ಹಲವು ಸಲ ನಮ್ಮ ಅನಿಸಿಕೆಗಳು ಮನಸ್ಸಿನಲ್ಲಿ ಕಲ್ಪನೆಯ ಗರಿಗಳನ್ನು ಅರಳಿಸುತ್ತಿದ್ದರೆ ಮಾತಿನಲ್ಲಿ ಅವುಗಳು ನಿರ್ವಹಿಸುವುದಿಲ್ಲ. ಅಥವಾ ಅದನ್ನು ನಿರ್ವಹಿಸುವ ಸಾಮಾರ್ಥ್ಯ ಇರುವುದಿಲ್ಲ ಎನ್ನುವುದೇ ಸರಿ. ಷಡ್ರಸ ಭೋಜನದಲ್ಲಿ ಯಾವುದೋ ಒಂದು ಕೊರತೆ ಕಂಡಾಗ ಎಲ್ಲವೂ ಸರಿ ಇದೆ ಆದರೂ ಒಂದು ಅತೃಪ್ತಿ ಅದು ಹೇಳುವುದಕ್ಕೆ ಅರಿಯದೇ ಅದು ಕತ್ತಲಕೋಣೆಯ ಅರಸುವಿಕೆಯಾಗಿ ಬಿಡುತ್ತದೆ. ಹುಟ್ಟಿದ ಮಗುವಾದರೂ ಆರಂಭದಲ್ಲಿ ಅದು ಮಾತು ಕಲಿಯುವುದು ಶಬ್ದಗಳ ಅನುಕರಣೆಯಿಂದ. ಮನಸ್ಸಿಗೆ ತಿಳಿದರೂ ನಾಲಿಗೆ ತೊದಲುತ್ತದೆ. ಬಾಲ್ಯದಲ್ಲಿ ನಮ್ಮಜ್ಜ ಭಜನೆಯನ್ನು ಕಲಿಸುವಾಗ ಮೊದಲು ನಾವು ಬೇರೆಯವರ ಧ್ವನಿಗೆ ತಾಳ ಬಡಿಯಬೇಕಿತ್ತು. ಅದರ ಅರ್ಥ ರಂಗೋಲಿಯನ್ನು ಬಿಡಿಸುವುದಕ್ಕೆ ಚುಕ್ಕೆಗಳನ್ನು ಮೊದಲು ಒತ್ತಿದಂತೆ ಭಜನೆಗಳನ್ನು ಕಲಿಯಲು ಅದರ ಹಾದಿ ಗುರುತನ್ನು ತಾಳದಿಂದ ಮೊದಲು ಹಾಕಿಬಿಡಬೇಕು. ತಾಳ ಬಡಿದವನಿಗೆ ಹಾಡುವುದು ಸುಲಭವಾಗುತ್ತದೆ. ಈ ಭಾವ ಅರ್ಥವಾದದ್ದು ಇತ್ತೀಚೆಗೆ ನಂಬಿಯಾರ ಸಂದರ್ಶನವೊಂದನ್ನು ನಮ್ಮ ರಂಗಣ್ಣನ ಬ್ಲಾಗಿನಲ್ಲಿ ಕಂಡಾಗ.

ಪ್ರಶ್ನೆಗಳು ಹೇಗೂ ಹುಟ್ಟಬಹುದು. ಆದರೆ ಉತ್ತರಗಳು ಹುಟ್ಟುವುದು ಕಷ್ಟ. ಅದಕ್ಕೆ ಅಲ್ಲವೇ ಪ್ರಶ್ನೆಯನ್ನು ಇರಿಸುವಾಗ ಒಂದು ವಾಕ್ಯದಲ್ಲಿ ಉತ್ತರಿಸಿ ಅಥವಾ ಹತ್ತು ವಾಕ್ಯಕ್ಕೆ ವಿಸ್ತರಿಸಿ ಎಂದು ನಿಬಂಧನೆಯನ್ನು ಹಾಕುವುದು. ಇಲ್ಲಿ ಪ್ರಶ್ನೆಗಿಂತ ಅದರ ಉತ್ತರವೇ ಪ್ರಧಾನವಾಗಿಬಿಡುತ್ತದೆ. ಪ್ರಶ್ನೆಗಳಿಗೆ ಬದಲಾಗಿ ಉತ್ತರಕ್ಕೇ ಅಂಕಗಳ ಮೌಲ್ಯವನ್ನು ನಿರ್ಧರಿಸಿರುವುದು. ಆದುದರಿಂದ ಉತ್ತರ ಇಲ್ಲಿ ಮಾರ್ಮಿಕವಾಗಿದ್ದಷ್ಟೂ ಅದರ ಮೌಲ್ಯ ವೃದ್ಧಿಯಾಗುತ್ತದೆ.

