ಬಯಲಾಟ ಪ್ರದರ್ಶನ ಕಾರ್ಯಕ್ರಮದಲ್ಲಿ ಸಂಸ್ಕೃತಿ ಚಿಂತಕ ಡಾ.ಎಂ.ಪ್ರಭಾಕರ ಜೋಶಿ ಹೇಳಿಕೆ

ತಾಳಮದ್ದಳೆ ಕಲೆ ಈಗ ವಿಶ್ವವ್ಯಾಪ್ತಿಯಾಗಿ ಬೆಳೆದಿದ್ದು, ಒಳ್ಳೆಯ ಚಿಂತಕ, ಅರ್ಥಧಾರಿ, ಸಂಘಟಕ ಡಾ.ಎಂ.ಪ್ರಭಾಕರ ಜೋಶಿ ಹೇಳಿದರು.

ಶನಿವಾರ ನಗರದ ಜಗನ್ಮೋಹನ ಅರಮನೆಯಲ್ಲಿ ಡಾ.ಎಂ.ಪ್ರಭಾಕರ ಜೋಶಿ ಅಭಿನಂದನಾ ಸಮಿತಿ, ಮೈಸೂರು ವತಿಯಿಂದ ಎರಡು ದಿನಗಳ ಕಾಲ ಏರ್ಪಡಿಸಲಾಗಿರುವ ಜೋಶಿ ವಾಗರ್ಥ ಗೌರವ, ಸಂವಾದ, ವಿಚಾರ ಸಂಕಿರಣ, ತಾಳಮದ್ದಳೆ, ಬಯಲಾಟ ಪ್ರದರ್ಶನ ಕಾರ್ಯಕ್ರಮದಲ್ಲಿ ಗೌರವ ಸ್ವೀಕರಿಸಿ ಮಾತನಾಡಿದ ಅವರು, ತಾಳಮದ್ದಳೆ ಕಲೆ ಎಲ್ಲ ಕಲೆಗಿಂತ ವಿಶಿಷ್ಟವಾದದ್ದು, ಇತ್ತೀಚೆಗೆ ಈ ಕಲೆ ವಿಶ್ವವ್ಯಾಪ್ತಿಯಾಗಿ ಬೆಳೆದಿದೆ. ಬಹುತೇಕ ರಾಷ್ಟ್ರಗಳಲ್ಲಿ ಈ ಕಲೆ ಪ್ರದರ್ಶನವಾಗಿದ್ದು, ಜನರಿಂದ ಬಹಳ ಮೆಚ್ಚುಗೆಯನ್ನು ಪಡೆದಿದೆ. ಹಾಗಾಗಿ ಈ ಕಲೆ ಈಗ ವಿಶ್ವವ್ಯಾಪ್ತಿಯಾಗಿ ಬಹಳ ಫೇಮಸ್ ಆಗಿದೆ ಎಂದು ತಿಳಿಸಿದರು.

ಹಿಂದಿ, ಇಂಗ್ಲಿಷ್‍ನಲ್ಲಿ ಯಕ್ಷಗಾನ ಬರೆಯುತ್ತೇನೆ

ತಾಳಮದ್ದಳೆ ಕಲೆಗೆ ಯುವಕರು ಬರುತ್ತಿದ್ದಾರೆ. ಈ ಕಲೆಯನ್ನು ತಮ್ಮದೇ ಆದ ರೀತಿಯಲ್ಲಿ ಬೆಳೆಸುತ್ತಿದ್ದಾರೆ. ಹೀಗಾಗಿ ಬಹಳ ಬೇಡಿಕೆಯನ್ನು ಈ ಕಲೆ ಎಲ್ಲ ಕಡೆ ಪಡೆಯುತ್ತಿದೆಯಾದರೂ ಈ ಕಲೆಗೆ ಬುಡವೇ ಇಲ್ಲದಂತಹ ಪರಿಸ್ಥಿತಿಯಿದೆ. ಎಂದು ಆತಂಕ ವ್ಯಕ್ತಪಡಿಸಿದರು.

