ವಿಶೇಷೋಪನ್ಯಾಸ ಕಾರ್ಯಕ್ರಮದಲ್ಲಿ ವಿದ್ವಾಂಸ ಡಾ.ಎಂ.ಪ್ರಭಾಕರ ಜೋಶಿ ಬಣ್ಣನೆ

 “ತೆಂಕುತಿಟ್ಟು ಯಕ್ಷಗಾನಕ್ಕೆ ಸುಂದರ ಚೌಕಟ್ಟು ನಿರ್ಮಿಸಿಕೊಟ್ಟಿರುವ ಪಾರ್ತಿಸುಬ್ಬ, ರಾಮನಾಟಂ, ಕಥಕ್ಕಳಿ ಜತೆಗೆ ಜೈಮಿನಿ ಭಾರತ, ತೊರವೆ ರಾಮಾಯಣ, ಕೃಷ್ಣ ಚರಿತೆ ಕೃತಿಗಳಿಂದ ಪ್ರಭಾವಿತರಾಗಿದ್ದರು. ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಯಕ್ಷಗಾನ ಕವಿಗಳನ್ನು ಪ್ರಾದೇಶಿಕಗೊಳಿಸಿ ಅವರನ್ನು ಒಂದು ವಲಯಕ್ಕೆ ಸೀಮಿತಗೊಳಿಸುವುದು ಸರಿಯಲ್ಲ. ಪಾರ್ತಿಸುಬ್ಬ ಅವರಂತಹ ಯಕ್ಷಗಾನ ಕವಿಗಳಿಗೆ ಕುಮಾರವ್ಯಾಸ, ರತ್ನಾಕರವರ್ಣಿಯವರಂತಹ ಕವಿಶ್ರೇಷ್ಠರ ಮನ್ನಣೆ ಸಿಗಬೇಕು.” 

– ಡಾ. ಎಂ. ಪ್ರಭಾಕರ ಜೋಶಿ, ಹಿರಿಯ ಅರ್ಥಧಾರಿ 

ಕುಮಾರವ್ಯಾಸನ ಬಳಿಕ ಜನಮಾನಸದಲ್ಲಿ ಅಚ್ಚಳಿಯದೆ ನೆಲೆನಿಂತ ಮತ್ತೊಬ್ಬ ಕವಿ ಪಾರ್ತಿಸುಬ್ಬ ಎಂದು ಯಕ್ಷಗಾನ ಅರ್ಥಧಾರಿ, ವಿದ್ವಾಂಸ, ಡಾ. ಎಂ. ಪ್ರಭಾಕರ ಜೋಶಿ ಬಣ್ಣಿಸಿದರು.

ಮಂಗಳೂರು ವಿಶ್ವವಿದ್ಯಾಲಯದ ಡಾ.ಪಿ.ದಯಾನಂದ ಪೈ ಮತ್ತು ಪಿ.ಸತೀಶ್ ಪೈ ಯಕ್ಷಗಾನ ಅಧ್ಯಯನ ಕೇಂದ್ರದ ಪ್ರಾಯೋಜಕತ್ವದಲ್ಲಿ ಕಾಸರಗೋಡು ಸರ್ಕಾರಿ ಕಾಲೇಜು ಸಭಾಂಗಣದಲ್ಲಿ ಆಯೋಜಿಸಲಾದ ‘ಯಕ್ಷಕವಿಕಾವ್ಯಯಾನ’ ವಿಶೇಷೋಪಾನ್ಯಾಸ ಕಾರ್ಯಕ್ರಮದಲ್ಲಿ ಯಕ್ಷಗಾನ ಮತ್ತು ಪಾರ್ತಿಸುಬ್ಬ ವಿಷಯದಲ್ಲಿ ಮಾತನಾಡಿದರು.

