(ಆಳ್ವಾಸ್ ನುಡಿಸಿರಿ 2017ರಲ್ಲಿ ನುಡಿಸಿರಿ ಪ್ರಶಸ್ತಿ ಸ್ವೀಕಾರ ಭಾಷಣದ ತಾತ್ಪರ್ಯ)

 

ಪರಮ ಪರಂಜ್ಯೋತಿ ಕೋಟಿ ಚಂದ್ರಾದಿತ್ಯ | ಕಿರಣ ಸುಜ್ಞಾನ ಪ್ರಕಾಶ |

ಸುರರ ಮಕುಟಮಣಿ ರಂಜಿತ ಚರಣಾಬ್ಜ | ಶರಣಾಗು ಪ್ರಥಮ

-ಜಿನೇಶ|| (ಮಹಾಕವಿ ರತ್ನಾಕರ ವರ್ಣಿಯ ಭರತೇಶ ವೈಭವದ ಮೊದಲ ಸಾಂಗತ್ಯ)

ಸಭಾಕಲ್ಪತರುಂ ವಂದೇ ಋಗ್ಯರುಸ್ಸಾಮಶಾಖಿನಂ

ಷಡಂಗ ಕುಸುಮೋಪೇತಂ ತತ್ತ್ವಜ್ಞಾನ ಫಲೋದಯಂ||

(ಯಕ್ಷಗಾನ ವಾಲ್ಮಿಕಿ ಪಾರ್ತಿಸುಬ್ಬನ ಸಭಾಲಕ್ಷಣದ ಶ್ಲೋಕ)

ಮಹಾಕವಿ ರತ್ನಾಕರವರ್ಣೀ ವೇದಿಕೆಯಲ್ಲಿ ಕಾವ್ಯಕ್ಷೇತ್ರದಲ್ಲಿ ಚಂಡೆಮದ್ದಲೆಯ ನಾದವನ್ನು ಧ್ವನಿಸಿದ ಮಹಾಕವಿ ಗೋಪಾಲಕೃಷ್ಣ ಅಡಿಗ ಸಭಾಂಗಣದಲ್ಲಿ ಮೂಡಬಿದ್ರೆಯನ್ನು ವಿದ್ಯಾರತ್ನಾಕರವಾಗಿ ಸಂಸ್ಕೃತಿ ರತ್ನಾಗಾರವಾಗಿ ರೂಪಿಸಿದ ವಿಸ್ಮಯಕರ ನಾಯಕ ಡಾ. ಮೋಹನ ಆಳ್ವರ ನೇತೃತ್ವದ ಈ ಹಬ್ಬದ ನುಡಿಸಿರಿ ಪ್ರಶಸ್ತಿಯನ್ನು ಸ್ವೀಕರಿಸುವುದು ದೊಡ್ಡ ಮನ್ನಣೆ ಇದು, ಈ ಸಮ್ಮೇಳನದ ಪ್ರಧಾನ ವಿಷಯವಾದ ಬಹುತ್ವ ಎಂಬುದನ್ನು ತನ್ನೊಳಗೆ ಸಾವಯವವಾಗಿ ಹೊಂದಿರುವ ಯಕ್ಷಗಾನಕ್ಕೆ ಸಂದ ಮನ್ನಣೆ. ಇದನ್ನು ಸಮಸ್ತ ಯಕ್ಷಗಾನ ಕಲಾ ಸಮುದಾಯದ ಸ್ವೀಕರಿಸುತ್ತಿದ್ದೇನೆ. ಇದು – ಶತಮಾನಗಳ ಇತಿಹಾಸವುಳ್ಳ ಕಲೆಯ ಭಾಗವಾಗಿ ರೂಪಿತವಾಗಿರುವ ನನ್ನಂತಹ ಅನೇಕರಿಗೆ, ಪ್ರಾತಿನಿಧಿಕವಾಗಿ ಸಲ್ಲುತ್ತಿದೆ ಅಷ್ಟೆ. ಈ ಸಮ್ಮೇಳನದ ಅಧ್ಯಕ್ಷರು – ಶ್ರೀ ನಾಗತಿಹಳ್ಳಿ ಚಂದ್ರಶೇಖರ್, ಚಲನಚಿತ್ರ ಮತ್ತು ಸಾಹಿತ್ಯ ಕ್ಷೇತ್ರಗಳಲ್ಲಿ ಗಂಭೀರ ಆಸಕ್ತಿಯ ಮತ್ತು ಸೃಜನಶೀಲತೆಯ ಒಂದು ಮಾದರಿಯಾಗಿರುವರು.