ಯಕ್ಷಗಾನದ ಅರ್ಥಗಾರಿಕೆಯಲ್ಲಿ ಸಾಹಿತ್ಯವಿದೆ. ಆದರೆ ಕಲೆಗೆ ಸಾಹಿತ್ಯದ ಮನ್ನಣೆಯೇ ಇನ್ನೂ ಸಿಕ್ಕಿಲ್ಲ. ಸಿನಿಮಾಗಳಿಗೆ ಸಾಹಿತ್ಯವಿರುತ್ತದೆ. ಆದರೆ ಅವುಗಳಿಗೆ ಸಾಹಿತ್ಯ ಮನ್ನಣೆ ಸಿಗುವುದಿಲ್ಲ, ಅದರಂತಾಗಿದೆ ಯಕ್ಷಗಾನದ ಕಲೆಯ ಸ್ಥಿತಿ ಎಂದು ಬೇಸರ ವ್ಯಕ್ತಪಡಿಸಿದರು. ಯಕ್ಷಗಾನವನ್ನು ಇಂಗ್ಲೀಷ್ ಹಾಗೂ ಹಿಂದಿ ಭಾಷೆಯಲ್ಲಿಯೂ ಬರೆಯುತ್ತೇನೆ, ಇದಕ್ಕಾಗಿ ತಂಡವೊಂದನ್ನು ಕಟ್ಟುತ್ತಿರುವುದಾಗಿ ತಿಳಿಸಿದರು.

ಇಂದಿನ ಸಾಹಿತಿಗಳು ಹಾಗೂ ರಾಜಕಾರಣಿಗಳು ತಮ್ಮ ಆತ್ಮಕಥೆಗಳನ್ನು ಬರೆಯುತ್ತಿದ್ದಾರೆ. ಇದನ್ನು ನೋಡಿದರೆ ನಗು ಬರುತ್ತದೆ. ಅವರುಗಳು ತಾವು ಬೀದಿ ಬದಿಯ ಟ್ಯೂಬ್ ಲೈಟ್ ಬೆಳಕಿನಲ್ಲಿ ಓದಿ ಬೆಳೆದವರು ಎಂದು ಹೇಳಿಕೊಳ್ಳುತ್ತಾರೆ. ಆದ್ರೆ ಕಲಾವಿದರಾದ ನಾವು ಚಿಮಟಿ ಕೆಳಗೆ ಓದಿದವರು. ಭಯನಕವಾದ ಕಾಡುಮೃಗಗಳ ನಡುವೆ ಓದಿ ಬೆಳೆದವರು. ಕಲೆಗಾಗಿಯೇ ಜೀವನ ಮುಡುಪಿಟ್ಟವರು. ಕಲೆಯಲ್ಲಿ ಬದ್ಧತೆಯನ್ನಿಟ್ಟುಕೊಂಡವರು ಎಂದರು.

ಕಾರ್ಯಕ್ರಮದಲ್ಲಿ ಕುವೆಂಪು ವಿಶ್ವವಿದ್ಯಾನಿಲಯದ ವಿಶ್ರಾಂತ ಕುಲಪತಿ ಡಾ.ಕೆ.ಚಿದಾನಂದಗೌಡ, ಡಾ. ಜೋಶಿ ಅಭಿನಂದನಾ ಸಮಿತಿಯ ಗೌರವಾಧ್ಯಕ್ಷ ಸೀತಾರಾಮ ಭಟ್ ದಾಮ್ಲೆ, ಉಪಾಧ್ಯಕ್ಷ ಡಾ. ಸುಧೀರ್ ಶೆಟ್ಟಿ, ಖಜಾಂಚಿ ರಘುಪತಿ ತಾಮ್ಹಣ್‍ಕರ್ ಮತ್ತಿತರರು ಉಪಸ್ಥಿತರಿದ್ದರು. ಮಧ್ಯಾಹ್ನ ಡಾ.ಎಂ. ಪ್ರಭಾಕರ್ ಜೋಶಿ ಅವರ ಕುರಿತಾದ ಸಾಕ್ಷ್ಯ ಚಿತ್ರ ಪ್ರದರ್ಶನ ನಡೆಯಿತು. ನಂತರ ಜೋಶಿ ಅವರೊಂದಿಗೆ ಸಂವಾದ ನಡೆಯಿತು. ಇದರಲ್ಲಿ ವೆಂಕಟರಾಮ ಭಟ್ ಸುಳ್ಯ, ಧನಂಜಯ ನೆಲ್ಯಾಡ, ಸುಬ್ರಾಯ ಸಂಪಾಜೆ, ಆರ್. ಎಸ್. ಗಿರಿ, ಸಾಗರ ಮತ್ತಿತರರು ಪಾಲ್ಗೊಂಡಿದ್ದರು.
ಸಂಜೆ ಅಂಬಾ ದುರಂತ ಪ್ರಸಂಗ ಕುರಿತ ತಾಳಮದ್ದಳೆ ಪ್ರದರ್ಶನ ಬಹಳ ನಡೆಯಿತು.