ಪ್ರಶ್ನೆಗಳು ಹಲವಾರು ಬಂದು ಉತ್ತರವನ್ನು ಹಿಡಿದೆತ್ತಿಕೊಂಡು ಸರಿದು ಹೋದುವು. ಆದರಲ್ಲಿ ಕೆಲವೊಂದು ಪ್ರಶ್ನೆಗಳು ಎತ್ತಿಕೊಂಡ ಉತ್ತರಗಳನ್ನು ಕಂಡಾಗ ನಾಸಿಕಾಗ್ರವನ್ನು ತೋರುಬೆರಳು ಸ್ಪರ್ಶಿಸಿದ ಅನುಭವ. ನಂಬಿಯಾರರ ಉತ್ತರ ವಾಸ್ತವದಲ್ಲಿದ್ದ ಸತ್ಯಗಳನ್ನು ಎದುರು ತೋರಿಸಿದಂತೆ. ಸತ್ಯಗಳ ಅರಿವಿದ್ದರೂ ಆ ಸತ್ಯಾನ್ವೇಷಣೆಯ ಹಾದಿಯನ್ನು ತೋರಿ ಸತ್ಯವನ್ನು ಹೊರಗೆಡಹಿದಂತೆ. ಬಹಳಷ್ಟು ಸತ್ಯಗಳು ನಮ್ಮರಿವಿಗೆ ಬಂದವುಗಳೇ ಆಗಿರುತ್ತದೆ. ಆದರೆ ಅದಕ್ಕೆ ರೂಪವಿರುವುದಿಲ್ಲ ಎಂಬುದು ಮತ್ತೊಂದು ಸತ್ಯ.  ಹಾಗಾಗಿ ನಂಬಿಯಾರರ ಉತ್ತರ ಉದಾಹರಣೆಗಳು ಸತ್ಯವನ್ನು ತೋರಿಸಿ ಒಪ್ಪಿಕೊಳ್ಳುವಂತೆ ಮಾಡಿಬಿಡುತ್ತದೆ.

ಯಕ್ಷಗಾನದ ಪದಗಳು ಛಂದೋಬದ್ಧವಾಗಿರುವುವಂತಹುಗಳು. ಅವುಗಳು ಆ ಚೌಕಟ್ಟಿನೊಳಗಿದ್ದಾಗ ಅರ್ಥವನ್ನು ಭಾವವನ್ನೂ ಉಳಿಸಿಕೊಳ್ಳುತ್ತದೆ. ಪದಗಳು ರಾಗ ಮತ್ತು ತಾಳಕ್ಕೆ ನಿಬಧ್ಧವಾಗಿರುತ್ತದೆ. ಯಕ್ಷಗಾನದ ಪದಗಳು ಛಂದಸ್ಸಿನಿಂದ ದೂರವಾಗಿರುವುದಕ್ಕೆ ಸಾಧ್ಯವೇ ಇಲ್ಲ. ಮೊದಲು ಇವುಗಳು ಗುರುವಿನಿಂದ ಶಿಷ್ಯನಿಗೆ ನೇರವಾಗಿ ಮೌಖಿಕವಾಗಿ ದಾಟಿಸಲ್ಪಟ್ಟರೆ ಇಂದು ಅವುಗಳು ಬರಹ ರೂಪದಲ್ಲಿ ಪುಸ್ತಕ ರೂಪದಲ್ಲಿ ದೊರೆಯುತ್ತದೆ. ಪ್ರಸಂಗ ಕರ್ತೃ ಯಾವ ರಾಗ ತಾಳದಲ್ಲಿ  ಪದಗಳನ್ನು ರಚಿಸಿದನೋ  ಅದರಲ್ಲೇ ಯಕ್ಷಗಾನದಲ್ಲಿ ಹಾಡಲ್ಪಡಬೇಕು. ಇದವರ ಖಚಿತವಾದ ನಿಲುವು. ಆದರೆ ಇಂದು ಸ್ವ ಇಚ್ಛೆಯ ಛಂದಸ್ಸು ಉಪಯೋಗಿಸುವುದರಿಂದ ಪದಗಳ ಮೂಲಸ್ವರೂಪವೇ ಹೊರಟು ಹೋಗಿ ಪದಳು ಮೂಲಾರ್ಥವನ್ನೇ ಕಳೆದುಕೊಳ್ಳುತ್ತವೆ.