ನನ್ನ ಸಹ ಪುರಸ್ಕೃತರೆಲ್ಲರೂ ವಿವಿಧ ಕ್ಷೇತ್ರಗಳಲ್ಲಿ ದೊಡ್ಡ ಸಾಧನೆಗೈದವರು. ಹೀಗಾಗಿ – ಇದು ಬಹುತ್ವ ಸಿದ್ಧಿಗೆ ಸಂದ ಪ್ರಶಸ್ತಿ. ಯಕ್ಷಗಾನದ ನುಡಿಯ ಸಿರಿಗೆ ಸಂದ ಮಾನ್ಯತೆ. ಯಕ್ಷಗಾನವು ಕನ್ನಡ ನುಡಿ-ಸಿರಿಯ ಉನ್ನತ ಶ್ರೇಣಿ.

“ಇದು ನಮ್ಮ ನುಡಿಸಿರಿ. ಇದೊಂದು ಮನಸ್ಸು ತುಂಬಿ ನಿಲ್ಲುವ ಬೆರಗಿನ ಅನುಭವ. ವ್ಯಕ್ತಿತ್ವ, ಸಾಮರ್ಥ್ಯ, ಸಂಸ್ಕೃತಿ ಪ್ರೇಮ, ನಾಯಕತ್ವ, ಪ್ರೀತಿ ಕಾಳಜಿಗಳ ಅದ್ಭುತ ಪಾಕವಾಗಿರುವ ಆಳ್ವರು ನಮ್ಮವರು ಎಂಬುದು – ಸುಯೋಗ. ಮೋಹನ ಆಳ್ವ – ಬಹುತ್ವದ ಜೀವಂತ ಮಾದರಿ, ಇದು ಅವರ ವಿದ್ಯಾಸಂಸ್ಥೆಗಳ ಸ್ವರೂಪದಲ್ಲಿ, ಸಾಂಸ್ಕೃತಿಕ ಆಸಕ್ತಿ, ಪರಿಕಲ್ಪನೆ, ಪ್ರೋತ್ಸಾಹಗಳಲ್ಲಿ ಸ್ಪಷ್ಟವಾಗಿದೆ.

ನಮ್ಮ ಕರ್ನಾಟಕದ ಕರಾವಳಿ – ತುಳುನಾಡು, ಚಾರಿತ್ರಿಕವಾಗಿ ಸಾಂಸ್ಕೃತಿಕ ವೈವಿಧ್ಯಕ್ಕೆ, ಬಹುತ್ವಕ್ಕೆ ಒಂದು ಜೀವಂತ ನಿರಂತರ ಉದಾಹರಣೆಯಾಗಿರುವಂತಹುದು. ಕನ್ನಡ, ತುಳು ಕೊಂಕಣಿ, ಮರಾಠಿ, ಮಲಯಾಳಂ, ಹಿಂದಿ, ಬ್ಯಾರಿ ಇವನ್ನೆಲ್ಲ ಮನೆಮಾತಾಗಿ ಹೊಂದಿರುವವರು ಇಲ್ಲಿದ್ದೇವೆ. ಜತೆಗೆ – ತಮಿಳು, ಗುಜರಾತಿ, ಸಿಂಧಿ ಭಾಷೆಗಳ ಸಂಪರ್ಕ, ಹಲವು ಕನ್ನಡಗಳು – ಉಪಭಾಷೆಗಳು ಸೇರಿ ಇದು ಒಂದು ಭಾಷೆಗಳ ಹೂದೋಟ. ಕನ್ನಡ ಮಾತೃ ಭಾಷೆ ಎಂಬುದು ಇಲ್ಲಿ ಅಲ್ಪಸಂಖ್ಯಾಕ. ಆದರೂ – ಇಲ್ಲಿಯ ಜನರ ಕನ್ನಡ ಸಾಧನೆ ಬಲುಹಿರಿದು. ನಾನೊಬ್ಬ ಚಿತ್ಪಾವನಿ ಮರಾಠಿ ಮನೆಮಾತಿನವನು. ನಾನು ಆಳ್ವರೊಂದಿಗೆ ಮಾತಾಡುವುದು ತುಳುವಿನಲ್ಲೆ. ಔಪಚಾರಿಕ ಸಂದರ್ಭಗಳಲ್ಲಿ ಕನ್ನಡದಲ್ಲಿ ! ನನ್ನ ಅನೇಕಾನೇಕ ಸಹ ಕಲಾವಿದರ ಜತೆ – ರಂಗದ ಹೊರಗೆ ಬಹುಶಃ ನಾನು ಕನ್ನಡದಲ್ಲಿ ಮಾತಾಡಿದ್ದೆ ಇಲ್ಲ. ಯಕ್ಷಗಾನದ ಚೌಕಿ (ಬಣ್ಣದ ಮನೆಯ) ಯ ಭಾಷೆಗಳು – ತುಳು, ಮಲಯಾಳ, ಕುಂದಾಪುರ ಕನ್ನಡ, ಹವ್ಯಕ ಭಾಷೆಗಳು. ರಂಗದಲ್ಲಿ ಅಚ್ಚಗನ್ನಡದ ಅಭಿವ್ಯಕ್ತಿ 20-21ನೆಯ ಶತಮಾನದಲ್ಲಿ ಕಾಣಿಸಿಕೊಂಡ ವಿಶ್ವಗೋಳೀಯಕರಣ – ಗ್ಲೋಬಲೈಸೇಶನ್ ಕ್ಕೆ ನಮ್ಮ ಪ್ರದೇಶವು ಶತಮಾನಗಳ ಹಿಂದೆಯೆ ಉತ್ತರವೊಂದನ್ನು ರೂಪಿಸಿದೆ. ಅದರ ಸಮೃದ್ಧ ಅಭಿವ್ಯಕ್ತಿಗಳಲ್ಲಿ ಒಂದು – ಯಕ್ಷಗಾನ ಕಲೆ. ಬಹುತ್ವವು ಇಲ್ಲಿ ತೋರಿಕೆಯಲ್ಲಿ, ಜೀವತ್ ಜೀವಿತವಾಗಿದೆ.

ಶ್ರುತಿ-ಸ್ಮೃತಿ-ಪುರಾಣ ಎಂಬುದು ಸಾಮಾನ್ಯವಾಗಿ, ಒಂದು ಪಾರಂಪರಿಕ ತ್ರಿವಳಿ – ಜ್ಞಾನ, ಮತಾಚಾರ, ನಂಬುಗೆಗಳಲ್ಲಿ ಈ ಮೂರು ಸ್ತರಗಳು, ಭಾರತದ ಪ್ರಸಿದ್ಧವಾದ ಒಂದು ಪರಿಕಲ್ಪನಾ ವಿಧಾನ. ಬೇರೆ ಬೇರೆ ಸಾಂಸ್ಕೃತಿಕ ಪರಂಪರೆಗಳಲ್ಲೂ ಈ ವಿಧಾನವೇ ಇದೆ.

