ಶೇಣಿ ಅರ್ಥ ವೈಭವ ಉಳಿಯಲಿ – ಕೊಲಕಾಡಿ

ಸುರತ್ಕಲ್ : ಯಕ್ಷಗಾನದ ದಂತಕಥೆ ಶೇಣಿ ಗೋಪಾಲಕೃಷ್ಣ ಭಟ್ ಪಾತ್ರಗಳಿಗೆ ತನ್ನ ಮಾತುಗಾರಿಕೆಯ ಮೂಲಕ ಹೊಸ ಆಯಾಮವನ್ನು ತಂದು ಕೊಟ್ಟ ಶ್ರೇಷ್ಟರು. ಅವರ ಅರ್ಥ ವೈಭವ ಇನ್ನಷ್ಟು ಯಕ್ಷಗಾನ ಕಾರ‍್ಯಕ್ರಮಗಳ ಉಳಿಯಲಿ ಎಂದು ಯಕ್ಷಗಾನ ವಿಮರ್ಶಕ, ಕವಿ ಗಣೇಶ ಕೊಲಕಾಡಿ ಹೇಳಿದರು.

ಅವರು ಶುಕ್ರವಾರ ಸುರತ್ಕಲ್ ತಡಂಬೈಲು ಮಾರಿಗುಡಿಯಲ್ಲಿ ಶೇಣಿ ಗೋಪಾಲಕೃಷ್ಣ ಭಟ್ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಶೇಣಿ ಶತಮಾನೋತ್ಸವ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.

ಇವತ್ತು ಪುರಾಣ ಪಾತ್ರಗಳ ಅರ್ಥ ವಿಶ್ಲೇಷಣೆಗಿಂತ ಹಣ ಅಥವಾ ಅರ್ಥವೇ ಮುಖ್ಯವಾಗಿದೆ. ಯಕ್ಷಗಾನಕ್ಕೆ ಸೇವೆ, ಸಮರ್ಪಣೆ ತ್ಯಾಗಕ್ಕಿಂತ ಹೆಚ್ಚು ಕಲೆಯನ್ನು ಹಣಕ್ಕಾಗಿ ಉಪಯೋಗಿಸುವ ಸ್ಥಿತಿ ನಿರ್ಮಾಣವಾಗಿದೆ. ಹಾಗಾಗದೆ ಕಲೆಯನ್ನು ಉಳಿಸುವ ಕೆಲಸವಾಗಲಿ ಎಂದು ಅವರು ಹೇಳಿದರು.

ಯಕ್ಷಗಾನ ರಂಗಕ್ಕೆ ಮಹತ್ವದ ಕೊಡುಗೆ ನೀಡಿದ ಖ್ಯಾತ ಪ್ರಸಂಗಕರ್ತ ಸೀಮಂತೂರು ನಾರಾಯಣ ಶೆಟ್ಟಿ, ವಿಮರ್ಶಕ ಡಾ. ರಾಘವ ನಂಬಿಯಾರ್, ಹಿರಿಯ ಭಾಗವತ ಅಗರಿ ರಘುರಾಮ ಭಾಗವತರು, ಯಕ್ಷಗುರು ಮಾಂಬಾಡಿ ಸುಬ್ರಹ್ಮಣ್ಯ ಭಟ್, ಕಲಾಪೋಷಕ ನಾಗೇಂದ್ರ ಭಾರಧ್ವಾಜ್‌ರನ್ನು ಸಂಮಾನಿಸಲಾಯಿತು.

ಶೇಣಿ ಶತಮಾನೋತ್ಸವ ಕಾರ‍್ಯಕ್ರಮಗಳಲ್ಲಿ ಸಹಕರಿಸಿದ ಗಣೇಶ ಕೊಲೆಕಾಡಿ, ಹರೀಶ ಕೊಡೆತ್ತೂರು, ಮಿಥುನ ಕೊಡೆತ್ತೂರು ಇವರನ್ನು ಗೌರವಿಸಲಾಯಿತು.

ಟ್ರಸ್ಟ್‌ನ ಅಧ್ಯಕ್ಷ ಹರಿಕೃಷ್ಣ ಪುನರೂರು, ಕೊಲಕಾಡಿ ವಾದಿರಾಜ ಉಪಾಧ್ಯಾಯ, ಸುಬ್ರಾಯ ಗಣೇಶ ಭಟ್ ಗಡಿಗೆಹೊಳೆ ಮತ್ತಿತರರಿದ್ದರು. ವಾಸುದೇವ ರಾವ್, ಶ್ರೀಧರ ಡಿಎಸ್, ಸದಾಶಿವ ಆಳ್ವ ತಲಪಾಡಿ ಸಂಮಾನಿತರನ್ನು ಅಭಿನಂದಿಸಿದರು. ಶೇಣಿ ಟ್ರಸ್ಟ್‌ನ ಕಾರ‍್ಯದರ್ಶಿ ಸಂಘಟಕ ಪಿ.ವಿ.ರಾವ್ ಕಾರ‍್ಯಕ್ರಮ ನಿರೂಪಿಸಿದರು.

 

ಕಲಾ ಸಾಮರ್ಥ್ಯದ ಸರ್ವಾಂಗ ಪಾಕ

ಒಬ್ಬ ಅರ್ಥದಾರಿಗೆ ಏನೆಲ್ಲಾ ಇರಬೇಕೋ ಅದೆಲ್ಲ ಶೇಣಿಯವರಲ್ಲಿತ್ತು. ತೂಕದ, ಸೂಕ್ಷ್ಮ ವಿನ್ಯಾಸಗಳ ಅಸಾಧಾರಣ ಮಾತಿನ ಸ್ವರಸಂಪತ್ತು (ಕಲ್ಚರ್ಡ್ ವಾಯ್ಸ್) ಅವರದು. ಪ್ರಸಂಗಗಳ ಓತಪ್ರೋತ ಪ್ರಭುತ್ವ, ಅತ್ಯಂತ ಸೂಕ್ತ ಶಬ್ದಗಳ ಭಾಷೆ-ಭಾವದ ಬಳಕೆ ಅವರಲ್ಲಿ ಸ್ಪುಟ. ಅಲ್ಲಲ್ಲಿ ವೇದಾಂತ, ನಡುವೆ ಹಾಸ್ಯ, ಇದಿರಾಳಿಯನ್ನು ಕಂಗೆಡಿಸುವ ವಾದ ಸಾಮರ್ಥ್ಯ ಮತ್ತು ಅಬ್ಬರ, ಪಾತ್ರಯೋಜನೆಗಳ ಏರಿಳಿತ, ಆಕರ್ಷಕ ವ್ಯಕ್ತಿತ್ವ ಏನುಂಟು ಏನಿಲ್ಲ…ಶೇಣಿ ಅಂಥವರು ಅವರೊಬ್ಬರೆ. ಅವರು ಕಲಾಸಾಮರ್ಥ್ಯದ ಸರ್ವಾಂಗ ಪಾಕ.

ಡಾ. ಪ್ರಭಾಕರ ಜೋಶಿ (ಹಿರಿಯ ಸಂಶೋಧಕ, ಕಲಾವಿಮರ್ಶಕ, ಅರ್ಥದಾರಿ)

error: Content is protected !!
Share This