ಮೈಸೂರು: ರಸಲೋಕದಂತಿರುವ ಯಕ್ಷಗಾನ, ತಾಳಮದ್ದಳೆ ಈಗಿನವರಿಗೆ ಅರಿವೇ ಇಲ್ಲ ಎಂದು ವಿಮರ್ಶಕ ಡಾ.ರಮಾನಂದ ಬನ್ಸಾರಿ ವಿಷಾದಿಸಿದರು.

ಡಾ.ಎಂ.ಪ್ರಭಾಕರ ಜೋಶಿ ಅಭಿನಂದನಾ ಸಮಿತಿಯಿಂದ ನಗರದ ಜಗನ್ಮೋಹನ ಅರಮನೆಯಲ್ಲಿ ಶನಿವಾರದಿಂದ ಎರಡು ದಿನ ಆಯೋಜಿಸಿರುವ ‘ಜೋಶಿ ವಾಗರ್ಥ ಗೌರವ’ ಸಂವಾದ, ವಿಚಾರ ಸಂಕಿರಣ, ತಾಳಮದ್ದಳೆ, ಬಯಲಾಟ ಪ್ರದರ್ಶನ ಉದ್ಘಾಟಿಸಿ ಮಾತನಾಡಿದರು.

ಪ್ರತಿಯೊಂದರಲ್ಲಿಯೂ ಅಭೂತಪೂರ್ವವಾದ ಮಾಯಾ ಶಕ್ತಿ ಇದ್ದರೂ ಕಲೆ, ಸಾಹಿತ್ಯ, ಸಂಸ್ಕೃತಿಯನ್ನು ನಿರ್ಲಕ್ಷ್ಯ ಮಾಡಲಾಗುತ್ತಿದೆ. ಯಕ್ಷಗಾನವನ್ನು ಹಗುರವಾಗಿ ಕಾಣಲಾಗುತ್ತಿದೆ. ಯಕ್ಷಗಾನದಲ್ಲಿ ಅರ್ಥದಾರಿಕೆಯೇ ಪ್ರತ್ಯೇಕವಾದ ಕಲೆ. ಎಲ್ಲರಿಗೂ ಸುಲಭವಾಗಿ ಬರುವುದಿಲ್ಲ. ಪಾತ್ರಧಾರಿಗೆ ಪ್ರತಿಭೆ ಇರಲೇಬೇಕು. ಇಲ್ಲವಾದರೆ ಸಮಚಿತ್ತದಿಂದ ಪಾತ್ರನಿರ್ವಹಿಸಲು ಆಗಲ್ಲ ಎಂದರು.

ನಾವು ದುಡಿಯುವ ಕ್ಷೇತ್ರದಲ್ಲಿ ದೌರ್ಬಲ್ಯಗಳು ಇದ್ದೇ ಇರುತ್ತದೆ. ಆದರೆ ಅದನ್ನು ಮೀರಿ ನಿಲ್ಲಬೇಕಾದದ್ದು ಮನುಷ್ಯನ ಜೀವನದ ಪಾತ್ರವಾಗಿದ್ದು, ಡಾ. ಎಂ.ಪ್ರಭಾಕರ ಜೋಶಿ ಅವರು ಹಲವು ದೌರ್ಬಲ್ಯಗಳನ್ನು ದಾಟಿ ಪಾರ್ಥಿಸುಬ್ಬ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ ಎಂದು ಅಭಿಪ್ರಾಯಪಟ್ಟರು.

ವಿಮರ್ಶಕ ಸೀತಾರಾಮ ಭಟ್ ಮಾತನಾಡಿ, ಯಾವುದೇ ವಿಷಯವಾದರೂ ಚಿಕಿತ್ಸಕ ರೂಪದಲ್ಲಿ ನೋಡಬಲ್ಲ ಡಾ.ಎಂ.ಪ್ರಭಾಕರ ಜೋಶಿ ಅವರು ಒಂದು ಎನ್‍ಸೈಕ್ಲೋಪೀಡಿಯಾದಂತಿದ್ದಾರೆ. ವಾಲ್ಮೀಕಿ, ಕುಮಾರವ್ಯಾಸರು ಒಂದು ಮಹಾಕಾವ್ಯಗಳನ್ನು ಬರೆದು ಮಹಾಕವಿಯಾದರು. ಅವರಂತೆಯೇ ಜೋಶಿ ಅವರ ವಾಗರ್ಥ ಮಹಾಕಾವ್ಯವಾಗಿದೆ ಎಂದು ಬಣ್ಣಿಸಿದರು.

ಯಕ್ಷಗಾನ, ತಾಳಮದ್ದಳೆ ಪ್ರಸ್ತುತ ಕಡಿಮೆಯಾಗಿದ್ದು, ಇಂದಿನ ಕಲಾವಿದರಲ್ಲಿ ಸೌಜನ್ಯವಿಲ್ಲದಂತಾಗಿದೆ. ಇನ್ನೊಬ್ಬ ಕಲಾವಿದನನ್ನು ಬೆಳೆಸುವುದಿರಲಿ ಆ ಕ್ಷೇತ್ರದಲ್ಲಿ ಉಳಿಸಿಕೊಳ್ಳುವ ಕೆಲಸವನ್ನೂ ಮಾಡುತ್ತಿಲ್ಲ ಎಂದು ವಿಷಾದಿಸಿದರು. ಕುವೆಂಪು ವಿವಿ ವಿಶ್ರಾಂತ ಕುಲಪತಿ ಕೆ.ಚಿದಾನಂದಗೌಡ, ಪಾರ್ಥಿಸುಬ್ಬ ಪ್ರಶಸ್ತಿ ವಿಜೇತ ಡಾ.ಎಂ.ಪ್ರಭಾಕರ ಜೋಶಿ, ಡಾ. ಜೋಶಿ ಅಭಿನಂದನಾ ಸಮಿತಿ ಗೌರವಾಧ್ಯಕ್ಷ ಸೀತಾರಾಮ ಭಟ್ ದಾಮ್ಲೆ, ಸಮಿತಿ ಅಧ್ಯಕ್ಷ ಎಂ.ಬಾಲಚಂದ್ರ ಡೋಂಗ್ರೆ, ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಪ್ರದೀಪ್ ಕುಮಾರ ಕಲ್ಕೂರ, ಸಮಿತಿ ಕಾರ್ಯದರ್ಶಿ ವಿದ್ವಾನ್ ಗ.ನಾ.ಭಟ್ಟ ಹಾಜರಿದ್ದರು.

ವಿಜಯವಾಣಿ – 14-05-2017ರಲ್ಲಿ ಪ್ರಕಟಿತ

error: Content is protected !!
Share This