ಈ ಮೂರನ್ನು ಒಂದು ಪಾಕಮಾಡಿ, ಜತೆಗೆ ಜಾನಪದವನ್ನು, ಭಾಷಾ ಸೌಂದರ್ಯವನ್ನು ರಸಾವಿಷ್ಕಾರವನ್ನು, ಸ್ಥಳೀಯತೆಯನ್ನು ಬೆರೆಸಿ ಕೂಡಿಸಿ – ತಯಾರಿಸಿದಂತಿರುವ ಒಂದು ಸಾಂಸ್ಕೃತಿಕ ಸ್ವರೂಪವು ಯಕ್ಷಗಾನ ಕಲೆ. ಯಕ್ಷಗಾನ ರಂಗಸ್ಥಳವು ಕನ್ನಡ ಭಾಷಾ ಸರಸ್ವತಿಯ ಆಡಂಬೊಲಗಳಲ್ಲಿ ಒಂದು. ಯಕ್ಷಗಾನ ತಾಳಮದ್ದಲೆಯು – ಮೌಖಿಕ ಕಲೆಯ ಉತ್ತುಂಗವಾದ ಒಂದು ಸೃಜನ ಪ್ರಕಾರ. ಯಕ್ಷಗಾನದ ಮಾತುಗಾರಿಕೆಯಲ್ಲಿ, ಏಕಕಾಲದಲ್ಲಿ ವೇದದ ಒಂದು ಮಾತು, ಒಂದು ಪುರಾಣದ ಉದ್ಧರಣ, ಒಂದು ಗಾದೆ ಮಾತು, ಕಲಾವಿದನ ಅನುಭವದ ಅನಿಸಿಕೆ, ಒಂದು ಸ್ಥಳೀಯವಾದ ಸಾಂಸ್ಕೃತಿಕ ಭಾವನೆ ಒಟ್ಟಾಗಿ ಬರುತ್ತದೆ. ಸರ್ವಜನ ಸಮಾರಾಧನವಾಗಿದೆ ಈ ಕಲೆ. ಇದು ಜನಕಲೆ, ಜನವಿದ್ಯೆ ಮತ್ತು ಜನರಂಜನೆ ವೈವಿಧ್ಯ ಸೌಂದರ್ಯ ಬಹುತ್ವಗಳ ಪರಿಷ್ಕೃತವಾದ ಒಂದು ಫಲ. ಇದರಲ್ಲಿ ಪ್ರವೃತ್ತನಾಗಿರುವ ನಾನು-ಇದನ್ನು ಪಡೆಯುತ್ತಿರುವುದು. ಆ ಪರಂಪರೆಯು, ನನ್ನ ಗುರುಹಿರಿಯರ ಮತ್ತು ಎಲ್ಲ ಸಹವರ್ತಿಗಳ ಪರವಾಗಿ.

ಈ ಸಂದರ್ಭದಲ್ಲಿ – ಯಕ್ಷಗಾನದ ಶ್ರೇಷ್ಠ ಮದ್ದಲೆವಾದಕ, ನನ್ನ ಅಜ್ಜ, ಗುರು ಅನಿರುದ್ಧ ಭಟ್ ಮರಾಠೆ, ಅವರನ್ನು, ನನ್ನ ಆರಂಭಿಕ ಯಕ್ಷಗಾನ ಅಭ್ಯಾಸದ ವೇದಿಕೆ. ಶ್ರೀ ಮಾಳ ಪರಶುರಾಮ ಯಕ್ಷಗಾನ ಸಂಘವನ್ನು ಹಿರಿ ಕಿರಯ ಕಲಾವಿದರನ್ನು, ಕಾರ್ಕಳದ ಶ್ರೀ ಅನಂತಶಯನ ಯಕ್ಷಗಾನ ಮಿತ್ರಮಂಡಳಿ, ಶ್ರೀ ವೆಂಕಟರಮಣ ಯಕ್ಷಗಾನ ಕಲಾಸಮಿತಿಗಳನ್ನು ಕೃತಜ್ಞತೆಯಿಂದ ಸ್ಮರಿಸುತ್ತೇನೆ. ಕಳೆದ ಐದಾರು ದಶಕಗಳ ನನ್ನ ಹಿರಿಕಿರಿಯ ಸಹವರ್ತಿಗಳ ಒಡನಾಟ ನನ್ನನ್ನು ಬೆಳೆಸಿದೆ.

ಶೇಣಿ –ಸಾಮಗರಿಂದ ತೊಡಗಿ ಇಂದಿನ ಕಿರಿಯರ ತನಕದ ಸಹ ಕಲಾವಿದರು, ಆಟ-ಕೂಟಗಳ ಕಲಾವಿದರು ಎಲ್ಲರೂ ಈ ಗೌರವದ ಪಾಲುದಾರರು. ರಾಜ್ಯ, ದೇಶ ಮತ್ತು ವಿದೇಶಗಳ ಅಸಂಖ್ಯ ಮಿತ್ರ ಅಭಿಮಾನಿ ಪೋಷಕ ಬಂಧುಗಳು, ನನ್ನನ್ನು ಪ್ರೀತಿಯಿಂದ ಆದರಿಸಿ ಪ್ರೋತ್ಸಾಹಿಸಿದ್ದಾರೆ. ಪೂಜ್ಯ ಶಿವರಾಮ ಕಾರಂತ, ಪ್ರೊ. ಕು.ಶಿ. ಅವರಿಂದಾರಂಭಿಸಿ ಇಂದಿನವರೆಗಿನ ವಿಮರ್ಶಕರ ಪರಂಪರೆ ನನಗೆ ಆಧಾರ ಒದಗಿಸಿದೆ. ಪತ್ರಿಕೆಗಳು ಬೆಂಬಲಿಸಿ ಪ್ರೋತ್ಸಾಹಿಸಿದೆ. ಸಂಘ ಸಂಸ್ಥೆಗಳ ಮತ್ತು ವ್ಯಕ್ತಿಗಳ ಆತಿಥೇಯರ ಋಣ ಭಾರ ದೊಡ್ಡದು.