ಡಾ. ಪ್ರಭಾಕರ ಜೋಶಿ ಎನ್‍ಸೈಕ್ಲೋಪಿಡಿಯಾ!

ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಡಾ. ಪ್ರಭಾಕರ ಜೋಶಿ ಅಭಿನಂದನಾ ಸಮಿತಿಯ ಅಧ್ಯಕ್ಷ ಎಂ.ಬಾಲಚಂದ್ರ ಡೋಂಗ್ರೆ ಮಾತನಾಡಿ, ಡಾ. ಪ್ರಭಾಕರ ಜೋಶಿ ಅವರು ಒಂದು ರೀತಿಯಲ್ಲಿ ಎನ್‍ಸೈಕ್ಲೋಪಿಡಿಯಾ ಇದ್ದಂತೆ. ಏನೇ ಸಮಸ್ಯೆಗಳನ್ನು ಹೇಳಿಕೊಂಡರೂ ಅವುಗಳಿಗೆ ಥಟ್ಟನೆ ಸೂಕ್ತವಾದ ಪರಿಹಾರವನ್ನು ನೀಡುತ್ತಾರೆ. ಗಂಭೀರವಾದ ವ್ಯಕ್ತಿತ್ವವನ್ನು ಅವರು ಹೊಂದಿದ್ದರೂ ಅಷ್ಟೇ ಆತ್ಮೀಯತೆ ಅವರಲ್ಲಿದೆ. ಮನುಷ್ಯತ್ವವಿದೆ. ಅವರೊಂದು ರೀತಿಯಲ್ಲಿ ಯಕ್ಷಗಾನದ ಅಕಾಡೆಮಿಯಿದ್ದಂತೆ ಎಂದು ಬಣ್ಣಿಸಿದರು. ಯಕ್ಷಗಾನ, ತಾಳಮದ್ದಳೆ ಕಲೆಯ ಬಗ್ಗೆ ಅಪಾರವಾದ ಕಾಳಜಿಯನ್ನು ಹೊಂದಿದ್ದಾರೆ.

ಈ ಕಲೆಯನ್ನು ಬೆಳೆಸಲು ಅಪಾರವಾದ ಕೊಡುಗೆಯನ್ನು ನೀಡಿದ್ದಾರೆ. ಯಕ್ಷಗಾನ ಹಾಗೂ ತಾಳಮದ್ದಳೆ ಕಲೆಯ ಪ್ರದರ್ಶನ ಈಗ ಕಡಿಮೆಯಾಗಿಲ್ಲ.

ದೌರ್ಬಲ್ಯಗಳು ಇಲ್ಲದ ಮನುಷ್ಯನೇ ಇಲ್ಲ

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಮಂಜೇಶ್ವರದ ಖ್ಯಾತ ವಿಮರ್ಶಕ, ಚಿಂತಕ ಹಾಗೂ ಅರ್ಥಧಾರಿಯಾದ ರಮಾನಂದ ಬನಾರಿ ಮಾತನಾಡಿ, ಯಕ್ಷಗಾನ ಹಾಗೂ ತಾಳಮದ್ದಳೆ ಕಲೆಗಳು ಬಹಳ ಹೊಳಪು ಹಾಗೂ ರೋಚಕವಾಗಿದೆ. ಇವುಗಳನ್ನು ಬಹಳ ರೋಚಕವಾಗಿಯೂ, ಬಹಳ ಹೊಳಪಿನಿಂದಲೂ, ಸರಸವಾಗಿಯೂ ಪ್ರದರ್ಶಿಸಬಹುದು.