ಇದು ವಾಸ್ತವಕ್ಕೆ ತೀರ ಹತ್ತಿರವಾದ ನಂಬಿಯಾರರ ಅನಿಸಿಕೆಗಳಾದರೆ ಪ್ರಸ್ತುತ ಇದಕ್ಕಿಂತ ಭೀಕರವಾಗಿದೆ ಎಂದೇ ಅನುಭವಕ್ಕೆ ಬರುತ್ತದೆ. ರಂಗದ ಮೇಲೆ ಯಾವುದೋ ನಿಯಂತ್ರಣಕ್ಕೆ ಸಿಕ್ಕಂತೆ ಭಾಗವತ ವರ್ತಿಸುವಾಗ ವೇಷಧಾರಿಯ ಪರಿಗಣನೆಯೋ ಪ್ರೇಕ್ಷಕನ ಮನವೊಲಿಕೆಯೋ ಅಂತು ಯಕ್ಷಗಾನ ಪದ ಛಂದಸ್ಸು ಎಂಬುದಿದೆ ಎಂಬ ಅರಿವೇ ಇರುವುದಿಲ್ಲ.  ಇಂದಿನ ಪ್ರಸಂಗ ಕರ್ತರೂ ಇದಕ್ಕೆ ವಿಹಿತವಾಗಿರಬಹುದೇ? ಅನುಮಾನಿಸಲ್ಪಡಬೇಕಾಗುತ್ತದೆ. ಯಕ್ಷಗಾನ ಕಲಾವಿದನಾದವನು ಹೇಗೆ, ಕುಣಿತ, ವಾದನ, ಸ್ವರ, ಲಯ, ಹೀಗೆ ಪರಿಣತಿಯನ್ನು ಪಡೆದಿರಬೇಕೋ ಅದರಂತೆ ಪ್ರಸಂಗ ಕರ್ತನಿಗೂ ಕಾವ್ಯ ವ್ಯಾಕರಣ ಛಂದಸ್ಸು ರಾಗಗಳು ಅದು ಯಕ್ಷಗಾನಕ್ಕೆ ಹೊಂದಿಕೊಂಡಂತೆ ಪರಿಜ್ಞಾನವಿರಬೇಕಾದದ್ದು ಅತೀ ಅಗತ್ಯ. ವಾಸ್ತವದಲ್ಲಿ ಹಾಗಿರಬಹುದೇ? ಯಾವುದೋ ಒಂದು ಪ್ರಸಂಗದಲ್ಲಿ ಭಾಗವತ ತನ್ನದೇ ರಾಗ ಶೈಲಿಯಲ್ಲಿ ಹಾಡಿ ಜನಪ್ರಿಯವಾದ ಹಿಟ್ ಪದವಿದ್ದರೆ ತಮ್ಮ ಪ್ರಸಂಗದಲ್ಲೂ ಅಂತಹುದೊಂದೆರಡು ಬೇಕು ಎಂದು ಅಳವಡಿಸುವಾಗ,ಯಕ್ಷಗಾನ ಛಂದಸ್ಸಿನ  ಬಗ್ಗೆ ಅರಿವಿರುವುದಕ್ಕೆ ಸಾಧ್ಯವೇ? ಛಂದಸ್ಸು ಎಂಬುದು ಅಪ್ರಸ್ತುತ ಪ್ರಸಂಗವಾಗಿಬಿಡುತ್ತದೆ.