ನಾಡಿನ ಉದಾರ ಶ್ರೀಮಂತ ಅದ್ಭುತವಾದ ಜ್ಞಾನ ಪರಂಪರೆಗಳನ್ನು ‘ವ್ಯಾಖ್ಯಾನ’ ಒಳನೋಟಗಳ ಹೆಸರಿನಲ್ಲಿ ಕೀಗಳೆಯುವ ಕೆಲಸ ಸತತವಾಗಿ ಸಾಗಿದೆ. ಭಾರತೀಯ ಜ್ಞಾನ-ಕಲಾ ಸಾಹಿತ್ಯ ಪರಂಪರೆಗಳನ್ನು, ಜತೆಗೆ ಶ್ರದ್ಧ ಕೇಂದ್ರಗಳನ್ನು, ಸಂಘಟನೆಗಳನ್ನು ವಿವಿಧೋಪಾಯಗಳಿಂದ ಕ್ಷುದ್ರಗೊಳಿಸಿ, ಅಪವಾದಕ್ಕೊಳಪಡಿಸಿ – ನಿರ್ವಾತಗಳನ್ನು ಸೃಷ್ಟಿಸುವ, ರಾಷ್ಟ್ರೀಯ- ಅಂತರಾಷ್ಟ್ರೀಯ ಹುನ್ನಾರಗಳು ಸ್ಪಷ್ಟವಾಗಿವೆ. ಇದಕ್ಕೆ ವಿವರಣೆ ಬೇಕಾಗಿಲ್ಲ. ಇಂತಹ ಸಂದರ್ಭದಲ್ಲಿ ಸಂಸ್ಕೃತಿಯು ಮುನ್ನಡೆಯ ಭವ್ಯ ಆಶಾಸ್ಥಾನವಾಗಿರುವ – ಡಾ. ಮೋಹನ ಆಳ್ವರ ಕೆಲಸಗಳಿಗೆ ನಾವು ದೊಡ್ಡ ಬೆಂಬಲಕೊಡುವ, ಅವರ ಪರವಾಗಿ ಗಟ್ಟಿದನಿ ಕೂಡಿಸುವ ಅಗತ್ಯವಿದೆ.

‘ಏಟು ಬಿದ್ದರೆ ಚಿನ್ನ ಮತ್ತಷ್ಟು ಹೊಳೆಯುವುದು, ಛೇದಿಸಿ ಒರೆಸಿದರೆ ವಜ್ರವು ಕಾಂತಿಯನ್ನು ಹೊಂದುವುದು’ – ಎಂಬ ಪ್ರಾಚೀನರ ವಚನದಂತೆ – ಆಳ್ವರು ಆಕ್ರಮಣ, ಆಘಾತಗಳನ್ನು ಇದಿರಿಸಿ ಹೆಚ್ಚು ಶಕ್ತಿ, ಕಾಂತಿಗಳಿಂದ ಹೊರಹೊಮ್ಮಿದ್ದಾರೆ. ಅವರಿಗೆ ಸಕಲ ಭಾಗ್ಯಗಳು ಒದಗಿ, ಆ ಮೂಲಕ ನಾಡು ಶ್ರೀಮಂತವಾಗಲಿ.