‘ಯಕ್ಷಗಾನ ಮತ್ತು ಕೀರಿಕ್ಕಾಡು ವಿಷ್ಣುಮಾಸ್ತರ್’ ಎಂಬ ವಿಷಯದಲ್ಲಿ ಯಕ್ಷಗಾನ ಅರ್ಥಧಾರಿ ಗಣರಾಜ ಕುಂಬಳೆ ಮಾತನಾಡಿ, ಕೀರಿಕ್ಕಾಡು ವಿಷ್ಣುಮಾಸ್ತರ್ ಕುಗ್ರಾಮದಿಂದ ಬೆಳೆದು ಬಂದ ಅನನ್ಯ ಪ್ರತಿಭೆ. ಕೇವಲ ಐದನೇ ತರಗತಿಯ ಔಪಚಾರಿಕ ಶಿಕ್ಷಣ ಪಡೆದ ಅವರು, ಶಾಲಾಮಕ್ಕಳಿಗೆ ಮಾತ್ರವಲ್ಲದೆ, ಊರಿಗೆ, ಯಕ್ಷಗಾನ ಕ್ಷೇತ್ರಕ್ಕೆ ಪರಿಚಿತರಾದರು. ಎಂಭತ್ತೆಂಟರಷ್ಟು ಯಕ್ಷಗಾನ ಪ್ರಸಂಗಗಳನ್ನು, ಮೂರು ಕಾದಂಬರಿಗಳನ್ನು, ಕವನ ಸಂಕಲನಗಳನ್ನು ಸಾಹಿತ್ಯ ಲೋಕಕ್ಕೆ ನೀಡಿದ ಅವರು ಯಕ್ಷಗಾನ ಅರ್ಥಧಾರಿಯಾಗಿ, ವೇಷಧಾರಿಯಾಗಿ ಮಾಡಿದ ಸೇವೆ ಗಮನಾರ್ಹ ಎಂದರು. ಕಾಸರಗೋಡು ಸರ್ಕಾರಿ ಕಾಲೇಜು ಪ್ರಾಂಶುಪಾಲ ಡಾ. ಅರವಿಂದ ಕೃಷ್ಣನ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಕಥಕ್ಕಳಿ ಮತ್ತು ಯಕ್ಷಗಾನಕ್ಕೆ ಹಲವು ಸಾಮ್ಯತೆಗಳಿದ್ದರೂ ಕಥಕ್ಕಳಿಯು ವಿದ್ವಾಂಸರಿಗೆ ಮಾತ್ರ ಸೀಮಿತಕಲೆ. ಆದರೆ ಯಕ್ಷಗಾನವು ಸಂಭಾಷಣೆ ಮೂಲಕ ಜನಪದರನ್ನು ತಲುಪಿದ ಕಲೆ ಎಂದರು.

ಯಕ್ಷಗಾನ ಅರ್ಥಧಾರಿ ಡಾ.ರಮಾನಂದ ಬನಾರಿ, ಕನ್ನಡ ವಿಭಾಗ ಮುಖ್ಯಸ್ಥೆ ಸುಜಾತ. ಎಸ್ ಉಪಸ್ಥಿತರಿದ್ದರು. ದಿತಿ ಜಿ.ಬಿ, ಪವಿತ್ರ. ಇ, ಸುನೀತ. ಬಿ, ಅನುರಾಧ. ಕೆ, ವೃಂದಾ ಬಿ.ಜಿ, ಕಾವ್ಯ. ಪಿ, ಶ್ರದ್ಧಾ ಭಟ್ ನಾಯರ್ಪಳ್ಳ ಇವರಿಂದ ಯಕ್ಷಕಾವ್ಯ ಯಾನ ನಡೆಯಿತು.

ಮಂಗಳೂರು ವಿಶ್ವವಿದ್ಯಾಲಯ ಯಕ್ಷಗಾನ ಅಧ್ಯಯನ ಕೇಂದ್ರ ಸಂಯೋಜಕ ಡಾ. ಧನಂಜಯ ಕುಂಬಳೆ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಕಾಸರಗೋಡು ಸರ್ಕಾರಿ ಕಾಲೇಜಿನ ಯಕ್ಷಗಾನ ಸಂಶೋಧನ ಕೇಂದ್ರ ಸಂಯೋಜಕ ಡಾ. ರತ್ನಾಕರ ಮಲ್ಲಮೂಲೆ ಸ್ವಾಗತಿಸಿದರು. ಉಪನ್ಯಾಸಕಿ ಬಬಿತಾ ಎ ಕಾರ್ಯಕ್ರಮ ನಿರೂಪಿಸಿದರು. ಡಾ. ರಾಧಾಕೃಷ್ಣ ಬೆಳ್ಳೂರು ವಂದಿಸಿದರು.

ವಿಜಯವಾಣಿ ಪತ್ರಿಕೆ

error: Content is protected !!
Share This