ಯಕ್ಷಗಾನ ಒಂದು ಪರಿಪೂರ್ಣ ಕಲೆ. ಇದು ಇಲ್ಲಿ ಕಂಡು ಬರುವ ಮತ್ತೊಂದು ಪ್ರತಿಪಾದನೆ. ಯಕ್ಷಗಾನಕ್ಕೆ ಅನ್ಯ ಕಲೆಗಳಿಂದ ಎರವಲು ಪಡೆದು ಅಳವಡಿಸುವ ಅಗತ್ಯವಿರುವುದಿಲ್ಲ. ಹಾಗೊಂದು ವೇಳೆ ಅಳವಡಿಸಿದಲ್ಲಿ ಅದು ಯಕ್ಷಗಾನದಲ್ಲಿನ ಅಧ್ಯಯನದ ಕೊರತೆಯೇ ಹೊರತು ಯಕ್ಷಗಾನಕ್ಕೆ ಒದಗಿಸುವ ಸಂಪನ್ಮೂಲವಾಗುವುದಕ್ಕೆ ಸಾಧ್ಯವಿಲ್ಲ. ಯಕ್ಷಗಾನದಲ್ಲಿ ಪರಂಪರೆಯಿಂದ ಬಂದವುಗಳು ಮೊದಲು ರೂಢಿಯಾಗಬೇಕು. ಇದು ಹಲವು ಹಿರಿಯ ಕಲಾವಿದರಿಂದ ಮೊದಲು ತೊಡಗಿದ ಧ್ವನಿಯ ಪ್ರತಿಧ್ವನಿ. ತುಂಬಿದ ಕೊಡದಲ್ಲಿ ಪುನಃ ನೀರು ಸೇರುವುದಿಲ್ಲ. ಆದರೆ ಕೊಡ ಅರ್ಧತುಂಬಿದಾಗ ಅಲ್ಲಿ ಮತ್ತೊಂದು ಸೇರಿಸುವ ಅಥವಾ ಸೇರಿಕೊಳ್ಳುವ ಅವಕಾಶವಿರುತ್ತದೆ. ಹಾಗಾಗಿ ಇಲ್ಲಿ ಪೂರ್ಣವಾಗಿ ತಿಳಿದುಕೊಳ್ಳದೇ  ಅಜ್ಞಾನವನ್ನೇ ಪ್ರದರ್ಶಿಸಿದ ಹಾಗಾಗುತ್ತದೆ.

ಪರಂಪರೆಯ ಆವಶ್ಯಕತೆಗೆ ಸಮಕಾಲೀನ ಉದಾಹರಣೆಯೊಂದು ನಂಬಿಯಾರರಿಂದ ಇಲ್ಲಿ ವ್ಯಕ್ತವಾಗುತ್ತದೆ. ಸ್ವಾತಂತ್ರ್ಯ ಹೋರಾಟ ಭಾರತದಲ್ಲಿ ಯಾಕಾಯಿತು. ನಂತರ ಸ್ವಾತಂತ್ರ್ಯ ಹೇಗೆ ಲಭಿಸಿ ಅದನ್ನು ಭಾರತೀಯ ಹೇಗೆ ಅನುಭವಿಸುವಂತಾಯಿತು? ಒಂದು ಸನಾತನ ಜೀವನ ಕ್ರಮದಲ್ಲಿ ಜೀವಿಸಿದವನಿಗೆ ವಿದೇಶಿಗಳಿಂದ ಧಾಳಿಯಾಗಿ ತನ್ನ ಪರಂಪರೆಯ ಜೀವನವನ್ನೇ ಒತ್ತೆ ಇಟ್ಟು ಗುಲಾಮರಂತೆ ಬದುಕಬೇಕಾಯಿತು. ಇದರಿಂದ ತೊಂದರೆಯಾದಾಗ ಸ್ವಾತಂತ್ರ್ಯ ಬೇಕು ಎಂಬ ಹಂಬಲವೇ ಉಂಟಾಗಿ ಆ ಪ್ರಚೋದನೆಯೇ ಹೋರಾಟಕ್ಕೆ ಮೂಲ ಕಾರಣವಾಯಿತು. ಅದರೆ ಈಗ ಸಮಕಾಲೀನ ಪರಿಸ್ಥಿತಿಯಲ್ಲಿ ಸನಾತನವನ್ನು ಬಿಟ್ಟು ಆವಿಷ್ಕಾರದ ಬದುಕನ್ನು ಅನುಭವಿಸುವ ತವಕ. ಇದರಿಂದ ಪುನಃ ವಿದೇಶಿಗಳ ಧಾಳಿಗೆ ತುತ್ತಾಗಬೇಕಾದ ಆವಶ್ಯಕತೆಯನ್ನು ಪರೋಕ್ಷವಾಗಿ ಸಾರಿದಂತೇ ಅಲ್ಲವೇ?  ಸ್ವಾತಂತ್ರ್ಯ ಹೋರಾಟದ ಮುಖ್ಯ ಧ್ಯೇಯವಾಕ್ಯ ಸತ್ಯ ಸಮತ್ವ ಮತ್ತು ಸ್ವಾತಂತ್ರ್ಯ. ಸತ್ಯವನ್ನು ಬಿಟ್ಟು ಸಮತ್ವ ಇಲ್ಲ. ಇವೆರಡನ್ನು ಬಿಟ್ಟು ಸ್ವಾತಂತ್ರ್ಯವಿಲ್ಲ. ಇದು ಕೇವಲ ಸ್ವಾತಂತ್ರ್ಯಕ್ಕೆ ಸಂಭಂಧಿಸಿಯಲ್ಲ ಯಕ್ಷಗಾನಕ್ಕೂ ಇದು ಅಳವಡಿಕೆಯಾಗುತ್ತದೆ. ಪರಂಪರೆಯಿಂದ ಬಂದಂತಹ ಸತ್ಯವವನ್ನು ಬಿಟ್ಟು ನಮಗೇನು ತೋಚಿದವೋ ಅವುಗಳನ್ನು ಮಾಡುತ್ತೇವೆ. ಆವಾಗ ಎಲ್ಲರದ್ದು ಭಿನ್ನವಾದಾಗ ಸಮತ್ವ ಎಲ್ಲಿ ಉಳಿಯಿತ?. ಇವೆರಡು ಇಲ್ಲದಾಗ ಸ್ವಾತಂತ್ರ್ಯ ಎಲ್ಲಿ ಲಭ್ಯವಾಯಿತು.?ಅದರಂತೆ ಯಕ್ಷಗಾನದಲ್ಲೂ ಪರಂಪರೆಯನ್ನು ಬಿಟ್ಟು ಮತ್ತಾವುದರೋ ಹಿಂದೆ ಸುತ್ತುವುದು ಎಂದರೆ ನಾವು ಪುನಃ ಗುಲಾಮತನಕ್ಕೆ ತಲೆಯೊಡ್ಡಿದಂತಾಗಿಬಿಡುತ್ತದೆ.

ಯಕ್ಷಗಾನದಲ್ಲಿ ಇಂದು ಸರಿಯಾದ ಶಿಕ್ಷಣದ ವ್ಯವಸ್ಥೆ ಇಲ್ಲ. ಅಧುನಿಕ ರಂಗಭೂಮಿಯ ಸಿನಿಮಾ ನಾಟಕ  ಮುಂತಾದವುಗಳ ಪ್ರಭಾವಗಳು ಯಕ್ಷಗಾನದಲ್ಲಿ ಬಹಳಷ್ಟು ಆಗಿದೆ. ಇದು ಪೂರ್ಣವಾದ ಅರಿವಿಲ್ಲದೆ ಅಗಿರುವಂಥವುಗಳು.  