ಮೈಸೂರು: ಡಾ.ಎಂ.ಪ್ರಭಾಕರ ಜೋಶಿ ಅವರು ಯಕ್ಷಗಾನ ಕ್ಷೇತ್ರದಲ್ಲಿ ಸಲ್ಲಿಸಿರುವ ಸೇವೆ ಅನನ್ಯ. ಅವರ ವಿಮರ್ಶೆಯಲ್ಲಿ ಯಕ್ಷಗಾನದ ಪರಂಪರೆ, ಗುಣಲಕ್ಷಣ, ಹುಟ್ಟು ಬೆಳವಣಿಗೆ ಎಲ್ಲವೂ ಅಡಗಿದೆ ಎಂದು ಕರ್ನಾಟಕ ಯಕ್ಷಗಾನ ಬಯಲಾಟ ಅಕಾಡೆಮಿ ಮಾಜಿ ಅಧ್ಯಕ್ಷ ಪ್ರೊ. ಎಂ.ಎಲ್.ಸಾಮಗ ಅಭಿಪ್ರಾಯಪಟ್ಟರು.

ಭಾನುವಾರ ಜಗನ್ಮೋಹನ ಅರಮನೆಯಲ್ಲಿ ಪ್ರಭಾಕರ ಜೋಶಿ ಅಭಿನಂದನಾ ಸಮಿತಿ ವತಿಯಿಂದ ಆಯೋಜಿಸಿದ್ದ ಹಿರಿಯ ಸಂಸ್ಕೃತಿ ಚಿಂತಕ, ಯಕ್ಷಗಾನ ಅರ್ಥಧಾರಿ ಡಾ.ಎಂ.ಪ್ರಭಾಕರ ಜೋಶಿ ಅವರ ವಾಗರ್ಥ ಗೌರವ ಕಾರ್ಯಕ್ರಮದ ಸಮಾರೋಪ ಸಮಾರಂಭದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಆಡು ಮುಟ್ಟದ ಸೊಪಿಲ್ಲ ಎಂಬಂತೆ ಜೋಶಿ ಅವರು ಯಕ್ಷಗಾನದಲ್ಲಿ ಕೈಯ್ಯಾಡಿಸದ ಕ್ಷೇತ್ರವೇ ಇಲ್ಲ. ಎಲ್ಲಾ ಕ್ಷೇತ್ರಗಳಲ್ಲೂ ಭಾಗವಹಿಸಿ ತಮ್ಮದೇ ಆದ ಕೊಡುಗೆ ನೀಡಿರುವ ಜೋಶಿ ಅವರು, ಯಕ್ಷಗಾನದಲ್ಲಿ ತಮ್ಮದೇ ಆದ ಪರಂಪರೆ ಹುಟ್ಟು ಹಾಕಿದ್ದಾರೆ. ವಿಶಿಷ್ಟ ವಿಮರ್ಶೆಯ ಮೂಲಕ ವಿಶೇಷ ಹೆಸರು ಮಾಡಿದ್ದಾರೆ ಎಂದು ಹೇಳಿದರು.

ಡಾ. ಜೋಶಿ ಅವರು ಯಕ್ಷಗಾನ ಪರಂಪರೆ, ಶೈಲಿಗೆ ಹೆಚ್ಚಿನ ಒತ್ತು ನೀಡಿದರು. ಶ್ರುತಿ ಹಾಳು ಮಾಡಬಾರದು ಎನ್ನುವ ಮನೋಭಾವ ಅವರಲ್ಲಿದೆ. ಆದರೆ, ಅಗತ್ಯವಿದ್ದಲ್ಲಿ ಪರಿಷ್ಕರಣೆ ತಪ್ಪಲ್ಲ ಎನ್ನುವುದನ್ನು ಅವರು ಒತ್ತಿ ಹೇಳಿದ್ದಾರೆ. ಅವರು ನೇರವಾಗಿ ವಿಮರ್ಶೆ ಮಾಡಿದ್ದಾರೆ. ಅದರಲ್ಲಿ ಅವರಿಗೆ ಯಾವುದೇ ಮುಲಾಜು ಇಲ್ಲ. ತೆಂಕುತಿಟ್ಟಿನಲ್ಲಿ ಭೀಮನ ವೇಷಧಾರಿಗೆ ಸೌಮ್ಯ ವೇಷವನ್ನು ಬಳಕೆ ಮಾಡಬೇಕಿದೆ ಎಂದರು.