ಡಾ. ಎಂ. ಪ್ರಭಾಕರ ಜೋಶಿಯಂತಹ ಅದ್ಭುತ ಕಲಾವಿದರು ತಾಳಮದ್ದಳೆ ಅರ್ಥಗಾರಿಕೆಯಲ್ಲಿ ವಿಶ್ವದರ್ಶನವನ್ನೇ ಮಾಡಿಸುತ್ತಾರೆ. ಅಂತಹ ಶಕ್ತಿ ಕಲಾವಿದರಿಗೆ ಇದೆ ಎಂದರು. ದೌರ್ಬಲ್ಯಗಳು ಇಲ್ಲದ ಮನುಷ್ಯನೇ ಇಲ್ಲ. ಸ್ವಲ್ಪವಾದರೂ ಲೋಪ-ದೋಷಗಳು ಆತನಲ್ಲಿ ಇರುತ್ತವೆ. ದೌರ್ಬಲ್ಯಗಳನ್ನು ಮೀರಿ ನಿಂತು ಕಲೆಯಲ್ಲಿ ಅದ್ಭುತವಾದ ಸಾಧನೆಯನ್ನು ಜೋಶಿಯವರು ಮಾಡಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಯಕ್ಷಗಾನ ಕಲಾವಿದರು ದ್ವೀಪದಂತಾಗಿದ್ದಾರೆ

ಪ್ರಾಸ್ತವಿಕ ನುಡಿಗಳನ್ನಾಡಿದ ವಿದ್ವಾನ್ ಗ.ನಾ.ಭಟ್ಟ ಮಾತನಾಡಿ, ಯಕ್ಷಗಾನ ಕಲಾವಿದರು ಇಂದು ಸಣ್ಣ, ಸಣ್ಣ ದ್ವೀಪಗಳಂತಾಗಿದ್ದಾರೆ. ಅವರೆಲ್ಲರೂ ಒಟ್ಟಾಗಿ ಸೇರುವುದಿಲ್ಲ ಎಂಬಂತಹ ಪರಿಸ್ಥಿತಿ ಇದೆ. ಇದನ್ನು ಹೋಗಲಾಡಿಸಬೇಕಾಗಿದೆ. ಕಲಾವಿದರನ್ನೆಲ್ಲಾ ಒಟ್ಟುಗೂಡಿಸಬೇಕಾಗಿದೆ ಎಂದು ಹೇಳಿದರು. ಡಾ. ಎಂ. ಪ್ರಭಾಕರ ಜೋಶಿ ಅವರು ಹಲವು ಪ್ರತಿಭೆಗಳ ಸಂಗಮವಾಗಿದ್ದಾರೆ. ಸಂಘಟಕರಾಗಿ, ಸಂಪನ್ಮೂಲ ವ್ಯಕ್ತಿಯಾಗಿ, ಸಲಹೆಗಾರರಾಗಿ, ನಿರ್ದೇಶಕರಾಗಿ ಅವರು ಗಳಿಸಿರುವ ಕೀರ್ತಿ ಬಹಳ ಎತ್ತರವಾದದ್ದು, ಸಾಂಪ್ರದಾಯಿಕ ನಂಬಿಕೆಗಳನ್ನು ಸುಳ್ಳು ಮಾಡಿದ ಜೋಶಿ ಅವರು ಜನ ಮಾನಸದಲ್ಲಿ ಬೀರಿರುವ ಪ್ರಭಾರ ಅಪಾರವಾದದ್ದು ಎಂದರು.

ಹೊಸದಿಗಂತ ಪತ್ರಿಕೆ ದಿನಾಂಕ 14-05-2017ರಂದು ಪ್ರಕಟಿತ

error: Content is protected !!
Share This