ಅಲ್ಪಸ್ವಲ್ಪ ಕಲಿತವನು ರಂಗವೇರುವ ಅವಕಾಶ ಇಲ್ಲಿ ಧಾರಾಳವಾಗಿ ಉಂಟು. ಇದರಿಂದ ಆತ ಮಾಡುವುದೆಲ್ಲವೂ ಪ್ರಯೋಗಗಳೇ ಆಗುತ್ತವೆ ಹೊರತು ಅದು ಯಕ್ಷಗಾನವಾಗುವುದಕ್ಕೆ ಸಾಧ್ಯವಿಲ್ಲ. ಇಂದು ಆ ಪ್ರಯೋಗಗಳನ್ನೇ ಯಕ್ಷಗಾನವೆಂದು ಪ್ರೋತ್ಸಾಹಿಸುತ್ತಾರೆ. ಇದು ಸರಿಯಲ್ಲ. ಕಥಕ್ಕಳಿಯಲ್ಲಿದ್ದಂತೇ ಇಲ್ಲಿ ಕಠಿಣವಾದ ನಿಯಮವೊಂದನ್ನು ಜಾರಿಗೊಳಿಸಬೇಕು. ಪೂರ್ಣವಾಗಿ ಪಾರಂಗತನಾದವನಿಗಷ್ಟೆ ರಂಗವೇರುವ ಅವಕಾಶ ಅಥವಾ ಕಲಿಸುವ ಅರ್ಹತೆಯನ್ನು ನೀಡುವಂತಾಗಬೇಕು.ತಪ್ಪಿದ್ದಲ್ಲಿ ಇದು ಶಿಕ್ಷಾರ್ಹ ಅಪರಾಧವಾಗುವಂತೆ ಪರಿಗಣಿಸಲ್ಪಡಬೇಕು. ಅದರಂತೇ ಇಂದು ಪ್ರೇಕ್ಷಕನಾದವನು ಮೊದಲು ಕೈಕಟ್ಟಿ ಕುಳಿತು ಚಪ್ಪಾಳೆ ಶಿಳ್ಳೆ ಬಡಿಯದೆ ಯಕ್ಷಗಾನವನ್ನು ಮೌನವಾಗಿ ನೋಡಬೇಕು. ಕಲೆಯ ತಿಳುವಳಿಕೆ ಇಲ್ಲದೇ ಆಗುವಂತಹ ಪ್ರಯೋಗಗಳು ಪ್ರೇಕ್ಷಕನ ಪ್ರೋತ್ಸಾಹ ಪಡೆದಲ್ಲಿ ಅದು ಮೌಢ್ಯವೇ ಆಗಿಬಿಡುತ್ತದೆ. ಪ್ರೇಕ್ಷಕ ದಡ್ಡತನವನ್ನು ತೋರಿದಲ್ಲಿ ಆ ದೌರ್ಬಲ್ಯವನ್ನು ಉಪಯೋಗಿಸುವ ಕಲಾವಿದ ಅಪಕ್ವವಾದ ಪ್ರಯೋಗವನ್ನೇ ಮುಂದುವರಿಸುತ್ತಾನೆ. ಪ್ರೇಕ್ಷಕನ ಸ್ಥಾನ ಗೌರವಾನ್ವಿತವಾದದ್ದು. ಸಭಾಲಕ್ಷಣದಲ್ಲಿ ಪ್ರೇಕ್ಷಕನ ಸ್ಥಾನ ದೇವತೆಗಳದ್ದು. ಆದುದರಿಂದ ಆ ಘನತೆಯನ್ನು ಉಳಿಸಿಕೊಳ್ಳಬೇಕು. ನಾನು ಹಲವು ಕಥಕ್ಕಳಿಯನ್ನು ನೋಡಿದ್ದೇನೆ, ಅಲ್ಲಿ ಪ್ರದರ್ಶನ ಮಧ್ಯೆ ಚಪ್ಪಾಳೆ ಶಿಳ್ಳೆ ಹೊಡೆದ ನಿದರ್ಶನ ನನಗೆ ಸಿಕ್ಕಿಲ್ಲ. ಇದು ತುಲನೆಯಲ್ಲ. ಇದು ಪ್ರೇಕ್ಷಕ ಧರ್ಮದ ಪ್ರತಿಪಾದನೆ ಮಾತ್ರ.

