ಯಕ್ಷಗಾನ ರಂಗದ ಮೇರು ಕಲಾವಿದ ಅಳಿಕೆ ರಾಮಯ್ಯ ರೈ ಸ್ಮರಣಾರ್ಥ 2019ರಲ್ಲಿ ಸ್ಥಾಪನೆಗೊಂಡ ಅಳಿಕೆ ಸ್ಮಾರಕ ಟ್ರಸ್ಟ್ ಪ್ರತಿ ವರ್ಷ ನೀಡುವ ‘ಅಳಿಕೆ ಪ್ರಶಸ್ತಿ’ಗೆ 2018-19ನೇ ಸಾಲಿನಲ್ಲಿ ಹಿರಿಯ ಕಲಾವಿದರಾದ ಮಾಡಾವು ಕೊರಗಪ್ಪ ರೈ ಮತ್ತು ಮುಂಡಾಜೆ ಬಾಲಕೃಷ್ಣ ಶೆಟ್ಟಿ ಆಯ್ಕೆಯಾಗಿದ್ದಾರೆ ಎಂದು ಯಕ್ಷಾಂಗಣ ಕಾರ್ಯಾಧ್ಯಕ್ಷ ಭಾಸ್ಕರ ರೈ ಕುಕ್ಕುವಳ್ಳಿ ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಏ. 13ರಂದು ನಗರದ ಮಂಗಳಾದೇವಿ ದೇವಳದಲ್ಲಿ ಅಳಿಕೆ ರಾಮಯ್ಯ ರೈ ಸ್ಮಾರಕ ಟ್ರಸ್ಟ್ ಮತ್ತು ಯಕ್ಷಾಂಗಣ ಮಂಗಳೂರು ಸಹಯೋಗದಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ ಎಂದರು.

ಅಂದು ಮಧ್ಯಾಹ್ನ 2.30ರಿಂದ ಜಿಲ್ಲೆಯ ಪ್ರಸಿದ್ಧ ಕಲಾವಿದರಿಂದ ‘ವಾಲಿ ಮೋಕ್ಷ’ ಯಕ್ಷಗಾನ ತಾಳಮದ್ದಳೆ ನಡೆಯಲಿದೆ. ಸಂಜೆ 5 ಗಂಟೆಗೆ ಸಭಾ ಕಾರ್ಯಕ್ರಮ ನಡೆಯಲಿದ್ದು, ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಎ.ಸಿ. ಭಂಡಾರಿ ಪ್ರಶಸ್ತಿ ಪ್ರದಾನ ಮಾಡುವರು. ಮಂಗಳಾದೇವಿ ದೇವಸ್ಥಾನದ ಆಡಳಿತ ಮೊಕ್ತೇಸರ ಪಿ. ರಮಾನಾಥ ಹೆಗ್ಡೆ ಅಧ್ಯಕ್ಷತೆ ವಹಿಸುವರು. ದ.ಕ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ, ಉದ್ಯಮಿ ಎ.ಕೆ. ಜಯರಾಮ ಶೇಖ ಮುಖ್ಯ ಅತಿಥಿಗಳಾಗಿರುವರು. ಯಕ್ಷಗಾನ ವಿದ್ವಾಂಸ ಡಾ.ಎಂ. ಪ್ರಭಾಕರ ಜೋಶಿ ಸಂಸ್ಮರಣಾ ಭಾಷಣ ಮಾಡುವರು ಎಂದು ಅವರು ಹೇಳಿದರು.
ಉಬರಡ್ಕ ಉಮೇಶ ಶೆಟ್ಟಿ ಪ್ರಶಸ್ತಿಗೆ ಆಯ್ಕೆಯಾದವರ ವಿವರ ನೀಡಿದರು.
ಸುಂದರ ಶೆಟ್ಟಿ ಬೆಟ್ಟಂಪಾಡಿ, ಅಶೋಕ ಮಾಡ ಕುದ್ರಾಡಿ, ತೀರ್ಥಹಳ್ಳಿ ವಿಶ್ವನಾಥ ಶೆಟ್ಟಿ ಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

error: Content is protected !!
Share This