– ಡಾ. ಎಂ. ಪ್ರಭಾಕರ ಜೋಶಿ

ಅವರು ಕಲಾವಿದರೆ? ಹೌದು, ತಜ್ಞನೆ, ಗುರುವೆ – ಎಲ್ಲವೂ ಹೌದು. ಅದನ್ನೆಲ್ಲ ಮೀರಿ ಕಾರ್ಯಕರ್ತ-ಶಿಕ್ಷಕ-ಕಲಾಸಾಧಕ-ಸತತ ನಿರತನಾಗಿ ಎತ್ತರದ ಸಾಧನೆಗೈದ ಹಂದಾಡಿ ಸುಬ್ಬಣ್ಣ ಭಟ್ಟರು, ಯಕ್ಷಗಾನ ರಂಗವು ಕಂಡ ಓರ್ವ ಪ್ರತ್ಯೇಕ ಔನ್ನತ್ಯಸಿದ್ಧಿಯ ಆದರೆ, ಆ ಪ್ರಮಾಣದಲ್ಲಿ ಗುರುತಿಸಲ್ಪಡದಿರುವ ವ್ಯಕ್ತಿ.

ಯಕ್ಷಗಾನದ ಕುರಿತು ಅಭಿಮಾನ ತಿಳಿವುಗಳಲ್ಲಿ ಪ್ರಸಿದ್ಧರಾದ ಬ್ರಹ್ಮಾವರ ತ್ರಿಮೂರ್ತಿಗಳಲ್ಲಿ (ಪ್ರೊ.ಬಿ.ವಿ.ಆಚಾರ್ಯ, ಬೈಕಾಡಿ ವೆಂಕಟಕೃಷ್ಣ ರಾವ್ ಜತೆ) ಓರ್ವರಾದ ಭಟ್ಟರು ಯಕ್ಷಗಾನದ ಸಮಗ್ರ ಜ್ಞಾನಿ – ಪ್ರಜ್ಞಾವಂತ ಕಲಾಕಾರ, ಸಂಘಟಕ, ವಿಮರ್ಶಕ. ಅಜಪುರ ಕರ್ನಾಟಕ ಸಂಘ, ಯಕ್ಷಗಾನ ಬಳಗಗಳನ್ನು ದಶಕಗಳ ಕಾಲ ಮುನ್ನಡೆಸಿದ ಸರ್ವ ಪ್ರಿಯ ನಾಯಕ.

ಮಹಾಭಾಗವತ ಶೇಷಗಿರಿ ಭಾಗವತರು, ಮಹಾನ್ ಕಲಾವಿದರಾದ ವೀರಭದ್ರ ನಾಯಕ, ಹಾರಾಡಿ ರಾಮ ಗಾಣಿಗ ಮುಂತಾದವರ ಕಿರಿಯ ಸಮಕಾಲೀನರಾಗಿ ಬೆಳೆದ, ಇವರು – ‘ಯಕ್ಷಗಾನ ಭಂಡಾರ’ ವೆನಿಸಿದ್ದ ತೋನ್ಸೆ ಕಾಂತಪ್ಪ ಮಾಸ್ತರರ ಶಿಷ್ಯ. ಹಿಮ್ಮೇಳ, ನೃತ್ಯ, ಮುಮ್ಮೇಳಗಳನ್ನು ವ್ಯವಸ್ಥಿತವಾಗಿ ಕಲಿತವರು. ಅದರಲ್ಲಿ ಮೇಲ್ಪಟ್ಟದ ಮಾರ್ಗದರ್ಶಿ. ಪ್ರಸಿದ್ಧ ಕಲಾಸಾಧಕರಾದ ಶ್ರೀಧರ ಹಂದೆ, ಐರೋಡಿ ಸದಾನಂದ ಹೆಬ್ಬಾರ್, ಚಂದ್ರಶೇಖರ ಶೆಟ್ಟಿ, ಶಿವಾನಂದ ಹೊಳ್ಳ ಮೊದಲಾದವರ ಒಡನಾಡಿ.