ಗ್ರಾಹಕ ಯಾವ ಮನೋಧರ್ಮವನ್ನು ಹೊಂದಿರುತ್ತಾನೋ ಅದನ್ನೆ ವರ್ತಕ ಅನುಸರಿಸಿಬಿಡುತ್ತನೆ. ಇದು ಸಾಮಾನ್ಯ. ಯಕ್ಷಗಾನದಲ್ಲಿ ಆಧುನಿಕತೆ ಬಳಕೆಯಾದಾಗ ಅದಕ್ಕೆ ಪ್ರೋತ್ಸಾಹ ದೊರೆತಲ್ಲಿ ಅದು ಯಕ್ಷಗಾನಕ್ಕೆ ಸಿಗುವ ಪ್ರೋತ್ಸಾಹವಾಗುವುದಿಲ್ಲ. ಸಿನಿಮಾ ಅಥವಾ ನಾಟಕ ಯಕ್ಷಗಾನದಲ್ಲಿ ಪ್ರೋತ್ಸಾಹಿಸಲ್ಪಡುತ್ತಿದ್ದರೆ ಅದು ಯಕ್ಷಗಾನವಾಗುವುದಕ್ಕೆ ಸಾಧ್ಯವೇ? ಇದು ಅರ್ಧ ತುಂಬಿದ ಕೊಡದಲ್ಲಿ ಮತ್ತೇನನ್ನೋ ತುಂಬಿಸಿ ಭಾರ ತೂಗಿಸುವ ಕುಟಿಲ ತಂತ್ರಗಾರಿಕೆ.

ಇಂದು ಯಕ್ಷಗಾನದಲ್ಲಿ ಕಲಾವಿದನನ್ನು ಹೊಂದಿಕೊಂಡು ಪ್ರಯೋಗಗಳಾಗುತ್ತದೆ. ಕಾಲ ಮಿತಿಯ ವೇಗದ ಪರಿಧಿಯೊಳಗೆ ಕಲಾವಿದನಿಗೆ ಹೊಂದಿಕೊಂಡು ವೇಗ ನಿರ್ಣಯಿಸಲ್ಪಡುತ್ತದೆ ಹೊರತು ಪ್ರಸಂಗವನ್ನು ಹೊಂದಿಕೊಂಡು ಅಲ್ಲ. ಕಲಾವಿದನ ವೇಗಕ್ಕೆ ಹೊಂದಿಕೊಳ್ಳದ ಹಿಮ್ಮೇಳದವನು ಪರಿಪೂರ್ಣ ತಜ್ಞನಾಗಿದ್ದರೂ ಅಸಮರ್ಥನಾಗಿ ಬಿಂಬಿಸಲ್ಪಡುತ್ತಾನೆ. ಪರಂಪರೆಯಿಂದ ಬಂದ ಹಿರಿಯ ಕಲಾವಿದ ಒಂದು ವೇಷವನ್ನು ನಿರ್ವಹಿಸುವಾಗ ಆ ಪ್ರಸಂಗಕ್ಕೆ ಮತ್ತು ಕಾಲಕ್ಕೆ ಹೊಂದಿಕೊಂಡು ಪರಂಪರೆಯಂತೆ ನಿಧಾನವಾಗಿ ಕುಣಿದರೆ ಆ ಹಿರಿಯ ಕಲಾವಿದನನ್ನು ವೃದ್ಧನಾಗಿ ಅಸಮರ್ಥ ಎಂದೇ ಪರಿಗಣಿಸುತ್ತಾರೆ ಹೊರತು ಮೂಲದಲ್ಲಿನ ಯಕ್ಷಗಾನದ ಅರಿವು ಅವರಲ್ಲಿರುವುದೇ ಇಲ್ಲ.  ಹಿರಿಯ ಭಾಗವತರೊಬ್ಬರು ಕಾಲಮಾನಕ್ಕೆ ತಕ್ಕಂತೆ ಯಾವುದೋ ಒಂದು ಪದವನ್ನು ಆ ವೇಷಕ್ಕೆ ಮತ್ತು ಸಂದರ್ಭಕ್ಕೆ ಹೊಂದಿಕೊಂಡು ನಿಧಾನವಾಗಿ ಹಾಡಿದರೆ ಹಿರಿಯ ಮದ್ದಲೆ ವಾದಕ ಪೂರ್ಣ ಅರಿವಿದ್ದರೂ ಆ ತಾಳಕ್ಕೆ ಹೊಂದಿಕೊಳ್ಳಲಾಗದೇ ತಡಬಡಾಯಿಸಿ ಅಸಹಾಯಕನಾಗಿ ಬಿಡುತ್ತಾನೆ. ಕಾರಣ ಆತ ಈ ವೇಗದ ಇನ್ಸ್ಟಂಟ್ ಯಕ್ಷಗಾನಕ್ಕೆ ಹೊಂದಿಕೊಂಡು ಪೂರ್ಣವಾಗಿ ಬದಲಾಗಿರುತ್ತಾನೆ. ಇದು ಹಿರಿಯ ಮದ್ದಲೆಗಾರರೊಬ್ಬರ ನೈಜ ಅಳಲು. ಹಾಗಾದರೆ ಯಕ್ಷಗಾನ,  ಯಕ್ಷಗಾನವಾಗಿ ಉಳಿದಿಲ್ಲ ಎಂಬುದಕ್ಕೆ ಬೇರೆ ನಿದರ್ಶನ ಬೇಕಿಲ್ಲ.

