ಕಡುಗಲಿ ಕುಮಾರ ರಾಮ , ನಾಟ್ಯರಾಣಿ ಶಾಂತಲಾ, ಶೀಂತ್ರಿದ ಚೆನ್ನಕ್ಕೆ , ಬಲ್ಮೆದ ಭಟ್ರ್, ಸರ್ಪ ಸಂಕಲೆ , ರಾಜಾ ಯಯಾತಿ  ಮುಂತಾದ ಪ್ರಸಂಗಗಳು ಸುರತ್ಕಲ್‌ ಮೇಳದಲ್ಲಿ ಜಯಭೇರಿ ಬಾರಿಸುವಲ್ಲಿ ಇವರ ಕೊಡುಗೆ ಅಪಾರವಿತ್ತು.

ಪ್ರಶಸ್ತಿ: ವಿಟ್ಲ ಜೋಷಿ ಪ್ರಶಸ್ತಿ, ಕುರಿಯ ಪ್ರಶಸ್ತಿ, ಉಳ್ಳಾಲ ಶ್ರೀನಿವಾಸ ಮಲ್ಯ ಪ್ರಶಸ್ತಿ, ತ್ರಿಕಣ್ಣೇಶ್ವರ ಪ್ರಶಸ್ತಿ, ಪದ್ಯಾಣ ಪ್ರಶಸ್ತಿ, ಪೊಲ್ಯ ದೇಜಪ್ಪ ಶೆಟ್ಟಿ ಪ್ರಶಸ್ತಿ, ಜಗದಂಬಾ ಯಕ್ಷಗಾನ ಪ್ರಶಸ್ತಿ, ಕರಾವಳಿ ಯಕ್ಷಗಾನ ಪ್ರಶಸ್ತಿ, ಯಕ್ಷಲಹರಿ ಪ್ರಶಸ್ತಿ, ಯಕ್ಷ ಸಂಗಮ ಪ್ರಶಸ್ತಿ ಮುಂತಾದವು  ಇವರಿಗೆ ಒಲಿದಿವೆ.  ಅವರ ಹೆಸರಿನಲ್ಲಿ ಮಕ್ಕಳು “ಅಗರಿ ಪ್ರಶಸ್ತಿ’ ನೀಡುತ್ತಿದ್ದಾರೆ.

error: Content is protected !!
Share This