ಯಕ್ಷಗಾನವು ದ್ವಿಮುಖ ಚಲನೆಯಲ್ಲಿದೆ.  ದೊಡ್ಡ ಪ್ರೋತ್ಸಾಹ, ವಿಸ್ತರಣ, ಪ್ರತಿಭಾ-ಪೂರ್ಣವಾದ ಸೃಜನಗಳು, ಜತೆಗೆ ಅಪಕರ್ಷ ವಿಚಲನೆ, ಕ್ಷಣಿಕ ರಂಜಕತೆ, ಅಭಿರುಚಿಯ ಅಪಕರ್ಷಗಳೂ ಕಾಣುತ್ತಿವೆ. ಈ ಕುರಿತು ಚಿಂತನೆ, ರಚನಾತ್ಮಕ ಕಾರ್ಯಗಳಾಗಬೇಕಾಗಿದೆ.  ಆಳ್ವ ಶಿಕ್ಷಣ ಕೇಂದ್ರವೂ ಇದಕ್ಕೆ ಆಶ್ರಯವಾಗಬೇಕು.

ಯಕ್ಷಗಾನಕ್ಕೆ ಅಭಿನವ ಗುಪ್ತಾಚಾರ್ಯರು (ಶೈವದರ್ಶನ ಮತ್ತು ಕಲಾಮೀಮಾಂಸೆಯ ಮಹಾನ್ ಆಚಾರ್ಯರು. ಕಾಶ್ಮೀರದವರು. ಇದು ಅವರ ಸಹಸ್ರಮಾನ ವರ್ಷ) ದಾರ್ಶನಿಕವಾಗಿ ಹೇಳಿದುದನ್ನು ಅನ್ವಯಿಸಿ ಹೇಳುವುದಾದರೆ – ಅಭಿಜ್ಞಾನ ಮೂಲಕ, ಮರಳಿ ಶೋಭಿಸಿಗಳಿಸಬೇಕಿದೆ. ಇದೊಂದು ಸತತ ಪ್ರಕ್ರಿಯೆ.

ಕನ್ನಡದ ಬಲುದೊಡ್ಡ ಪಾರಂಪರಿಕ ಸಂಪದವಾದ ಯಕ್ಷಗಾನದ ಕಾವ್ಯಪದ್ಧತಿ, ಅರ್ಥಗಾರಿಕೆಯ ವಾಙ್ಮಿಯ, ಅಭಿನಯ, ಶಿಲ್ಪ ಚಿತ್ರಗಳ ಶ್ರೀಮಂತಿಕೆಯ ಶ್ರೇಷ್ಠತೆಗಳನ್ನು ನಾವು ಮರಳಿ, ಮರಳಿ ಅರಿಯಬೇಕು, ಸೊಗಸು-ಸಾಧ್ಯತೆ- ಬೆಳವಣಿಗೆಗಳನ್ನು ಜ್ಞಾನಪೂರ್ವಕ ಅಭಿಮಾನದಿಂದ, ಶ್ರದ್ಧೆ ಬದ್ಧತೆಗಳಿಂದ ಅರಿವು, ಮುನ್ನೋಟಗಳಿಂದ ಬೆಳೆಸಿ ಬೆಳಗಿಸಬೇಕು. ಈ ಕ್ಷೇತ್ರದ ಎಲ್ಲರ ಹೊಣೆ ಇದು. ಇದಕ್ಕೆ ಎಲ್ಲರೂ ಕೈಜೋಡಿಸಬೇಕು. ಗಂಭೀರವಾಗಿ ಚಿಂತಿಸಬೇಕು. ವಿಕಾರವಿಲ್ಲದ ವಿಕಾಸವನ್ನು ಅನುಸಂಧಾನಿಸಬೇಕು.

ನನ್ನ ಹಿರಿಯ ಹಿತೈಷಿ-ಮೋಹನ ಆಳ್ವರ ತೀರ್ಥರೂಪರು – ಶ್ರೀ ಮಿಜಾರು ಆನಂದ ಆಳ್ವರ ಈ ಶತಾಯುಷ್ಯ ವರ್ಷದಲ್ಲಿ ಪ್ರಶಸ್ತಿ ಭಾಜನನಾಗಿರುವುದು – ನನಗೆ ವೈಯಕ್ತಿಕವಾಗಿ ವಿಶೇಷವಾದ ಆನಂದ ನೀಡಿದೆ.

– ಡಾ. ಎಂ. ಪ್ರಭಾಕರ ಜೋಶಿ

error: Content is protected !!
Share This