ಯಕ್ಷಗಾನದಲ್ಲಿ ನಿರ್ದೇಶಕನ ಅವಶ್ಯಕತೆಯಿದೆಯೇ? ಇಲ್ಲಿ ಭಾಗವತನ ಸ್ಥಾನ ನಿರ್ದೇಶನಕ್ಕೆ ಪರ್ಯಾಪ್ತವೆ?

ಯಕ್ಷಗಾನಕ್ಕೆ ಇರುವಂತಹುದು ಮೂಲವಾಗಿ ಒಂದು ಚೌಕಟ್ಟು. ಇದು ಪರಂಪರೆಯಿಂದ ಬಂದದ್ದು. ಒಂದು ವೇಷದ ಪ್ರವೇಶವಾಗಲಿ ದೇವೇಂದ್ರ ಅರ್ಜುನ ಹೀಗೆ ಯಾವುದೇ ವೇಷವಾದರೂ ಅದಕ್ಕೊಂದು ಕ್ರಮ ಸಿದ್ಧವಾಗಿರುತ್ತದೆ. ಇದು ಪ್ರಸಂಗ ಯಾವುದೇ ಆಗಿರಲಿ ಇಲ್ಲೊಂದು ಸಾಮಾನ್ಯ ನಿಯಮವಿರುತ್ತದೆ. ಹಾಗಾಗಿ ಯಕ್ಷಗಾನದಲ್ಲಿ ಪರಂಪರೆಯನ್ನು ತಿಳಿದಾಗ ಮತ್ತು ಅನುಸರಿಸಿದಾಗ ಮುಂದಿನದ್ದು ಸುಲಭವಾಗುತ್ತದೆ. ಪರಂಪಯಿರುವುದು ಸುಲಭಮಾಡುವುದಕ್ಕೆ.  ಹೊರತು ಅದೊಂದು ಬಂಧನವಲ್ಲ. ಇಲ್ಲೊಂದು ಪರಂಪರೆಯಿಂದ ಬಂದ ನಿಯಮವಿರುತ್ತದೆ. ಆ ನಿಯಮದ ಒಳಗೆಯೇ ಪ್ರಸಂಗ ಹೊಸೆದಿರುತ್ತದೆ. ಹಾಗಾಗಿ ಅದನ್ನು ಬಿಟ್ಟು ಇಷ್ಟದಂತೆ ಮಾಡುತ್ತೇ ವೆ ಎಂದರೆ ಅದು ಯಕ್ಷಗಾನವಾಗುವುದಿಲ್ಲ. ಹಾಗಾಗಿ ಯಕ್ಷಗಾನದಲ್ಲಿ ನಿರ್ದೇಶಕನ ಸ್ಥಾನವಿದ್ದರೆ ಆತನಿಗೆ ಪರಂಪರೆಯ ಸಂಪೂರ್ಣ ಜ್ಞಾನವಿರತಕ್ಕದ್ದು. ಇದು ನಂಬಿಯಾರರ ಬಹಳ ಸರಳವಾದ ನಿರೂಪಣೆ.

(ರಾಜಕುಮಾರ್ ಬೆಂಗಳೂರು)

error: Content is protected !!
Share This