ಹಾರಾಡಿ, ಮಡಪಾಡಿಗಳ ಆಸುಪಾಸಿನ ಬ್ರಹ್ಮಾವರ ಹಂದಾಡಿಯವರಾದ ಅವರು ಒಂದು ಶ್ರೀಮಂತ ಯಕ್ಷಗಾನ ಯುಗದಲ್ಲಿ ಬದುಕಿ, ಅದರ ಸತ್ವವನ್ನು ಹೀರಿದ, ಹಂಚಿದ ಪುಣ್ಯಾತ್ಮ. ಮೇಳಗಳಿಗೆ ಕಲಾವಿದರಿಗೆಲ್ಲ ಬೇಕಾದವರು. ಎಲ್ಲರಿಗೆ ‘ನಮ್ಮ ಸುಬ್ಬಣ್ಣ ಭಟ್ಟರು’

ಪ್ರಸಾಧನ ಒದಗಣೆ, ಸಂಘಟನೆಗಳಲ್ಲಿ ‘ಅವರು ಕರೆದಾಗ ಒದಗುವ ವ್ಯಕ್ತಿ’ – ‘ಸುಬ್ಬಣ್ಣ ಭಟ್ಟರಿಗೆ ಹೇಳಿದರಾಯಿತು, ಎಲ್ಲ ಮಾಡಿ ಸಿದ್ಧಗೊಳಿಸಿರುತ್ತಾರೆ’ –  ಅನ್ನುವ ಪ್ರೊ. ಕು.ಶಿ. ಅವರ ಮಾತು ಪೂರ್ಣ ಸತ್ಯ. ಹವ್ಯಾಸಿ ಆಟ ಬೇಕೆ, ಸಂಪ್ರದಾಯದ ಪ್ರದರ್ಶನ ಬೇಕೆ, ಸಾಮಗ್ರಿ, ಬಣ್ಣಗಾರಿಕೆ, ಸಂಯೋಜನೆ ಶಿಬಿರಗಳಿಗೆ ವ್ಯಕ್ತಿಗಳು- ಏನು ಬೇಕು? ಒಂದೆರಡು ದಿನಗಳ ಸೂಚನೆಯಲ್ಲಿ ಸಿದ್ಧ. ಕಾರಂತ-ಕು.ಶಿ-ಕೆ.ಎಸ್ ಉಪಾಧ್ಯಾಯ ಮೊದಲಾದವರ ಅನೇಕ ಸಂಘಟನೆಗಳಿಗೆ ಭಟ್ಟರು ಬೆನ್ನಾದವರು. ಯಾವುದೇ ವಿಭಾಗ – ಭಾಗವತಿಕೆ, ವಾದನ, ವೇಷ, ಅರ್ಥ ನಿರ್ವಹಿಸಬಲ್ಲವರು. ಆದರೆ ವೇದಿಕೆಗೆ ಬರುವ ಉತ್ಸಾಹಿ ಅಲ್ಲ. ಅತೀ ಅಗತ್ಯವಿದ್ದರೆ ಮಾತ್ರ.

ಕಲೆಯ ಕುರಿತು ಅವರ ತಿಳಿವೂ ಸ್ವಚ್ಛ-ಚೊಕ್ಕ, ಖಚಿತ. ನೂರಾರು ಕಲಾವಿದರ, ಘಟನೆಗಳ ನೆನಪುಗಳು ಅವರಲ್ಲಿ ಜೀವ ಜೀವ. ಅವರ ಜತೆ ಮಾತಾಡುವುದು. ಒಂದು ಗ್ರಂಥ ಸಹವಾಸದ ಅನುಭವ. ಎಸ್.ಎಂ.ಎಸ್ ಹೈಸ್ಕೂಲಿನಲ್ಲಿ ಉತ್ಕೃಷ್ಟ ಅಧ್ಯಾಪಕರಾಗಿ ವಿಖ್ಯಾತರು. ಗಣ್ಯಸಾಮಾಜಿಕರು. ಕಲೆ ಕಲಾವಿದರ ಕುರಿತ ಅವರ ಕಾಳಜಿ – ಅರ್ಪಿತ ಮನೋಭಾವ ಅಸಾಮಾನ್ಯ. ಇನ್ನೋರ್ವ ಸುಬ್ಬಣ್ಣ ಭಟ್ಟರು – ದುರ್ಲಭ. ಬಹುಶಃ ಅಸಂಭವ.

error: Content is protected !!
Share This