ಬಳಿಕ ಮಾತನಾಡಿದ ಸುಳ್ಯ, ಸ್ನೇಹ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಾ.ಚಂದ್ರಶೇಖರ ದಾಮ್ಲೆ, ಜೋಶಿಯವರು ತಮ್ಮ ಸಾಧನೆಯ ಹಿಂದೆ ಕುಟುಂಬ, ಗುರುಗಳನ್ನು ನೆನಪಿಸಿಕೊಳ್ಳುತ್ತಾರೆ. ಅವರು ಅರ್ಥಗಾರಿಕೆಯನ್ನು ಮೀರಿ ಬೆಳೆದಿದ್ದಾರೆ. ಹಿರಿಯ ಯಕ್ಷ ಕಲಾವಿದ ಶೇಣಿ ಗೋಪಾಲ ಕೃಷ್ಣ ಅವರು ರಾಜಕೀಯದ ಜತೆಗೆ ಸಾಮಾಜಿಕ ವಿಷಯಗಳನ್ನೂ ಪ್ರಸ್ತಾಪಿಸುತ್ತಾರೆ ಎಂದು ಹೇಳಿದರು.

ಗ.ನಾ.ಭಟ್ಟ ಮಾತನಾಡಿ, ಜೋಶಿ ಅವರು ಗಂಭೀರ ಕೃತಿ ರಚಿಸಿದ್ದಾರೆ. ಅವರ ಬರಹಗಳಲ್ಲಿ ಯಕ್ಷಗಾನ ಕುರಿತು ಗಂಭೀರವಾದ ಚಿಂತನೆಗಳನ್ನು ಕಾಣಬಹುದಾಗಿದೆ ಎಂದು ಹೇಳಿದರು.

ಚಿಂತಕ ಪ್ರೊ.ರಾಧಾಕೃಷ್ಣ ಕಲ್ಚಾರ್ ಮಾತನಾಡಿ, ಜೋಶಿ ಅವರ ಅರ್ಥಗಾರಿಕೆಗೆ ಈಗಲೂ ಬೇಡಿಕೆ ಇದೆ. ಅವರ ಭಾಷೆ ಸರಳ. ಆದರೆ ವೇಗ ತೀವ್ರವಾದದ್ದು. ಶ್ರುತಿಯಿಂದ ದೂರ ನಿಂತು ಅರ್ಥಗಾರಿಕೆ ಮಾಡುತ್ತಾರೆ. ಅವರ ಅರ್ಥಗಾರಿಕೆಯಲ್ಲಿ ಭಾವುಕ ಅಂಶ ಕಡಿಮೆ ಇದೆ. ಅವರ ಶೈಲಿಯನ್ನು ಅನುಸರಿಸುವುದು ಕಷ್ಟಕರ ಎಂದು ಹೇಳಿದರು.

ಅರ್ಥಧಾರಿ ಪ್ರೊ.ಎಂ.ಎ.ಹೆಗಡೆ, ದಂಟಕಲ್, ಜೋಶಿ ಅವರ ಆಸಕ್ತಿಯಿಂದ ನಾನು ಪುಸ್ತಕ ಬರೆದೆ. ಇಲ್ಲವಾದಲ್ಲಿ ಪುಸ್ತಕ ಬರೆಯಲು ಮುಂದಾಗುತ್ತಿರಲಿಲ್ಲ. ಜೋಶಿ ಅವರು ಯಾರೇ ಇರಲಿ ಅವರಲ್ಲಿರುವ ಗುಣವನ್ನು ಗುರುತಿಸಿ ಅದು ಪ್ರಕಟಗೊಳ್ಳುವಂತೆ ಮಾಡುತ್ತಾರೆ. ಅದು ಅವರ ದೊಡ್ಡಗುಣ ಎಂದರು.

ಅರ್ಥಗಾರಿಕೆಯಲ್ಲಿ ಜೋಶಿಯವರು ಹಾಸ್ಯದ ಲೇಪನ ನೀಡುತ್ತಾರೆ. ಹಾಸ್ಯ ಪ್ರವೃತ್ತಿ ಅವರಲ್ಲಿ ಹೆಚ್ಚಾಗಿ ಇರುವುದೇ ಇದಕ್ಕೆ ಕಾರಣವಾಗಿದೆ. ಶಿವರಾಮ ಕಾರಂತರನ್ನು ಬಿಟ್ಟರೆ ಯಕ್ಷಗಾನದ ಬಗ್ಗೆ ಆಳವಾಗಿ ತಿಳಿದುಕೊಂಡವರು ಜೋಶಿಯವರಾಗಿದ್ದಾರೆ. ಆದರೆ ಜೋಶಿ ಅವರಿಗೆ ಸಿಗಬೇಕಾದ ಗೌರವ ಇನ್ನೂ ಸಂದಿಲ್ಲ ಎಂದು ಬೇಸರಿಸಿದರು.

ಕಾರ್ಯಕ್ರಮದಲ್ಲಿ ವೆಂಕಟರಮಣ ಭಟ್ಟ, ಡಾ.ಎಂ.ಪ್ರಭಾಕರ ಜೋಶಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ರಾಜ್ಯಧರ್ಮ ಪತ್ರಿಕೆ ದಿನಾಂಕ: 15-05-2017 ಪ್ರಕಟಿತ

error: Content is protected !!
Share This